- ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿದ ಸುಧೀಂದ್ರ ಕುಲಕರ್ಣಿ
- ಬಿಜೆಪಿಯಿಂದ ಅಡ್ವಾಣಿ, ವಾಜಪೇಯಿಗೆ ಅಪಮಾನ ಎಂದ ಮಾಜಿ ಪ್ರಧಾನಿ ಸಲಹೆಗಾರ
ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿರಿ. ಮತ್ತೊಮ್ಮೆ ಅಪರೇಷನ್ ಕಮಲ ಮೂಲಕ ಜನಾದೇಶದ ಅಪಹರಣ ತಪ್ಪಿಸಲು ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಿರಿ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಲಹಾಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ರಾಜ್ಯದ ಮತದಾರರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, “ಬಿಜೆಪಿಗೆ ಕೇವಲ ಡಬಲ್ ಇಂಜಿನ್ ಸರ್ಕಾರವಷ್ಟೇ ಬೇಕಿಲ್ಲ. ಸಿಂಗಲ್ ಡ್ರೈವರ್ ಇರುವ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಅವಶ್ಯಕ ಬದಾವಣೆ ಮತ್ತು 2024ರ ಲೋಕಸಭಾ ಚುನವಣೆಯಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದು. ಬಿಜೆಪಿ ಸೋಲಿಗಾಗಿ ಮತ್ತು ಕಾಂಗ್ರೆಸ್ ಗೆಲುವಿಗಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ” ಎಂದು ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
“ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಅಬ್ಬರಿಸುತ್ತಿರುವ ಬಿಜೆಪಿಗರು, ಈಗಿರುವ ತಮ್ಮದೇ ಡಬಲ್ ಇಂಜಿನ್ ಸರ್ಕಾರದಲ್ಲಿ ಗಗನಕ್ಕೆರಿರುವ ಬೆಲೆ ಏರಿಕೆ, ನಿರುದ್ಯೋಗ ನಿರ್ಮೂಲನೆ, ರೈತ-ಕಾರ್ಮಿಕರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಯಾಕೆ ವಿಫಲವಾಗಿದೆ” ಎಂದು ಪ್ರಶ್ನಿಸಿದ್ದಾರೆ.
“ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದಿದ್ದ ಮೋದಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಯಾಕೆ ವಿಫಲರಾದರು” ಎಂದು ಕೇಳಿದ್ದಾರೆ.
“ಎಲ್ಲ ರಾಜ್ಯಗಳಲ್ಲಿಯೂ ‘ಡಬಲ್ ಇಂಜಿನ್’ ಸರ್ಕಾರವೇ ಬೇಕು ಎಂಬ ಬಿಜೆಪಿಯ ಸಂಕಲ್ಪನೆಯೇ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ-ವಿರೋಧಿಯಾಗಿದೆ. ಬಹು-ಪಕ್ಷೀಯ ಶಾಸನ ವ್ಯವಸ್ಥೆ ನಮ್ಮ ಪ್ರಜಾಭುತ್ವದ ಬುನಾದಿ” ಎಂದಿದ್ದಾರೆ.
