ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಯುವ ಸಂದರ್ಭಗಳಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಜನರ ಮುಂದೆ ಬಂದಾಗ ಜನ ಸರಿಯಾದ ರೀತಿಯಲ್ಲಿ ವಿಚಾರ ವಿಮರ್ಶೆ ಮಾಡಿ ಮತ ಚಲಾಯಿಸುತ್ತಾರೆ. ಒಂದು ವೇಳೆ ರಾಜ್ಯ ಮತ್ತು ಕೇಂದ್ರಕ್ಕೆ ಏಕಕಾಲಕ್ಕೆ ಚುನಾವಣೆ ನಡೆದರೆ ರಾಜ್ಯಕ್ಕೆ ಸಂಬಂಧಪಟ್ಟ ಮಹತ್ವದ ವಿಷಯಗಳು ಗೌಣವಾಗಿ ಕೇಂದ್ರ ಸರಕಾರದ ಕುರಿತ ಚರ್ಚೆಯೇ ಮಹತ್ವ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವ ಅಪಾಯವಿದೆ.
ಒಂದು ದೇಶ ಒಂದು ಚುನಾವಣೆ ಎನ್ನುವ ಕಲ್ಪನೆಯೇ ಗುಪ್ತ ಕಾರ್ಯಸೂಚಿಯೊಂದರ ಭಾಗವೆನಿಸುತ್ತದೆ. ಬಹುಭಾಷೆ ಬಹು ಸಂಸ್ಕೃತಿ ಇರುವ ಭಾರತದಂತಹ ದೇಶದಲ್ಲಿ ಪ್ರಾದೇಶಿಕ ಹಿನ್ನಲೆಯ ಸಮಸ್ಯೆಗಳು, ಜನರ ಬಹು ರೂಪಿ ಆಶಯ ಆಕಾಂಕ್ಷೆಗಳು ಇರುವ ಕಾರಣದಿಂದಲೇ ಪ್ರಾದೇಶಿಕ ಅನನ್ಯತೆ ಮತ್ತು ಭಾಷೆಯ ಕಾರಣದಿಂದಲೇ ರಾಜ್ಯಗಳು ಅಸ್ತಿತ್ವಕ್ಕೆ ಬಂದಿರುವುದು. ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಪ್ರಾದೇಶಿಕ ಹಿನ್ನಲೆಯ ರಾಜಕೀಯ ಪಕ್ಷಗಳು ಗಟ್ಟಿಯಾಗಿ ಬೇರೂರಿದ ಅದೇ ಆಧಾರದ ಮೇಲೆ ಅವಲಂಬಿತ “ಪ್ರಣಾಳಿಕೆ”ಯನ್ನು ಜನರ ಮುಂದೆ ಇರಿಸಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದೆ. ಬರೀ ಈ ಒಂದು ಅಂಶವನ್ನು ಸರಿಯಾಗಿ ವಿಶ್ಲೇಷಿಸಿದರೆ ಭಾರತವೆನ್ನುವ ಕಾಮನ ಬಿಲ್ಲಿನಲ್ಲಿರುವ ಹಲವು ಬಣ್ಣಗಳ ಮಹತ್ವ ತಿಳಿಯುತ್ತದೆ.
