ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜಂಟಿಯಾಗಿ ನಡೆಸಿದ್ದ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಲೋಕಾಯುಕ್ತ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಬೆಂಗಳೂರಿನ ಗಂಗಾನಗರದಲ್ಲಿ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಅಕ್ರಮವಾಗಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫಿಕೇಷನ್ ಮಾಡಿಸಿದ್ದರು. ಎಲ್ಲರೂ ಮರೆತು ಹೋಗಿದ್ದ ಈ ಹಗರಣವನ್ನು ದಾಖಲೆಗಳ ಸಮೇತ ಈದಿನ.ಕಾಮ್ ಬಯಲಿಗೆಳಿದಿದೆ. ಈ ಬೆನ್ನಲ್ಲೇ, ಹಗರಣದ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಚುರುಕುಗೊಳಿಸಿದ್ದರು.
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರಿಂದ ನಿಯಮ 164ರ ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಮುಂದೆ ಗುರುವಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದೀಗ, ಪ್ರಕರಣದ ಎ1 ಆರೋಪಿಯಾಗಿರುವ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಕರೆದಿದ್ದಾರೆ.
ಶನಿವಾರ ಮಧ್ಯಾಹ್ನವೇ ವಿಚಾರಣೆ ಬರುವಂತೆಯೂ ಯಡಿಯೂರಪ್ಪಗೆ ಲೋಕಾಯುಕ್ತ ಸೂಚನೆ ನೀಡಿದೆ. ಹೀಗಾಗಿ, ಇಂದು ಯಡಿಯೂರಪ್ಪ ಲೋಕಾಯುಕ್ತ ಎದುರು ಹಾಜರಾಗುವ ಸಾಧ್ಯತೆ ಇದೆ.
Hats off to real journalism 👏🏾