ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದು, ಮಾದಕ ವಸ್ತು ವಿಶ್ವದ ದೊಡ್ಡ ವ್ಯಾಪಾರವಾಗಿದೆ ಎಂದು ಕೋಲಾರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾ.ಸುನಿಲ್ ಹೊಸಮನಿ ಹೇಳಿದರು.
ಕೋಲಾರ ನಗರದ ಆಲ್ ಅಮೀನ್ ವಿದ್ಯಾ ಸಂಸ್ಥೆಯಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಂವಾದ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವ್ಯಸನ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಕುರಿತ ಅರಿವು ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಟ್ಟ ಚಟಗಳು ಸ್ನೇಹಿತರಿಂದ, ಜೀವನ ಸಮಸ್ಯೆಗಳು ಸೇರಿದಂತೆ ಇತರೆ ಕಾರಣಗಳಿಗೆ ದುಶ್ವಟಗಳ ದಾಸರಾಗುತ್ತಿದ್ದಾರೆ. ಇದರಿಂದ ಯುವಜನತೆ ಹೊರಬರಬೇಕಿದೆ. ಮಾದಕ ವಸ್ತುವಿನ ನಿಯಂತ್ರಣ ಮಾಡುವವರು ಯಾರು?. ಇದರ ಮೂಲ ಯಾವುದು?. ಇದನ್ನು ಮಾರುವವರು ಯಾರು? ಮುಂತಾದ ವಿಷಯದ ಆಳಕ್ಕೆ ಇಳಿದರೆ ಸಮಸ್ಯೆಯ ಆಳವೂ ಅರಿವಿಗೆ ಬರುತ್ತದೆ. ಇದನ್ನು ನಿಲ್ಲಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಎಲ್ಲ ದೇಶಗಳನ್ನು ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೂವರಲ್ಲಿ ಒಬ್ಬ ಧೂಮಪಾನ ವ್ಯಸನಿ :
ಪ್ರಪಂಚದಲ್ಲಿ ಶೇ.19ರಷ್ಟು ಗುಟ್ಕಾ ವ್ಯಸನದವರಿದ್ದಾರೆ. ಶೇ.26ರಷ್ಟು ಸಿಗರೇಟ್, ಶೇ.25ರಷ್ಟು ಮದ್ಯ ಸೇವನೆ ವ್ಯಸನದವರಿದ್ದಾರೆ. ಪ್ರತಿ ಮೂವರಲ್ಲಿ ಒಬ್ಬ ಧೂಮಪಾನ ಮಾಡುತ್ತಾನೆ. ಇದನ್ನು ಸೇವಿಸುವವನಿಗಿಂತ ಇತರೆಯವರಿಗೆ ಹೆಚ್ಚು ವೈದ್ಯಕೀಯ ಸಮಸ್ಯೆ ಕಾಡುತ್ತಿದೆ ಎಂದರು.
ಕೋಲಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಅಧಿಕಾರಿ ಮಹಮ್ಮದ್ ಮಾತನಾಡಿ, ದುಶ್ಚಟದಿಂದ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳಾಗುತ್ತಿದ್ದರೂ, ದುಶ್ಚಟಗಳ ದಾಸರಾಗುತ್ತಿದ್ದಾರೆ. ಆದರೆ, ಯೋಗ, ಪ್ರಾಣಯಾಮ ಮತ್ತು ಧ್ಯಾನದಿಂದ ಮಾದಕ ವಸ್ತು ಸೇವನೆಯಿಂದ ಹೊರಬರಬಹುದು. ಮನಸ್ಸಿಗಿಂತ ದೊಡ್ಡದಿಲ್ಲ, ದೃಢ ಮನಸ್ಸಿನಿಂದ ವ್ಯಸನಮುಕ್ತರಾಗುವತ್ತ ಯುವಜನತೆ ಮುಂದಾಗಬೇಕು ಎಂದರು.
ಎರಡನೇ ಸ್ಥಾನದಲ್ಲಿ ಭಾರತ :
ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಇಡೀ ಪ್ರಪಂಚದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸಾಯುವವರ ಸಂಖ್ಯೆ 70 ಲಕ್ಷಕ್ಕಿಂತ ಅಧಿಕ. ಭಾರತದಲ್ಲಿ 10 ಲಕ್ಷ ಜನರು ಬೀಡಿ, ಸಿಗರೇಟ್, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ಪ್ರಮಾಣ 8 ಸಾವಿರ. ಈಶಾನ್ಯ ರಾಜ್ಯಗಳಲ್ಲಿ ಶೇ.70 ರಷ್ಟು ಮಂದಿ ಧೂಮಪಾನಕ್ಕೆ ದಾಸರಾಗಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಶೇ.15ರಷ್ಟು ಹೆಚ್ಚು. ತಂಬಾಕು ಸೇವೆನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವ ಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ(ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ) ಪ್ರಕಾರ ದೇಶದಲ್ಲಿ ಶೇ.60ರಷ್ಟು ಮಂದಿಯ ಕ್ಯಾನ್ಸರ್ ಸುಲಭವಾಗಿ ತಡೆಯಬಹುದು. ಚಟಕ್ಕೆ ಜೋತು ಬಿದ್ದು ಬಹುಬೇಗ ಸಾವು ತಂದುಕೊಳ್ಳುವವರು ತಮ್ಮ ಕುಟುಂಬಗಳನ್ನು ಅನಾಥರನ್ನಾಗಿಸಿರುತ್ತಾರೆ. ಚಿಕಿತ್ಸೆಗೆ ಸಾವಿರಾರು ರೂ. ವ್ಯಯ ಮಾಡುವುದರ ಮೂಲಕ ತಮ್ಮ ಕುಟುಂಬಗಳನ್ನು ಚೇತರಿಸಿಕೊಳ್ಳಲಾರದ ಆರ್ಥಿಕ ಸಂಕಷ್ಟಕ್ಕೆ ದೂಡುತ್ತಾರೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಸರಕಾರದ ಬೊಕ್ಕಸಕ್ಕೂ ದೊಡ್ಡ ನಷ್ಟ. ಕೇಂದ್ರ ಸರಕಾರ ತಂಬಾಕು ಸೇವನೆಯಿಂದ ಬರುವ ವಿವಿಧ ರೋಗಳ ಚಿಕಿತ್ಸೆಗೆ ವಾರ್ಷಿಕವಾಗಿ 1,04,500 ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯ ಸರಕಾರ ಇದಕ್ಕಾಗಿ 903 ಕೋಟಿ ವಿನಿಯೋಗಿಸುತ್ತಿದೆ ಎಂದು ಮಾಹಿತಿ ನೀಡಿದರು.
ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವೆಂಕಟಾಚಲಪತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಯುವಕ ಯುವತಿಯರಲ್ಲಿ ನೆಲ ಜಲ ಸಾಂಸ್ಕೃತಿಕ ವೈಚಾರಿಕತೆಯ ಬಗ್ಗೆ ಅರಿವಿಲ್ಲದಾಗಿದೆ. ಈ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ. ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯಾಬ್ಯಾಸಕ್ಕೆ ಮುಂದಾಗಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಆಲ್ ಅಮೀನ್ ಸಂಸ್ಥೆಯ ಪ್ರಾಂಶುಪಾಲರಾದ ಸಮೀನ್ ಸಲ್ಮಾ ಮೋಸಿನ ಬೇಗಮ್, ಗಮನ ಸಮೂಹದ ಲಕ್ಷ್ಮಿ, ರಾಜಕುಮಾರ್ ಹಾಗೂ ಮಂಜುನಾಥ್ ಭಾಗವಹಿಸಿದ್ದರು.