ಅನುರ ಅವರ ರಾಜಕೀಯ ಬೆಳವಣಿಗೆಯು 1997ರಲ್ಲಿ ಜೆವಿಪಿಯ ಸಮಾಜವಾದಿ ಯುವ ಸಂಘಟನೆಯ ರಾಷ್ಟ್ರೀಯ ಸಂಘಟಕರಾಗುವುದರಿಂದ ಪ್ರಾರಂಭವಾಯಿತು. ಈ ಮೂಲಕ ಬಂದು 2000ದ ವೇಳೆಗೆ ಅವರು ಸಂಸದರಾಗುತ್ತಾರೆ. ಅಂತಿಮವಾಗಿ 2014ರಲ್ಲಿ JVPಯ ಮುಂದಾಳತ್ವ ವಹಿಸುತ್ತಾರೆ…
ಹಿಂಸಾತ್ಮಕ ಇತಿಹಾಸದ ನೆನಪನ್ನು ಅಳಿಸಿ, ವರ್ಗಸಂಘರ್ಷ ಮತ್ತು ವಾಸ್ತವಿಕತೆಯನ್ನ ಸಮತೋಲನಗೊಳಿಸುತ್ತಾ ಬಂದ ಮಾರ್ಕ್ಸ್‌ವಾದಿ ಅನುರ ಕುಮಾರ ದಿಸ್ಸಾನಾಯಕೆಯವರು ಶ್ರೀಲಂಕಾದ ಅಧ್ಯಕ್ಷರಾಗಿದ್ದು ಹೇಗೆ? ಮಣ್ಣಿನ ಮಗ ಎಂಬ ಹೆಗ್ಗಳಿಕೆ ಮತ್ತು ಏಳು ದಶಕಗಳಿಂದ ಶ್ರೀಲಂಕಾವನ್ನು ಆಳಿದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳೊಂದಿಗಿನ ಅಸಮಾಧಾನವು ಅನುರಾ ಅವರನ್ನು ಗೆಲುವಿನತ್ತ ಚಿಮ್ಮುವಂತೆ ಮಾಡಿತೇ? ಇದೀಗ ಈ ಮಣ್ಣಿನ ಮಗ ಮತ್ತು ಅಧಿಕಾರಕ್ಕೇರಿದ ಹೊಸ ಪಕ್ಷವು ಹೇಗೆ ದೊಡ್ಡ ವೇದಿಕೆಗೆ ಹೊಂದಿಕೊಳ್ಳುತ್ತೆ ಎಂಬುದರ ಮೇಲೆನೆ ಎಲ್ಲರ ದೃಷ್ಟಿ ನೆಟ್ಟಿದೆ.
ಇದೀಗ ಶ್ರೀಲಂಕಾದ ರಾಜಕೀಯ ಪರಿವರ್ತನೆಯ ಸಂಕೇತವಾಗಿ 55 ವರ್ಷದ ಅನುರ ಕುಮಾರ ದಿಸ್ಸಾನಾಯಕೆ ಅವರು ಹೊರಹೊಮ್ಮಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದು, ಆ ನೆಲದ ಜನಹಿತ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಗೊಂಡು ದೇಶದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಚುನಾವಣೆಯಲ್ಲಿ ಅನುರ ಅವರು 42.31% ಮತಗಳನ್ನು ಗಳಿಸಿದರೆ, ಸಮೀಪ ಸ್ಪರ್ಧಿ ಸಜಿತ್ ಪ್ರೇಮದಾಸ ಅವರು 32.71% ಮತಗಳನ್ನು ಪಡೆದಿದ್ದಾರೆ. ಮತ್ತು ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಕೇವಲ 17.27% ಗಳಿಸಿ ಅಧಿಕಾರದಿಂದಲೇ ಹೊರಗುಳಿದಿದ್ದಾರೆ.
