ಮತ ಕೇಳಲು ಬಂದ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ ಮಹೇಶ್ ವಿರುದ್ಧ ಗ್ರಾಮಸ್ಥರು ಧಿಕ್ಕಾರ ಕೂಗಿರುವ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ, ʼಗೋ ಬ್ಯಾಕ್ ಮಹೇಶ್ʼ ಅಭಿಯಾನವೂ ಸದ್ದು ಮಾಡುತ್ತಿದೆ.
ಗ್ರಾಮಸ್ಥರು ಎನ್ ಮಹೇಶ್ ಅವರನ್ನು ಸುತ್ತುವರೆದಿದ್ದು, ʼಕಾಂಗ್ರೆಸ್‌ಗೆ ಜೈ, ಕಾಂಗ್ರೆಸ್‌ಗೆ ಜೈʼ ಎಂಬ ಘೋಷಣೆಗಳನ್ನು ಕೂಗಿದ್ದು, ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ವಾದಕ್ಕೆ ಬೆಂಕಿ ಇಟ್ಟು, ಸಾವರ್ಕರ್ ಬೆಂಬಲಿಸುವ ಸಮುದಾಯ ದ್ರೋಹಿ ಮಹೇಶ್‌ಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ. ಇದು ದಲಿತರ ಸ್ವಾಭಿಮಾನದ ಪ್ರಶ್ನೆ. ಬಹುಜನ ಚಳವಳಿಯ ದ್ರೋಹಿಗಳಿಗೆ ತಕ್ಕ ಉತ್ತರ ಕೊಡುವುದಕ್ಕೆ ಈ ಚುನಾವಣೆಯೇ ಸಾಕ್ಷಿಯಾಗುವಂತೆ ಮಾಡೋಣ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬರೆದುಕೊಂಡಿದ್ದಾರೆ.
ಕಳೆದ ಬಾರಿ ಗೆಲುವು ಸಾಧಿಸಿದ್ದ ಮಹೇಶ್
2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಎನ್ ಮಹೇಶ್ ಗೆಲುವು ಸಾಧಿಸಿದ್ದರು. ರಾಜ್ಯಾದ್ಯಂತ ಒಂದೇ ಒಂದು ಕ್ಷೇತ್ರದಲ್ಲಿ ಬಿಎಸ್‌ಪಿ ಗೆದ್ದಿತ್ತು. ಬಳಿಕ, ಸಮ್ಮಿಶ್ರ ಸರ್ಕಾರದಲ್ಲಿ ಎನ್ ಮಹೇಶ್ ಸಚಿವರು ಕೂಡ ಆಗಿದ್ದರು. ಪ್ರಸ್ತುತ ಸರ್ಕಾರಕ್ಕೆ ಸೂಕ್ತ ಬೆಂಬಲ ನೀಡದ ಕಾರಣ ಹಾಗೂ ಇತರೆ ಕಾರಣಾಂತರಗಳಿಂದ ಬಿಎಸ್‌ಪಿ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜನ ವಿರೋಧಿ ಬಿಜೆಪಿ ಸೋಲಿಸಿ, ಜನಪರ ಕಾಂಗ್ರೆಸ್ ಗೆಲ್ಲಿಸೋಣ: ದಸಂಸ
ಒಂದೇ ಕ್ಷೇತ್ರದಲ್ಲಿ ಕಳೆದ ಬಾರಿ ಬಿಎಸ್‌ಪಿ, ಈ ಬಾರಿ ಬಿಜೆಪಿ
ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಎನ್ ಮಹೇಶ್, ಇತ್ತೀಚೆಗೆ ಬಿಜೆಪಿ ಸೇರಿದ್ದರು. ಇದೀಗ, ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನೀಲಿ ಶಾಲನ್ನು ಕಳಚಿ ಕೇಸರಿ ಶಾಲು ಧರಿಸಿದ ಎನ್. ಮಹೇಶ್ ಪರ ವಿರೋಧದ ನಡುವೆ ಮತಯಾಚನೆ ಮುಂದುವರಿಸಿದ್ದಾರೆ.
ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ರಾಚಯ್ಯನವರ ಮಗ ಎ.ಆರ್ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ. ಮಹೇಶ್ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.