ಸದ್ಯ ಎಲ್ಲರ ಚಿತ್ತ ಮೈಸೂರು ಜಿಲ್ಲೆಯ ಚುನಾವಣಾ ಅಖಾಡದತ್ತ ನೆಟ್ಟಿದೆ. ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಭಿನ್ನವಾದ ಹೋರಾಟಕ್ಕೆ ಜಿಲ್ಲೆ ಸಾಕ್ಷಿಯಾಗುತ್ತಿದೆ.
ಕೆಲವು ಕ್ಷೇತ್ರಗಳು ಹೊಸಬರ ಆಗಮನಕ್ಕೆ ಸಾಕ್ಷಿಯಾದರೆ, ಇನ್ನು ಹಲವು ಕ್ಷೇತ್ರಗಳಲ್ಲಿ ಹಳಬರ ಪಾರಮ್ಯ ಉಳಿಸಿಕೊಳ್ಳುವ ಹೋರಾಟ ನಡೆಯುತ್ತಿದೆ. ಮತ್ತೆ ಕೆಲವೆಡೆ ಇತಿಹಾಸ ಸೃಷ್ಟಿಸುವ ಪ್ರಯತ್ನಗಳಿಗೂ ಚುನಾವಣಾ ಕಣ ಸಾಕ್ಷಿಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳೂ ಕುತೂಹಲದ ಕೇಂದ್ರಗಳಾಗಿ ಮಾರ್ಪಾಡಾಗಿವೆ.
ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಇದ್ದರೆ, ಮೈಸೂರು ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಡಲಿದೆ. ಕಳೆದ ಬಾರಿ ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಎರಡನ್ನೂ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಕಂಡಿದ್ದವು.
ಇದೇ ಮೊದಲ ಬಾರಿಗೆ ಜಿಲ್ಲೆಯತ್ತ ಗಮನ ಕೇಂದ್ರೀಕರಿಸಿರುವ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಭದ್ರಕೋಟೆ ಒಡೆಯಲು ರಣೋತ್ಸಾಹದಿಂದ ಮುನ್ನುಗುತ್ತಿದೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ, ಅಮಿತ್ ಶಾ ಅವರಂತಹ ದೆಹಲಿ ಮಟ್ಟದ ಪ್ರಮುಖ ನಾಯಕರುಗಳೇ ಮೈಸೂರಿನ ಬೀದಿಗಳಲ್ಲಿ ಅಲೆದಾಡಿ ಮತಯಾಚನೆ ಮಾಡುತ್ತಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಗಳಲ್ಲಿ ಹೊಸ ಹುರುಪು ತಂದಿದೆ.
ಇನ್ನುಳಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದರ ಜೊತೆಗೆ ಹೊಸ ಖಾತೆ ತೆರೆದು ವ್ಯಾಪ್ತಿ ವಿಸ್ತರಣೆಗೂ ಪ್ರಯತ್ನ ಆರಂಭಿಸಿವೆ. ಜಿಲ್ಲೆಯ ರಾಜಕಾರಣದಲ್ಲಿ ಈ ಬಾರಿ ವಲಸೆ ಅಭ್ಯರ್ಥಿಗಳಿಗೆ ಮೂರೂ ಪಕ್ಷಗಳು ಮನ್ನಣೆ ನೀಡಿರುವುದು ರಾಜಕೀಯ ಲೆಕ್ಕಾಚಾರದ ಬುಡ ಅಲುಗಾಡಿಸಿದೆ.
ತಿ ನರಸೀಪುರ
ಹಾಲಿ ಜೆಡಿಎಸ್ ವಶದಲ್ಲಿರುವ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಮಹದೇವಪ್ಪ ರಣತಂತ್ರ ರೂಪಿಸಿದ್ದಾರೆ.
ಶಾಸಕ ಅಶ್ವಿನ್ ವಿಚಾರದಲ್ಲಿ ಕ್ಷೇತ್ರದಲ್ಲಿ ಹಿಂದಿನ ಒಲವಿಲ್ಲದಿರುವುದು ಮಹದೇವಪ್ಪ ಪಾಲಿಗೆ ಪ್ಲಸ್ ಆಗಿದೆ. ಆದರೆ, ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದ ಅವರ ನಿರ್ಧಾರದ ಬಗ್ಗೆ ಕ್ಷೇತ್ರದ ಕೆಲವೆಡೆ ಇನ್ನೂ ಅಸಮಾಧಾನವಿದೆ.