ನವೆಂಬರ್ 24, 1968ರಂದು ಗಲೇವೆಲಾದಲ್ಲಿ ಜನಿಸಿದ ಅನುರಾ ಕುಮಾರ ಅವರ ಆರಂಭಿಕ ಜೀವನವು ಶ್ರೀಲಂಕಾದ ಮಾತೃ ಭೂಮಿಯ ಹೋರಾಟದೊಂದಿಗೆ ಆಳವಾಗಿ ಗುರುತಿಸಲ್ಪಟ್ಟಿದೆ. ಇವರ ಬದುಕು ಬಹುಸಂಖ್ಯಾತ ಸಿಂಹಳೀಯ ಬೌದ್ಧ ರಾಜಕೀಯದಲ್ಲಿ ಬೇರೂರಿರುವ ಇತರ ಅನೇಕ ರಾಜವಂಶದ ಅಥವಾ ಶ್ರೀಮಂತ ನಾಯಕರಂತಲ್ಲ, ಹಾಗೇ ಆ ಮೇಲ್ವರ್ಗದ ಗುರುತು ಅಥವಾ ಶೈಕ್ಷಣಿಕ ಹಿನ್ನೆಲೆಯುಳ್ಳ ಕುಟುಂಬದಿಂದಲೂ ಬಂದವರಲ್ಲ.
ಅನುರ ಕುಮಾರ ದಿಸ್ಸಾನಾಯಕರ ಉದಯ
ಅನುರ ಅವರ ರಾಜಕೀಯ ಬೆಳವಣಿಗೆಯು 1997ರಲ್ಲಿ ಜೆವಿಪಿಯ ಸಮಾಜವಾದಿ ಯುವ ಸಂಘಟನೆಯ ರಾಷ್ಟ್ರೀಯ ಸಂಘಟಕರಾಗುವುದರಿಂದ ಪ್ರಾರಂಭವಾಯಿತು. ಈ ಮೂಲಕ ಬಂದು 2000ರ ಹೊತ್ತಿಗೆ ಅವರು ಸಂಸದರಾಗುತ್ತಾರೆ. ಅಂತಿಮವಾಗಿ 2014ರಲ್ಲಿ JVPಯ ಮುಂದಾಳತ್ವ ವಹಿಸುತ್ತಾರೆ. ಇದಲ್ಲದೆ ಶ್ರೀಲಂಕಾದ ಗ್ರಾಮೀಣ ಕೃಷಿ ವಲಯದಲ್ಲಿನ ಇವರ ಹಿನ್ನೆಲೆಯಿಂದಾಗಿ ದೇಶದ ಕಾರ್ಮಿಕ ವರ್ಗದೊಂದಿಗೆ ಅಪಾರವಾದ ಸಂಪರ್ಕ ಹೊಂದಿದ್ದರು. ಈ ಮೂಲಕ ಸಂಘಟನೆಯಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡರು. ಜತೆಗೆ ರಾಜಕೀಯದಿಂದಲೂ ಪ್ರತ್ಯೇಕವಾಗುಳಿದಿದ್ದರು.

1990ರ ದಶಕದ ಆರಂಭದಲ್ಲಿ ಅನುರಾ ಅವರು ವಿಶ್ವವಿದ್ಯಾನಿಲಯದಲ್ಲಿದ್ದಾಗ, ಆಗಿನ ರಾಜಕೀಯ ಬೆಳವಣಿಗೆಯು ಅನುರಾ ಅವರನ್ನ ಜನತಾ ವಿಮುಕ್ತಿ ಪೆರಮುನಾ ಎಂಬ ಸಂಘಟನೆಗೆ ಸೆಳೆಯಿತು, ಇದು ಎಡಪಂಥೀಯ ಮಾರ್ಕ್ಸ್‌ವಾದಿ ಲೆನಿನಿಸ್ಟ್ ಪಕ್ಷವಾಗಿದ್ದು, ಈ ಪಕ್ಷವು 1971 ಮತ್ತು 1987-89ರಲ್ಲಿ ಸಶಸ್ತ್ರ ದಂಗೆಗಳಿಂದಲೇ ನಿರೂಪಿಸಲ್ಪಟ್ಟಿದೆ ಮತ್ತು ತುಳಿತಕ್ಕೊಳಗಾದ ಸಿಂಹಳೀಯ ಗ್ರಾಮೀಣ ಯುವಕರನ್ನು ಪ್ರತಿನಿಧಿಸುವ ಪಕ್ಷವೂ ಆಗಿತ್ತು. JVP ನೇತೃತ್ವದ ಹಿಂಸಾತ್ಮಕ ದಂಗೆಗಳೆಲ್ಲವೂ ಅಸ್ತಿತ್ವದಲ್ಲಿರುವ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಉರುಳಿಸುವ ಗುರಿಯನ್ನು ಹೊಂದಿತ್ತು ಇದಕ್ಕೆ ಪ್ರೇರಣೆ ಕಠಿಣವಾದ ಮಾರ್ಕ್ಸ್‌ವಾದಿ ಸಿದ್ಧಾಂತವೇ ಆಗಿತ್ತು. ಇಂಥವುಗಳನ್ನು ಅವರು ಶೋಷಣೆ ಮತ್ತು ಊಳಿಗಮಾನ್ಯವೆಂದೇ ಪರಿಗಣಿಸಿದ್ದರು.
