ಸಿದ್ದರಾಮಯ್ಯನವರ ವರುಣದಲ್ಲಿ ಕಂಡ ಮುಖಗಳು

Date:

ಸಿದ್ದರಾಮಯ್ಯನವರ ಹಣೆಬರಹ ಬರೆಯುವ ವರುಣ ಕ್ಷೇತ್ರದ ಮತದಾರರು ಮಾತ್ರ, ಹಿಂದೆ ಹೇಗಿದ್ದರೋ ಇಂದು ಕೂಡ ಹಾಗೆಯೇ ಇದ್ದಾರೆ. ಅದೇ ನಿಲುವು, ಅದೇ ಪ್ರೀತಿ. ವರುಣ ಕ್ಷೇತ್ರದಲ್ಲಿ ನಮ್ಮ ಈದಿನ.ಕಾಮ್ ನ ತಂಡ ಕಂಡ ಮುಖಗಳು ಇಲ್ಲಿವೆ.

ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡು 2008ರಲ್ಲಿ ಹೊಸದಾಗಿ ಹುಟ್ಟಿದ ವರುಣ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷದ 30 ಸಾವಿರ ಚಿಲ್ಲರೆ ಮತದಾರರಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರಿರುವುದು ಇಲ್ಲಿಯ ವಿಶೇಷ. ಜಾತೀವಾರು ಲೆಕ್ಕದಲ್ಲಿ ಲಿಂಗಾಯತರು ಮತ್ತು ದಲಿತರು ಮೊದಲ ಸ್ಥಾನದಲ್ಲಿದ್ದಾರೆ. ನಂತರ ಕುರುಬ, ನಾಯಕರು, ಒಕ್ಕಲಿಗರು, ಉಪ್ಪಾರರು, ಮುಸ್ಲಿಂ ಸಮುದಾಯದ ಮತಗಳೂ ಇವೆ.

ಈ ಕ್ಷೇತ್ರದಿಂದ ಸಿದ್ದರಾಮಯ್ಯನವರು ಎರಡು ಬಾರಿ ಗೆದ್ದಿದ್ದಾರೆ. 2008ರಲ್ಲಿ ಗೆದ್ದು ವಿರೋಧ ಪಕ್ಷದ ನಾಯಕರಾದರೆ, 2013 ರಲ್ಲಿ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮತ್ತೊಂದು ವಿಶೇಷ. 2018ರಲ್ಲಿ ಪುತ್ರ ಡಾ. ಯತೀಂದ್ರರಿಗೆ ಬಿಟ್ಟು ಕೊಟ್ಟು, ಅವರನ್ನೂ ಶಾಸಕನನ್ನಾಗಿ ಮಾಡಿ ವಿಧಾನಸೌಧದ ಮೆಟ್ಟಿಲು ಹತ್ತುವಂತೆ ಮಾಡಿದ್ದಾರೆ. ಹಾಗಾಗಿ ವರುಣ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಮತ್ತು ಸಿದ್ದರಾಮಯ್ಯನವರ ಪಾಲಿಗೆ ಅದೃಷ್ಟದ ಕ್ಷೇತ್ರ.

ಆ ಕಾರಣಕ್ಕಾಗಿಯೇ ಪುತ್ರನಿಗಾಗಿ ಬಿಟ್ಟುಕೊಟ್ಟಿದ್ದ ವರುಣ ಕ್ಷೇತ್ರವನ್ನು ಈ ಬಾರಿ ಮರಳಿ ಪಡೆದ ಸಿದ್ದರಾಮಯ್ಯನವರು, ತಮಗೆ ಜನ್ಮ ನೀಡಿದ ಸಿದ್ದರಾಮನಹುಂಡಿಯ ಜನರ ಮುಂದೆ ಮತ್ತೆ ನಿಂತಿದ್ದಾರೆ. ಸಿದ್ದರಾಮಯ್ಯನವರ ಸ್ಪರ್ಧೆಯಿಂದಾಗಿ ವರುಣ ಎಲ್ಲರ ಗಮನ ಸೆಳೆದಿದೆ. ಪ್ರತಿಷ್ಠೆಯ ಕಣವಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ವಿ.ಸೋಮಣ್ಣರನ್ನು ಬಿಜೆಪಿ ಕಣಕ್ಕಿಳಿಸಿರುವುದು, ದಲಿತರ ಡಾ. ಭಾರತೀಶಂಕರ್ ಅವರನ್ನು ಜೆಡಿಎಸ್ ಸ್ಪರ್ಧೆಗೆ ಒಡ್ಡಿರುವುದು ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಸುತ್ತೂರು ಸ್ವಾಮಿಗಳ ಮಾತಿಗೂ ಮನ್ನಣೆಯಿದೆ, ದೇವನೂರ ಮಹಾದೇವರ ಮಾತಿಗೂ ಬೆಲೆಯಿದೆ.   