ಆದರೆ ಪಕ್ಕದ ನಂಜನಗೂಡು ಕ್ಷೇತ್ರದ ದರ್ಶನ್ ಧ್ರುವನಾರಾಯಣ್ ವಿಚಾರದಲ್ಲಿ ಅವರು ತೋರಿದ ಪ್ರೀತಿ ವಿಶ್ವಾಸದ ನಡೆ ಮಹದೇವಪ್ಪನವರನ್ನು ದ್ವೇಷಿಸುವವರ ಮನದಲ್ಲೂ ಭರವಸೆ ಮೂಡಿಸಿದೆ.
ಡಾ. ಮಹದೇವಪ್ಪನವರಿಗೆ ಈ ಬಾರಿ ನೇರ ಸ್ಪರ್ಧೆ ಒಡ್ಡಲು ನಿಂತಿರುವವರು ಬಿಜೆಪಿಯ ಡಾ.ಎಂ.ರೇವಣ್ಣ. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಡಾ.ಎಂ.ರೇವಣ್ಣ, ಬಿಜೆಪಿ ಅಭ್ಯರ್ಥಿಯಾಗುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದವರು.
ಇವರು, ತಿ.ನರಸೀಪುರ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಸೋತಿದ್ದ ಪುಟ್ಟಬಸವಯ್ಯ ಅವರ ಅಣ್ಣನ ಮಗ. ಪುಟ್ಟಬಸವಯ್ಯ ಎರಡು ಅವಧಿಗೆ (ಒಮ್ಮೆ ಮೂಗೂರು, ಒಮ್ಮೆ ಭೈರಾಪುರ) ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿದ್ದವರು.
ಇದೇ ರಾಜಕೀಯ ಬಲದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿರುವ ರೇವಣ್ಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ವ್ಯಕ್ತಿ. ಹೀಗಾಗಿ ಮಹದೇವಪ್ಪ ಹಾಗೂ ಅಶ್ವಿನ್ ಕುಮಾರ್ ಇಬ್ಬರೂ ಇನ್ನಷ್ಟು ಜತನದಿಂದ ಕ್ಷೇತ್ರದೊಳಗೆ ಕೆಲಸ ಮಾಡುತ್ತಿದ್ದಾರೆ.
ಜಾತಿ ಲೆಕ್ಕಾಚಾರ: ಮೀಸಲು ಕ್ಷೇತ್ರವಾಗಿರುವ ಕಾರಣ ದಲಿತ ಮತಗಳೇ ಈ ಅಭ್ಯರ್ಥಿಗಳ ಶಕ್ತಿ. ಇವರ ಜೊತೆಗೆ ಆಯಾಯ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆ ಅಲ್ಪಸಂಖ್ಯಾತ ವರ್ಗ ಹಾಗೂ ಇತರೆ ವರ್ಗಗಳ ಮತ ಪಡೆದುಕೊಂಡವರಿಗೆ ಈ ಬಾರಿ ಯಶಸ್ಸು ಸಿಗಲಿದೆ. ಇವೆಲ್ಲ ನೋಡಿದರೆ ಮಾಜಿ ಸಚಿವ ಎಚ್ ಸಿ ಮಹದೇವಪ್ಪನವರಿಗೆ ಗೆಲುವಿನ ಅವಕಾಶ ಹೆಚ್ಚಿದೆ.
ಚಾಮರಾಜ
ಅಘೋಷಿತ ಒಕ್ಕಲಿಗರ ಮೀಸಲು ಕ್ಷೇತ್ರವೆನ್ನುವ ಅನ್ವರ್ಥನಾಮದಿಂದ ಗುರುತಿಸಿರುವ ಚಾಮರಾಜ ಕ್ಷೇತ್ರದಲ್ಲಿಇಲ್ಲಿಯವರೆಗೆ ಗೆದ್ದವರೆಲ್ಲ ಒಕ್ಕಲಿಗರೇ. ಈ ಬಾರಿ ಚುನಾವಣೆಯಲ್ಲೂ ಇದೇ ಸಮುದಾಯದ ಹುರಿಯಾಳುಗಳು ಮೂರು ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ.
ಆದರೆ ಈ ಬಾರಿ ಅಭ್ಯರ್ಥಿ ಬದಲಾವಣೆಯೇ ಇಲ್ಲಿನ ಮುಖ್ಯ ಅಂಶವಾಗಿದೆ. ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ ಹೋದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದವರು.
ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದ ಇವರು, ಮಾಜಿ ಶಾಸಕ ವಾಸು ಅವರೊಂದಿಗೆ ಪೈಪೋಟಿ ನಡೆಸಿ ಟಿಕೆಟ್ ಫೈಟ್‌ನಲ್ಲಿ ಗೆದ್ದು ಕೈ ಪಕ್ಷದ ಉಮೇದುವಾರರಾದವರು. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರದ್ದು ಈ ಬಾರಿ ಕೊಂಚ ಗೊಂದಲದ ಆಯ್ಕೆ.
ಉಳಿದಂತೆ ಬಿಜೆಪಿಯ ಎಲ್ ನಾಗೇಂದ್ರ, ಎರಡನೇ ಬಾರಿ ಆಯ್ಕೆಗಾಗಿ ಜನರೆದುರು ಬಂದು ನಿಲ್ಲುತ್ತಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಸತತ ಗೆಲುವು ಕಂಡ ಕ್ಷೇತ್ರಗಳಲ್ಲಿ ಚಾಮರಾಜ ಕ್ಷೇತ್ರವೂ ಒಂದು. ಇಂತಹ ಇತಿಹಾಸವನ್ನು ದಿವಂಗತ ಶಂಕರಲಿಂಗೇಗೌಡರು ಸೃಷ್ಟಿಸಿದ್ದರು. ಅದನ್ನು ಮುಂದುವರೆಸುವ ಉಮೇದು ನಾಗೇಂದ್ರ ಅವರದ್ದು. ಆಡಳಿತ ವಿರೋಧಿ ಅಲೆ ನಡುವೆಯೂ ಕೊಂಚ ಹೆಸರು ಉಳಿಸಿಕೊಂಡಿರುವ ಕಾರಣ ನಾಗೇಂದ್ರಗೆ ಗೆಲುವಿನ ಅವಕಾಶ ಹೆಚ್ಚಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಗೆ ಮಾಜಿ ಶಾಸಕ ವಾಸು ಅವರ ಸಹಕಾರ ಪೂರ್ಣ ಪ್ರಮಾಣದಲ್ಲಿ ದೊರಕದಿದ್ದರೆ ಗೆಲುವಿನ ಹಾದಿ ಕಠಿಣ.ಇನ್ನು ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್ ಕೆ ರಮೇಶ್ ಪಾಲಿಗಿದು ಅಸ್ತಿತ್ವಕ್ಕಾಗಿನ ಹೋರಾಟ.
ಈ ಮೂವರೂ ಒಕ್ಕಲಿಗ ನಾಯಕರ ಭವಿಷ್ಯವನ್ನು ಕ್ಷೇತ್ರದಲ್ಲಿರುವ ಶೇ.25 ಒಕ್ಕಲಿಗ, ಶೇ.8 ಲಿಂಗಾಯತ, ಶೇ.8 ಕುರುಬ, ಶೇ.7 ಬ್ರಾಹ್ಮಣ ಮತದಾರರು ಹಾಗೂ 8.98% ಎಸ್ಸಿ ಮತ್ತು 4.29% ಎಸ್ಟಿ ಮತದಾರರು ನಿರ್ಧರಿಸಲಿದ್ದಾರೆ.
ಚಾಮುಂಡೇಶ್ವರಿ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.27 ಒಕ್ಕಲಿಗ, ಶೇ.14 ಕುರುಬ, ಶೇ.10 ಲಿಂಗಾಯತ ಮತದಾರರಿದ್ದಾರೆ
ಈ ವರ್ಷ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಜನತಾ ದಳದ (ಜಾತ್ಯತೀತ) ಜಿ.ಟಿ.ದೇವೇಗೌಡ ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನ ಸಿದ್ಧೇಗೌಡ ಮತ್ತು ಬಿಜೆಪಿಯ ಕವೀಶ್ ಗೌಡ ಸ್ಪರ್ಧಿಸಿದ್ದಾರೆ.