ಕಾರ್ಮಿಕ ಇಲಾಖೆ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು ಮತ್ತು ಶೈಕ್ಷಣಿಕ ಸಹಾಯಧನ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ವಿಸ್ತರಿಬೇಕೆಂದು ಆಗ್ರಹಿಸಿ ಸೂರ್ಯೋದಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಬಿ.ಆಂಜನೇಯ ರೆಡ್ಡಿ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಸೂರ್ಯೋದಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ಆಂಜನೇಯ ರೆಡ್ಡಿ, ತಾಲೂಕಿನಲ್ಲಿರುವ ಕಟ್ಟಡ ಕಾರ್ಮಿಕ ಸಮಸ್ಯೆಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಕಾರ್ಮಿಕ ನಿರೀಕ್ಷಕರು ಸೇರಿದಂತೆ ಅಲ್ಲಿನ ಸಿಬ್ಬಂದಿ ವರ್ಗದವರು ನಾನಾ ಕಾರಣಗಳು ಹಾಗೂ ತಂತ್ರಾಂಶದ ನೆಪವೂಡ್ಡಿ ಫಲಾನುಭವಿಗಳಿಗೆ ಪಿಂಚಣಿ, ವೈದ್ಯಕೀಯ, ಹೆರಿಗೆ, ಮದುವೆ ಸಹಾಯಧನ ಅರ್ಜಿಗಳ ಸ್ವೀಕರಿಸದೆ ತಡೆವೊಡ್ಡಿದ್ದಾರೆ. ಇದರಿಂದಾಗಿ ಬಡಕಾರ್ಮಿಕರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಿಗದಂತಾಗಿವೆ. ಇನ್ನು ಮುಂದೆ ಈ ರೀತಿ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ತೋರಿದರೆ ಉಗ್ರ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಮಿಕರ ಹೆಸರಲ್ಲಿ ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೊಂದಣಿ ಅಥವಾ ನವೀಕರಣ ಮಾಡಬೇಕು. ರಾಜ್ಯ ಸರಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರು ಅವರ ಕುಟುಂಬಗಳಿಗೆ ಜಾರಿಗೊಳಿಸಬೇಕು. ಕಾರ್ಮಿಕ ಸಂಘಗಳಿಗೆ ಮಾತ್ರ ಮಾನ್ಯತೆ ನೀಡಬೇಕು ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ನಿಲ್ಲಿಸಬೇಕು. ಜೀವಿತಾವಧಿ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯ ಬದಲಾಗಿ ಕಾರ್ಮಿಕ ಇಲಾಖೆಯೇ ನೀಡಬೇಕು. ಅರ್ಜಿಗಳ ವಿಲೆವಾರಿ ವಿಳಂಬ ತಡೆಗಟ್ಟಿ ಕಾರ್ಮಿಕ ಇಲಾಖೆಯೆಲ್ಲಿ ಭ್ರಷ್ಟ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕು. ಬಹುದಿನದ ಕಾರ್ಮೀಕರ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ನೀಡಬೇಕು. ತಾಲೂಕು ಮಟ್ಟದಲ್ಲಿ ಕಾರ್ಮಿಕ ಕಲ್ಯಾಣ ಸುರಕ್ಷಾ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕಾರ್ಮಿಕ ನಿರೀಕ್ಷಕ ರಾಕೇಶ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ 11,000 ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿಸಿದ್ದು, ಇತ್ತೀಚೆಗೆ ಒಟ್ಟು 650 ನಕಲಿ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕಟ್ಟಡ ನಿರ್ಮಾಣ ಕಾರ್ಮಿಕರು ಹೊಸ ಕಾರ್ಮಿಕರ ಕಾರ್ಡುಗಳನ್ನು ಮಾಡಿಸಲು ಹೊಸ ಅರ್ಜಿಗಳನ್ನು ಸಲ್ಲಿಸಿದ್ದು, ಈ ಕಾರ್ಡ್ ಗಳನ್ನು ಸರಕಾರದ ಮಾನದಂಡಗಳನ್ನು ಆಧರಿಸಿ ಹೊಸ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಕೆಲಸ ಮಾಡುವ ಕಾರ್ಮಿಕರಿಗೆ ಇಲಾಖೆ ವತಿಯಿಂದ 120 ಕಿಟ್ ಬಂದಿದ್ದು, ಶಾಸಕರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ಈ ಸಂದರ್ಭದಲ್ಲಿ ಸಂಘದ ತಾಲೂಕು ಸಮಿತಿ ನಗರ ಅಧ್ಯಕ್ಷ ಲಕ್ಷ್ಮೀಪತಿ, ಬಿಳ್ಳೂರು ಸಮಿತಿ ಅಧ್ಯಕ್ಷ ಮಂಜುನಾಥ, ಮನ್ಸೂರ್ ಸೖಯದ್, ಮುಖಂಡರಾದ ಮೂರ್ತಿ, ಷಫೀವುಲ್ಲಾ, ಅಶೋಕ, ಅಮರನಾಥ, ಶಿವಕುಮಾರ್, ಆನಂದಚಾರಿ, ನರಸಿಂಹಮೂರ್ತಿ, ಕೃಷ್ಣಪ್ಪ, ಲಕ್ಷ್ಮೀನಾರಾಯಣ, ಕಲಿಮುಲ್ಲಾ, ರಾಮು, ಶ್ರೀನಿವಾಸ್ ನಾಗೇಂದ್ರ, ನಜೀರ್, ರಮೇಶ್.ಪಿ., ಬಾಬಾಜಾನ್ ಸೇರಿದಂತೆ ಹಲವಾರು ಕಾರ್ಮಿಕರು ಇದ್ದರು.
