ನೈಸರ್ಗಿಕವಾಗಿ ಅಪಾರ ಸಂಪತ್ತನ್ನು ಹೊಂದಿದ್ದ ದ್ವೀಪರಾಷ್ಟ್ರ ಶ್ರೀಲಂಕಾ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹಣದಾಹದಿಂದ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ದೇಶಕ್ಕೆ ಭರವಸೆ ಮೂಡಿಸುವ ನೂತನ ರಾಷ್ಟ್ರಧ್ಯಕ್ಷರು ಚುನಾಯಿತರಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷದ 55 ವರ್ಷದ ಎಡಪಂಥೀಯ ನಾಯಕ ಅನುರಾ ಕುಮಾರ ದಿಸ್ಸನಾಯಕೆ ಶ್ರೀಲಂಕಾದ 20ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2022ರಲ್ಲಿ ಅಲ್ಲಿನ ಜನರು ಭ್ರಷ್ಟ ಸರ್ಕಾರದ ವಿರುದ್ಧ ದಂಗೆಯೆದ್ದಿದ್ದರು. ಜನತಾ ಹೋರಾಟದ ನಂತರ ದೇಶವು ಸ್ವಲ್ಪಮಟ್ಟಿಗೆ ಶಾಂತವಾಗಿತ್ತು. ನಾಗರಿಕ ದಂಗೆಯ ನಂತರದಲ್ಲಿ ನಡೆದ ಮೊದಲ ಚುನಾವಣೆಯು ಇದಾಗಿದ್ದು, ಅನುರ ಕುಮಾರ ದಿಸ್ಸಾನಾಯಕೆ ಅವರು 56,34,915 ಮತಗಳೊಂದಿಗೆ (ಶೇ 42.3) ಗೆಲುವು ಸಾಧಿಸಿದ್ದಾರೆ. ಕಳೆದ ಹಲವು ಚುನಾವಣೆಗಳಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡಿದ್ದ ಅನುರ ಕುಮಾರ ದಿಸ್ಸಾನಾಯಕೆ ಅವರ ಮಾರ್ಕ್ಸ್ವಾದಿ ಪಕ್ಷವು 2020ರಲ್ಲಿ ನಡೆದ ಹಿಂದಿನ ಸಂಸದೀಯ ಜನಮತಭಿಪ್ರಾಯದಲ್ಲಿ ಶೇ. 4ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತ್ತು. ಆದರೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದೆ.
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತಗಳ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಮತದಾರರೊಬ್ಬರು ಮೂವರು ಅಭ್ಯರ್ಥಿಗಳಿಗೆ ಶ್ರೇಯಾಂಕ ನೀಡುವ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಮತದಾರರು ಮೂರು ಪ್ರಾಶಸ್ತ್ಯದ ಮತಗಳನ್ನು ಚಲಾಯಿಸಬಹುದು(ನಮ್ಮಲ್ಲಿನ ವಿಧಾನ ಪರಿಷತ್ ಚುನಾವಣೆಗಳ ರೀತಿ). ಯಾವುದೇ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದರೆ, ಸಿಂಧು ಎಂದು ಅಂಗೀಕರಿಸಲಾದ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಶೇ. 50ಕ್ಕಿಂತ (ಕನಿಷ್ಠ 51%) ಹೆಚ್ಚು ಮತಗಳನ್ನು ಪಡೆದಿರಬೇಕು. ಒಂದು ವೇಳೆ, ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿಗೆ ಬಹುಮತ ಬಾರದಿದ್ದರೆ, ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ. ಮೊದಲ ಸುತ್ತಿನಲ್ಲಿ ಹೆಚ್ಚು ಪ್ರಾಶಸ್ತ್ಯದ ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆ. ಇದರಲ್ಲಿ ಹೆಚ್ಚು ಮತ ಪಡೆದವರನ್ನು ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ. 1982 ರಿಂದ ಶ್ರೀಲಂಕಾದಲ್ಲಿ ನಡೆದ ಎಲ್ಲ ಎಂಟು ಅಧ್ಯಕ್ಷೀಯ ಚುನಾವಣೆಗಳಲ್ಲಿ ವಿಜೇತರು ಮೊದಲ ಪ್ರಾಶಸ್ತ್ಯದ ಮತದ ಸುತ್ತಿನಲ್ಲೇ ಸರಳ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಮತ್ತು ಮೂರನೇ ಪ್ರಾಶಸ್ತ್ಯದ ಮತಗಳನ್ನು ಎಣಿಸುವ ಹಂತವೇ ಬಂದಿರಲಿಲ್ಲ.
