ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಒಂದೆರಡಲ್ಲ ಬರೋಬ್ಬರಿ 96 ಲಕ್ಷ ರೂಪಾಯಿ ಸಾಲವನ್ನು ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ವಿದ್ಯಾರ್ಥಿ ಆನ್‌ಲೈನ್ ಗೇಮಿಂಗ್ ಗೀಳಿನಿಂದ ಸಾಲ ಮಾಡಿಕೊಂಡು ಕುಟುಂಬದಿಂದಲೇ ದೂರವಾಗಿರುವ ಬಗ್ಗೆ ನ್ಯೂಸ್18ನ ಪತ್ರಕರ್ತ ಪ್ರತೀಕ್ ತ್ರಿವೇದಿ ಅವರ ಕಾರ್ಯಕ್ರಮವೊಂದಲ್ಲಿ ಅಳಲು ತೋಡಿಕೊಂಡಿದ್ದಾನೆ.
ಈ ವಿಡಿಯೋದಲ್ಲಿ ವಿದ್ಯಾರ್ಥಿ ಭಾವುಕನಾಗಿ ಕಣ್ಣೀರು ಸುರಿಸುತ್ತಾ, “ಆನ್‌ಲೈನ್ ಗೇಮಿಂಗ್‌ನಿಂದಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ನಾನು ಈ ಆಟ ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ನನ್ನ ಮೇಲೆ 96 ಲಕ್ಷ ರೂಪಾಯಿ ಸಾಲದ ಹೊರೆಯಿದೆ. ಇದರಿಂದಾಗಿ ನನ್ನ ಕುಟುಂಬವೂ ನನ್ನಿಂದ ದೂರವಾಗಿದೆ. ಯಾರೂ ನನ್ನ ಬಳಿ ಮಾತನಾಡುವುದಿಲ್ಲ” ಎಂದು ಹೇಳಿಕೊಂಡಿದ್ದಾನೆ.
ಇದನ್ನು ಓದಿದ್ದೀರಾ? ಗುಜರಾತ್ | ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಭಾರೀ ಬೆಂಕಿ ಅವಘಡ; 20 ಮಂದಿ ಮೃತ್ಯು
“ನಾನು ಹಲವಾರು ಮಂದಿಯಿಂದ ಸಾಲ ಪಡೆದುಕೊಂಡಿದ್ದೇನೆ. ಅದಾದ ಬಳಿಕ ನಾನು ಆನ್‌ಲೈನ್ ಗೇಮಿಂಗ್ ಚಟದಲ್ಲಿ ವಂಚನೆಯನ್ನೂ ಮಾಡಿದ್ದೇನೆ. ಭಾರೀ ಸಾಲವಾದ ಬಳಿಕ ಆತ್ಮಹತ್ಯೆಯ ಯತ್ನವೂ ಮಾಡಿದ್ದೇನೆ” ಎಂದಿದ್ದಾನೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಯನ್ನು ಭೇಟಿಯಾಗಲು ಶಿಕ್ಷಕಿಯಾಗಿರುವ ತಾಯಿ ಒಪ್ಪಿಕೊಂಡಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ.
ಇದರ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠೆ, “ಖ್ಯಾತ ಸೆಲೆಬ್ರೆಟಿಗಳು, ಪ್ರಭಾವಿಗಳು ಜೂಜಿನಲ್ಲಿ ಸಿಲುಕಿಸಿ ಯುವಕರ ಜೀವನವನ್ನು ಹೇಗೆ ಹಾಳುಗೆಡವುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಭಾರತದ ಯುವಕರ ಜೀವನವನ್ನೇ ಆನ್‌ಲೈನ್ ಗೇಮಿಂಗ್‌ಗಳನ್ನು ಪ್ರೊಮೋಟ್ ಮಾಡುವ ಸೆಲೆಬ್ರೆಟಿಗಳು ನಾವು ಜನರನ್ನು ಈ ಗೇಮ್ ಆಡಿ ಎಂದು ಒತ್ತಡ ಹೇರುತ್ತಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ಸೆಲೆಬ್ರೆಟಿಗಳೇ ಯುವಕರ ಮೇಲೆ ಪ್ರಭಾವ ಬೀರುವುದು” ಎಂದಿದ್ದಾರೆ.
This is how Gambling Apps Destroy Indian Youth 😡 pic.twitter.com/4QVjGvx3gN
— Dhruv Rathee (@dhruv_rathee) September 20, 2024
“ಸ್ಪೇನ್, ಇಟಲಿ, ನೆದರ್‌ಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿಯಾದ ದೇಶಗಳಲ್ಲಿ ಸೆಲೆಬ್ರೆಟಿಗಳ ಮೂಲಕ ಈ ಜೂಜಿನ ಆಪ್‌ಗಳ ಪ್ರಚಾರ ಮಾಡುವುದು ನಿಷೇಧವಾಗಿದೆ. ಟಿವಿಯಲ್ಲಿಯೂ ಈ ಜಾಹೀರಾತು ತೋರಿಸುವುದು ಬ್ಯಾನ್ ಆಗಿದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ನಿಷೇಧವಿಲ್ಲ. ಈ ಜೂಜಿಗೆ ಅವಕಾಶ ನೀಡಲಾಗುತ್ತದೆ. ಸೆಲೆಬ್ರೆಟಿಗಳು ಈ ಆಪ್‌ಗಳ ಪ್ರಚಾರ ಮಾಡುತ್ತಾರೆ. ನಿಮ್ಮಲ್ಲಿ ಇಂತಹ ಆಪ್‌ಗಳಿದ್ದರೆ ಇಂದೇ ಡಿಲೀಟ್ ಮಾಡಿ. ನೀವು ಯಾವ ಜಾಲದಲ್ಲಿ ಸಿಲುಕುತ್ತಿದ್ದೀರಿ ಎಂಬುದು ನಿಮಗೆಯೇ ತಿಳಿದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