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ನನ್ನ ಕೊನೆ ಚುನಾವಣೆ ಎಂದಿರುವ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ಅವರ ವಿದ್ವತ್ತು, ಅನುಭವ, ಮಾತಿನ ವೈಖರಿ ಹಾಗೂ ಅದನ್ನು ಮಂಡಿಸುವ ವಿಧಾನ ವಿರೋಧಪಕ್ಷಗಳಿಗೆ ನಿದ್ರೆಗೆಡಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳುಗಳನ್ನು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ದಾಟಿಸುವ ಸಿದ್ದರಾಮಯ್ಯನವರ ವರಸೆಗೆ ಬಿಜೆಪಿ ಬಸವಳಿದುಹೋಗಿದೆ. ಅಂಕಿ-ಅಂಶಗಳ ಮೂಲಕ, ದೇಸಿ ನುಡಿಗಟ್ಟುಗಳನ್ನು ಬಳಸಿ ಜನರ ಮನಮುಟ್ಟುವಂತೆ ಮಾತನಾಡುವ ಸಿದ್ದರಾಮಯ್ಯನವರ ಶೈಲಿಗೆ ಸಂಘಪರಿವಾರ ಸುಸ್ತು ಹೊಡೆದುಹೋಗಿದೆ. ಡಬಲ್ ಎಂಜಿನ್ ಸರ್ಕಾರದ ಡಬಲ್ ದೋಖಾವನ್ನು ಬಿಡಿಸಿಡುವ ಬಗೆಗೆ ಬಿಜೆಪಿ ಬಾಯಿ ಬಂದ್ ಆಗಿದೆ. ಸಿದ್ದರಾಮಯ್ಯನವರ ಬಾಯಿ ಮುಚ್ಚಿಸುವುದೇ ಸದ್ಯಕ್ಕೆ ಬಿಜೆಪಿಯ ಬಹಳ ಮುಖ್ಯವಾದ ಕೆಲಸವಾಗಿದೆ.  

ಹಾಗಾಗಿ, ದಿನಕ್ಕೊಬ್ಬ ಸ್ಟಾರ್ ಪ್ರಚಾರಕರನ್ನು ವರುಣ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಸಿದ್ದರಾಮಯ್ಯನವರ ವಿರುದ್ಧ ವಿಷ ಕಾರುತ್ತಿದೆ ಬಿಜೆಪಿ. ಐಟಿ ಅಂಕುಶಕ್ಕೆ ಸಿಕ್ಕ ಸಿನಿಮಾ ನಟ-ನಟಿಯರು, ಅನುದಾನದ ಹಂಗಿನಲ್ಲಿರುವ ಸ್ವಾಮೀಜಿಗಳು, ಮಾರಿಕೊಂಡ ಮಾಧ್ಯಮದವರು ಪ್ರತಿನಿತ್ಯ ಸಿದ್ದರಾಮಯ್ಯನವರ ಹಣಿಯಲು ಬೆವರು ಸುರಿಸುತ್ತಿದ್ದಾರೆ.

ಆದರೆ ಸಿದ್ದರಾಮಯ್ಯನವರ ಹಣೆಬರಹ ಬರೆಯುವ ವರುಣ ಕ್ಷೇತ್ರದ ಮತದಾರರು ಮಾತ್ರ, ಹಿಂದೆ ಹೇಗಿದ್ದರೋ ಇಂದು ಕೂಡ ಹಾಗೆಯೇ ಇದ್ದಾರೆ. ಅದೇ ನಿಲುವು, ಅದೇ ಪ್ರೀತಿ. ವರುಣ ಕ್ಷೇತ್ರದಲ್ಲಿ ನಮ್ಮ ಈದಿನ.ಕಾಮ್ ನ ತಂಡ ಕಂಡ ಮುಖಗಳು ಇಲ್ಲಿವೆ.

ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನಹುಂಡಿ, ಎಲ್ಲ ಹಳ್ಳಿಗಳಂತೆಯೇ ಇದೆ. ಇಲ್ಲಿ ಎಲ್ಲ ಜಾತಿಯ ಜನರೂ ಇದ್ದಾರೆ. ಚುನಾವಣೆ ಬಂದಾಗ ಜಾತಿ ಜಾಗೃತವಾಗುವಂತೆ ಇಲ್ಲಿಯೂ ಆಗಿದೆ. ಪರ-ವಿರೋಧದ ಗುಂಪುಗಳೂ ಹುಟ್ಟಿಕೊಂಡಿವೆ. ಒಳಿತು-ಕೆಡಕುಗಳೂ ಕಾಣತೊಡಗಿವೆ. ಇವುಗಳ ನಡುವೆಯೇ ಬೆವರು ಸುರಿಸಿ ದುಡಿಯುವ ರೈತಾಪಿ ವರ್ಗ, ಕೃಷಿ ಕಾರ್ಮಿಕರು ಅವರಿದ್ದಲ್ಲಿಯೇ ಇದ್ದಾರೆ. ಹಳ್ಳಿಗೆ ಡಾಂಬರು ಬಂದಿದೆ. ಕುಡಿಯುವ ನೀರು, ಟ್ಯಾಂಕ್ ಎಲ್ಲಾ ಇದೆ. ಒಳ ಚರಂಡಿ ವ್ಯವಸ್ಥೆ ಇದೆ. ಸಮುದಾಯ ಭವನಕ್ಕಿಂತ ಭವ್ಯವಾಗಿ ದೇವಸ್ಥಾನವಿದೆ. ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರಿನ ಭತ್ತದ ಗದ್ದೆ ಬಯಲಿದೆ. ಕಿರುಗಾಲುವೆಯಲ್ಲಿ ಹರಿಯುವ ಕಬಿನಿ ನೀರು, ಮುಸುಕಿನ ಜೋಳದ ಹೊಲಗಳು ಮನಸಿಗೆ ಮುದ ನೀಡುತ್ತವೆ.

ಕಟಾವು ಆದ ಜೋಳದ ಹೊಲದಲ್ಲಿ ಆಡು ಮೇಯಿಸುತ್ತಿದ್ದ 50 ದಾಟಿದ ಶಿವಮಲ್ಲು ಮತ್ತು ತಿಮ್ಮಯ್ಯರನ್ನು ಮಾತಿಗೆಳೆದರೆ, `ಚೆನ್ನಾಗದೆ, ಏನ್ ತೊಂದ್ರಿಲ ಬುಡಿ’ ಎಂದರು. ಯಾರ ಬಗ್ಗೆ ಕೇಳುತ್ತಿದ್ದೇವೆ ಎನ್ನುವುದನ್ನೂ ಕೇಳದೆ, ತಮ್ಮ ಮನಸ್ಸಿನಲ್ಲಿರುವುದನ್ನೂ ತೆರೆದು ತೋರದೆ, ಚೆನ್ನಾಗದೆ ಎಂದಷ್ಟೇ ಹೇಳಿದರು. ಸ್ವಲ್ಪ ಕೆದಕಿ ಕೇಳಿದರೆ, `ಅವರಲ್ದೆ ಇನ್ಯಾರಿಗೆ ಹೋಗಿ’ ಎಂದರು. ಇಬ್ಬರೂ ಕೂಲಿ ಕಾರ್ಮಿಕರೇ ಆದರೂ, ಲಿಂಗಾಯತರ ಶಿವಮಲ್ಲು ಕೊಂಚ ಏರಿದ ದನಿಯಲ್ಲಿ ಮಾತನಾಡಿದರೆ, ದಲಿತರ ತಿಮ್ಮಯ್ಯ ಅಳುಕಿನಿಂದಲೇ ಹೂಂಗುಟ್ಟಿದರು.

ಗದ್ದೆ ಕೆಲಸ ಮಗಿಸಿ, ಸೈಕಲ್ ಮೇಲೆ ಹಲ್ಲು ಹೊರೆ ಏರಿಕೊಂಡು ಬರುತ್ತಿದ್ದ ಶ್ರೀನಿವಾಸರನ್ನು ತಡೆದು ನಿಲ್ಲಿಸಿ ಕೇಳಿದರೆ, `ನಾವ್ ಒಕ್ಕಲಗ್ರು, ನಮ್ಮೋರ್‍ದೆಲ್ಲ ಸಾಹೇಬ್ರಿಗೆ’ ಎಂದರು. ಅವರ ಮಾತಿನಲ್ಲಿ ಖಚಿತತೆ ಇತ್ತು. ಯಾರೇ ಬಂದು ಏನೇ ಅಂದರೂ, ಸಿದ್ದರಾಮಯ್ಯರನ್ನು ಬಿಟ್ಟು ಮತ್ತೊಬ್ಬರಿಗೆ ಹಾಕುವುದಿಲ್ಲ ಎಂಬುದನ್ನು ಹೇಳುತ್ತಿತ್ತು.

ಹಸಿರಿನ ಗದ್ದೆ ಬಯಲು ನೋಡುತ್ತಾ ನಿಂತಿದ್ದ ನಮ್ಮ ಬಳಿಗೆ, ಕಳೆ ಕೀಳುವ ಕೆಲಸ ಮುಗಿಸಿ ಗದ್ದೆಯಿಂದ ಎದ್ದು ಬಂದ ಮೂವರು ಮಹಿಳೆಯರು, ಕಾಲುವೆಯಲ್ಲಿ ಕೈ ಕಾಲು ತೊಳೆಯಲು ಬಂದರು. ಒಬ್ಬೊಬ್ಬರನ್ನೇ ಮಾತಿಗೆಳೆದರೆ, `ಅಷ್ಟೊತ್ಗೆ ಎದ್ದು ಕಳೆ ಕೀಳಕ್ಕೋಯ್ತಿವಿ, 250 ಕೂಲಿ, ತಿಂಡಿ ಕೊಡ್ತರೆ’ ಎಂದರು. ಯಾವ ಪೈಕಿ ಎಂದರೆ `ಹೊಲಾರು, ಎಡ ಕಣಪ್ಪ’ ಎಂದರು. ನಂತರ, `ಮಾಡ್ಲಿ ಮಾಡ್ದನೇ ಇರ್‍ಲಿ, ನಾವಂತು ನಮ್ ಸಾಹೇಬ್ರಿಗೆ’ ಎಂದರು. ಅವರ ಮಾತಿನಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದು ಹೆಮ್ಮೆ ಇತ್ತು. ಹಾಗೆಯೇ ನಮ್ಮ ಬದುಕು ನೆರೂಪಾಗಿಲ್ಲ ಎಂಬ ಕೊರಗೂ ಇತ್ತು.

ಮತ್ತೊಬ್ಬರು, `ನಮ್ ಸಾಹೇಬ್ರು ನಮ್ಮೂರಿಗೆ ಬಂದಾಗ, ನೋಡಕ್ಕಾಸೆ, ಆದ್ರೆ ಏನ್ಮಾಡ್ತಿರ, ಸುತ್ತ ಜನ ತುಂಬ್ಕಂಡು, ನೋಡಕ್ಕೆ ಬುಡದಿಲ್ಲ.. ನಾವೂ ಹೋಗದಿಲ್ಲ’ ಎಂದು ದೂರಿದರು. ಮತ್ತೊಬ್ಬರು, `ನನ್ಗಾ ಎರಡು ಗಂಡು ಮಕ್ಳು, ಡಿಗ್ರಿ ಮಾಡಿ ಗಾರೆ ಕೆಲಸಕ್ಕೆ ವೊಯ್ತಾವೆ, ಅವರಿಗೇನಾರ ಕೆಲ್ಸ ಗಿಲ್ಸ ಕೊಡ್ಸುದ್ರೆ ಒಳ್ಳೆದಾಯ್ತದೆ, ನಾವಂತು ಏನು ಕೇಳ್ದೋರಲ್ಲ, ಅವುರಿಗ್ಬುಟ್ಟು ಬ್ಯಾರೆಯವ್ರಿಗೆ ಹಾಕ್ದೋರು ಅಲ್ಲ’ ಎಂದರು. ಅವರ ನಿಷ್ಠೆ, ನಿಯತ್ತು ಬೆಲೆ ಕಟ್ಟಲಾಗದು. ಅದು ಸಿದ್ದರಾಮಯ್ಯನವರ ಗಮನಕ್ಕೆ ಬಂದರೆ ಒಳ್ಳೆಯದೆನಿಸಿತು.

ಅಲ್ಲಿಂದ ಮುಂದಕ್ಕೆ, ಊರಿನ ಜನ ಕೂರುವ ಅರಳೀಕಟ್ಟೆ, ಆಟದ ಮೈದಾನ, ಅದರ ಮುಂದಿನ ಪುಟ್ಟ ಪೆಟ್ಟಿಗೆ ಅಂಗಡಿಯತ್ತ ಹೋದೆವು. ಅದರ ಮುಂದೆ ವಯಸ್ಸಾದ ಮೂವರು ಗಂಡಸರು ಕೂತು ರಾಜಕೀಯವನ್ನೇ ಮಾತನಾಡುತ್ತಿದ್ದರು. ನಾವು ನಮ್ಮ ಪರಿಚಯ ಹೇಳಿಕೊಂಡು ಅವರೊಂದಿಗೆ ಮಾತು ಬೆರೆಸಿದೆವು. ಅವರಲ್ಲೊಬ್ಬರು, `ಈ ಸಲ ನಮ್ ಸಿದ್ದರಾಮಯ್ಯರಿಗೆ ಕಷ್ಟ, ಆಕ್ಕಡಿಕೂ ಅದೆ, ಈಕ್ಕಡಿಕೂ ಅದೆ, ಎರಡೂ ಜೋರಾಗವೆ, ನೋಡ್ಬೇಕು’ ಎಂದರು. ಮತ್ತೊಬ್ಬರು ಮಾತು ಆಡದೆ ಮೌನಕ್ಕೆ ಶರಣಾದರು. ಇನ್ನೊಬ್ಬರು, `ನಮ್ಮೂರ ದೇವಸ್ಥಾನ ಬಿದ್ದೋಗಿತ್ತು. ಸಾಹೇಬ್ರು ಇಲ್ಲಿ ಬಂದಾಗ, ಶ್ರೀರಾಮದೇವರು ದೇವಸ್ಥಾನ ಆಗ್ಬೇಕು ಅಂದೋ, ಸಿದ್ದರಾಮಯ್ಯರು ಅವ್ರ ಕೈಯಿಂದನೆ 2 ಕೋಟಿ ಕೊಟ್ರು, ಭಾರೀ ಜೋರಾಗ್ ಕಟ್ಸವ್ರೆ, ಶ್ರೀರಾಮ ಅಂತ ಹೇಳ್ಕಂಡು ಓಟ್ ತಕತರಲ್ಲ, ಅವರೆಲ್ಲ ಇಲ್ಲಿ ಬಂದ್ ನೋಡ್ಬೇಕು, ನಮ್ ಸಾಹೇಬ್ರು ಯಾವುದ್ಕು ಇಲ್ಲ ಅನ್ನಲ್ಲ’ ಎಂದು ಪಕ್ಕದವನ ಮಾತಿಗೆ ತಿರುಗೇಟು ಕೊಡಲು, `ಎಲ್ಲ ಸೇರಿ ಸೋಲಸ್ಬೇಕು ಅಂತಾವ್ರೆ, ಅವ್ರು ಸೋಲಲ್ಲ, ಸೋಲ್ಸಕ್ಕು ಆಗದಿಲ್ಲ’ ಎಂದರು.

ಸಿದ್ದರಾಮನಹುಂಡಿ ಬಿಟ್ಟು ಕುಪ್ಪೇಗಾಲದ ಕಡೆಗೆ ಹೋದರೆ, ಸುಗಂಧರಾಜ ಬೆಳೆಯ ಬದುವಿನಲ್ಲಿ ಕೂತು ಧಣಿವಾರಿಸಿಕೊಳ್ಳುತ್ತಿದ್ದ 82 ವರ್ಷದ ಲಿಂಗಾಯತ ಸಮುದಾಯದ ಮಹದೇವಪ್ಪನವರು ಕಂಡರು. ಮಾತಿಗೆಳೆದರೆ, `ಒಂದರ್ಧ ಎಕರೇಲಿ ಸುಗಂಧರಾಜ ಬೆಳಿತಿದೀವಿ, ದಿನಕ್ಕೆ ಐದಾರು ಕೇಜಿ ಸಿಗ್ತದೆ, ಕೇಜಿಗೆ ನೂರು ರೂಪಾಯಿ. ಹೂ ಬೇಕಿತ್ತೆ, ಕೂಯ್ಕಳಿ’ ಎಂದರು. ಎಲೆಕ್ಷನ್ ಹೆಂಗಿದೆ ಎಂದರೆ, `ಜೋರಾಗದೆ, ಬರದೆ ಇರೋರೆಲ್ಲ ಬತ್ತಾವ್ರೆ ನಮ್ಮೂರಿಗೆ, ನೀವು ಅವರೇನೆ’ ಎಂದು ಪ್ರಶ್ನಾರ್ಥಕವಾಗಿ ನೋಡಿದರು. ಇಲ್ಲ, ನಾವು ಅವ್ರಲ್ಲ ಎಂದು, ನೀವು ಯಾರಿಗೆ ಹಾಕಬೇಕು ಅಂದ್ಕೊಂಡಿದೀರ ಎಂದರೆ, `ನಮ್ ಜನವೆಲ್ಲ ಆಗ್ಲೆ ಸಿದ್ರಾಮಯ್ಯರ್‍ಗೆ ಅಂತ ತೀರ್ಮಾನ ಮಾಡಾಗದೆ ಕಣಪ್ಪ’ ಅಂದರು.

ಇದನ್ನು ಓದಿದ್ದೀರಾ?: ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿ: ಸುಧೀಂದ್ರ ಕುಲಕರ್ಣಿ

ಹಾಗೆ ಮುಂದಕ್ಕೆ ಕಟ್ಟೇಹುಂಡಿ, ರಂಗನಾಥಪುರ, ಎಳೇಗೌಡನಹುಂಡಿ, ಹಿಟ್ಟುವಳ್ಳಿ, ರಂಸಮುದ್ರದ ಕಡೆ ಓಡಾಡಿ, ನಾಯಕರ ಪೈಕಿಯ ಮಹದೇವಮ್ಮ, ಕುರುಬರ ಶಿವಣ್ಣರನ್ನು ಮಾತನಾಡಿಸಿದಾಗ, ಸಿದ್ದರಾಮಯ್ಯನವರು ಗೆಲ್ಲುವುದು ಗ್ಯಾರಂಟಿಯಾಯಿತು. ಈ ಜನಕ್ಕಾಗಿ, ನಾಡಿಗಾಗಿ ಸಿದ್ದರಾಮಯ್ಯನವರ ಗೆಲುವು ಮುಖ್ಯ ಎನಿಸಿತು.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದಿದ್ದರೂ ಕೋಮು ದ್ವೇಷ ಹರಡುವುದರಲ್ಲಿ ರಾಜ್ಯದ ಬಿಜೆಪಿ ಸಂಸದರದ್ದೇ ಮೇಲುಗೈ

2019ರಲ್ಲಿ 17ನೇ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಬಿಜೆಪಿ ಸೇರಿದಂತೆ ಎಲ್ಲ 28...

ಉಡುಪಿ | ಸಮವಸ್ತ್ರಕ್ಕೆ ಗೌರವ ತರುವ ಕೆಲಸ ಆಗಬೇಕು: ಎಸ್‌ಪಿ ಅರುಣ ಕೆ

ದೇಶದ ಕಾನೂನು ಹಾಗೂ ಸಾಮಾಜಿಕ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಗೃಹ...

ಸೌಜನ್ಯ ಹೋರಾಟಗಾರರಿಂದ NOTA ಅಭಿಯಾನ ; ಯಾರಾಗಲಿದ್ದಾರೆ ನೋಟಾದ ಫಲಾನುಭವಿ ?

ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್‌, ಭಜರಂಗದಳ, ವಿಎಚ್‌ಪಿ...

ಗದಗ | ಮುಂಡರಗಿ ತಾಲೂಕು ಪಂಚಾಯತ್ ವಿಶಿಷ್ಟ ನಡೆ; ಮದುವೆ ಮನೆಯಲ್ಲಿ ಮತದಾನ ಜಾಗೃತಿ

ಮುಂಡರಗಿ ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ನದಾಫ- ಹರ್ಲಾಪೂರ ಕುಟುಂಬದ ಮದುವೆ...