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಜೆಡಿಎಸ್‌ನಿಂದ ಬಂದವರು. ಅಲ್ಲಿ ಸಿದ್ದರಾಮಯ್ಯ ಆಪ್ತರಾಗಿರುವ ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಸೇರಿದಂತೆ 11 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ, ಈಚೆಗಷ್ಟೇ ಪಕ್ಷ ಸೇರಿದ, ಪಕ್ಷದ ನಿಯಮದಂತೆ ಅರ್ಜಿಯನ್ನೂ ಸಲ್ಲಿಸದ ಸಿದ್ದೇಗೌಡ ಅವರಿಗೆ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕವೀಶ್ ಗೌಡ ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ. ಅವರು ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆಯಾಗಿ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಿರುವ ಜಿಟಿಡಿ ಈ ಬಾರಿಯೂ ಇಲ್ಲಿನ ಜೆಡಿಎಸ್ ಅಭ್ಯರ್ಥಿ. ತಮ್ಮ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿರುವ ಒಕ್ಕಲಿಗ ನಾಯಕ. ಟಿಕೆಟ್ ಹಂಚಿಕೆ ವೇಳೆ ಜಿಟಿಡಿ ಪಕ್ಷಾಂತರಕ್ಕೆ ಸಿದ್ದವಾಗಿದ್ದರು. ಈ ಬೆಳವಣಿಗೆ ಅವರ ರಾಜಕೀಯ ಲೆಕ್ಕಾಚಾರಗಳನ್ನು ಅಲ್ಲೋಲ ಕಲ್ಲೋಲಗೊಳಿಸಿತ್ತು. ಆದರೆ ಮರಳಿ ಜೆಡಿಎಸ್‌ನಲ್ಲೇ ಅವರು ಉಳಿದುಕೊಂಡ ಪರಿಣಾಮ ಕ್ಷೇತ್ರದ ಜನ ಅವರ ಕೈ ಹಿಡಿದು ಮುನ್ನಡೆಸುವ ಭರವಸೆ ಜಿ ಟಿ ದೇವೇಗೌಡರಿಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಇಲ್ಲಿ ಮತ್ತದೇ ಗೆಲುವಿನ ಹೋರಾಟ.
ಈ ಕ್ಷೇತ್ರದಲ್ಲಿ 2,89,138 ಮತದಾರರಿದ್ದು, ಈ ಪೈಕಿ 1,46,593 ಪುರುಷರು ಹಾಗೂ 1,42,486 ಮಹಿಳಾ ಮತದಾರರಿದ್ದಾರೆ. ಲಿಂಗಾಯತರು, ಕುರುಬರು, ಎಸ್ಸಿ/ಎಸ್ಟಿಗಳು, ಬ್ರಾಹ್ಮಣರು, ವಿಶ್ವಕರ್ಮರು, ಕೊಡವರು ನಿರ್ಣಾಯಕವಾಗಿದ್ದಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸಹ ಗಮನಾರ್ಹವಾಗಿದ್ದಾರೆ. 2011 ರ ಜನಗಣತಿಯ ಪ್ರಕಾರ, ಕ್ಷೇತ್ರದಲ್ಲಿ 60.79% ಗ್ರಾಮೀಣ ಮತದಾರರಿದ್ದರೆ, 39.21% ನಗರ ಮತದಾರರಿದ್ದಾರೆ.
ನರಸಿಂಹರಾಜ
ನರಸಿಂಹರಾಜ ಕ್ಷೇತ್ರ ಮೈಸೂರಿನ ಮುಸ್ಲಿಂ ಬಾಹುಳ್ಯದ ಕ್ಷೇತ್ರ. ಕಾಂಗ್ರೆಸ್‌ನ ಭದ್ರಕೋಟೆ. ಜೊತೆಗೆ ಅಜೀಜ್ ಸೇಠ್ ಮತ್ತವರ ಪುತ್ರ ತನ್ವೀರ್ ಸೇಠ್ ಅವರ ರಾಜಕೀಯ ಕರ್ಮಭೂಮಿ.
ಇಲ್ಲಿಂದಲೇ ಅಜೀಜ್ ಸೇಠ್ ಆರು ಮತ್ತು ತನ್ವೀರ್ ಸೇಠ್ ಐದು ಬಾರಿ ಗೆಲುವು ದಾಖಲಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತನ್ವೀರ್ ಸೇಠ್ ಅಪ್ಪನ ಗೆಲುವಿನ ದಾಖಲೆ ಸರಿಗಟ್ಟುವ ಆಶಾಭಾವನೆ ಹೊಂದಿದ್ದಾರೆ.
