ರಾಜಧಾನಿ ಬೆಂಗಳೂರಿನಲ್ಲೂ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲಿ ಭಯಾನಕ ಹತ್ಯೆಯ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿ ಆನಂತರ ಮೃತ ದೇಹವನ್ನು 30 ಭಾಗ ತುಂಡರಿಸಿ ಫ್ರಿಡ್ಜ್‌ನಲ್ಲಿ ಇರಿಸಲಾಗಿದೆ.
ಈ ಘಟನೆ ಬೆಂಗಳೂರಿನ ಹೃದಯ ಭಾಗವಾದ ವೈಯಾಲಿಕಾವಲ್ನ ಮುನೇಶ್ವರ ಬ್ಲಾಕ್ನ ಮನೆಯೊಂದರ ಮೊದಲ ಮಹಡಿಯಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ಮಹಾಲಕ್ಷ್ಮೀ(26) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 2ರಿಂದ ಮಹಾಲಕ್ಷ್ಮೀ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಹುತೇಕ ಅವತ್ತೇ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗಂಡನಿಂದ ದೂರವಾಗಿದ್ದ ಯುವತಿ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‌ನಲ್ಲಿ ಕೆಲಸಕ್ಕಿದ್ದಳು ಎಂದು ತಿಳಿದುಬಂದಿದೆ. ಕಳೆದ ಐದು ತಿಂಗಳ ಹಿಂದೆ ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಆಕೆಯ ಸಂಪರ್ಕದಲ್ಲಿದ್ದ ಯುವಕನೋರ್ವನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಆತನೇ ಕೊಲೆ ಮಾಡಿ ಈ ಕೃತ್ಯ ಎಸಗಿರುವ ಶಂಕೆ ಕೂಡ ವ್ಯಕ್ತವಾಗಿದೆ.

ಘಟನೆಯ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, “ಮಹಿಳೆಯನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಇಟ್ಟಿರುವ ಘಟನೆ ನಡೆದಿದೆ. ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಯುವತಿಯ ಗುರುತು ಪತ್ತೆಯಾಗಿದೆ. ಹೊರರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಯಲ್ಲಿ ಸಿಲುಕಿದ ಮಹಿಳೆಯರು: ಸಂಕಷ್ಟದಿಂದ ಹೊರಬರಲು ಪರದಾಟ!
ಯುವತಿ ಕಳೆದ ಮೂರು ತಿಂಗಳ ಹಿಂದಷ್ಟೇ ಈ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಆಕೆಯ ತಾಯಿ-ಸಹೋದರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಹತ್ಯೆ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಮನೆಯಿಂದ ದುರ್ನಾತ
ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅದೇ ಬಿಲ್ಡಿಂಗ್ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ. ಅದರಂತೆ ಕೊಲೆಯಾದಂತಹ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಹೊಡೆದು ಒಳಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.