ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಾವು ಕಚ್ಚಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ರಘುನಾಥಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕನನ್ನು ಶ್ರೀಕಾಂತ (10) ಎಂದು ಗುರುತಿಸಲಾಗಿದೆ.
ಕಳೆದ ಶನಿವಾರ ರಾತ್ರಿ ವೇಳೆ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾಮದ ರಸ್ತೆ ಪಕ್ಕದಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ವಿಷಜಂತುಗಳು ಮನೆಗಳಿಗೆ ಸೇರುತ್ತಿವೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಹಾಗೂ ಅಧ್ಯಕ್ಷರಿಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಅನೇಕ ಬಾರಿ ಗ್ರಾಮಸ್ಥರು ಒತ್ತಾಯಿಸಿದ್ದರೂ ಸ್ಪಂದಿಸಿಲ್ಲ. ಇದರಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿರೂರು ದುರಂತ | ಡ್ರೆಜ್ಜಿಂಗ್ ಕಾರ್ಯಾಚರಣೆಯ ವೇಳೆ ಮೂಳೆ ಪತ್ತೆ: ಡಿಎನ್‌ಎ ಪರೀಕ್ಷೆ ನಡೆಸಲು ರವಾನೆ
ಬಾಲಕನ ಸಾವಿಗೆ ಪಂಚಾಯಿತಿ ಆಡಳಿತ ಮಂಡಳಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಮುಂದೆ ಹೀಗಾಗದಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
