ಕ್ರಿಮಿನಲ್ ಪ್ರಕರಣಗಳಿಗೆ ಹಲವು ಮುಖಗಳಿರುತ್ತವೆ. ಕೆಲವು ಅಕ್ಷಮ್ಯ, ಹೀನ ಅಪರಾಧಗಳು. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ ಇಂಥ ಪ್ರಕರಣಗಳು. ಯಾವ ದೃಷ್ಟಿಯಿಂದ ನೋಡಿದರೂ ಅವು ತಪ್ಪೇ. ಆದರೆ, ಎಲ್ಲವೂ ಇಂಥವೇ ಆಗಿರುವುದಿಲ್ಲ. ಅಭ್ಯರ್ಥಿಗಳ ಗುಣ ದೋಷ ನಿರ್ಣಯದ ವಿಚಾರದಲ್ಲಿ ಮತದಾರರು ತಾರತಮ್ಯ ಪ್ರಜ್ಞೆ ಮೆರೆಯಬೇಕಾಗುತ್ತದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಿರ್ಣಾಯಕ ದಿನ ಹತ್ತಿರವಾಗತೊಡಗಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಅಖಾಡದಲ್ಲಿರುವ ಅಭ್ಯರ್ಥಿಗಳ ಪರ ಮತ್ತು ವಿರುದ್ಧದ ವಾಗ್ಸಮರ, ಸುದ್ದಿ ಪ್ರಸಾರ, ಪ್ರಚಾರಗಳ ಭರಾಟೆ ಜೋರಾಗತೊಡಗಿದೆ.
ಇದರ ನಡುವೆಯೇ ಈ ಬಾರಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಪಟ್ಟಿ ಎಲ್ಲೆಡೆ ಹರಿದಾಡುತ್ತಿದೆ. ಕಾಂಗ್ರೆಸ್‌ನ 119 ಮಂದಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಇದ್ದರೆ, ಬಿಜೆಪಿಯ 94 ಮಂದಿ, ಜೆಡಿಎಸ್‌ನ 70 ಮಂದಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳ ಹಿನ್ನೆಲೆ, ಅವುಗಳ ಸ್ವರೂಪವನ್ನು ಗಮನಿಸಿದರೆ ಕೆಲವು ಆಸಕ್ತಿಕರ ಅಂಶಗಳು ತಿಳಿಯುತ್ತವೆ.
ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳನ್ನೇ ನೋಡಿ; ಕಾಂಗ್ರೆಸ್ ಪಕ್ಷದ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳಾದ ಕುಸಮಾ ಹನುಮಂತರಾಯಪ್ಪ, ಎಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 18 ಮುಖಂಡರ ವಿರುದ್ಧ ಇರುವುದು ಒಂದೇ ಪ್ರಕರಣ. ಅದು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಮುಖಂಡರ ವಿರುದ್ಧ ಬಿಜೆಪಿ ಸರ್ಕಾರ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ದಾಖಲಿಸಿದ್ದ ಪ್ರಕರಣ. ಕಾಂಗ್ರೆಸ್‌ನ ಒಟ್ಟು 39 ಮಂದಿ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇವರ ಪೈಕಿ 18 ಮಂದಿಯನ್ನು ಹೊರತುಪಡಿಸಿದರೆ ಉಳಿದವರ ವಿರುದ್ಧ ಇತರೆ ಪ್ರಕರಣಗಳೂ ಇವೆ.
ಪಟ್ಟಿಯಲ್ಲಿ ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರೂ ಇದ್ದಾರೆ. ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಆರೋಪ ಇದ್ದು, ಸದ್ಯ ಅವರು ಧಾರವಾಡ ಪ್ರವೇಶಿಸದಂತೆ ನ್ಯಾಯಾಲಯವು ನಿರ್ಬಂಧಿಸಿದೆ. ಇನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಮತ್ತು ಗಂಗಾವತಿ ಅಭ್ಯರ್ಥಿ ಜನಾರ್ದನ ರೆಡ್ಡಿಗೂ ನ್ಯಾಯಾಲಯ ಇದೇ ರೀತಿ ಬಳ್ಳಾರಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದರಿಂದ ಅವರು ಗಂಗಾವತಿಗೆ ವಲಸೆ ಹೋದರು.
