ಮಂಡ್ಯದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಮಹಿಳೆಯರ ಬದುಕಿಗೆ ನಾನಾ ರೀತಿಯ ತೊಡಕುಗಳನ್ನು ತಂದೊಡ್ಡಿವೆ. ಈ ಸಂಸ್ಥೆಗಳು ಲಾಭದ ಆಸೆಯಿಂದ ಕಾನೂನು ಮೀರಿ ಅಧಿಕ ಸಾಲ ನೀಡುತ್ತಿವೆ. ಮಹಿಳೆಯರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿವೆ. ಇದು ಆತ್ಮಹತ್ಯೆ ಹಾಗೂ ಊರು ಬಿಡುವಂತಹ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತಿದೆ.
ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದ ಮಹಾಲಕ್ಷ್ಮಿ ಎಂಬ ಮಹಿಳೆ ತನ್ನ ಪತಿ ಕೂಲಿ ಕೆಲಸಕ್ಕೆ ಹೋಗಿದ್ದ ಕಾರಣ ಸಾಲದ ಕಂತು ಪಾವತಿಸಲು ಅರ್ಧ ಗಂಟೆ ಸಮಯ ಕೊಡಲು ಬೇಡಿಕೊಂಡರೂ, ಸಂಸ್ಥೆಯ ಪ್ರತಿನಿಧಿ ರತ್ನಮ್ಮ “ಸತ್ತರೆ ಸಾಲವಾದರೂ ಮುಕ್ತವಾಗುತ್ತದೆ” ಎಂಬ ಮಾತುಗಳನ್ನಾಡಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ, ಆ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಕ್ರೋ ಫೈನಾನ್ಸ್ ಕಂಪನಿಗಳ ಭೀಕರತೆಯನ್ನು ತೆರೆದಿಟ್ಟಿದೆ.
ಅದೇ ರೀತಿ, ಮಂಡ್ಯದ ಹೊಳಲು ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಒತ್ತಡದಿಂದ ಬೇಸತ್ತ ಹೆಣ್ಣುಮಕ್ಕಳು ಗ್ರಾಮ ಪಂಚಾಯತಿ ಎದುರು ನೇಣು ಕುಣಿಕೆ ಕಟ್ಟಿ, ಸಾಲದ ಕಂತು ಕಟ್ಟಲು ಕಾಲಾವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಮಹಿಳೆಯರನ್ನು ಸಾಲದ ಸುಳಿಯೊಳಗೆ ತಳ್ಳಿದ ಸಂಸ್ಥೆಗಳು, ಅವರು ಸಾಲ ತೀರಿಸಲು ಪಡುತ್ತಿರುವ ಒತ್ತಡಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಹೊಸಹಳ್ಳಿ ಗ್ರಾಮದಲ್ಲಿ, ಸುಮಾರು 20ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ತಾಯಿ ಮತ್ತು ಮಗಳು 1 ಕೋಟಿ ರೂ. ಸಾಲ ತೀರಿಸಲು ಸಾಧ್ಯವಿಲ್ಲದೆ ಊರು ಬಿಟ್ಟಿದ್ದಾರೆ. ಈ ನಡುವೆ, ಇತರ ಸಂಘದ ಸದಸ್ಯರುಗಳ ಮೇಲೆ ಹಣ ಪಾವತಿಸುವ ಒತ್ತಡ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳ ಕೈವಾಡವಿರುವ ಶಂಕೆಯಿದೆ.

ಈಗಾಗಲೇ ಕೊರೋನಾ ಬಿಕ್ಕಟ್ಟು, ಬರಗಾಲ, ನಿರುದ್ಯೋಗದಿಂದಾಗಿ ಹಣಕಾಸು ತೊಂದರೆಗಳನ್ನು ಎದುರಿಸುತ್ತಿರುವ ಜನತೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದುರಾಸೆಗೆ ತುತ್ತಾಗಿದ್ದಾರೆ. ಸಾಮಾನ್ಯ ಜನರಿಗೆ ದುಬಾರಿ ಬಡ್ಡಿಯ ಸಾಲ ನೀಡುತ್ತಾ, ಪ್ರತಿವಾರ ಮತ್ತು 15 ದಿನಕ್ಕೆ ಒಂದು ಸಲ ನಿಯಮಿತವಾಗಿ ಸಾಲ ಮತ್ತು ಬಡ್ಡಿಯನ್ನು ಪಾವತಿಸುವ ಒತ್ತಡಗಳನ್ನು ಹೇರುತ್ತಿದ್ದಾರೆ.
ಅದರಲ್ಲೂ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪುರುಷ ನೌಕರರು, ಮಹಿಳೆಯರ ಮನೆಗೆ ಮುಂಜಾನೆ ಬಾಗಿಲಿಗೆ ಬಂದು, ಕೆಲಸಕ್ಕೆ ಹೋಗಲು ಬಿಡದೆ ಹಣ ಪಾವತಿಸದಿದ್ದರೆ “ಯಾವುದಾದರೂ ಅನೈತಿಕ ಕಾರ್ಯ ಮಾಡಿ ಹಣ ತಂದುಕಟ್ಟಿ” ಎಂದು ಅವಮಾನ ಮಾಡುವಷ್ಟರವರೆಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಮಹಿಳೆಯರು ಕುಟುಂಬದ ವ್ಯವಸಾಯ, ಆರೋಗ್ಯ, ಮಕ್ಕಳ ಶಿಕ್ಷಣ, ಹಾಗೂ ಕುಟುಂಬ ನಿರ್ವಹಣೆಗಾಗಿ ಸಾಲ ಪಡೆದುಕೊಂಡಿದ್ದರು. ಬರಗಾಲದ ಸನ್ನಿವೇಶ ಎದುರಾದುದ್ದರಿಂದ ಒಂದು ಸಂಸ್ಥೆಯ ಸಾಲ ತೀರಿಸಲು ಮತ್ತೊಂದು ಸಂಸ್ಥೆಯಿಂದ ಸಾಲ ಮಾಡುವುದು. ಅದಕ್ಕೆ ಸಾಲ ಕಟ್ಟಲು ಇನ್ನೊಂದು ಸಂಸ್ಥೆಯ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳ ತಲೆಯ ಮೇಲೆ ಲಕ್ಷಾಂತರ ರೂಪಾಯಿಗಳ ಸಾಲದ ಬಲೆ ಬೀಸಿದ ಸಂಸ್ಥೆಗಳು, ಮಹಿಳೆಯರನ್ನು ಅನ್ಯಾಯವಾಗಿ ದಣಿಸುತ್ತಿರುವುದು ದೃಢವಾಗಿದೆ.
ಮಹಾಲಕ್ಷ್ಮಿ ಆತ್ಮಹತ್ಯೆ, ಹೊಳಲು ಪಂಚಾಯಿತಿ ಮುಂದೆ ಮಹಿಳೆಯರ ನೇಣು ಹಾಕಿಕೊಳ್ಳುವ ಬೆದರಿಕೆ, ರಾತ್ರೋರಾತ್ರಿ ಕುಟುಂಬಗಳು ಊರು ಬಿಡುತ್ತಿರುವುದು ಹೀಗೆ ಸರಣಿ ದುರಂತ ಘಟನೆಗಳು ಜರುಗುತ್ತಿವೆ. ಇಲ್ಲಿನ ಜನ ಪ್ರತಿನಿಧಿಗಳು ಗಂಗಾರತಿ ಆಧ್ಯಯನ ಪ್ರವಾಸ ಅಂತ ಪ್ರವಾಸಕ್ಕೆ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.
ಮಳವಳ್ಳಿ ತಾಲೂಕಿನ ಹತ್ತಾರು ಮಹಿಳೆಯರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೇಲೆ ಕೋಪಗೊಂಡು ಪ್ರತಿಭಟನೆ ನಡೆಸಿದ್ದು, “ಸಾಲ ಮನ್ನಾ ಮಾಡಿ, “ಆತ್ಮಹತ್ಯೆಗೆ ಒತ್ತಾಯ ಮಾಡುವ ಸಂಸ್ಥೆಗಳ ಕಿರುಕುಳ ತಡೆಯಿರಿ” ಎಂದು ಒತ್ತಾಯಿಸಿದ್ದಾರೆ.
ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಯಿಂದ ಬಡ ಮಹಿಳೆಯರು ಕುಟುಂಬ ಸಮೇತ ಊರಿ ಬಿಟ್ಟು ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತಂತೆ ತಕ್ಷಣ ಕ್ರಮ ಕೈಗೊಂಡು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆಯನ್ನು ತಡೆಯಬೇಕು. ಬಡ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ ಬಡ್ಡಿರಹಿತ ಸಾಲವನ್ನು ಕೊಡಿಸುವುದರ ಮೂಲಕ ಹಣಕಾಸು ಬಿಕ್ಕಟ್ಟಿನಿಂದ ಅವರನ್ನು ಹೊರಹಾಕುವ ಪ್ರಯತ್ನ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಅಮಾಯಕರ ಹೆಸರಿನಲ್ಲಿ ₹1 ಕೋಟಿಗೂ ಹೆಚ್ಚು ಸಾಲ ಪಡೆದು ತಾಯಿ-ಮಗಳು ವಂಚನೆ; ಪರಾರಿ
ಮಂಡ್ಯದ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದುಬಾರಿ ಬಡ್ಡಿಯ ಹಾವಳಿ ಬಡ ಮಹಿಳೆಯರ ಬದುಕು ಸರಣಿ ಸಾವುಗಳಿಗೆ ದೂಡುವ ಸಾಧ್ಯತೆ ಇದೆ. ಈಗಿರುವ ಸನ್ನಿವೇಶ ಅವರ ಬದುಕನ್ನು ಉಸಿರಾಡದಂತಹ ದುಸ್ಥಿತಿಗೆ ತಂದಿಟ್ಟಿದೆ. ಇದನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಕುಟುಂಬಗಳಿಗೆ ಬಡ್ಡಿ ರಹಿತ, ದೀರ್ಘಾವಧಿ ಸಾಲವನ್ನು ದೊರಕಿಸಿ ಕೊಡುವ ಕೆಲಸ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