ಈ ಕ್ಷೇತ್ರದೊಳಗೆ ಪಕ್ಷಕ್ಕೊಂದು ನೆಲೆಕಂಡುಕೊಳ್ಳುವುದಷ್ಟೇ ಬಿಜೆಪಿ ಪಾಲಿನ ಚುನಾವಣಾ ಆಟ. ಇದಕ್ಕಾಗಿ ಮಾಜಿ ಮೇಯರ್ ಸಂದೇಶ ಸ್ವಾಮಿ ಇನ್ನಿಲ್ಲದಂತೆ ಹೋರಾಟಕ್ಕಿಳಿದಿದ್ದಾರೆ. ಉಳಿದಂತೆ ಕಣದಲ್ಲಿರುವ ಎಸ್ಡಿಪಿಐ ಹಾಗೂ ಜೆಡಿಎಸ್ ಪಕ್ಷಗಳೇ ಕಾಂಗ್ರೆಸ್‌ನ ನೇರ ಎದುರಾಳಿಗಳು.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದುಕೊಂಡೇ ಇದ್ದ ತನ್ವೀರ್ ಸೇಠ್ ಈಗ ಕಾಂಗ್ರೆಸ್ ಅಭ್ಯರ್ಥಿ. ಕಡೇ ಗಳಿಗೆಯಲ್ಲಿ ಕಣದಿಂದ ಓಡಿ ಹೋದ ನಾಯಕನೆನ್ನುವ ಕುಖ್ಯಾತಿ ಹೊಂದಿದ್ದ ತನ್ವೀರ್ ಸೇಠ್ ಬಳಿಕ ಮರಳಿ ಅಖಾಡಕ್ಕಿಳಿದ್ದಾರೆ.
2018ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್ಡಿಪಿಐನ ಅಬ್ದುಲ್ ಮಜೀದ್ ಮೂರನೇ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಇದೇ ಹುಮ್ಮಸ್ಸಿನಲ್ಲಿ ಕಣಕ್ಕಿಳಿದಿರುವ ಅವರು ಕಾಂಗ್ರೆಸ್ ಅನ್ನು ಹಿಂದಿಕ್ಕಿ ಕ್ಷೇತ್ರದಲ್ಲಿ ಮೊದಲ ಗೆಲುವಿನ ಬಾವುಟ ಹಾರಿಸುವ ಕನಸಿನಲ್ಲಿದಾರೆ.
ಇತ್ತ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದೆ. ಆರಂಭದಲ್ಲಿ ಜೆಡಿಎಸ್‌ನಿಂದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಈ ಕಾರಣಕ್ಕಾಗಿಯೇ ಸ್ಥಳೀಯ ಟಿಕೆಟ್ ಆಕಾಂಕ್ಷಿ ಅಬ್ದುಲ್ ಅಜೀಜ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಆದರೆ, ತಮ್ಮ ಸ್ಪರ್ಧೆಗೆ ವಾತಾವರಣ ಪೂರಕವಾಗಿಲ್ಲ ಎನ್ನುವುದನ್ನು ಅರಿತ ಇಬ್ರಾಹಿಂ ಇತ್ತ ಬರಲಿಲ್ಲ. ಹೀಗಾಗಿ ಅವರ ಬೆಂಬಲಿಗ ಅಬ್ದುಲ್ ಖಾದರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇವರು ಇಬ್ರಾಹಿಂ ಅವರೊಂದಿಗೆ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದವರು.ಇಲ್ಲಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ನಿರೀಕ್ಷೆಯಲ್ಲಿದ್ದಾರೆ.
ಅಲ್ಪಸಂಖ್ಯಾತರೇ ನಿರ್ಣಯಕರಾಗಿರುವ ಕ್ಷೇತ್ರದಲ್ಲಿಈ ಬಾರಿಯೂ ಕಾಂಗ್ರೆಸ್‌ಗೆ ಎಸ್ಡಿಪಿಐ ಹಾಗೂ ಬಿಜೆಪಿ ನೇರ ಸವಾಲೊಡ್ಡಿವೆ. ಇಲ್ಲಿ ಜೆಡಿಎಸ್ ಯಾರ ಮತಬುಟ್ಟಿಗೆ ಕೈ ಹಾಕಿ ಯಾರ ಸೋಲಿಗೆ ಕಾರಣವಾಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? :ಚುನಾವಣಾ ಪ್ರಚಾರವೂ… ಹೆಲಿಕಾಪ್ಟರ್ ದುರಂತವೂ….
ಹುಣಸೂರು
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿಈ ವರ್ಷ ಜೆಡಿಎಸ್‌ನಿಂದ ಹರೀಶ್ ಗೌಡ, ಕಾಂಗ್ರೆಸ್‌ನಿಂದ ಎಚ್ ಪಿ ಮಂಜುನಾಥ್ ಮತ್ತು ಬಿಜೆಪಿಯ ದೇವರಹಳ್ಳಿ ಸೋಮಶೇಖರ್ ಸ್ಪರ್ದಿಸಿದ್ದಾರೆ.
