ಗುಬ್ಬಿ ತಾಲ್ಲೂಕಿನ ಹಲವು ಪ್ರಮುಖ ರಸ್ತೆಯ ಬದಿಯಲ್ಲಿ ಒಣಗಿ ನಿಂತ ಮರಗಳು ಜೀವ ಬಲಿಗೆ ಕಾದಿವೆ. ಒಣ ಮರಗಳು, ಒಣಗಿದ ಕೊಂಬೆಗಳು ತೆರವು ಮಾಡದಿದ್ದಲ್ಲಿ ಅಮಾಯಕರ ಪ್ರಾಣ ಹಾನಿ ಖಂಡಿತ. ಕೂಡಲೇ ರಸ್ತೆಯ ಎರಡೂ ಬದಿಯಲ್ಲಿ ಒಣಗಿದ ಮರಗಳನ್ನು ತೆರವು ಮಾಡಬೇಕು ಎಂದು ರೈತ ಸಂಘ ಒತ್ತಾಯ ಮಾಡಿದೆ.
ನಿಟ್ಟೂರು ಕಡಬ ಮಾರ್ಗವಾಗಿ ಕಲ್ಲೂರು ಕ್ರಾಸ್ ಮಾರ್ಗ, ಚೇಳೂರು ಹೊಸಕೆರೆ ಮಾರ್ಗ, ನಿಟ್ಟೂರು ಚೇಳೂರು ಮಾರ್ಗ, ಸಿ.ಎಸ್.ಪುರ ಮಾರ್ಗ ಹೀಗೆ ಎಲ್ಲಾ ಪ್ರಮುಖ ರಸ್ತೆಗಳ ಬದಿಯಲ್ಲಿರುವ ನೂರಾರು ವರ್ಷದ ಮರಗಳು ಈಗಾಗಲೇ ಒಣಗಿ ನಿಂತಿವೆ. ರಸ್ತೆ ಬದಿಯಲ್ಲೇ ಸುಮಾರು ಹದಿನೈದು ಇಪ್ಪತ್ತು ಅಡಿ ಎತ್ತರದ ಒಣ ಮರಗಳು ಯಾವ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ವಾಹನ ಸವಾರರನ್ನು ಬಲಿ ಪಡೆಯುವುದು ಖಚಿತ. ಈ ವಿಚಾರ ಹಲವು ಬಾರಿ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ದೂರಿದರು.

ನಿಟ್ಟೂರು ಕಲ್ಲೂರು ಕ್ರಾಸ್ ರಸ್ತೆಯೊಂದರಲ್ಲೇ ಇಪ್ಪತ್ತು ಮರಗಳು ಸಂಪೂರ್ಣ ಒಣಗಿ ನಿಂತಿವೆ. ಸರಿ ಸುಮಾರು ಮೂವತ್ತು ನಲವತ್ತು ವರ್ಷ ವಯಸ್ಸಿನ ವಿವಿಧ ಕಾಡು ಜಾತಿಯ ಮರಗಳು ಒಣಗಿರುವ ಕಾರಣ ತೆರವು ಮಾಡಲು ಯಾವ ಕಸುಬುದಾರರು ಮುಂದಾಗಿಲ್ಲ. ಕೇವಲ ಸೌದೆಯಾಗಿ ಬಳಕೆಯಾಗುವ ಮರವನ್ನು ತೆರವು ಮಾಡಲು ಯಾರೋ ಬರುತ್ತಿಲ್ಲ ಎಂಬ ಕಾರಣವನ್ನು ನೆಪ ಮಾಡಿಕೊಂಡು ಅರಣ್ಯ ಇಲಾಖೆ ವಿಳಂಬ ಅನುಸರಿಸಿದೆ. ವಾಸ್ತವದಲ್ಲಿ ಜೋರು ಮಳೆ ಬಂದರೆ ಒಣ ಮರಗಳು ಧರೆಗುರುಳುವುದು ನಿಶ್ಚಿತ. ಉರುಳುವ ವೇಳೆ ಗ್ರಹಚಾರ ಯಾರ ಪ್ರಾಣಬಲಿ ಕಾದಿದೆಯೋ ತಿಳಿಯದು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಾರ ಕಳೆದುಕೊಂಡು ಒಣಗಿದ ಮರಕ್ಕೆ ಸತ್ವ ಇಲ್ಲದ ಬೇರು ಇರುತ್ತದೆ. ಮಳೆಗಾಲದಲ್ಲಿ ಸಡಿಲವಾಗುವ ಮಣ್ಣು ಬೇರು ಸಹಿತ ಒಣ ಮರ ಬೀಳುತ್ತದೆ. ರಸ್ತೆಗೆ ಬಿದ್ದರೆ ಬಲಿ ಖಚಿತ. ಪಕ್ಕದ ವಿದ್ಯುತ್ ಕಂಬಗಳು, ವೈರ್ ಗಳ ಮೇಲೆ ಬಿದ್ದರೆ ಮತ್ತೊಂದು ತಲೆ ನೋವು ಕಟ್ಟಿಟ್ಟ ಬುತ್ತಿ. ಈ ಎಲ್ಲಾ ತೊಂದರೆ ವಿಸ್ತರಿಸಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಾಣ ಹಾನಿಯಾದಲ್ಲಿ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಹೊಣೆ ಹೊರಬೇಕು ಎಂದು ಆಗ್ರಹಿಸಿರುವ ರೈತ ಸಂಘ ಬೆಲೆ ಬಾಳುವ ಮರಗಳನ್ನು ಕ್ಷಣಾರ್ಧದಲ್ಲಿ ಕಡಿದುರುಳಿಸುವ ಮಂದಿ ಇರುವಾಗ್ಗೆ ಕೇವಲ ಸೌದೆಗೆ ಬರುವ ಮರಗಳನ್ನು ಕಡಿಯಲು ಜನವೇ ಬರುತ್ತಿಲ್ಲ ಎನ್ನುವ ಇಲಾಖೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಕೂಡಲೇ ತಾಲ್ಲೂಕಿನ ಪ್ರಮುಖ ರಸ್ತೆಯಲ್ಲಿ ಒಣಗಿ ನಿಂತ ಮರಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.