ಈ ಬಾರಿ ದ್ವೀಪರಾಷ್ಟ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಯುನೈಟೆಡ್ ನ್ಯಾಷನಲ್ ಪಾರ್ಟಿಯಿಂದ (ಯುಎನ್‌ಪಿ) ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದ ವಿಕ್ರಮಸಿಂಘೆ ಅವರನ್ನು ರಾಜಪಕ್ಸ ಕುಟುಂಬ ನೇತೃತ್ವದ ಶ್ರೀಲಂಕಾ ಪೊಡುಜನ ಪೆರಮುನ (ಎಸ್‌ಎಲ್‌ಪಿಪಿ ಅಥವಾ ಪೀಪಲ್ಸ್ ಫ್ರಂಟ್) ಪಕ್ಷವು ಬೆಂಬಲಿಸಿತ್ತು. ಆದರೆ ವಿಕ್ರಮಸಿಂಘಗೆ ಮತದಾರರು ಈ ಬಾರಿ ಮೂರನೇ ಸ್ಥಾನ ನೀಡಿದ್ದಾರೆ. ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರೂ ಸ್ಪರ್ಧಿಸಿದ್ದರು. ಸಜಿತ್ ಅವರು ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಪುತ್ರ. ಈ ಚುನಾವಣೆಯಲ್ಲಿಯೂ ಇವರು ಎರಡನೇ ಸ್ಥಾನ(ಶೇ. 32.76) ಗಳಿಸಿದ್ದಾರೆ. ಆದರೆ ಇವರೆಲ್ಲರನ್ನು ನಿರೀಕ್ಷೆಗೂ ಮೀರಿ ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷದ ಎಡಪಂಥೀಯ ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಮ್ಮು-ಕಾಶ್ಮೀರದಲ್ಲಿ ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳು ಒಂದಾಗುವವೇ?
ರಾಜಕೀಯ ಹಿನ್ನೆಲೆಯಿಲ್ಲದ ಅನುರಾ ಕುಮಾರ
ಎಡಪಕ್ಷ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅವರ ನೇತೃತ್ವದ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಪಕ್ಷ ಶ್ರೀಲಂಕಾ ರಾಜಕೀಯದಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಅನುರಾ ಕುಮಾರ ನವೆಂಬರ್ 24, 1968 ರಂದು ಗಲೆವೆಲಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಸರ್ಕಾರಿ ಸರ್ವೆ ಇಲಾಖೆಯಲ್ಲಿ ಕಚೇರಿ ಸಹಾಯಕರಾಗಿದ್ದರು. ಬಿಡುವಾಗಿದ್ದಾಗ ತಮ್ಮ ನೆಲದಲ್ಲಿ ಕೃಷಿ ಮಾಡುತ್ತಿದ್ದರು. ತಾಯಿ ಗೃಹಿಣಿಯಾಗಿದ್ದರು.