2018ರಲ್ಲಿ ಜೆಡಿಎಸ್‌ನ ಎಚ್ ವಿಶ್ವನಾಥ್ ಈ ಕ್ಷೇತ್ರದ ಶಾಸಕರಾಗಿದ್ದರು. ಬಳಿಕ ನಡೆದ ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಮಂಜುನಾಥ್ ಅವರಿಂದ ಸೋಲು ಕಂಡರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳೆರಡರ ನೇರ ಹಣಾಹಣಿ ಹೊಂದಿರುವ ಈ ಕ್ಷೇತ್ರದಲ್ಲಿ ಮರಳಿ ಹುಣಸೂರಿನ ಶಾಸಕರಾಗುವ ಪ್ರಯತ್ನವನ್ನು ಕಾಂಗ್ರೆಸ್‌ನ ಮಂಜುನಾಥ್ ಮಾಡುತ್ತಿದ್ದಾರೆ. ಇವರಿಗೆ ಜೆಡಿಎಸ್‌ನ ಹರೀಶ್ ಗೌಡ, ಬಿಜೆಪಿಯ ದೇವರಹಳ್ಳಿ ಸೋಮಶೇಖರ್ ಸ್ಪರ್ಧೆ ಒಡ್ಡುತ್ತಿದ್ದಾರೆ. ಹುಣಸೂರಿನ ಬಿಜೆಪಿ ಅಭ್ಯರ್ಥಿ ಸೋಮಶೇಖರ್ 2019ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಇವರೀಗ ಬಿಜೆಪಿಯ ಹಾಲಿ ಅಭ್ಯರ್ಥಿ ಎನ್ನುವುದು ಗಮನಾರ್ಹ.
ಉಳಿದಂತೆ ಕ್ಷೇತ್ರದಲ್ಲಿ ಜನರ ಒಲವು ಪಡೆದಿರುವ ಕಾರಣ ಕಾಂಗ್ರೆಸ್ನ ಮಂಜುನಾಥ್ಗೆ ಈ ಬಾರಿಗೂ ಗೆಲುವು ಒಲಿಯುವ ಸಾಧ್ಯತೆ ದಟ್ಟವಾಗಿದೆ. ಜಾತಿ ಲೆಕ್ಕಾಚಾರ ನೋಡುವುದಾದರೆ, ಕುರುಬ ಸಮುದಾಯ ಹೆಚ್ಚಿರುವ ಕ್ಷೇತ್ರದಲ್ಲಿ ದಲಿತರು ನಂತರದಲ್ಲೂ ಗೆಲುವಿನ ನಿರ್ಣಾಯಕರಾಗಿದ್ದಾರೆ. ಉಳಿದಂತೆ ಇತರ ಸಮುದಾಯಗಳ ಮತವೂ ಅಭ್ಯರ್ಥಿ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಎಚ್ ಡಿ ಕೋಟೆ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಎಚ್.ಡಿ.ಕೋಟೆ ಕ್ಷೇತ್ರದ ಬಿಜೆಪಿಯ ಕೆ ಎಂ ಕೃಷ್ಣಾ ನಾಯಕ್, ಕಾಂಗ್ರೆಸ್‌ನ ಅನಿಲ್ ಚಿಕ್ಕಮಾದು ಹಾಗೂ ಜೆಡಿಎಸ್‌ನ ಜಯಪ್ರಕಾಶ್ ಸೆಣೆಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೃಷ್ಣನಾಯಕ ಈ ಹಿಂದೆ ಜೆಡಿಎಸ್‌ನಲ್ಲಿದ್ದವರು. ಆ ಪಕ್ಷದ ಟಿಕೆಟ್‌ಗಾಗಿ ಬಹಳಷ್ಟು ಕಸರತ್ತು ನಡೆಸಿದ್ದರು. ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರಿಗೆ ಟಿಕೆಟ್ ಖಾತರಿಯಾಗುವ ಸುಳಿವು ಅರಿತು ಪಕ್ಷಾಂತರ ಮಾಡಿ, ಬಿಜೆಪಿ ಅಭ್ಯರ್ಥಿಯಾದರು. ಪಕ್ಷ ಬದಲಾದರೂ ಕ್ಷೇತ್ರದ ನಾಡಿ ಬಲ್ಲವರಾಗಿರುವ ಕಾರಣ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಹಾಲಿ ಶಾಸಕ ಅನಿಲ್ ಚಿಕ್ಕಮಾದು ಇನ್ನೊಂದು ಅವಧಿಗೆ ಕ್ಷೇತ್ರದ ಜನರ ಆಶೀರ್ವಾದ ಬಯಸುತ್ತಿದ್ದಾರೆ. ತಂದೆ ದಿವಂಗತ ಚಿಕ್ಕಮಾದು ಪ್ರಭಾವಳಿಯಲ್ಲಿ ಇಲ್ಲಿಯವರೆಗೂ ಕೆಲಸ ಮಾಡಿದ್ದ ಅನಿಲ್ ಈ ಬಾರಿ ಚುನಾವಣೆಯಲ್ಲಿ ಸ್ವಂತ ವರ್ಚಸ್ಸಿನಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಯುವ ನಾಯಕನಾಗಿರುವ ಕಾರಣ ಜನಮನ್ನಣೆ ಸಿಗುವ ಭರವಸೆ ಅವರಿಗಿದೆ. ಸಮಸ್ಯೆ ಬಂದಾಕ್ಷಣ ಸ್ಪಂದಿಸುವ ಗುಣ ಹೊಂದಿರುವುದು ಅನಿಲ್ ಪ್ಲಸ್ ಪಾಯಿಂಟ್. ಕ್ಷೇತ್ರದ ಅತಿ ಕಿರಿಯ ಶಾಸಕನೆನ್ನುವ ಹೆಗ್ಗಳಿಕೆಯೂ ಅನಿಲ್ ಹೆಸರಿಗಿದೆ.