ಕಾಂಗ್ರೆಸ್‌ನ ಭದ್ರಾವತಿಯ ಸಂಗಮೇಶ್ವರ್ ವಿರುದ್ಧ ಕೊಲೆ ಯತ್ನ ಪ್ರಕರಣವಿದ್ದರೆ, ಬಿಜೆಪಿಯ ಕಟ್ಟಾ ಜಗದೀಶ್ ವಿರುದ್ಧ ಕೊಲೆ ಯತ್ನ ಪ್ರಕರಣವಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವಿದೆ. ಬಿಜೆಪಿಯ ಮಣಿಕಂಠ ರಾಥೋಡ್ ವಿರುದ್ಧ ಪಡಿತರ ಅಕ್ಕಿ ಕದ್ದು ಸಾಗಿಸಿದ ಆರೋಪ ಸೇರಿದಂತೆ ಹಲವು ವಂಚನೆಯ ಪ್ರಕರಣಗಳಿವೆ. ಜೆಡಿಎಸ್‌ನ ಇಮ್ರಾನ್ ಪಾಶಾ ವಿರುದ್ಧ ಕೊಲೆ ಪ್ರಕರಣವಿದ್ದರೆ, ಜೆಡಿಎಸ್‌ನ ಗೋಕಾಕ್ ಅಭ್ಯರ್ಥಿ ಚಂದನ್ ಕುಮಾರ್ ಅಲಿಯಾಸ್ ಚನ್ನಬಸಪ್ಪ ವಿರುದ್ಧ ಕೊಲೆ ಯತ್ನ ಪ್ರಕರಣವಿದೆ. ಇನ್ನು ಡಿ ಕೆ ಶಿವಕುಮಾರ್ ಸೇರಿದಂತೆ ಹಲವರ ವಿರುದ್ಧ ಅಕ್ರಮ ಆಸ್ತಿಗೆ ಸಂಬಂಧಿಸಿದ ಇಡಿ, ಐಟಿ ಪ್ರಕರಣಗಳಿವೆ.
ಜೆಡಿಎಸ್ ಬಂಗಾರಪೇಟೆ ಅಭ್ಯರ್ಥಿ ಮಲ್ಲೇಶ್ ಬಾಬು, ಗುರುಮಿಠಕಲ್‌ನ ಶರಣ ಗೌಡ ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಕಾಂಗ್ರೆಸ್‌ನ ಹುನುಗುಂದದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್. ಸುರಪುರದ ರಾಜಾ ವೆಂಕಪಟ್ಟ ನಾಯಕ್ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿವೆ.
ಬಿಜೆಪಿಯ ಒಂಬತ್ತು ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿದ 14 ಪ್ರಕರಣಗಳಿವೆ. ಜಿ ಸೋಮಶೇಖರ ರೆಡ್ಡಿ, ರಾಜರಾಜೇಶ್ವರಿನಗರದ ಮುನಿರತ್ನ, ಬೀಳಗಿಯ ಮುರುಗೇಶ್ ನಿರಾಣಿ, ಭಾಲ್ಕಿ ಪ್ರಕಾಶ್ ಖಂಡ್ರೆ, ಕಾರ್ಕಳದ ಸುನಿಲ್ ಕುಮಾರ್, ಹಳಿಯಾಳದ ಸುನಿಲ್ ಹೆಗ್ಗಡೆ, ರಾಯಚೂರಿನ ತಿಪ್ಪರಾಜು ಹವಾಲ್ದಾರ್, ದಾವಣಗೆರೆಯ ಅಜಯ್‌ಕುಮಾರ್ ಬಿ ಜಿ ಮತ್ತು ಕೆ ಎಚ್ ನಾಗರಾಜ್ ವಿರುದ್ಧ ದ್ವೇಷ ಭಾಷಣ ಸಂಬಂಧಿ ಪ್ರಕರಣಗಳಿವೆ.