ದಿಸ್ಸನಾಯಕೆ ಅವರು ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಕೊಲಂಬೊದ ಕೆಲನಿಯಾ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದರು. ಕಾಲೇಜು ಅವಧಿಯಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತರಾದ ಅವರು ಪೂರ್ಣಾವಧಿ ರಾಜಕೀಯದತ್ತ ತಮ್ಮ ಗಮನ ಹರಿಸಿದರು. 1997ರಲ್ಲಿ, ಜೆವಿಪಿ ಪಕ್ಷದ ಯುವ ಘಟಕವಾದ ಸಮಾಜವಾದಿ ಯುವ ಸಂಘಟನೆಯ ರಾಷ್ಟ್ರೀಯ ಸಂಘಟಕರಾಗಿ ನೇಮಕಗೊಂಡು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು. 1998ರಲ್ಲಿ ಅನುರಾ ಅವರು ಜೆವಿಪಿ ಕೇಂದ್ರ ಸಮಿತಿಗೆ, ನಂತರ ಉನ್ನತ ಮಟ್ಟದ ಸಮಿತಿಗೆ ಆಯ್ಕೆಯಾದರು. 1998ರ ಕೇಂದ್ರ ಪ್ರಾಂತೀಯ ಕೌನ್ಸಿಲ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಪರಾಭವಗೊಂಡರು. ನಂತರ 2000ರಲ್ಲಿ ಜನಮನ್ನಣೆ ಗಳಿಸಿ ಸಂಸತ್ತಿಗೆ ಆಯ್ಕೆಯಾದರು. 2004ರಲ್ಲಿ ಶ್ರೀಲಂಕಾ ಫ್ರೀಡಂ ಪಾರ್ಟಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಅನುರಾ ಅವರ ಕೃಷಿ ಸುಧಾರಣೆಗಳು ಮತ್ತು ಗ್ರಾಮ ಸಂವಾದಗಳು ಅವರನ್ನು ಅತ್ಯುತ್ತಮ ಆಡಳಿತಗಾರ ಎಂದು ಖ್ಯಾತಿ ತಂದುಕೊಟ್ಟಿತು. ನಂತರದ ಎರಡು ದಶಕದಲ್ಲಿ ಹಲವು ಹುದ್ದೆಗಳು, ಏಳುಬೀಳುಗಳೊಂದಿಗೆ ಭ್ರಷ್ಟ ಸರ್ಕಾರಗಳ ದುರಾಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದರು.
2019ರಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ ಒಕ್ಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ದಿಸ್ಸನಾಯಕೆ ಆಯ್ಕೆಯಾದರೂ ಕೇವಲ 3.16 ಪ್ರತಿಶತದಷ್ಟು ಮತಗಳನ್ನು ಮಾತ್ರ ಪಡೆದಿದ್ದರು. ನಂತರದ 5 ವರ್ಷಗಳಲ್ಲಿ ಗೊಟಬಯ ರಾಜಪಕ್ಸ ಭ್ರಷ್ಟ ಸರ್ಕಾರದ ವ್ಯಾಪಕ ಅಸಮಾಧಾನದ ವಿರುದ್ಧ ದೇಶಾದ್ಯಂತ ಸಂಘಟಿಸಿದರ ಪರಿಣಾಮ ಶ್ರೀಲಂಕಾದ 76 ವರ್ಷಗಳ ಪ್ರಜಾಸತ್ತಾತ್ಮಕ ಆಡಳಿತ ಮತ್ತು 46 ವರ್ಷಗಳ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ, ಬಂಡವಾಳಶಾಹಿ ಪಕ್ಷಗಳನ್ನು ಸೋಲಿಸಿದ್ದಾರೆ. ಅನುರಾ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ನಾಯಕರಾಗಿದ್ದರೂ, ಈ ಚುನಾವಣೆಯಲ್ಲಿ 27 ಸಣ್ಣಪುಟ್ಟ ಸಂಘಟನೆಗಳನ್ನು ಒಟ್ಟುಗೂಡಿಸಿ ‘ಜನತಾ ವಿಮುಕ್ತಿ ಪೆರಮುನಾ’ (ಪೀಪಲ್ಸ್ ಲಿಬರೇಷನ್ ಫ್ರಂಟ್) ಎಂಬ ಒಕ್ಕೂಟವನ್ನು ರಚಿಸಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ‘ಬದಲಾವಣೆ ಒಂದೇ ಪರಿಹಾರ’ ಎಂಬ ಘೋಷಣೆಯೊಂದಿಗೆ ‘ಸಮೃದ್ಧ ನಾಡು, ಸುಂದರ ಬದುಕು’ ಎಂಬ ಭರವಸೆಯೊಂದಿಗೆ ಬಿರುಸಿನ ಪ್ರಚಾರ ನಡೆಸಿ ಅಧಿಕಾರದ ಗದ್ದುಗೆ ಏರಿದ್ದಾರೆ.
