ಕಾಂಗ್ರೆಸ್ಸಿಗೆ ತಾಕತ್ತಿದ್ದರೆ ʼಭಜರಂಗ ದಳʼ ಸಂಘಟನೆಯನ್ನು ನಿಷೇಧಿಸಲಿ ಎಂದು ಬಿಜೆಪಿ ಸವಾಲು ಹಾಕಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸವಾಲು ಸ್ವೀಕರಿಸಿ, “ನಮ್ಮ ಪ್ರಣಾಳಿಕೆಯಿಂದ ಭಜರಂಗ ದಳ ನಿಷೇಧ ಕೈ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ಕರೆದು, ಕಾಂಗ್ರೆಸ್ ಪ್ರಣಾಳಿಕೆ ವಿಚಾರವನ್ನು ಟೀಕಿಸಿ, ಕಾಂಗ್ರೆಸ್ಸಿಗೆ ತಾಕತ್ತಿದ್ದರೆ ಭಜರಂಗ ದಳ ನಿಷೇಧಿಸಲಿ ಎಂದು ಸವಾಲು ಹಾಕಿದ್ದರು.
ಬುಧವಾರ ಭಜರಂಗ ದಳ ನಿಷೇಧ ವಿಚಾರವಾಗಿ ಬಿಜೆಪಿ ನಾಯಕರಿಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿ, “ನಾನೂ ಆಂಜನೇಯನ ಭಕ್ತ, ಆದರೆ, ಈ ಭಜರಂಗ ದಳಕ್ಕೂ ಹನುಮನಿಗೂ ಏನು ಸಂಬಂಧ? ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ, ಅಧಿಕಾರಕ್ಕೆ ಬರುತ್ತಿದ್ದಂತೆ ಭಜರಂಗ ದಳ ನಿಷೇಧ ಮಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ಎಂದರೆ ಬಿಜೆಪಿಗೆ ಯಾಕೆ ನೋವು: ಸಿದ್ದರಾಮಯ್ಯ
“ಭಜರಂಗ ದಳಕ್ಕೂ ಹನುಮಂತನಿಗೂ ಏನು ಸಂಬಂಧ? ಹನುಮಂತನೇ ಬೇರೆ, ಭಜರಂಗ ದಳವೇ ಬೇರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೆಲಸ ಭಜರಂಗ ದಳ ಮಾಡುತ್ತಿದೆ. ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ. ನಾವು ಏನು ಹೇಳಿದ್ದೇವೋ ಅದನ್ನು ಸರಿಯಾಗಿ ಓದಿ. ಆಂಜನೇಯನ ಹೆಸರಿಟ್ಟುಕೊಂಡು ಭಜರಂಗ ದಳಕ್ಕೂ ಲಿಂಕ್ ಮಾಡಿದ್ರೆ ಹೇಗೆ” ಎಂದು ಪ್ರಶ್ನಿಸಿದರು.
“ನಾವೆಲ್ಲ ಆಂಜನೇಯನ ಪ್ರವೃತ್ತಿಯವರು. ಸುಮ್ನೆ ಭಜರಂಗಿ ಅಂತ ಕ್ಯಾಂಪೇನ್ ಮಾಡೋದಲ್ಲ. ಹೊಟ್ಟೆಗೆ ಏನು ಕೊಟ್ರಿ ಅನ್ನೋದು ಮುಖ್ಯ. ಉದ್ಯೋಗ ಏನು ಕೊಟ್ಟರು? ಹೂಡಿಕೆ ಏನು ಮಾಡಿದ್ದಾರೆ? ನಾವು ಯಾವುದೇ ಕಾರಣಕ್ಕೂ ನಮ್ಮ ಪ್ರಣಾಳಿಕೆಯಿಂದ ಭಜರಂಗದಳ ನಿಷೇಧ ಪ್ರಸ್ತಾಪ ಹಿಂಪಡೆಯುವುದಿಲ್ಲ” ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.