ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ಪಾ ಎಸ್ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿಯು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್) ನೀಡಲು ಶಿಫಾರಸು ಮಾಡಿದೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, “ಸದ್ಯ ಸಮಿತಿಯು ವರ್ಷಕ್ಕೆ ಆರು ದಿನಗಳ ಕಾಲ ವೇತನ ಸಹಿತ ರಜೆ ನೀಡಲು ಮತ್ತು ಆರು ದಿನಗಳ ಕಾಲ ವೇತನ ರಹಿತ ರಜೆ ನೀಡಲು ಶಿಫಾರಸು ಮಾಡಿದೆ. ತಿಂಗಳಿಗೆ ಒಂದು ಅಥವಾ ವರ್ಷಿಕ್ಕೆ ಆರು ರಜೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೂಡಾ ಸಂಗ್ರಹಿಸಲಾಗುವುದು” ಎಂದು ತಿಳಿಸಿದರು.
“ವಿವಿಧ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ಜೊತೆಗೆ ಎಲ್ಲ ಇಲಾಖೆಗಳು ಹಾಗೂ ಖಾಸಗಿ ಕಂಪನಿ, ಕೈಗಾರಿಕೆಗಳ ಜೊತೆಗೂ ಮಾತುಕತೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದು ಸಿದ್ಧತೆ ಪೂರ್ಣವಾದ ಬಳಿಕ ಆರ್ಥಿಕ ಇಲಾಖೆಯ ಸಮ್ಮತಿಯನ್ನು ಕಳುಹಿಸಲಾಗುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ತನ್ನ ಮಹಿಳಾ ಉದ್ಯೋಗಿಗಳಿಗೆ ‘ಮುಟ್ಟಿನ ರಜೆ’ ಘೋಷಿಸಿದ ಸಿಕ್ಕಿಂ ಹೈಕೋರ್ಟ್
“ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಮುಟ್ಟಿನ ರಜೆ ನೀತಿಯಿದೆ. ಆ ರಾಜ್ಯಗಳ ನೀತಿಗಳನ್ನೂ ಸೇರಿದಂತೆ ನಾವು ಮಹಿಳಾ ಸ್ನೇಹಿ ನಿಯಮ ರೂಪಿಸಲು ಅಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸುತ್ತೇವೆ” ಎಂದರು.
“ಸಮಿತಿಯ ವರದಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಮುಟ್ಟಿನ ಸಮಯದಲ್ಲಿ ಎದುರಿಸುವ ಸವಾಲುಗಳು, ಸಂಕಷ್ಟಗಳು, ಅದಕ್ಕಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಪಾಲಿಸಬೇಕಾದ ನಿಯಮ, ಮುಟ್ಟಾದ ಮಹಿಳೆಯರಿಗೆ ಅಗತ್ಯವಿರುವ ವಿಶ್ರಾಂತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ” ಎಂದು ತಿಳಿಸಿದರು.
