ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಕ್ಷಗಳನ್ನು ಒಡೆಯುತ್ತಿರುವ ಮತ್ತು ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸುತ್ತಿರುವ ಹಾಗೂ ‘ಭ್ರಷ್ಟ’ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯ ರಾಜಕೀಯವನ್ನು ಆರ್ಎಸ್ಎಸ್ ಒಪ್ಪುತ್ತದೆಯೇ ಎಂದು ಎಎಪಿ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ತಮ್ಮ ಮೊದಲ ‘ಜಂತ್ ಕಿ ಅದಾಲತ್’ನಲ್ಲಿ ಅವರು ಮಾತನಡಿದರು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಜ್ರಿವಾಲ್ ಕೇಳಿದ್ದಾರೆ. “ಎಲ್.ಕೆ ಅಡ್ವಾಣಿಯವರಿಗೆ ಮಾಡಿದಂತೆ ಬಿಜೆಪಿಯ ನಿವೃತ್ತಿ ವಯಸ್ಸಿನ ನಿಯಮವೂ ಮೋದಿಗೂ ಅನ್ವಯಿಸುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
“ರಾಜಕಾರಣಿಗಳನ್ನು ‘ಭ್ರಷ್ಟರು’ ಎಂದು ಕರೆದು, ಬಳಿಕ ಅವರನ್ನೇ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ” ಎಂದು ಕೇಳಿದ್ದಾರೆ.
“ಬಿಜೆಪಿಗೆ ಸೈದ್ಧಾಂತಿಕ ಮಾರ್ಗದರ್ಶನ ನೀಡುವ ಆರ್ಎಸ್ಎಸ್ ‘ತಮ್ಮ ಪಕ್ಷಕ್ಕೆ ಅಗತ್ಯವಿಲ್ಲ’ವೆಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದಾಗ ನಿಮಗೆ ಏನನ್ನಿಸಿತು” ಎಂದು ಭಾಗವತ್ ಅವರನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಆಪಾದಿತ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಗೊಳ್ಳಲಾಗಿ, ಐದು ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೆಲೆ ಬಿಡೆಗಡೆಯಾದ ಕೇಜ್ರಿವಾಲ್, “ತಾನು ದೇಶ ಸೇವೆ ಮಾಡಲು ರಾಜಕೀಯಕ್ಕೆ ಸೇರಿದ್ದೇನೆಯೇ ಹೊರತು ಅಧಿಕಾರ ಅಥವಾ ಹುದ್ದೆಯ ದುರಾಸೆಗಾಗಿ ಅಲ್ಲ” ಎಂದು ಪ್ರತಿಪಾದಿಸಿದ್ದಾರೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.