ಆದರೆ, ರಾಜಕೀಯ ನಾಯಕರಾಗಿ ಅನುರ ಅವರ ವಿಕಸನವು, ಜೆವಿಪಿ ಯು ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಸ್ಥಳಾಂತರಗೊಂಡಾಗಲೇ ಸಂಭವಿಸಿದ್ದು, ಅಂದರೆ ಮಾರ್ಕ್ಸ್‌ವಾದಿ ಸೈದ್ಧಾಂತಿಕ ಬೇರುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ರಾಜಕೀಯ ವಾಸ್ತವಗಳಿಗೆ ಹೊಂದಿಕೊಂಡು ಮುನ್ನಡೆಯಲು ಜೆವಿಪಿ ಆಗ ನಿರ್ದರಿಸಿತ್ತು.

ಅನುರ ಕುಮಾರ ದಿಸ್ಸಾನಾಯಕರ ಉದಯ
ಅನುರ ಅವರ ರಾಜಕೀಯ ಬೆಳವಣಿಗೆಯು 1997ರಲ್ಲಿ ಜೆವಿಪಿಯ ಸಮಾಜವಾದಿ ಯುವ ಸಂಘಟನೆಯ ರಾಷ್ಟ್ರೀಯ ಸಂಘಟಕರಾಗುವುದರಿಂದ ಪ್ರಾರಂಭವಾಯಿತು. ಈ ಮೂಲಕ ಬಂದು 2000ರ ಹೊತ್ತಿಗೆ ಅವರು ಸಂಸದರಾಗುತ್ತಾರೆ. ಅಂತಿಮವಾಗಿ 2014ರಲ್ಲಿ JVPಯ ಮುಂದಾಳತ್ವ ವಹಿಸುತ್ತಾರೆ. ಇದಲ್ಲದೆ ಶ್ರೀಲಂಕಾದ ಗ್ರಾಮೀಣ ಕೃಷಿ ವಲಯದಲ್ಲಿನ ಇವರ ಹಿನ್ನೆಲೆಯಿಂದಾಗಿ ದೇಶದ ಕಾರ್ಮಿಕ ವರ್ಗದೊಂದಿಗೆ ಅಪಾರವಾದ ಸಂಪರ್ಕ ಹೊಂದಿದ್ದರು. ಈ ಮೂಲಕ ಸಂಘಟನೆಯಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡರು. ಜತೆಗೆ ರಾಜಕೀಯದಿಂದಲೂ ಪ್ರತ್ಯೇಕವಾಗುಳಿದಿದ್ದರು.
JVP ಯ ಹಿಂದಿನ ಹಿಂಸಾತ್ಮಕ ದಂಗೆಗಳ ನಂತರ 1971ರಲ್ಲಿ ಮತ್ತು 1980ರ ದಶಕದ ಉತ್ತರಾರ್ಧದಲ್ಲಿ, ಅದು ಸರ್ಕಾರದಿಂದಲೇ ಕ್ರೂರವಾಗಿ ಹತ್ತಿಕ್ಕಲ್ಪಟ್ಟಿತ್ತು. ಇದು ರಾಷ್ಟ್ರದ ಮೇಲೆ ಆಳವಾದ ಗಾಯವನ್ನು ಉಂಟುಮಾಡಿತ್ತು. ಈ ಘಟನೆಗಳಿಂದಾಗಿ ಜೆವಿಪಿ ಪಕ್ಷ ಅನೇಕ ವರ್ಷಗಳವರೆಗೆ ಆಡಳಿತಕ್ಕಿಂತಲೂ ಹೆಚ್ಚಾಗಿ ಉಗ್ರಗಾಮಿತ್ವ ಮತ್ತು ರಕ್ತಪಾತದೊಂದಿಗೆ ಹೆಚ್ಚಿನ ಸಂಬಂಧ ಹೊಂದಿತ್ತು. ಆದರೆ 2014ರಲ್ಲಿ ಅನುರ ಅವರು ನಾಯಕತ್ವ ವಹಿಸಿಕೊಂಡಾಗಲೇ ಪಕ್ಷಕ್ಕೆ ಮಹತ್ವದ ತಿರುವು ಬಂದಿದ್ದು. 1989ರ ದಂಗೆಯ ಬೂದಿಯಿಂದ JVPಗೆ ಹೊಸ ರೂಪ ಕೊಡುವ ಮೂಲಕ, ಮಾರ್ಗದರ್ಶನ ನೀಡಿ, ಸಶಸ್ತ್ರ ಹೋರಾಟದಿಂದ ಸಂಸದೀಯ ರಾಜಕೀಯಕ್ಕೆ ಪಕ್ಷದ ಇಮೇಜ್ ಅನ್ನು ಆಧುನೀಕರಿಸುವ ಮೂಲಕ, ಯುವ ಮತದಾರರಿಗೆ ಅದರ ಆಕರ್ಷಣೆಯನ್ನು ವಿಸ್ತರಿಸುತ್ತಾ JVPಯನ್ನು ಮರುನಾಮಕರಣ ಮಾಡಿದ ಕೀರ್ತಿ ಅನುರ ಅವರಿಗೆ ಸಲ್ಲುತ್ತದೆ. ಮತ್ತು ಈ ಮೂಲಕ ಭ್ರಷ್ಟಾಚಾರ ಮತ್ತು ಕೊಳಕು ರಾಜಕೀಯ ವಿರುದ್ಧ ಧ್ವನಿಯಾಗಿ ಊಳಿಗಮಾನ್ಯ ಪದ್ಧತಿ ಮತ್ತು ಸಾಮ್ರಾಜ್ಯಶಾಹಿತ್ವವನ್ನು ತೊಡೆದುಹಾಕಲು JVP ತನ್ನನ್ನು ತಾನು ವರ್ಗ-ಆಧಾರಿತ ಚಳುವಳಿಯಾಗಿ ಕಾಣಿಸಿಕೊಂಡಿದೆ. ಹೀಗೆ ಆರ್ಥಿಕ ಸಮಸ್ಯೆಗಳ ಮೇಲೆ, ವಿಶೇಷವಾಗಿ ಶ್ರೀಲಂಕಾದ ಗ್ರಾಮೀಣ ಮತ್ತು ಕಾರ್ಮಿಕ-ವರ್ಗದ ಜನಜೀವನದ ಮೇಲೆ ಅನುರಾ ಅವರ ಗಮನವು ಆಳವಾಗಿ ಪ್ರತಿಧ್ವನಿಸಿತು.
