ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿ ಅತೀ ಹೆಚ್ಚು ಮತ ನೀಡಿದ ಹೋಬಳಿ ಸಿ.ಎಸ್.ಪುರದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಎಸ್.ಎಲ್.ಎನ್ ಮದುವೆ ಮನೆಯಲ್ಲಿ ಬಿಜೆಪಿ ಹೋಬಳಿ ಘಟಕ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಹೋಬಳಿ ಬಿಜೆಪಿ ಪರ ಹೆಚ್ಚು ಒಲವು ತೋರಿದೆ. ಮೊದಲ ಹಂತದಲ್ಲಿ ಎರಡು ಸಾವಿರ ಸದಸ್ಯತ್ವ ನೋಂದಣಿ ನಡೆದಿದೆ. ಈಗ ಎರಡನೇ ಹಂತದಲ್ಲಿ 25 ಸಾವಿರಕ್ಕೂ ಅಧಿಕ ಸದಸ್ಯರ ನೋಂದಣಿ ನಡೆಯಲಿದೆ ಎಂದರು.
ಇಡೀ ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಚುರುಕು ಗೊಳಿಸಲು ರಾಷ್ಟ್ರಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನೀಡಿದ ಆದೇಶದ ಮೇರೆಗೆ ನೋಂದಣಿ ಅಭಿಯಾನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 7 ಲಕ್ಷ ಸದಸ್ಯರನ್ನು ನೊಂದಾಯಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಕಾರ್ಯಕರ್ತ ನಿತ್ಯ 25 ಮಂದಿ ಹೊಸ ಸದಸ್ಯರ ನೋಂದಣಿ ಮಾಡಿಸಲು ಮನವಿ ಮಾಡಿದ ಅವರು ಕುಳಿತಲ್ಲೇ ಮೊಬೈಲ್ ಮೂಲಕ 8800002024 ಈ ನಂಬರ್ ಗೆ ಮಿಸ್ ಕಾಲ್ ನೀಡಿದಾಗ ನಿಮಗೆ ಬರುವ ಡಿಜಿಟಲ್ ಕಾರ್ಡ್ ಭರ್ತಿ ಮಾಡಿ ಅದೇ ಕಾರ್ಡ್ ನಿಮ್ಮಲ್ಲೇ ಉಳಿಸಿಕೊಡಿರಬೇಕು. ಮುಂದೆ ಕೇಂದ್ರ ಸರ್ಕಾರದ ಕಾರ್ಯಕ್ರಮ ಪ್ರಯೋಜನವನ್ನು ಹೊಸ ಸದಸ್ಯರು ಪಡೆಯಬಹುದಾಗಿದೆ ಎಂದರು.
ತುರುವೇಕೆರೆ ಕ್ಷೇತ್ರ ಬಿಜೆಪಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಕಾರ್ಯಕರ್ತರು ಸಂಘಟನೆಗೆ ಒತ್ತು ನೀಡಿ ದುಡಿಯುತ್ತಿದ್ದಾರೆ. ಈಗಾಗಲೇ ಮೂರು ಹೋಬಳಿಯಲ್ಲಿ 10 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ ನಡೆಸಿದ್ದಾರೆ. ಸಿ.ಎಸ್.ಪುರ ಮುಖ್ಯ ಹೋಬಳಿಯಾಗಿರುವ ಕಾರಣ ಖುದ್ದು ನಾನೇ ಪ್ರತಿ ನಿತ್ಯ ಸದಸ್ಯತ್ವ ನೋಂದಣಿ ನಡೆಸಿ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು ಶೀಘ್ರದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಎಪಿಎಂಸಿ ಚುನಾವಣೆ ಬರಲಿದೆ. ಈ ಹಿನ್ನಲೆ ಮತದಾರರ ಬಳಿ ತಲುಪಲು ಈ ನೋಂದಣಿ ಅಭಿಯಾನ ಸೂಕ್ತ. ಈ ನಿಟ್ಟಿನಲ್ಲಿ ಕೆಲಸ ಮಾಡಿ ಅತ್ಯಧಿಕ ಸದಸ್ಯರ ನೋಂದಣಿ ಮಾಡಲು ಮನವಿ ಮಾಡಿದರು.
ತುರುವೇಕೆರೆ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ ಮಾತನಾಡಿ ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಚುರುಕಿನ ಕೆಲಸ ನಡೆಸಿದ್ದಾರೆ. ಪ್ರತಿ ಬೂಟ್ ಮಟ್ಟದಲ್ಲಿ 300 ಸದಸ್ಯರ ಸೂಚನೆ ಇದೆ. ಅದನ್ನು ಮೀರಿ ಸದಸ್ಯತ್ವ ನಡೆಸಿದ್ದಾರೆ. ಕಾರ್ಯಕರ್ತನೊಬ್ಬ ಕನಿಷ್ಠ ನೂರು ಮಂದಿ ಸದಸ್ಯತ್ವ ನೋಂದಣಿ ಮಾಡುತ್ತಿದ್ದು, ಈ ಸದಸ್ಯರಿಗೆ ಸರ್ಕಾರ ಬಂದಾಗ ಸಾಕಷ್ಟು ಯೋಜನೆಗಳ ಫಲಾನುಭವಿ ಆಗುವ ಅವಕಾಶ ಸಿಕ್ಕಿದರೆ, ಪ್ರಾಮಾಣಿಕ ಕೆಲಸ ಮಾಡಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಮೇಲುಗೈ ಸಾಧಿಸಲು ಸಾಥ್ ನೀಡಲು ಮನವಿ ಮಾಡಿದರು.
ಸಿ.ಎಸ್.ಪುರ ಹೋಬಳಿ ಬಿಜೆಪಿ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ ಹತ್ತಾರು ಮಂದಿ ಒಟ್ಟಿಗೆ ಚಪ್ಪಾಳೆ ತಟ್ಟಿದರೆ ಅಗಾಧ ಶಬ್ದ ಬರುವಂತೆ ಒಟ್ಟಿಗೆ ಪಕ್ಷ ಕೆಲಸ ಮಾಡಿದರೆ ಹೋಬಳಿಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠ ಆಗಲಿದೆ. ಈ ಸದಸ್ಯತ್ವ ನೋಂದಣಿ ಅಭಿಯಾನ ಸಿ.ಎಸ್.ಪುರ ಹೋಬಳಿಯಲ್ಲಿ ಊಹೆಗೂ ಮೀರಿ ನಡೆಸಬೇಕಿದೆ. ಎಲ್ಲರೂ ಇಂದಿನಿಂದ ನೋಂದಣಿ ಕೆಲಸ ಆರಂಭಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಪ್ರಕಾಶ್, ದಂಡಿನ ಹೋಬಳಿ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡರಾದ ರಘು, ಸದಾಶಿವ, ಕೆಂಪರಾಜು, ಹಿಂಡಿಸ್ಕೆರೆ ಗುರು ಪ್ರಕಾಶ್, ಲೋಕೇಶ್ ಇತರರು ಇದ್ದರು.
