ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ತೀರ್ಪು ನೀಡಿದೆ. ರಾಜ್ಯಪಾಲರ ನಡೆ ಸರಿಯಿದೆ. ತರಾತುರಿಯಲ್ಲಿ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಸಿಎಂ ಕುಟುಂಬದವರು ಈ ಪ್ರಕರಣದಲ್ಲಿ ಫಲಾನುಭವಿಗಳು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ತಮ್ಮ ವಿರುದ್ಧ ಖಾಸಗಿ ದೂರು ಆಧರಿಸಿ ರಾಜ್ಯಪಾಲರು ತನಿಖೆಗೆ ನೀಡಿರುವ ಅನುಮತಿಯನ್ನು ಸಿಎಂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದೇಶಕ್ಕೆ ತಡೆ ನೀಡಲು ಸಿ ಎಂ ಪರ ವಕೀಲರು ಮನವಿ ಮಾಡಿದ್ದರೂ ಪೀಠ ಮಾನ್ಯ ಮಾಡಿಲ್ಲ. ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಸಿ ಎಂ ಪರ ವಕೀಲರ ತಂಡ ಇಂದೇ ದೆಹಲಿಗೆ ತೆರಳಲಿದೆ ಎಂದು ತಿಳಿದುಬಂದಿದೆ.
ಜುಲೈ 26ರಂದು ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು. 27ರಂದೇ ಮಧ್ಯಾಹ್ನ ರಾಜ್ಯಪಾಲರು ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದರು.ಅಂದು ಸಂಜೆಗೆ ಅದಕ್ಕೆ ಉತ್ತರ ನೀಡಲಾಗಿತ್ತು. ಆಗಸ್ಟ್ 17 ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಆಗಸ್ಟ್ 19 ಮುಡಾ ಪ್ರಕರಣದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾ ನಾಗಪ್ರಸನ್ನ ಅವರ ಏಕಸದಸ್ಯ ಕೈಗೆತ್ತಿಕೊಂಡಿತ್ತು. ಆಗಸ್ಟ್ 29ರಿಂದ ಸೆಪ್ಟಂಬರ್ 12ರವರೆಗೆ ಸುದೀರ್ಘವಾಗಿ ಪರ -ವಿರೋಧ ವಾದ ಆಲಿಸಿದ್ದ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಸಿದ್ದರಾಮಯ್ಯ ಅವರ ಪರವಾಗಿ ಹೈಕೋರ್ಟ್ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಮುಡಾ ಪ್ರಕರಣದಲ್ಲಿ 6ನೇ ಪ್ರತಿವಾದಿ ಪಿ ಎಸ್ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣೀಂದರ್ ಸಿಂಗ್, ಟಿ ಜೆ ಅಬ್ರಾಹಂ ಪರವಾಗಿ ರಂಗನಾಥ್ ರೆಡ್ಡಿ ವಾದ ಮಂಡಿಸಿದರು. ಸೆಪ್ಟೆಂಬರ್ 12ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ ಪೀಠ ಆದೇಶ ಕಾಯ್ದಿರಿಸಿತ್ತು.
ಸಿದ್ದರಾಮಯ್ಯ ಪರ ಹೈಕೋರ್ಟ್‌ಗೆ ಖುದ್ದು ಹಾಜರಾಗಿ ವಾದ ಮಂಡಿಸಿದ್ದ ಅಭಿಷೇಕ್ ಮನು ಸಿಂಘ್ವಿ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದು ಅಥವಾ ಪತ್ರ ವ್ಯವಹಾರ ನಡೆಸಿರುವ ಯಾವುದೇ ಪುರಾವೆ ಇಲ್ಲ. ಅಷ್ಟೇ ಅಲ್ಲ ಬಿಜೆಪಿಯ ಮುಖಂಡ ಬಿಎಸ್ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮತ್ತು ಜೆಡಿಎಸ್‌ನ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದ ಅರ್ಜಿಗಳಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು. ಈ ಪ್ರಕರಣದಲ್ಲಿ ಖಾಸಗಿ ದೂರಿಗೆ ರಾಜ್ಯಪಾಲರು ಒಂದೇ ದಿನದಲ್ಲಿ ಶೋಕಾಸ್ ನೋಟಿಸಿ ನೀಡಿದ್ದರು. ಸಿಎಂ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದೂ ಸಿಂಘ್ವಿ ವಾದಿಸಿದ್ದರು. ಆದರೆ, ನ್ಯಾಯಪೀಠ ರಾಜ್ಯಪಾಲರು ತನಿಖೆಗೆ ಅನುಮತಿಸಿದ್ದ ಕ್ರಮ ಸರಿ ಇದೆಯಾ, ಇಲ್ಲವೇ ಎಂಬ ನಿಟ್ಟಿನಲ್ಲಿ ಮಾತ್ರ ತೀರ್ಪು ನೀಡಿದೆ. ಸಿಎಂ ಅರ್ಜಿ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿದ್ದಾಗಿತ್ತು.