“ಬಿಜೆಪಿಗೆ ಬೇಕಾದದ್ದು ಕೇವಲ ಕಾಂಗ್ರೆಸ್ – ಮುಕ್ತ ಭಾರತವಷ್ಟೇ ಅಲ್ಲ, ವಿರೋಧಿ-ಪಕ್ಷ ಮುಕ್ತ ಭಾರತ. ನಮ್ಮ ದೇಶ ಕಮ್ಮುನಿಸ್ಟ್ ಚೀನಾದಂಥ ಏಕ – ಪಕ್ಷೀಯ ಸರ್ವಾಧಿಕಾರಿ ದೇಶವಾಗಬೇಕೇ?” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಗೆ ಕೇವಲ ಡಬಲ್ ಇಂಜಿನ್ ಸರ್ಕಾರವಷ್ಟೇ ಬೇಕಿಲ್ಲ, ಸಿಂಗಲ್ ಡ್ರೈವರ ಇರುವ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ. ಅಂದರೆ ದಿಲ್ಲಿಯಲ್ಲೂ ಮೋದಿಯವರೇ ಡ್ರೈವರು, ಬೆಂಗಳೂರಿನಲ್ಲೂ ಶ್ರೀ ಮೋದಿಯವರೇ ಡ್ರೈವರು! ಗೃಹ ಮಂತ್ರಿ ಅಮಿತ್ ಶಾ ಅವರೇ ಹೇಳಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್-ಪ್ರಿಯಾಂಕಾ ಸವಾಲು
“ಜೆಪಿ ನಡ್ಡಾ ಅವರ ಮೋದಿ ಆಶಿರ್ವಾದ ಹೇಳಿಕೆ ಒಂದು ರಾಷ್ಟ್ರ, ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ಹುಕುಂಶಾಹಿ ಭವಿಷ್ಯವನ್ನು ಭಾರತದಲ್ಲಿ ನಿರ್ಮಿಸುವ ಷಡ್ಯಂತ್ರವನ್ನು ಬಿಜೆಪಿ ರಚಿಸುತ್ತಿದೆ. ಇದು ನಮ್ಮ ಪುಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ” ಎಂದು ಎಚ್ಚರಿಕೆ ನೀಡಿದ್ದಾರೆ.
“ಬಿಜೆಪಿ ಶಾಸನದಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಯಾವುದೇ ಕಿಮ್ಮತ್ತಿಲ್ಲ, ಅಧಿಕಾರವಿಲ್ಲ. ಇಲ್ಲಿಯ ಸರ್ಕಾರ ಮೋದಿ – ಶಾ ರಿಮೋಟ್ ಕಂಟ್ರೋಲ್‌ನಿಂದ ನಡೆಯುತ್ತೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಕುತ್ತು” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಸುಮಾರು 13% ಜನಸಂಖ್ಯೆ ಇರುವ ಮುಸ್ಲಿಂ ಸಮಾಜಕ್ಕೆ ಬಿಜೆಪಿ ಒಂದು ಕ್ಷೇತ್ರದಲ್ಲಿಯೂ ಟಿಕೆಟ್ ಕೊಡದ ಇರುವುದು ಆ ಪಕ್ಷದ ಕೋಮುವಾದಿ ದೃಷ್ಟಿಕೋನವನ್ನು ತೋರಿಸುತ್ತದೆ ಹಾಗೂ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ’ ಈ ಆಶ್ವಾಸನ ಎಷ್ಟು ಪೊಳ್ಳು ಎಂದು ತೋರಿಸುತ್ತದೆ” ಎಂದು ಹರಿಹಾಯ್ದಿದ್ದಾರೆ.
“ಒಂದು ಕಾಲಕ್ಕೆ ಬಿಜೆಪಿ ಭಿನ್ನ ಪಕ್ಷ ಎಂದು ಹಮ್ಮೆಯಿಂದ ಹೇಳುತ್ತಿದ್ದ ಪಕ್ಷ ಇಂದು ಭ್ರಷ್ಟಾಚಾರದ ಹೊಲಸಿನ ರಾಜಕಾರಣ ನಡೆಸುತ್ತಿರುವುದು ಪಂಡಿತ ದೀನದಯಾಳ ಉಪಾಧ್ಯಾಯ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯವರಂಥ ಮಹಾನ್ ಮತ್ತು ನಿಷ್ಕಳಂಕ ನಾಯಕರಿಗೆ ಮಾಡುತ್ತಿರುವ ಅಪಮಾನ” ಎಂದು ಕುಟುಕಿದ್ದಾರೆ.
“ನಾನು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಕೇಳುತ್ತೇನೆ ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರದ, ಅನೈತಿಕ ರಾಜಕಾರಣ ನಿಮಗೆ ಒಪ್ಪಿಗೆ ಇದೆಯೇ? ಇಲ್ಲವಾದರೆ ನೀವು ಇದರ ವಿರುದ್ಧ ನೀವು ದನಿ ಎತ್ತಿರಿ” ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸ್ಪಷ್ಟ ಮತ್ತು ಸುಸ್ಥಿರ ಬಹುಮತದ ಸರಕಾರ ಬರಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಹೇಳುವ ಮೂಲಕ ಸುಧೀಂದ್ರ ಕುಲಕರ್ಣಿ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.