ಇನ್ನು ಜೆಡಿಎಸ್‌ನ ಜಯಪ್ರಕಾಶ್ ಅದೃಷ್ಟ ಪರೀಕ್ಷೆಯ ಮೊದಲ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇವರು ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ. ಅಪ್ಪನ ಆಶೀರ್ವಾದ ಹಾಗೂ ಹೆಸರಿನ ಬಲದಿಂದ ಈ ಬಾರಿ ಶಾಸಕನಾಗುವ ಪ್ರಯತ್ನಕ್ಕೆ ಜಯಪ್ರಕಾಶ್ ಇಳಿದಿದ್ದಾರೆ. ಅನಿಲ್ ಹಾಗೂ ಜಯಪ್ರಕಾಶ್ ನಡುವಿನ ಸ್ಪರ್ಧೆ ಕ್ಷೇತ್ರದ ಮಾಜಿ ಶಾಸಕರ ಪುತ್ರರ ನಡುವಿನ ಹಣಾಹಣಿಯಾಗಿ ಬದಲಾಗಿದೆ.
ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ನಾಯಕ ಸಮುದಾಯವೇ ಇಲ್ಲಿನ ಅತಿದೊಡ್ಡ ಮತದಾರ ವರ್ಗ. ಇವರನ್ನು ಹೊರತುಪಡಿಸಿದಂತೆ ದಲಿತರು ಹಾಗೂ ಇತರೆ ವರ್ಗ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ.
ಪಿರಿಯಾಪಟ್ಟಣ
ಮತ್ತೊಂದು ಅಧಿಕಾರವಧಿಯ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ನ ಕೆ.ಮಹದೇವ್, ಆಮ್ ಆದ್ಮಿ ಪಕ್ಷದ ರಾಜಶೇಖರ್ ದೊಡ್ಡಣ್ಣ, ಕಾಂಗ್ರೆಸ್‌ನ ಕೆ.ವೆಂಕಟೇಶ್ ಮತ್ತು ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಈ ಬಾರಿ ಕ್ಷೇತ್ರದ ಕಣದಲ್ಲಿರುವ ಹುರಿಯಾಳುಗಳು.
ಮೂರೂ ಪಕ್ಷಗಳನ್ನು ಸುತ್ತಿ ಬಂದಿರುವ ಬಿಜೆಪಿಯ ವಿಜಯಶಂಕರ್ ಈ ಬಾರಿ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಇತ್ತ ಕ್ಷೇತ್ರವನ್ನು ಜೆಡಿಎಸ್ ವಶಕ್ಕೆ ತೆಗೆದುಕೊಂಡಿರುವ ಮಹದೇವ್ ಮರಳಿ ಗೆಲ್ಲಲು ಹೋರಾಟ ನಡೆಸಿದರೆ, ಇವರ ದಾಯಾದಿ ಕಾಂಗ್ರೆಸ್‌ನ ವೆಂಕಟೇಶ್, ತಾವು ಗೆಲ್ಲುವ ಮೂಲಕ ಕೈ ಪಕ್ಷದ ಖಾತೆಯನ್ನು ವಿಸ್ತರಿಸುವ ಇರಾದೆ ಹೊಂದಿದ್ದಾರೆ.