ಕ್ರಿಮಿನಲ್ ಪ್ರಕರಣಗಳಿಗೆ ಹಲವು ಮುಖಗಳಿರುತ್ತವೆ. ಕೆಲವು ಅಕ್ಷಮ್ಯ, ಹೀನ ಅಪರಾಧಗಳು. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ ಇಂಥ ಪ್ರಕರಣಗಳು. ಆದರೆ, ಎಲ್ಲವೂ ಇಂಥವೇ ಆಗಿರುವುದಿಲ್ಲ. ಕೆಲವು ರಾಜಕೀಯ ವಿರೋಧಕ್ಕಾಗಿ ದಾಖಲಿಸಿದ ಪ್ರಕರಣಗಳಿರಬಹುದು; ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಕೆಲವೊಮ್ಮೆ ಜನಹಿತಕ್ಕಾಗಿ ಒಂದು ನಿರ್ದಿಷ್ಟ ಚೌಕಟ್ಟನ್ನು ಮೀರಿ ನಡೆದಾಗ ದಾಖಲಾದ ಪ್ರಕರಣವಾಗಿರಬಹುದು.
ಕಾಂಗ್ರೆಸ್‌ನವರೇ ಆರೋಪಿಸಿದಂತೆ, ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿ ಮಾಡಿದ ಪ್ರಯತ್ನದಿಂದ ಕಾಂಗ್ರೆಸ್ ಪಟ್ಟಿಯಲ್ಲಿ ಹೊಸದಾಗಿ 18 ಮಂದಿ ಕ್ರಿಮಿನಲ್ ಆಪಾದಿತರ ಪಟ್ಟಿ ಸೇರುವಂತಾಗಿದೆ. ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ ಮಾಡಿದವನು, ಕೊಲೆ ಮಾಡಿದವನು, ಕೊಲೆ ಯತ್ನದಲ್ಲಿ ತೊಡಗಿದವನು, ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿ ಲೂಟಿ ಹೊಡೆದವನು, ದ್ವೇಷ ಭಾಷಣ ಮಾಡಿ ಸಮಾಜದ ನೆಮ್ಮದಿಗೆ ಕೊಳ್ಳಿ ಇಟ್ಟವನು, ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವನು ಎಲ್ಲರೂ ಒಂದೇ ಥರದ ಆರೋಪಿಗಳಾಗಿರುವುದಿಲ್ಲ.
ಕಾನೂನಿನ ಪ್ರಕಾರ ಯಾವುದು ತಪ್ಪು ಎಂದು ಅಂತಿಮವಾಗಿ ಹೇಳಬೇಕಾಗಿರುವುದು ನ್ಯಾಯಾಲಯ. ಅಲ್ಲಿಯವರೆಗೆ ಆತ ಕೇವಲ ಆಪಾದಿತನೇ. ಈ ಹಿನ್ನೆಲೆಯಲ್ಲಿಯೇ ಚುನಾವಣಾ ಆಯೋಗವು ಕ್ರಿಮಿನಲ್ ಪ್ರಕರಣಗಳ ಹೊರತಾಗಿಯೂ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡುತ್ತದೆ. ಅದರ ನಂತರ ಆ ಅಭ್ಯರ್ಥಿಯ ನಿರಪರಾಧಿತ್ವ ಜನತಾ ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಅಲ್ಲಿಯವರೆಗೆ ಆತನ ಸರಿ ತಪ್ಪುಗಳ ತುಲನೆ ಮಾಡಿ ಅದಕ್ಕೆ ತಕ್ಕಂತೆ ನ್ಯಾಯ ಸಲ್ಲಿಸುವುದು ಮತದಾರ ಪ್ರಭುಗಳಿಗೆ ಬಿಟ್ಟ ವಿಚಾರ; ಮತದಾರರ ವಿವೇಕಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದರ ಹೊರತಾಗಿ, ನಿಜವಾದ ಅರ್ಥದಲ್ಲಿ ಕ್ರಿಮಿನಲ್ ಆರೋಪಿಗಳಾದವರಿಗೆ ಜನತಾ ನ್ಯಾಯಾಲಯದಲ್ಲಿಯೂ ಶಿಕ್ಷೆ ಆಗಲೇಬೇಕು.