2010 ಮತ್ತು 2020 ರ ಆರಂಭದಲ್ಲಿ ಅನುರಾ ಅವರ ಉಮೇದುವಾರಿಕೆಯು ಶ್ರೀಲಂಕಾದ ರಾಜಕೀಯ ಗಣ್ಯರ ವ್ಯಾಪಕವಾದ ಕೋಪಕ್ಕೆ ಗುರಿಯಾಗಿತ್ತು. ಯಾಕಂದ್ರೆ ದೇಶದ ಆರ್ಥಿಕ ಕುಸಿತ, ಗಗನಕ್ಕೇರುತ್ತಿರುವ ಹಣದುಬ್ಬರ , ಆಹಾರದ ಕೊರತೆ ಮತ್ತು ಹೆಚ್ಚುತ್ತಿರುವ ಸಾಲಗಳಿಂದಾಗಿ ದೇಶವು ಬೃಹತ್ ಪ್ರತಿಭಟನೆಗಳಿಗನ್ನ ಎದುರಿಸುವಂತಾಯ್ತು. ಕೊನೆಗೆ 2022 ರಲ್ಲಿ ಪ್ರಬಲ ರಾಜಪಕ್ಸೆ ಕುಟುಂಬದ ಪತನವೂ ಈ ಬೃಹತ್ ಪ್ರತಿಭಟನೆಗಳಿಂದಲೇ ಆಗೋಯ್ತು. ಮುಂದೆ ಇದು ಶ್ರೀಲಂಕಾದ ರಾಜಕೀಯದಲ್ಲೇ ಒಂದು ನಿರ್ವಾತವನ್ನು ಸೃಷ್ಟಿಸಿತು, ಈ ಎಲ್ಲದರ ಹಿಂದೆ ಅನುರಾ ಅವರ ಭ್ರಷ್ಟಾಚಾರ-ವಿರೋಧಿ ಮತ್ತು ರಾಜಕೀಯ ಸುಧಾರಣೆಯ ವೇದಿಕೆಯು ದಣಿದ ಮತದಾರರನ್ನು ಬಡಿದೆಬ್ಬಿಸಿದ್ದವು.
ಇದೀಗ ಶ್ರೀಲಂಕಾದಲ್ಲಿಯೇ ಮೊದಲ ಬಾರಿಗೆ ಮಾರ್ಕ್ಸ್‌ವಾದಿ ಪಕ್ಷವು ಶ್ರೀಲಂಕಾವನ್ನ ಮುನ್ನಡೆಸುತ್ತಿದೆ. ಇದು ಹಿಂದೊಮ್ಮೆ ರಾಜಕೀಯ ಅಂಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಪಕ್ಷದ ಗಮನಾರ್ಹವಾದ ರೂಪಾಂತರವಾಗಿದೆ. ಜೆವಿಪಿ ನಿಜವಾಗಿಯೂ ಇಷ್ಟೊಂದು ವಿಕಸನಗೊಂಡಿತೇ ಎಂಬುದು ಈಗ ಅನೇಕರ ಜಿಜ್ಞಾಸೆಯಾಗಿದೆ. ಇದಕ್ಕೆ ಅನೇಕರು ಭಿನ್ನ ಅಭಿಪ್ರಾಯಗಳನ್ನೆ ಕೊಟ್ಟಿದ್ದಾರೆ. ಕೆಲವರು ಆಡಳಿತ ನಡೆಸಲು ಪಕ್ಷ ಇನ್ನು ಕೂಡಾ ಸಿದ್ದವಾಗಿದೆಯೇ ಎಂಬುದರ ಬಗ್ಗೆ ಅನುಮಾನಿಸಿದರೆ ಇನ್ನೊಂದು ಕಡೆ ಅದರ ಅಂತರ್ಗತ ಉಗ್ರಗಾಮಿ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ, ಆದರೆ ಇನ್ನೂ ಕೆಲವರು ತುಂಬಾ ಆಶಾದಾಯಕವಾಗಿಯೇ ಇದ್ದಾರೆ, ಹಾಗಾಗಿ JVPಯ ಹಿಂದಿನ ಹಿಂಸಾ ರೂಪಕ್ಕಿಂತಲೂ ಹೆಚ್ಚು ಪ್ರಾಯೋಗಿಕ ಮತ್ತು ಮುಖ್ಯವಾಹಿನಿಯ ರಾಜಕೀಯ ಶಕ್ತಿಗೆ ಕ್ರಮೇಣ ಬದಲಾವಣೆ ಸಂಭವಿಸಲೆಂದೇ ಜನ ನೋಡುತ್ತಿದ್ದಾರೆ.