ಕೇಂದ್ರ ಸರಕಾರ ಮಾತ್ರವೇ ವೈವಿಧ್ಯಮಯವಾಗಿರುವ ಇಡೀ ದೇಶದ ಆಶಯಗಳಿಗೆ ಸಮರ್ಥವಾಗಿ ಪ್ರತಿಸ್ಪಂದಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗದು. ರಾಜ್ಯಗಳು ಕೇಂದ್ರದ ಮೂಲಕ ವಿಶ್ವವನ್ನು ತಲುಪಲು ಪ್ರಯತ್ನಿಸಬೇಕು. ಅದೇ ರೀತಿ ಜಾಗತಿಕ ಚಿಂತನೆಗಳು ಕೇಂದ್ರದ ಮೂಲಕ, ರಾಜ್ಯಗಳಿಗೆ ತಲುಪಿ ಆ ಮಾರ್ಗದ ಮೂಲಕ ಜನ ಸಮುದಾಯನ್ನು ಮುಟ್ಟಬೇಕು. ಇದು ಸಾಧ್ಯವಾಗಬೇಕಾದರೆ ರಾಜ್ಯದ ಹಿತಾಸಕ್ತಿಯ ವಿಷಯಗಳು ಮತ್ತು ರಾಜ್ಯಗಳ ಒಕ್ಕೂಟವಾದ ಕೇಂದ್ರ ಸರಕಾರದ ಹಿತಾಸಕ್ತಿಯ ಪ್ರಶ್ನೆಗಳು ಜನ ಸಮುದಾಯದ ನಡುವೆ ಸವಿವರವಾಗಿ ಚರ್ಚೆಯಾಗಬೇಕಿದೆ. ಈ ರೀತಿ ಆದಾಗ ಪ್ರಜಾಪ್ರಭುತ್ವ ಆಶಯ ಮತ್ತು ಸಂರಚನೆ ಸಮರ್ಥವಾಗಿ ಉಳಿಯಲು ಮತ್ತು ಬೆಳೆಯಲು ಸಾಧ್ಯ. ಕೇಂದ್ರ ಸರಕಾರದ ಉದ್ದೇಶ, ಆದ್ಯತೆಗಳು ರಾಜ್ಯದ ಆಶಯ ಉದ್ದೇಶಗಳಿಂದ ಬಿನ್ನವಾಗಿವೆ. ಇದರ ಮಹತ್ವವನ್ನು ಮನಗಂಡ ನಮ್ಮ ಸಂವಿಧಾನ ರಚನೆ ಮಾಡಿದ ಮೇಧಾವಿಗಳು ಕೇಂದ್ರ ಸರಕಾರ (ಕಾನೂನು) ಶಾಸನ ಮಾಡಬೇಕಾದ ರಾಜ್ಯ ಸರಕಾರಗಳು ಶಾಸನ ಮಾಡಬೇಕಾದ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಶಾಸನ ಮಾಡಬಹುದಾದ ವಿಷಯಗಳನ್ನು ಬಹಳ ಸ್ಪಷ್ಠವಾಗಿಯೇ ಗುರುತಿಸಿದ್ದಾರೆ. ಒಂದು ವೇಳೆ ಇದರ ಅಗತ್ಯವಿಲ್ಲದಿರುತ್ತಿದ್ದರೆ ಈ ರೀತಿಯ ವಿಷಯ ವಿಂಗಡಣೆಯ ಅಗತ್ಯವಿರುತ್ತಿರಲಿಲ್ಲ.
ಇದನ್ನು ಓದಿದ್ದೀರಾ? ಒಂದು ದೇಶ ಒಂದು ಚುನಾವಣೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಕಲ್ಪನೆ
ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಯುವ ಸಂದರ್ಭಗಳಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಜನರ ಮುಂದೆ ಬಂದಾಗ ಜನ ಸರಿಯಾದ ರೀತಿಯಲ್ಲಿ ವಿಚಾರ ವಿಮರ್ಶೆ ಮಾಡಿ ಮತ ಚಲಾಯಿಸುತ್ತಾರೆ. ಒಂದು ವೇಳೆ ರಾಜ್ಯ ಮತ್ತು ಕೇಂದ್ರಕ್ಕೆ ಏಕಕಾಲಕ್ಕೆ ಚುನಾವಣೆ ನಡೆದರೆ ರಾಜ್ಯಕ್ಕೆ ಸಂಬಂಧಪಟ್ಟ ಮಹತ್ವದ ವಿಷಯಗಳು ಗೌಣವಾಗಿ ಕೇಂದ್ರ ಸರಕಾರದ ಕುರಿತ ಚರ್ಚೆಯೇ ಮಹತ್ವ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವ ಅಪಾಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರಕ್ಕೆ ನಡೆಯುವ ಚುನಾವಣೆಯನ್ನೇ ಏಕಕಾಲದಲ್ಲಿ ನಡೆಸಲಾಗದೆ ಚುನಾವಣಾ ಆಯೋಗ ಹಲವಾರು ಹಂತಗಳಲ್ಲಿ ಚುನಾವಣೆ ನಡೆಸುವ ಪರಿಸ್ಥಿತಿ ಇದೆ. ನಿಜವಾಗಿಯೂ ವಿಶೇಷವಾಗಿ ಪ್ರಾದೇಶಿಕ ಪಕ್ಷಗಳಿಗೆ ಸಮಾನ ಅವಕಾಶ ಒದಗಿಸಲಾಗದ ನ್ಯಾಯ ಸಮ್ಮತವಲ್ಲದ ವ್ಯವಸ್ಥೆ ಎಂದರೂ ತಪ್ಪಾಗಲಾರದು.
