ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು, ಕಾರಿನಲ್ಲಿದ್ದ 7 ಮಂದಿ ಸಾವನ್ನಪ್ಪಿರುವ ಭೀಕರ ಅಪಘಾತ ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ ನಡೆದಿದೆ. ಅರಾವಳಿ ಜಿಲ್ಲೆಯ ಶಾಮಲಾಜಿ ದೇವಸ್ಥಾನಕ್ಕೆ ತೆರಳಿದ್ದವರು ತಮ್ಮೂರಿಗೆ ಮರಳುವಾಗ ದುರ್ಘಟನೆ ನಡೆದಿದೆ.
ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರ ಪ್ರದೇಶದ ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ರಕ್‌ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ 8 ಮಂದಿ ಪೈಕಿ, 7 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದಿದ್ದ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರೆಲ್ಲರೂ ಅಹಮದಾಬಾದ್ ನಿವಾಸಿಗಳು ಎಂದು ಗುರುತಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಅತಿವೇಗವಾಗಿ ಚಲಿಸುತ್ತಿತ್ತು. ಅಲ್ಲದೆ, ಚಾಲಕ ನಿದ್ರೆಯ ಮಂಪರಿನಲ್ಲಿದ್ದರು. ಇದೇ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ.