ಮಲೆಮಹದೇಶ್ವರ ಜಾತ್ರಾ ಮಹೋತ್ಸವದ ವೇಳೆ ಆಗಮಿಸುವ ಭಕ್ತರ ಅನುಕೂಲಕ್ಕೆ ಸಮರ್ಪಕ ಸಿದ್ದತೆ ಕೈಗೊಳ್ಳಿ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ, ದೀಪಾವಳಿ, ಕಾರ್ತಿಕ ಸೋಮವಾರದಂದು ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು.
“ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಪೂರೈಸಬೇಕು. ಸರದಿ ಸಾಲಿನಲ್ಲಿ ದರ್ಶನ ಮಾಡುವ ಭಕ್ತರಿಗೆ ಶಾಮಿಯಾನ ಹಾಕುವ ಮೂಲಕ ನೆರಳಿನ ವ್ಯವಸ್ಥೆ ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಜಾತ್ರೆ ವೇಳೆ ಹೆಚ್ಚು ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುವುದರಿಂದ ತಾತ್ಕಾಲಿಕ ಶೌಚಾಲಯ, ಸ್ನಾನಗೃಹ, ಸಾಮಾಗ್ರಿಗಳನ್ನು ಇಡಲು ಲಗೇಜ್ ಕೌಂಟರ್‌ಗಳನ್ನು ತೆರೆಯಬೇಕು. ಅಂತರಗಂಗೆ ಸ್ನಾನ ಘಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಕ್ರಮ ವಹಿಸಬೇಕು” ಎಂದು ತಿಳಿಸಿದರು.
“ಜಾತ್ರೆ ನಡೆಯುವ ದಿನಗಳಲ್ಲಿ ನಿರಂತರವಾಗಿ ದಾಸೋಹ ಇರಬೇಕು. ಅಡುಗೆ ಮಾಡುವ ಭಕ್ತಾಧಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ದೈನಂದಿನ ದಾಸೋಹದ ಬಳಿ ಮಾಡಲಾಗುತ್ತಿರುವ ನಿರಂತರ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು” ಎಂದು ನಿರ್ದೇಶನ ನೀಡಿದರು.
“ವಾಹನಗಳ ನಿಲುಗಡೆ ಸೌಲಭ್ಯ, ಸುಗಮ ಸಂಚಾರಕ್ಕಾಗಿ ಅವಶ್ಯವಿರುವೆಡೆ ಸೂಚನಾ ಫಲಕ ಅಳವಡಿಕೆ, ಅಗತ್ಯಕ್ಕನುಸಾರವಾಗಿ ಬ್ಯಾರಿಕೇಡ್ ವ್ಯವಸ್ಥೆ ಇರಬೇಕು. ಮದ್ಯ ಮಾರಾಟ ಮತ್ತು ಸಾಗಾಣಿಕೆ ತಡೆಯಲು ತಪಾಸಣಾ ಕೇಂದ್ರಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಜಾತ್ರಾ ಸಮಯದಲ್ಲಿ ಆರೋಗ್ಯ ಇಲಾಖೆ ಹೆಚ್ಚವರಿ ವೈದ್ಯಾಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರ ನೇಮಕಾತಿಗೆ ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ
“ಜಾತ್ರೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ತಾಳಬೆಟ್ಟದಲ್ಲಿಯೂ ಸ್ವಚ್ಚತಾ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರಾಧಿಕಾರದ ರಂಗಮಂದಿರದಲ್ಲಿ ಸಾಂಸ್ಕಂತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕ್ಷೇತ್ರಕ್ಕೆ ಬರಲು ಸಾರಿಗೆ ನಿಗಮದಿಂದ ಹೆಚ್ಚು ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಕ್ಷೇತ್ರದಲ್ಲಿ ಜಾತ್ರಾ ಸಂದರ್ಭದಲ್ಲಿ ಆಹಾರ ಸುರಕ್ಷತೆ ಬಗ್ಗೆ ಗಮನಹರಿಸಬೇಕು” ಎಂದು ಸಂಬಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಸಿ ಪುಟ್ಟರಂಗಶೆಟ್ಟಿ, ಸಾಲೂರು ಶಾಂತಮಲ್ಲಿಕಾರ್ಜುನಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.