ಶಾಲೆಯಲ್ಲಿ ಶಿಕ್ಷಕರೊಬ್ಬರು ಕೋಲಿನಿಂದ ಥಳಿಸಿದ್ದರ ಪರಿಣಾಮ 6ನೇ ತರಗತಿ ವಿದ್ಯಾರ್ಥಿಯೊಬ್ಬ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.
ಆದಿತ್ಯ ಕುಶ್ವಾಹ ಎಂಬ ಬಾಲಕನಿಗೆ ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದರೂ, ಆತನ ದೃಷ್ಟಿ ಮರಳಿ ಬಂದಿಲ್ಲ. ಆತನ ತಾಯಿ ನ್ಯಾಯಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೊರೆ ಹೋಗಿದ್ದಾರೆ. ಶಿಕ್ಷಕ ಶೈಲೇಂದ್ರ ತಿವಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 9ರಂದು ಘಟನೆ ನಡೆದಿದ್ದು, ಘಟನೆ ಬಗ್ಗೆ ವಿದ್ಯಾರ್ಥಿ ವಿವರಿಸಿದ್ದಾನೆ. “ಶಾಲೆಯ ಹೊರಗೆ ಆಡುತ್ತಿದ್ದ ಕೆಲವು ವಿದ್ಯಾರ್ಥಿಗಳನ್ನು ಕರೆಯಲು ಶಿಕ್ಷಕರು ಹೇಳಿದರು. ಆದರೆ, ಕರೆದರೂ ವಿದ್ಯಾರ್ಥಿಗಳು ಬರಲಿಲ್ಲ. ಅವರು ಬಾರದ ಬಗ್ಗೆ ಶಿಕ್ಷಕರಿಗೆ ತಿಳಿಸಿದೆ. ಸಿಟ್ಟಾದ ಶಿಕ್ಷಕ, ನನಗೆ ದೊಣ್ಣೆಯಿಂದ ಹೊಡೆದರು. ಪೆಟ್ಟಾದ ಬಳಿಕ ಚಿಕಿತ್ಸೆಗಾಗಿ ಕರೆದೋಯ್ದರು. ‘ಐ ಡ್ರಾಪ್ಸ್’ ಹಾಕಿ ತರಗತಿಯಲ್ಲಿ ಮಲಗಿಸಿದರು. ಈಗ, ನನಗೆ ಎಡಗಣ್ಣಿನ ದೃಷ್ಟಿ ಕಾಣಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ಆದಿತ್ಯನ ತಾಯಿ ಶ್ರೀಮತಿ ಮಾತನಾಡಿ, “ನನ್ನ ಮಗ ನೇವಾರಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಅತನ ಮೇಲೆ ಶಿಕ್ಷಕ ದೊಣ್ಣೆ ಎಸೆದಿದ್ದಾರೆ. ಅದು ಬಾಲಕನ ಕಣ್ಣಿಗೆ ಬಿದ್ದು, ರಕ್ತಸ್ರಾವವಾಗಿದೆ. ನಾವು ಪೊಲೀಸರಿಗೆ ದೂರು ನೀಡಲು ತೆರಳಿದ್ದೆವು. ಆದರೆ ಅವರು ದೂರು ದಾಖಲಿಕೊಳ್ಳಲಿಲ್ಲ. ಶಿಕ್ಷಣ ಇಲಾಖೆಯ ಗಮನಕ್ಕೆ ತಂದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ಮಧ್ಯೆ, ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಶಿಕ್ಷಕ, ಬಾಲಕನ ಕುಟುಂಬಕ್ಕೆ 10 ಲಕ್ಷ ರೂ. ನೀಡುವ ಆಮಿಷವೊಡ್ಡಿದ್ದರು. ಆದರೆ, ನೀಡಲು ಮುಂದಾದರು, ಆದರೆ ಅವರು ನಿರಾಕರಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಮಧ್ಯಪ್ರವೇಶದ ನಂತರ, ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿ ಕಮಲೇಂದ್ರ ಕುಶ್ವಾಹ ಮಾತನಾಡಿ, ಸ್ಥಳೀಯ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಘಟನೆಯ ಬಗ್ಗೆ ಗಮನಹರಿಸಿದ್ದು, ವರದಿ ನೀಡುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗೆ ತಿಳಿಸಲಾಗಿದ್ದು, ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.