ದಿಸ್ಸನಾಯಕೆಗೆ ಹಲವು ಸವಾಲುಗಳು
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾ ಕುಮಾರ ದಿಸ್ಸನಾಯಕೆ ಅವರ ಮುಂದೆ ದೇಶಾದ್ಯಂತ ಹಲವು ಸವಾಲುಗಳಿವೆ. ಶ್ರೀಲಂಕಾ 1948ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಎಂದೂ ಕಾಣದಂತಹ ಜನರ ಆಕ್ರೋಶದ ಕಿಚ್ಚನ್ನು 2022ರಲ್ಲಿ ದ್ವೀಪರಾಷ್ಟ್ರ ಅನುಭವಿಸಿತ್ತು. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ನಲುಗಿಹೋಗಿದ್ದ ದೇಶದ ಜನತೆ ಅಂದಿನ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಅವರನ್ನು ಪದಚ್ಯುತಿಗೊಳಿಸಿ ರಾಷ್ಟ್ರದ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕು ಎಂದು ಬಯಸಿದ್ದರು. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಇಂಧನ ಆಮದು ಮಾಡಿಕೊಳ್ಳಲೂ ಸರ್ಕಾರದ ಬಳಿ ಹಣ ಇರಲಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧಿಗಳಿಗೆ ಅಭಾವ ಸೃಷ್ಟಿಯಾಗಿತ್ತು. ಹಳ್ಳಿಗಳಿರಲಿ ಪ್ರಮುಖ ಪಟ್ಟಣಗಳಲ್ಲಿಯೇ 20 ಗಂಟೆಗೂ ಹೆಚ್ಚು ಕಾಲ ವಿದ್ಯುತ್‌ಅನ್ನು ಸ್ಥಗಿತಗೊಳಿಸಲಾಗಿತ್ತು. ಹಣದುಬ್ಬರ ಶೇ. 70ಕ್ಕೆ ಏರಿಕೆಯಾಗಿತ್ತು. ಶ್ರೀಲಂಕಾದ ಪರಿಸ್ಥಿತಿ ಈಗಲೂ ಭೀಕರವಾಗಿದೆ. ದೇಶದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ 70 ಲಕ್ಷ ದಾಟಿದೆ. ಬಡತನದಿಂದಾಗಿ ಅನೇಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಆರ್ಥಿಕ ಮುಗ್ಗಟ್ಟಿನಿಂದ ಮುಂದೂಡಲಾಗಿದೆ.
ಅನುರಾ ಕುಮಾರ ದಿಸ್ಸನಾಯಕೆ ಅವರು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಗಳಿಂದ ಸಾಲದ ಮರುಪಾವತಿ, ದೇಶದ ಅರ್ಥ ವ್ಯವಸ್ಥೆಯ ಸುಧಾರಣೆ, ಜನರ ಜೀವನ ಮಟ್ಟ ಸುಧಾರಣೆ, ಆದಾಯ ಮಟ್ಟ ಹೆಚ್ಚಳ, ನಿರುದ್ಯೋಗ, ಆಹಾರದ ಕೊರತೆ, ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳತ್ತ ಪ್ರಮುಖವಾಗಿ ಗಮನಹರಿಸಬೇಕಾಗಿದೆ.
ತಮಿಳರ ಸಮಸ್ಯೆ ಕೊನೆಗೊಳ್ಳುವುದೆ?
ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ. 75ರಷ್ಟು ಸಿಂಹಳೀಯರಿದ್ದಾರೆ. ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಜನಾಂಗೀಯ ಅಲ್ಪಸಂಖ್ಯಾತರಾದ ತಮಿಳರು, ಮಲಯಾ ತಮಿಳರು ಮತ್ತು ಮುಸ್ಲಿಮರಿದ್ದಾರೆ. ಎಂಬತ್ತು-ತೊಂಬತ್ತರ ದಶಕದಲ್ಲಿ ಜಾಫ್ನಾ, ಬಟ್ಟಿಕಲೋವ, ವನ್ನಿ, ತ್ರಿಂಕೋಮಾಲಿ ಮುಂತಾದ ಉತ್ತರ, ಪೂರ್ವ ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿರುವ ತಮಿಳರ ಮೇಲೆ ಸಿಂಹಳೀಯರು ಮತ್ತು ಸೈನ್ಯವು ಜನಾಂಗೀಯ ದಾಳಿ ನಡೆಸಿ ತಮಿಳರ ಹತ್ಯೆ ಮಾಡಿದ್ದರು. ಆಗ ಅನುರಾ ಕುಮಾರ ನೇತೃತ್ವ ವಹಿಸುವ ಜೆವಿಪಿ(ಜನತಾ ವಿಮುಕ್ತಿ ಪೆರಮುನ) ಪಕ್ಷ ಈ ಹತ್ಯಾಕಾಂಡವನ್ನು, ಸಿಂಹಳೀಯ ರಾಷ್ಟ್ರೀಯತೆಯನ್ನು, ಜಾಫ್ನಾ ಮೇಲಿನ ಯುದ್ಧವನ್ನು ಬೆಂಬಲಿಸಿತ್ತು. ಈ ಬಾರಿಯೂ ದಿಸ್ಸನಾಯಕೆ ಅವರಿಗೆ ತಮಿಳರ ಶೇ. 14.95ರಷ್ಟು ಮತಗಳು ಮಾತ್ರ ದೊರಕಿದೆ. ಜೆವಿಪಿ ತನ್ನ ಹಿಂದಿನ ತಮಿಳು ವಿರೋಧಿ, ಸಿಂಹಳೀಯ ರಾಷ್ಟ್ರೀಯತೆಯನ್ನು ಬಿಟ್ಟು ತಮಿಳರ ಪರವಾಗಿ ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆಯೇ? ಉತ್ತರ, ಪೂರ್ವ ಭಾಗದ ತಮಿಳು ಜನಸಂಖ್ಯೆಯ ಜೊತೆಗೆ ಅಧಿಕಾರ ಹಂಚಿಕೊಂಡು ತಮಿಳರು ನಮ್ಮವರೆಂದು ಸಮಾನಭಾವ ಕಾಣುತ್ತಾರೆಯೇ ಎಂಬುದು ಈಗ ಎಲ್ಲರಲ್ಲೂ ನೆಟ್ಟಿರುವ ಪ್ರಶ್ನೆಯಾಗಿದೆ
ಭಾರತದ ಸಂಬಂಧ ಮುಂದೇನು?
ಎಡಪಂಥೀಯ ನಾಯಕ ದಿಸ್ಸನಾಯಕೆ ರಾಷ್ಟ್ರಧ್ಯಕ್ಷರಾದ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ಹೇಗಿರಲಿದೆ ಎಂಬದು ಕೂಡ ಕುತೂಹಲ ಮೂಡಿದೆ. ಹಲವು ವರ್ಷಗಳಿಂದ ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಿಯೇ ಇದೆ. ಆದರೆ ಕೆಲವು ವರ್ಷಗಳಿಂದ ಲಂಕಾದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿದೆ. ಶ್ರೀಲಂಕಾ ಕೂಡ ಚೀನಾ ಬಗ್ಗೆ ಒಲವು ತೋರುತ್ತಿದೆ. ಇದಕ್ಕೆ ಅತೀ ಹೆಚ್ಚು ಸಾಲ ನೀಡಿಕೆಯ ಅಂಶವು ಪ್ರಮುಖವಾಗಿರಬಹುದು. ಈಗ ಎಡಪಂಥೀಯ ರಾಷ್ಟ್ರ ಆಯ್ಕೆಯಾಗಿರುವ ಕಾರಣ ಚೀನಾದ ಪ್ರಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಲು ಶ್ರೀಲಂಕಾದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದುವ ಅಗತ್ಯ ಖಂಡಿತಾವಾಗಿಯೂ ಇದೆ.