ಕುಡಿದ ಅಮಲಿನಲ್ಲಿ ಸ್ನೇಹಿತನೊಬ್ಬನನ್ನು ಕೊಲೆ ಮಾಡಿ ನಿರ್ಮಾಣ ಹಂತದಲ್ಲಿದ್ದ ಸಂಪಿನಡಿಯಲ್ಲಿ ಹೆಣ ಹೂತಿಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ನಡೆದಿದೆ.
ಬಿಹಾರ ಮೂಲದ ರಿಹಾನ್ ಕೊಲೆಯಾದ ದುರ್ದೈವಿ. ಸಾಜೀದ್ ಮತ್ತು ಆಲಂ ಕೊಲೆ ಮಾಡಿರುವ ಆರೋಪಿಗಳು. ಈ ಮೂವರೂ ಬಿಹಾರ ರಾಜ್ಯದ ಆರರಿಯ ಜಿಲ್ಲೆಯ ಕುರಸಿಲ್ ಗ್ರಾಮದವರಾಗಿದ್ದು, ಗಾರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನ ಗುತ್ತಿಗೆದಾರ ಮಂಜುನಾಥ್ ಎಂಬುವರು ಗಾಣದ ಎಣ್ಣೆ ತಯಾರಿಕಾ ಕಾರ್ಖಾನೆಯೊಂದರ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಚಿಕ್ಕಬಳ್ಳಾಪುರದ ತೌಡನಹಳ್ಳಿಗೆ ಕರೆತಂದಿದ್ದರು.
ಕಳೆದ 20 ದಿನಗಳಿಂದ ಕೆಲಸ ಮಾಡುತ್ತಿದ್ದವರು, ಈದ್ ಮಿಲಾದ್ ಹಬ್ಬದ ಬಳಿಕ ನಾಪತ್ತೆಯಾಗಿದ್ದರು. ಗುತ್ತಿಗೆದಾರ ಮಂಜುನಾಥ್ ಈದ್ ಮಿಲಾದ್ ಹಿನ್ನೆಲೆ ಹಣ ಕೊಟ್ಟಿದ್ದು, ಮೂವರೂ ಸೇರಿ ಕೆಲಸದ ಜಾಗದಲ್ಲೇ ಪಾರ್ಟಿ ಮಾಡಿದ್ದರು. ಈ ಸಂದರ್ಭದಲ್ಲಿ ರಿಹಾನ್ ಮತ್ತು ಸಜೀದ್ ನಡುವೆ ಜಗಳ ಏರ್ಪಟ್ಟಿದ್ದು, ಸಜೀದ್ ಅಲ್ಲೇ ಬಿದ್ದಿದ್ದ ಸಿಮೆಂಟ್ ಇಟ್ಟಿಗೆಯಿಂದ ರಿಹಾನ್ ತಲೆಗೆ ಹೊಡೆದಿದ್ದ. ರಿಹಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಆಲಂ ಮತ್ತು ಸಜೀದ್ ಸೇರಿಕೊಂಡು ಮೃತದೇಹವನ್ನು ಸಂಪಿಗೆಂದು ತೋಡಿದ್ದ ಗುಂಡಿಯಲ್ಲಿ ಹೂತಿಟ್ಟು ಸ್ಥಳದಿಂದ ಪರಾರಿಯಾಗಿದ್ದರು.
ಬಿಹಾರ್ ತೆರಳಿದ್ದ ಆಲಂ ಸತ್ಯ ಬಾಯಿಬಿಟ್ಟಿದ್ದು, ಅಲ್ಲಿನ ಪೊಲೀಸರು ಚಿಕ್ಕಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಸಜೀದ್ ಗಾಗಿ ಬಲೆ ಬೀಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.