ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಜಾತಿ ನಿಂದನೆ ಮಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಯಾದಗಿರಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ʼಶಾಸಕ ಮುನಿರತ್ನ ಗುತ್ತಿಗೆದಾರರ ಸಂಭಾಷಣೆಯ ಜೊತೆಯಲ್ಲಿ ಹೆಣ್ಣು ಮಕ್ಕಳ ವಿಷಯವಾಗಿ ಒಕ್ಕಲಿಗ ಹಾಗೂ ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ. ದಲಿತ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಜಾತಿ ನಿಂದನೆ ಮಾಡಿರುವುದು ಖಂಡನೀಯ. ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದವರಿಗೆ ನ್ಯಾಯ ಒದಗಿಸಬೇಕುʼ ಎಂದು ಆಗ್ರಹಿಸಿದರು.
“ಜನಪ್ರತಿನಿಧಿಯಾಗಿ ತಮ್ಮ ಕ್ಷೇತ್ರದ ಎಲ್ಲ ಜಾತಿ-ಜನಾಂಗದ ಒಬ್ಬ ಸೇವಕನಾಗಿ ಕೆಲಸ ಮಾಡಬೇಕು.ಆದರೆ ಶಾಸಕ ಮುನಿರತ್ನ ಕ್ಷೇತ್ರದ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಸಿ ನಿಂದನೆ ಮಾಡಿರುವುದು ಸಮುದಾಯಕ್ಕೆ ಅಘಾತವುಂಟು ಮಾಡಿದೆ. ಕೂಡಲೇ ರಾಜ್ಯ ವಿಧಾನಸಭೆ ಸಭಾಪತಿಗಳು ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ವಿಪಕ್ಷದವರ ರಾಜಕೀಯ ದುರುದ್ದೇಶ ಬಯಲು ಮಾಡುತ್ತೇವೆ: ಸಚಿವ ಪರಮೇಶ್ವರ್
ಈ ಸಂದರ್ಭದಲ್ಲಿ ದಸಂಸ ವಿಭಾಗೀಯ ಸಂಚಾಲಕ ಮಾನಪ್ಪ ಕಟ್ಟಿಮನಿ ಸೇರಿದಂತೆ ಪ್ರಮುಖರಾದ ಗೋಪಾಲ, ಹೊನ್ನಪ್ಪ ನಾಟೆಕಾರ, ಮಲ್ಲಿನಾಥ ಸುಂಗಲಕರ್, ಸೈದಪ್ಪ ಕೊಲ್ಲೂರು, ಬಸವರಾಜ ಕೂಡ್ಲಗಿ, ಜೈಭೀಮ್ ಕೊಲ್ಲೂರ,ರಾಕೇಶ ಬನ್ನೆಟ್ಟಿ, ವಿಶಾಲ ಕೌಳೂರು, ವಿಜಯ ಆಶನಾಳ, ಅಂಬ್ರೀಶ್ ಚಟ್ಟೇರಕರ್, ಬಸವರಾಜ, ರಾಮು ಕೂಳೂರ್, ಮಲ್ಲು ಕಾಗಿ, ಬಸವರಾಜ ಕೂಲೂರ್, ಆನಂದ ಹೊಸಹಳ್ಳಿ, ಭೀಮಣ್ಣ ರಾಕಮಗೇರಾ, ತಿಪಣ್ಣ ಹಳಗೇರಿ, ಬಸವರಾಜ ಮಾಟನೂರ್, ವಸಂತ ಸುಂಗಲಕರ್ ಉಪಸ್ಥಿತರಿದ್ದರು.