ವರದಿಗಳು ಹೇಳುವಂತೆ ಕೊಲಂಬೊದಲ್ಲಿ ನೆಲೆಸಿರುವ ಒಬ್ಬ ಹಿರಿಯ ಬರಹಗಾರ ಮತ್ತು ಕಟ್ಟಾ ರಾಜಕೀಯ ವಿಮರ್ಶಕರೊಬ್ಬರು, ಅನಾಮಧೇಯತೆಯ ಷರತ್ತಿನ ಮೇಲೆ, ಮಾತಾಡುವಾಗ ಹೇಳಿದ್ದೇನೆಂದರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಿಕೊಳ್ಳುವಲ್ಲಿ ಜೆವಿಪಿ ಕಾರ್ಯಕರ್ತರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂಬುದರ ಬಗ್ಗೆ ತನಗೆ ಸುಳಿವು ಇಲ್ಲ ಎಂದಿದ್ದರು. ಮುಂದೆ ಹೇಳುತ್ತಾರೆ “ಜೆವಿಪಿ ಪಕ್ಷ ಬೇರೆ ಯಾವುದೇ ಪಕ್ಷಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿದೆ. ಅವರ ಹಿಂದಿನ ರೆಜಿಮೆಂಟೆಡ್ ಸಂಸ್ಕೃತಿಯೊಳಗೆ, ಸಂಪೂರ್ಣವಾಗಿ ಪ್ರಜಾಪ್ರಭುತ್ವವಿಲ್ಲ, ಹಾಗಾಗಿ ಅವರು ಟೀಕೆಗಳನ್ನು ಸಹಿಸುವುದಿಲ್ಲ. ಯಾಕಂದ್ರೆ ನಾನು ಇದನ್ನು ದೆಹಲಿಯ ಪತ್ರಿಕೆಯೊಂದಕ್ಕೆ ಹೇಳಿದಕ್ಕೆ ಈಗ ನನ್ನ ಸುರಕ್ಷತೆಯ ಬಗ್ಗೆ ಚಿಂತಿಸಲು ಕಾರಣವಾಗಿದೆ. ”ಎಂದು ಅವರು ಹೇಳಿದರು.
ಅನುರಾ ಮತ್ತು ಜೆವಿಪಿ, ಚೀನಾ ಮತ್ತು ಭಾರತದೊಂದಿಗೆ ಹಂಚಿಕೊಳ್ಳುವ ಸಂಬಂಧ ಮತ್ತೊಂದು ಕುತೂಹಲಕಾರಿ ವಿಷಯವಾಗಿದೆ. ಜೆವಿಪಿಯು 1960ರ ದಶಕದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಶ್ರೀಲಂಕಾ (CPSL) ದೊಳಗಿನ ಒಂದು ವಿಭಜಿತ ಗುಂಪಿನಿಂದ ಹುಟ್ಟಿಕೊಂಡಿತ್ತು. ವಿಶೇಷವಾಗಿ ಅದರ ಚೀನಾ-ಪರ ಬಣದಿಂದಲೇ ಅದಾಗಿತ್ತು, ಜಾಗತಿಕ ಕಮ್ಯುನಿಸ್ಟ್ ಚಳುವಳಿಯು ಎರಡು ಪ್ರಮುಖ ಬಣಗಳ ನಡುವೆ ವಿಭಜನೆಗೊಂಡ ಅವಧಿಯಲ್ಲಿ- ಒಂದು ಸೋವಿಯತ್ ಒಕ್ಕೂಟದೊಂದಿಗೆ ಹೊಂದಿಕೊಂಡಿತ್ತು, ಇದು ಹೆಚ್ಚು ಸುಧಾರಣಾವಾದಿ ಮತ್ತು ಸಂಸದೀಯ ಸಮಾಜವಾದಿ ಸ್ವಭಾವವನ್ನು ಹೊಂದಿತ್ತು. ಹಾಗೇ ಇನ್ನೊಂದು ಗುಂಪು ಚೀನಾದೊಂದಿಗಿತ್ತು, ಅಂದರೆ ಕ್ರಾಂತಿಕಾರಿ ಹೋರಾಟ ಮತ್ತು ಮಾವೋವಾದಿ ತತ್ವಗಳನ್ನು ಅದು ಪ್ರತಿಪಾದಿಸಿತ್ತು.
ಅನುರಾ ಮತ್ತು JVPಯ ಮಾರ್ಕ್ಸ್‌ವಾದಿ ಬೇರುಗಳು ಮತ್ತು ಅದರ ಚೀನಾ ಪರವಾದ ಮೂಲಗಳು ಈಗ ಅವರ ನಾಯಕತ್ವದಲ್ಲಿ ಚೀನಾದೊಂದಿಗೆನೆ ಸಂಭಾವ್ಯ ನಿಕಟ ಸಂಬಂಧಗಳ ಬಗ್ಗೆ ಊಹಾಪೋಹಗಳಿಗೆ ಉತ್ತೇಜನ ನೀಡುತ್ತಿವೆ. ಆದಾಗ್ಯೂ, JVP ಈ ಹಿಂದೆ ಆಕ್ರಮಣಕಾರಿ ಭಾರತೀಯ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದರೂ ಸಹ, ಅನುರಾ ಅವರು ಈಗಾಗಲೇ ಭಾರತದೊಂದಿಗೆ ಸಮತೋಲಿತ ವಿದೇಶಿ ಸಂಬಂಧಗಳ ಕುರಿತು ಸೂಚನೆ ಕೊಟ್ಟಿದ್ದಾರೆ.
ಭಾರತದೊಂದಿಗೆ JVPಯ ಕೆಟ್ಟ ಇತಿಹಾಸ
1980 ರ ದಶಕದ ಉತ್ತರಾರ್ಧದಲ್ಲಿ JVP ದಂಗೆಗಳ ಸಮಯದಲ್ಲಿ, ಶ್ರೀಲಂಕಾದಲ್ಲಿ ಭಾರತೀಯ ಹಸ್ತಕ್ಷೇಪವನ್ನು JVP ಪಕ್ಷವು ತೀವ್ರವಾಗಿ ವಿರೋಧಿಸಿತು, ವಿಶೇಷವಾಗಿ ತಮಿಳು ಪ್ರತ್ಯೇಕತಾವಾದಿಗಳನ್ನು ದಮನಮಾಡಲು ಸಹಾಯ ಮಾಡಲೆಂದೇ ಕಳುಹಿಸಲಾದ ಭಾರತೀಯ ಶಾಂತಿ ಪಾಲನಾ ಪಡೆ (IPKF) ಉಪಸ್ಥಿತಿಯ ಕುರಿತು ಅದು ವಿರೋಧಿಸಿತ್ತು. ವಾಸ್ತವವಾಗಿ, JVP ಈ ಅವಧಿಯಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಸರಕುಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ಪ್ರಚಾರಗಳನ್ನು ಕೂಡಾ ಆಯೋಜಿಸಿತು, ಇದರಲ್ಲಿ ಕೆಲವು ಹಿಂಸಾತ್ಮಕವಾಗಿಯೂ ಕೂಡಿತ್ತು. ಇದಕ್ಕಾಗಿ1989 ರಲ್ಲಿ ಭಾರತೀಯ ಪ್ರಭಾವದ ಬೆಂಬಲಿಗರು ಎಂದು ಭಾವಿಸಲಾದ ವ್ಯಕ್ತಿಗಳನ್ನ ಮತ್ತು ಅವರ ಸಂಸ್ಥೆಗಳ ವಿರುದ್ಧ ಹಿಂಸಾತ್ಮಕ ಅಭಿಯಾನದ ಭಾಗವಾಗಿ, ಅಲ್ಲಿನ ಔಷಧೀಯ ಕಂಪನಿ ಮುಖ್ಯಸ್ಥನೊಬ್ಬನ ಹತ್ಯೆ ಮಾಡಿತ್ತು. ಈ ಮೂಲಕ ಶ್ರೀಲಂಕಾದಲ್ಲಿ JVP ಐತಿಹಾಸಿಕವಾಗಿ ಭಾರತ-ವಿರೋಧಿಯಾಗಿಯೇ ಕಾಣಿಸಿಗೊಂಡಿತ್ತು. ಅದರಲ್ಲೂ 1980ರ ದಶಕದ ಉತ್ತರಾರ್ಧದಲ್ಲಿ, ಭಾರತದ ಔಷಧಿಗಳು ಮತ್ತು ಇತರ ವಸ್ತುಗಳು ಸೇರಿದಂತೆ ಭಾರತೀಯ ಆಮದುಗಳ ವಿರುದ್ಧ ಅಭಿಯಾನವನ್ನೇ ನಡೆಸಿದ್ದರು.