1,83642 ಮತದಾರರನ್ನು ಒಳಗೊಂಡಿರುವ ಕ್ಷೇತ್ರವನ್ನು ಜಾತಿ ಲೆಕ್ಕಚಾರದ ಶೇಕಡಾವಾರುವಿನಲ್ಲಿ ನೋಡುವುದಾದರೆ ಇಲ್ಲಿ 32% ಒಕ್ಕಲಿಗ, 25% ಎಸ್ಸಿ-ಎಸ್ಟಿ, 20% ಕುರುಬ, 12% ಉಪ್ಪಾರ ಮತ್ತು 6% ಲಿಂಗಾಯತ ಮತದಾರರನ್ನು ಹೊಂದಿದೆ. ಇದರಲ್ಲಿ ಗ್ರಾಮೀಣ ಮತದಾರರ ಪ್ರಮಾಣ ಸರಿಸುಮಾರು 93.14% ರಷ್ಟಿದ್ದರೆ, ಸುಮಾರು 6.86% ನಗರ ಮತದಾರರಿದ್ದಾರೆ.
ಕೃಷ್ಣರಾಜ
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಈ ಬಾರಿ ಚುನಾವಣೆ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿಯ ರಾಮದಾಸ್ ಮತ್ತು ಕಾಂಗ್ರೆಸ್‌ನ ಸೋಮಶೇಖರ್ ಹೊರತಾಗಿ ನಡೆಯಲಿದೆ. ಮಾಜಿ ಸಚಿವ ರಾಮದಾಸ್ ಬದಲಿಗೆ ಹೊಸ ಮುಖ ಶ್ರೀವತ್ಸ ಅವರಿಗೆ ಬಿಜೆಪಿ ಇಲ್ಲಿನ ಟಿಕೆಟ್ ನೀಡಿದೆ. ಆಡಳಿತ ವಿರೋಧಿ ಅಲೆ ಕಾರಣ ರಾಮದಾಸ್ ಟಿಕೆಟ್ ವಂಚಿತರಾಗಿದ್ದು ಶ್ರೀವತ್ಸ ಅವರ ಅದೃಷ್ಟದ ಬಾಗಿಲು ತೆರೆಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜೆಡಿಎಸ್‌ನಿಂದ ಮಲ್ಲೇಶ್ ಕಣಕ್ಕಿಳಿದಿದ್ದಾರೆ. ಸೋಮಶೇಖರ್ ಅವರಿಗೆ ಇದು ಮತ್ತೊಂದು ಶಾಸಕತ್ವದ ಪರೀಕ್ಷೆಯಾದರೆ, ಜೆಡಿಎಸ್‌ನ ಮಲ್ಲೇಶ ಅವರಿಗೆ ಗೆಲುವಿನ ಮತ್ತೊಂದು ಪ್ರಯತ್ನ, ಬಿಜೆಪಿ ಶ್ರೀವತ್ಸಗೆ ಮೊದಲ ಗೆಲುವಿನ ತವಕ.
ಪ್ರತಿಬಾರಿಯೂ ಭಿನ್ನ ಪಕ್ಷಗಳಿಗೆ ಅಧಿಕಾರ ನೀಡುವ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಕೃಷ್ಣರಾಜ ಕ್ಷೇತ್ರದಲ್ಲಿ ಶೇ.30 ಬ್ರಾಹ್ಮಣ, ಶೇ.12 ಲಿಂಗಾಯತ, ಶೇ.8 ಕುರುಬ ಮತದಾರರಿದ್ದಾರೆ. ಉಳಿದ ವರ್ಗದ ಮತ ಪ್ರಮಾಣ ಅತ್ಯಲ್ಪವಾಗಿದೆ.
ಒಟ್ಟಾರೆಯಾಗಿ, ಒಟ್ಟು26.5 ಲಕ್ಷ ಮತದಾರರನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿನ ಈ ಬಾರಿಯ ಚುನಾವಣೆ ಹೊಸ ಲೆಕ್ಕಾಚಾರಗಳನ್ನು ಹುಟ್ಟುಹಾಕಲಿದೆ ಎನ್ನುವ ನಿರೀಕ್ಷೆ ಇದೆ. ಇದನ್ನು ನಿಜಗೊಳಿಸುವ ಅಥವಾ ಹುಸಿಮಾಡುವ ನಿರ್ಧಾರವನ್ನು ನೂತನವಾಗಿ ನೋಂದಾವಣೆಗೊಂಡಿರುವ 1.66 ಲಕ್ಷ ನವಮತದಾರರು ಮಾಡಲಿದ್ದಾರೆ.