ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ನೆರವಿಗೆ ನಿಲ್ಲಬೇಕು ಎಂದು ಕೆ ಆರ್ ಪೇಟೆ ತಾಲೂಕಿನ ಶಾಸಕ ಎಚ್ ಟಿ ಮಂಜು ಹೇಳಿದರು.
ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
“ರೈತರಿಗೆ ಕಷ್ಟ ಬಂದಾಗ, ಹಣದ ಸಮಸ್ಯೆಗಳು ಎದುರಾದಾಗ ಸಹಕಾರ ಸಂಘಗಳು ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಜೀವನಾಡಿಗಳಾಗಬೇಕು. ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಸಹಕಾರಿಗಳಾಗಬೇಕು” ಎಂದರು.

“ಸಹಕಾರಿ ಸಂಘಗಳು ಕೆಲವು ಅಭಿವೃದ್ಧಿ ಹೊಂದಿವೆ, ಇನ್ನೂ ಕೆಲವು ಅಭಿವೃದ್ಧಿ ಹೊಂದುತ್ತಿಲ್ಲ. ಸಹಕಾರಿ ಸಂಘಗಳಲ್ಲಿನ ಲೋಪದೋಷಗಳೇ ಇದಕ್ಕೆ ಕಾರಣ. ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಬೇಕು. ತಾಲೂಕಿನಲ್ಲೇ ನನ್ನ ಹುಟ್ಟೂರಿನ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ವ್ಯವಹಾರದ ಮೂಲಕ ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವುದು ನಿಜಕ್ಕೂ ಸಂತೋಷದ ವಿಚಾರ” ಎಂದು ಹೇಳಿದರು.
“ಸಹಕಾರಿ ಸಂಘಗಳು ಬರಿ ಸಾಲ ಕೊಡುವುದಕ್ಕೇ ಸೀಮಿತವಾಗಿರಬಾರದು. ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ ಔಷಧಗಳು, ಪಹಣಿ ಸೇರಿದಂತೆ ರೈತರಿಗೆ ಸುಗಮವಾಗಿ ಸಿಗುವಂತಹ ಸೌಲಭ್ಯಗಳನ್ನು ನೀಡುವ ಮೂಲಕ ರೈತರಿಗೆ ಸಹಕಾರಿಯಾಗಬೇಕು” ಎಂದು ಸಲಹೆ ನೀಡಿದರು.

“ಸಿಬ್ಬಂದಿಗಳು ಶ್ರಮವಹಿಸಿ ಕೆಲಸ ಮಾಡಬೇಕು. ರೈತರ ಆದಾಯಕ್ಕೆ ತಕ್ಕಂತೆ ರೈತರಿಗೆ ಸಾಲ ನೀಡಿ. ಸಾಲ ಮನ್ನಾದಂತಹ ಕಾರ್ಯಗಳು ನಿಗದಿತ ಸಮಯದಲ್ಲಿ ನೋಡಿಕೊಳ್ಳಬೇಕು. ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿ ಯಾವುದೂ ಹೊರೆಯಾಗದಂತೆ ನೋಡಿಕೊಳ್ಳಬೇಕು. ಇಂದು ಸಹಕಾರಿ ಸಂಘಗಳ ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ದೊಡ್ಡ ಪೈಪೋಟಿ ನಡೆಸುತ್ತಿವೆ. ಆದರೂ ಸಹಕಾರಿ ಸಂಘಗಳನ್ನು ಹಿಂದಕ್ಕೆ ಹಾಕಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದರಿಂದ ಸಹಕಾರಿ ಕ್ಷೇತ್ರ ಗಣನೀಯವಾಗಿ ಬೆಳೆಯುತ್ತಿದೆ” ಎಂದು ಅಭಿಪ್ರಾಯಪಟ್ಟರು.
“ವೃತ್ತಿಪರತೆ ಅಳವಡಿಸಿಕೊಳ್ಳದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಪತ್ತಿನ ಸಂಘಗಳು ಬೆಳೆಯುವುದು ಕಷ್ಟ. ಸಹಕಾರ ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ದತೆ ಮೈಗೂಡಿಸಿಕೊಳ್ಳಬೇಕು” ಎಂದು ತಿಳಿ ಹೇಳಿದರು.
ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್ ಮಾತನಾಡಿ, “ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸಹಕಾರ ಸಂಘಗಳ ಮೂಲಕ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ಸಮಾಜದ ಬಡ, ಮಧ್ಯಮ ವರ್ಗದವರಿಗೆ ಅತಿ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಮಾಡುತ್ತಿರುವ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಸಮಸ್ಯೆಯ ಬಗ್ಗೆ ಡಿ ಕೆ ಶಿವಕುಮಾರ್ ಉಡಾಫೆ ವರ್ತನೆ : ಚಾಮರಸ ಮಾಲಿ ಪಾಟೀಲ್ ಆರೋಪ
ಎಚ್ ಟಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನಿತಾ, ನಿರ್ದೇಶಕರಾದ ಭೈರಾಪುರ ಜೆ ಹರೀಶ್, ರಾಯಸಮುದ್ರ ಪ್ರೇಮಕುಮಾರ್, ಮೈಲನಹಳ್ಳಿ ಮಂಜೇಗೌಡ, ಚಟ್ಟೆನಹಳ್ಳಿ ಮಹದೇವ, ಸಿಂಗಾಪುರ ಬೋರೇಗೌಡ, ಚಟ್ಟೆನಹಳ್ಳಿ ಗೋಪಾಲಶೇಟ್ಟಿ, ನೀತಿಮಂಗಲ ಲೋಕಮಾತೇ, ಲೋಕೇಶಚಾರಿ, ಸರೋಜಮ್ಮ, ಸಂಘದ ಕಾರ್ಯದರ್ಶಿ ಡಿ ಆದರ್ಶ, ಡಿ ಗ್ರೂಪ್ ನೌಕರರಾದ ಆಶಾ, ಅರುಣ್ ಕುಮಾರ್, ಅನುರತಿ, ಗ್ರಾ ಪಂ ಅಧ್ಯಕ್ಷ ಯೋಗೇಶ್, ಸದಸ್ಯೆ ಉಮಾ ಶ್ರೀಧರ್, ಸಂಘದ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮಾಜಿ ಅಧ್ಯಕ್ಷ ಮಹೇಶ್, ಪಿಡಿಒ ಬಸವಶೆಟ್ಟಿ, ಸರಸ್ವತಿ, ಪ್ರತಾಪ್ ಸೇರಿದರಂತೆ ಇತರರು ಇದ್ದರು.