ಕಳೆದ ನಾಲ್ಕು ದಶಕಗಳಿಂದಲೂ ಪ್ರಾದೇಶಿಕ ಅಸ್ಮಿತೆಗಳು ಮಹತ್ವ ಪಡೆದ ಕಾರಣಗಳಿಂದಾಗಿ ಬಹಳಷ್ಟು ಹೊಸ ರಾಜಕೀಯ ಪಕ್ಷಗಳು ಅಸ್ತಿತ್ವ ಕಂಡುಕೊಂಡಿವೆ. ಜನ ಮಾನಸದಲ್ಲಿ ಆಗುತ್ತಿದ್ದ ಪರಿವರ್ತನೆಯ ವಿಷಯವನ್ನು ಮೊದಲು ಗ್ರಹಿಸಿದ ಬಿಜೆಪಿ, ಎನ್‍ಡಿಎ, ಒಕ್ಕೂಟ ರಚಿಸುವ ಮೂಲಕ ಅಧಿಕಾರ ಹಂಚಿಕೊಳ್ಳುವ ಸೂತ್ರ ಬೆಸೆಯುವ ಮೂಲಕ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಪಡೆಯಿತು. ಅಧಿಕಾರದ ರುಚಿ ಉಂಡ ಭಾರತೀಯ ಜನತಾ ಪಕ್ಷ ತದ ನಂತರದ ದಿನಗಳಲ್ಲಿ ಏನು ಮಾಡುತ್ತಾ ಬಂದಿದೆ ಎನ್ನುವುದು ರಾಜಕೀಯ ಸೂಕ್ಷ್ಮ ಮತಿಗಳಿಗೆ ತಿಳಿದಿರುವ ವಿಷಯ. ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಪ್ರಾದೇಶಿಕ ಅಸ್ಮಿತೆಯ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಪಕ್ಷಗಳನ್ನು ಬಳಸಿಕೊಂಡು ದೇಶದೆಲ್ಲೆಡೆ ನೆಲೆ ವಿಸ್ತರಿಸಿಕೊಂಡು, ತದನಂತರ ನಿಧಾನವಾಗಿ ಪ್ರಾದೇಶಿಕ ಅಸ್ಮಿತೆಯನ್ನು ಮತ್ತು ಕಾಲಾಂತರದಲ್ಲಿ ಅದನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರವೃತ್ತಿಯನ್ನು ನೋಡುತ್ತಾ ಬಂದಿದ್ದೇವೆ. ಬಹುಜನ ಸಮಾಜ ಪಕ್ಷ, ಸಂಯುಕ್ತ ಜನತಾದಳ, ಶಿವಸೇನೆ, ಅಕಾಲಿದಳ, ಸದ್ಯ ಜನತಾದಳ ಕೂಡಾ ಇದಕ್ಕೆ ದೃಷ್ಟಾಂತವಾಗಿ ನಮ್ಮ ಮುಂದಿದೆ. ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಮೂಲಕ ಕೇಂದ್ರ ಸರಕಾರದ ಮುಂದಿರಬಹುದಾದ ವಿಷಯಗಳಿಗೆ ಒತ್ತುನೀಡಿ ಪ್ರಾದೇಶಿಕ ವಿಷಯಗಳನ್ನು ಹಿನ್ನೆಲೆಗೆ ತಳ್ಳುವ ಮೂಲಕ ಅಧಿಕಾರವು ಕೇಂದ್ರ ಸರಕಾರದ ಬಳಿಯಲ್ಲಿ ಕೇಂದ್ರಿಕರಿಸುವಂತೆ ಆಗಬಹುದು. ಹೀಗೆ ಆದಲ್ಲಿ ಅದೊಂದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಬಹುದು. ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನು ಹೇರಿದಂತೆ ಒಂದು ದೇಶ ಒಂದು ಚುನಾವಣೆಯ ಕತೆಯೂ ಆದರೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ.
ಇದನ್ನು ಓದಿದ್ದೀರಾ? ಒಂದು ದೇಶ-ಒಂದು ಚುನಾವಣೆ | ಒಕ್ಕೂಟ ವ್ಯವಸ್ಥೆ ಬಗ್ಗೆ ಕೇಂದ್ರಕ್ಕೆ ಅರಿವಿಲ್ಲ: ಸಚಿವ ಮಹದೇವಪ್ಪ ಕಿಡಿ
ಏಕಕಾಲಕ್ಕೆ ಕೇಂದ್ರ ಮತ್ತು ರಾಜ್ಯಗಳಿಗೆ ಒಂದು ಸಲಕ್ಕೆ ಚುನಾವಣೆ ನಡೆದು ನಿಶ್ಚಿತ ಐದು ವರ್ಷದ ಮೊದಲೇ ಒಂದು ವೇಳೆ ಯಾವುದಾದರೂ ರಾಜ್ಯ ಅಥವಾ ಕೇಂದ್ರ ಸರ್ಕಾರವೇ ಪತನವಾದರೆ ಏನು? ಈ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ ಇನ್ನು ಕೆಲವು ಜನ ಇದು ಆರ್ಥಿಕವಾಗಿ ಒಳ್ಳೆಯದು ಎನ್ನುವವರಿದ್ದಾರೆ. ಆರ್ಥಿಕ ಶಿಸ್ತು ಪಾಲಿಸಬೇಕಾದ ಕಡೆ ಅದನ್ನು ಪಾಲಿಸಿದರೆ ಆರ್ಥಿಕ ಚೈತನ್ಯ ಉತ್ತಮ ಪಡಿಸಿಕೊಳ್ಳಲು “ಒಂದು ದೇಶ ಒಂದು ಚುನಾವಣೆ”ಯ ಹೊರತಾದ ಹಲವಾರು ದಾರಿಗಳಿವೆ. ಅಥವಾ ಇದನ್ನೇ ಮುಂದುವರಿಸಿದರೆ ಕೆಲವರಿಗೆ ರಾಜಮನೆತನದ ಆಡಳಿತ ಆರ್ಥಿಕವಾಗಿ ಇನ್ನಷ್ಟು ಲಾಭದಾಯಕವೆನಿಸಬಹುದು.
ಆದರೆ ನಾವು ನೆನಪಿಡಲೇಬೇಕಾದ ಬಹುಮುಖ್ಯ ಸಂಗತಿ ಏನೆಂದರೆ ಈಗ ನಾವು ಅನುಭವಿಸುತ್ತಿರುವ ಅವಕಾಶಗಳು ಈ ದೇಶವನ್ನು ಹೋರಾಟದ ಮೂಲಕ ಕಟ್ಟಿ, ಅದಕ್ಕೊಂದು ಸಾಂವಿಧಾನಿಕ ಚೌಕಟ್ಟು ನೀಡಿ ನಮಗೆ ಬಿಟ್ಟು ಹೋದ ಹಿರಿಯರ ತ್ಯಾಗ ಬಲಿದಾನದ ಫಲವಾಗಿದೆ ಎನ್ನುವ ಸತ್ಯವನ್ನು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಲು ಶಕ್ತಿ ಇರುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಾದ ಉತ್ತರದಾಯಿತ್ವ ನಮ್ಮೆಲ್ಲರ ಮೇಲಿದೆ. ಸಂವಿಧಾನವನ್ನು ಬದಲಾಯಿಸುವ, ದುರ್ಬಲಗೊಳಿಸುವ ಕಾರ್ಯಸೂಚಿ ಯಾವುದೇ ಮಾರುವೇಷದಲ್ಲಿ ನಮ್ಮ ಮನೆಮನಗಳ ಒಳಗೆ ಪ್ರವೇಶಿಸದಂತೆ ಎಚ್ಚರವಾಗಿರಬೇಕಾದ ದುರಿತ ಕಾಲವಿದು. ಈಗಿರುವ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ, ಚರ್ಚೆ ಸಂವಾದಗಳಿಗೆ ಅವಕಾಶ ವಿಸ್ತರಿಸುವ ಕೆಲಸ ಇಂದಿನ ಆದ್ಯತೆಯಾಗಬೇಕು ಎನ್ನುವುದನ್ನು ಗಟ್ಟಿ ದನಿಯಲ್ಲಿ ಹೇಳಬೇಕಿದೆ.

ಡಾ ಉದಯ್ ಕುಮಾರ್ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು