ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ

Date:

Advertisements
ರಾಜ್ಯ ಸರ್ಕಾರವೇ ಮುಂದೆ ನಿಂತು ಕಾವೇರಿಗೆ ಆರತಿ ಎನ್ನುವ ಮೂಲಕ ಧಾರ್ಮಿಕವಾಗಿ, ಭಾವನಾತ್ಮಕವಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸುತ್ತಿದೆ. ಬಿಜೆಪಿ ಮಾಡಿದ ಗಿಮಿಕ್ಕನ್ನೇ ಕಾಂಗ್ರೆಸ್ ಕೂಡ ಮಾಡಲು ಮುಂದಾಗಿದೆ. ಕಾವೇರಿ ಮಾತೆಗೆ ಆರತಿ ಎತ್ತುವ ಬದಲು, ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಂಗಳಾರತಿ ಎತ್ತಬೇಕಿದೆ.

ಕನ್ನಡ ನಾಡಿನ ಜೀವನದಿಗೆ ನಮನ ಸಲಿಸಲ್ಲು ಗಂಗೆಯಷ್ಟೇ ಪವಿತ್ರ ನದಿಯಾಗಿರುವ ಕಾವೇರಿ ಮಾತೆಗೆ ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರ ರೂಪು ರೇಷೆಗಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ಗಂಗಾರತಿ ಮಾದರಿ ಅಧ್ಯಯನ ನಡೆಸಿ ‘ಗಂಗಾರತಿ ಮತ್ತು ಕಾವೇರಿ ಆರತಿ ಕುರಿತು ರಾಜ್ಯ‌ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದಿದ್ದಾರೆ.

ಅಷ್ಟೇ ಅಲ್ಲ, ‘ಹಿಂದೂಗಳ ಶ್ರೇಷ್ಠ ಸಂಪ್ರದಾಯಗಳಲ್ಲಿ ಒಂದಾಗಿರುವ, ವೇದಘೋಷ, ಮಂತ್ರಗಳೊಂದಿಗೆ ಪ್ರಸಿದ್ಧ ಯಾತ್ರಾಸ್ಥಳ ಹರಿದ್ವಾರದಲ್ಲಿ ನಡೆಯುವ ಗಂಗಾರತಿಯ ಮಾದರಿಯಲ್ಲಿ ಕಾವೇರಿ ಆರತಿ ನಡೆಯಲಿದೆ. ಹರಿದ್ವಾರದ ಗಂಗಾರತಿಗೆ ಸರ್ಕಾರದ ಅನುದಾನವಿಲ್ಲ. ಆದರೆ ನಮ್ಮ ಸರ್ಕಾರವೇ ಮುಂದೆ ನಿಂತು 5 ಕೋಟಿ ಖರ್ಚು ಮಾಡುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿನಲ್ಲಿ ಐತಿಹಾಸಿಕ ದಸರಾ ಸಂಭ್ರಮದ ಸಂದರ್ಭದಲ್ಲಿಯೇ ಕಾವೇರಿ ಆರತಿ ಆರಂಭಿಸಲು ಇಚ್ಛಿಸಿದ್ದಾರೆ. ಉದ್ದೇಶಿತ ಸ್ಥಳಗಳಾದ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಮತ್ತು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು ಪ್ರದೇಶದಲ್ಲಿ ಕಾವೇರಿ ಆರತಿ ಆರಂಭಿಸುವುದಾದರೆ, ಹರಿದ್ವಾರ ಅಥವಾ ವಾರಾಣಸಿಯಿಂದಲೇ ಸಾಧು ಸಂತರನ್ನು ಆಹ್ವಾನಿಸಿ ಅವರಿಂದ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲಾಗುವುದು’ ಎಂದಿದ್ದಾರೆ.  

ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಹರಿವ ಕಾವೇರಿಗೆ ಆರತಿಯ ಅಗತ್ಯವಿದೆಯೇ? ಇಷ್ಟು ವರ್ಷ ಇಲ್ಲದ್ದು ಈಗೇಕೆ? ಕಾವೇರಿ ಜಲಾನಯನದ ಫಲಾನುಭವಿಗಳಾದ ರೈತಮಕ್ಕಳಿಗೆ ಇದರಿಂದ ಏನಾದರೂ ಅನುಕೂಲವಾಗುತ್ತದೆಯೇ? ಇದರಿಂದ ನಾಡಿಗೆ ಏನಾದರೂ ಪ್ರಯೋಜನವಿದೆಯೇ? ರಾಜ್ಯ ಸರ್ಕಾರದ ಆದ್ಯತೆಗಳೇನು? ಈ ಎಲ್ಲ ಪ್ರಶ್ನೆಗಳು ಈಗ ಜನತೆಯಲ್ಲಿ ಏಳತೊಡಗಿವೆ. ಸಿದ್ದರಾಮಯ್ಯನವರ ಸರ್ಕಾರ ಉತ್ತರಿಸಬೇಕಾಗಿದೆ.

Advertisements

2021ರಲ್ಲಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಮೊದಲಿಗೆ ‘ತುಂಗಾ ಆರತಿ’ ಯೋಜನೆಯನ್ನು ಘೋಷಿಸಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ತುಂಗಾ ಆರತಿಗೆ 30 ಕೋಟಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಎತ್ತಿಡಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಯಿತು. ಇದು ಹಿಂದುತ್ವದ ಪ್ರಚಾರಕ್ಕೆ ಅನುಗುಣವಾಗಿ ಮಾಡಿದ ಘೋಷಣೆಯಾಗಿತ್ತು. ಅದರ ಹಿಂದೆ ಬಿಜೆಪಿಯ ಸೈದ್ಧಾಂತಿಕ ಮುಖವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥರನ್ನು ಸಂತೃಪ್ತರನ್ನಾಗಿಸುವ ಇರಾದೆ ಇತ್ತು.

ಇದರ ಮುಂದುವರೆದ ಭಾಗವಾಗಿ ಅಕ್ಟೋಬರ್ 2022ರಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸರ್ಕಾರ, ಕಾವೇರಿ ನದಿ ಉತ್ಸವದ ಅಂಗವಾಗಿ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಕಾವೇರಿ ನದಿ ತಟದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನೆರವೇರಿಸಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಮ್ಮು-ಕಾಶ್ಮೀರದಲ್ಲಿ ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳು ಒಂದಾಗುವವೇ?

ಬಿಜೆಪಿಗರು ದೇವರು, ಧರ್ಮವನ್ನು ಮುನ್ನೆಲೆಗೆ ತಂದು ಮೌಢ್ಯ ಬಿತ್ತುವ, ಸಮಾಜವನ್ನು ವಿಭಜಿಸುವ, ಅದರಿಂದ ಶಾಂತಿ ಸಹಬಾಳ್ವೆಗೆ ಧಕ್ಕೆ ತರುವ ಕೆಲಸಗಳಲ್ಲಿ ನಿಷ್ಣಾತರು. ಹಿಂದುತ್ವದ ನೆಪದಲ್ಲಿ ಈ ಸಮಾಜವನ್ನು ಪುರಾತನ ಕಾಲಕ್ಕೆ ಕೊಂಡೊಯ್ದು ಕತ್ತಲಲ್ಲಿರಿಸುವುದು ಅವರ ಅಜೆಂಡ. ಅದನ್ನು ಕಟುವಾಗಿ ಟೀಕಿಸುವ ಸಮಾಜವಾದಿ ಸಿದ್ದರಾಮಯ್ಯನವರ ಸರ್ಕಾರವೂ ಈಗ ಅದನ್ನೇ ಮಾಡಲು ಮುಂದಾದರೆ, ಬಿಜೆಪಿಗಿಂತ ಕಾಂಗ್ರೆಸ್ ಹೇಗೆ ಭಿನ್ನ? ಬಿಜೆಪಿಯದು ಹಾರ್ಡ್ ಕೋರ್ ಹಿಂದುತ್ವವಾದರೆ, ಕಾಂಗ್ರೆಸ್ಸಿನದು ಸಾಫ್ಟ್ ಹಿಂದುತ್ವವೇ? ಕಾಂಗ್ರೆಸ್ ಪಕ್ಷ ಪಾಲಿಸಿಕೊಂಡು ಬಂದ ಜಾತ್ಯತೀತ ನಿಲುವು, ಸರ್ವಜನಾಂಗದ ಶಾಂತಿಯ ತೋಟಗಳೆಂಬ ಹೇಳಿಕೆಗಳು ಜನರ ಕಣ್ಣಿಗೆ ಮಣ್ಣೆರೆಚುವ ನಾಟಕವೇ?

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೇಡವೆಂದು ನಿರ್ಧರಿಸಿದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ತಂದದ್ದರ ಹಿಂದೆ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕಿಂತ ಮುಖ್ಯವಾಗಿ ಶಾಂತಿ-ಸಹಬಾಳ್ವೆಗೆ ಧಕ್ಕೆ ತಂದ ಬಗ್ಗೆ ಭಾರಿ ಬೇಸರವಿತ್ತು. ಬದಲಾವಣೆ ತರಲೇಬೇಕೆಂದು ಬಯಸಿದ್ದರ ಹಿಂದೆ ಈ ರಾಜ್ಯದ ಜನರ ಪ್ರಬುದ್ಧ ಮನಸ್ಸಿತ್ತು. ಮಾನವೀಯತೆ ಕೆಲಸ ಮಾಡಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಾಗ, ಏನೋ ಒಂದು ನಿರಾಳತೆ ಮನೆಮಾಡಿತ್ತು. ಹಾಗೆಯೇ ಭಾರೀ ನಿರೀಕ್ಷೆಯೂ ಇತ್ತು.  

ಆದರೆ, ಈಗ ರಾಜ್ಯ ಸರ್ಕಾರವೇ ಮುಂದೆ ನಿಂತು, ಸಾರ್ವಜನಿಕರ ತೆರಿಗೆಯ ಹಣವಾದ ಐದು ಕೋಟಿ ಖರ್ಚು ಮಾಡಿ ಕಾವೇರಿಗೆ ಆರತಿ ಎನ್ನುವ ಮೂಲಕ ಧಾರ್ಮಿಕವಾಗಿ, ಭಾವನಾತ್ಮಕವಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸುತ್ತಿದೆ. ಬಿಜೆಪಿ ಮಾಡಿದ ಗಿಮಿಕ್ಕನ್ನೇ ಕಾಂಗ್ರೆಸ್ ಕೂಡ ಮಾಡಲು ಮುಂದಾಗಿ ರಾಜ್ಯವನ್ನು ಮನುಯುಗದತ್ತ ಕೊಂಡೊಯ್ಯುತ್ತಿದೆ ಎನ್ನುವ ಭಾವನೆ ಜನರಲ್ಲಿ ಮೂಡತೊಡಗಿದೆ.  

ಹಾಗಾಗಿ ಕಾವೇರಿ ಮಾತೆಗೆ ಆರತಿ ಎತ್ತುವ ಬದಲು, ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಂಗಳಾರತಿ ಎತ್ತಬೇಕಿದೆ. ಈ ನಾಡನ್ನು ಬಸವ, ಕುವೆಂಪು, ಟಿಪ್ಪುಗಳ ಜಾತ್ಯತೀತ ನಾಡಾಗಿ, ವೈಚಾರಿಕತೆಯ ಬೀಡಾಗಿ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಿದೆ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X