- ಪ್ರಧಾನಿ ಮೋದಿ ರೋಡ್ ಶೋನಲ್ಲಿ ಬದಲಾವಣೆ
- ಒಂದೇ ದಿನ ಇಬ್ಬರು ನಾಯಕರ ರೋಡ್ ಶೋ
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಆರು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ, ಕುತೂಹಲಕಾರಿ ಬೆಳವಣಿಗೆಯೊಂದಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಾಕ್ಷಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದೇ ದಿನ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರಿಗರು ಭಾನುವಾರ ದೆಹಲಿಯ ಇಬ್ಬರು ನಾಯಕರ ರ್‍ಯಾಲಿಗೆ ಸಾಕ್ಷಿಯಾಗಲಿದ್ದಾರೆ.
ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಶನಿವಾರ ಸಂಜೆ ರೋಡ್ ಶೋ ಹಮ್ಮಿಕೊಂಡಿದ್ದರು. ರಾಹುಲ್ ಗಾಂಧಿ ಭಾನುವಾರ ರ್‍ಯಾಲಿ ಹಮ್ಮಿಕೊಂಡಿದ್ದರು. ಆದರೆ, ಮೋದಿಯವರು ತಮ್ಮ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದು, ಶನಿವಾರ ಮತ್ತು ಭಾನುವಾರ ಮುಂಜಾನೆ ಬೆಂಗಳೂರಿಗರತ್ತ ಕೈಬೀಸಲಿದ್ದಾರೆ.
ಮೋದಿಯವರ ಮೇ 6ರ ಪ್ರಚಾರಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದ್ದ ಕಾಂಗ್ರೆಸ್ ಪ್ರಚಾರದ ಅಖಾಡಕ್ಕೆ ರಾಹುಲ್ ಗಾಂಧಿ ಅವರನ್ನು ಇಳಿಸಿತ್ತು. ಮೋದಿ ಅವರ ಕಾರ್ಯಕ್ರಮದ ಬದಲಾವಣೆಯಿಂದ ಮೋದಿ ಅವರ ಪ್ರಚಾರದ ದಿನವೇ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.
ಈಗಾಗಲೇ ಮೋದಿ ಅವರ ರೋಡ್ ಶೋಗಳಿಂದ ಉಂಟಾಗುತ್ತಿರುವ ವಾಹನ ದಟ್ಟಣೆಗೆ ಬೆಂಗಳೂರಿನ ನಾಗರಿಕರು ಹೈರಾಣಾಗಿದ್ದಾರೆ. ಇದರ ನಡುವೆಯೇ ಮೋದಿ ಎರಡು ದಿನಗಳ ಕಾಲ ರೋಡ್ ಶೋ ನಡೆಸಲಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ರಾಜ್ಯ ವಿಧಾನಸಭಾ ಅಖಾಡ ರಂಗೇರುತ್ತಿರುವ ನಡುವೆ ದೆಹಲಿಯ ಇಬ್ಬರು ದಿಗ್ಗಜರು ಒಂದೇ ದಿನ ರೋಡ್ ಶೋ ನಡೆಸುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಶನಿವಾರವಷ್ಟೇ ಇದ್ದ ಮೋದಿ ಅವರ ರೋಡ್ ಶೋ ಎರಡನೇ ದಿನಕ್ಕೆ ವಿಸ್ತರಿಸಿದ್ದು, ರಾಹುಲ್ ಗಾಂಧಿ ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ಆಗುವ ಲಾಭಕ್ಕೆ ಕಡಿವಾಣ ಹಾಕಲು ಬಿಜೆಪಿ ಇಂತಹದೊಂದು ತಂತ್ರ ಹೂಡಿದೆ ಎನ್ನಲಾಗಿದೆ. ಬೆಂಗಳೂರಿನ ಗಮನ ಕೇಂದ್ರಿಕರಿಸಲು ಮೋದಿ ಎರಡು ದಿನ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯನವರ ವರುಣದಲ್ಲಿ ಕಂಡ ಮುಖಗಳು
ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯದಲ್ಲಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ರಾಹುಲ್ ಗಾಂಧಿ ಅವರು ಸಹ ರಾಜ್ಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲು ಶ್ರಮಿಸುತ್ತಿದ್ದಾರೆ.
ಮೇ 6ರಂದು ಸೋನಿಯಾ ಗಾಂಧಿ ರೋಡ್ ಶೋ
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಚುನಾವಣಾ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪರವಾಗಿ ಮತಭೇಟೆಗೆ ಮಂದಾಗಿದ್ದಾರೆ.
ಸೋನಿಯಾ ಗಾಂಧಿ ಮೇ 6ರಂದು ಹುಬ್ಬಳ್ಳಿಯಲ್ಲಿ ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಬಾರಿಗೆ ಸೋನಿಯಾ ಗಾಂಧಿ ಪ್ರಚಾರ ನಡೆಸುತ್ತಿದ್ದು, ಹುಬ್ಬಳ್ಳಿಯಲ್ಲಿ ಭಾರೀ ಜನ ಸೇರುವ ನಿರೀಕ್ಷೆಯಿದೆ.