“ಆದಾಗ್ಯೂ, ಈ ನಿಲುವುಗಳು JVPಯ ಪ್ರಸ್ತುತ ನೀತಿಗಳನ್ನ ವ್ಯಾಖ್ಯಾನಿಸದಿರಬಹುದು. ಪಕ್ಷವು ಈಗ ಪ್ರಬುದ್ಧವಾಗಿದೆ, ವಿಶ್ವ ನಾಯಕರೊಂದಿಗೆ ತೊಡಗಿಸಿಕೊಳ್ಳುವ ಮತ್ತು ಜಾಗತಿಕ ಕ್ರಮಕ್ಕೆ ಹೊಂದಿಕೊಳ್ಳುವ ಮಹತ್ವವನ್ನು ಗುರುತಿಸಿಕೊಂಡಿದೆ. ಅನುರಾ ಅವರು ಕೆಲವು ತಿಂಗಳ ಹಿಂದೆ ಅಂದರೆ ಫೆಬ್ರವರಿ 2024ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದರು. ಇದು ಜೆವಿಪಿಯು ಇತ್ತೀಚಿನ ವರ್ಷಗಳಲ್ಲಿ ವಿಶಾಲವಾದ, ಹೆಚ್ಚು ಪ್ರಾಯೋಗಿಕ ವಿಧಾನವನ್ನೇ ಅನುಸರಿಸುತ್ತಿರುವ ಸೂಚನೆ ಎನ್ನಬಹುದು. ಆಧುನಿಕ ಜಗತ್ತಿನಲ್ಲಿ, ರಾಜಕೀಯ ಕಲಿಕೆ ಮತ್ತು ತಿದ್ದುಪಡಿಗಳು ಅತ್ಯಗತ್ಯ, ಮತ್ತು ಜೆವಿಪಿ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದೆ ಎಂದು ಹೇಳಬಹುದು.
ಜೆವಿಪಿ ಪಕ್ಷವು ತಮಿಳು ರಾಷ್ಟ್ರೀಯತೆ ಮತ್ತು LTTEಯೊಂದಿಗೆ ಸಂಕೀರ್ಣವಾದ, ಆಗಾಗ್ಗೆ ವಿರೋಧಾತ್ಮಕ ಸಂಬಂಧವನ್ನೇ ಹೊಂದಿದೆ. JVP ಆರಂಭಿಕ ವರ್ಷಗಳಲ್ಲಿ ತನ್ನನ್ನು ಒಂದು ವರ್ಗ-ಆಧಾರಿತ ಚಳವಳಿಯಾಗಿ ನೋಡಿದಾಗ, ಅದು ಶ್ರೀಲಂಕಾದಲ್ಲಿ ತಮಿಳು ಸ್ವಾಯತ್ತತೆಯ ಬೇಡಿಕೆಗಳೊಂದಿಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡಿರಲಿಲ್ಲ. ಯಾಕಂದ್ರೆ ತಮಿಳು ರಾಷ್ಟ್ರೀಯತೆಯ ಅದರ ಆರಂಭಿಕ ಹಂತದಲ್ಲಿದ್ದ ಅವಧಿ ಅದಾಗಿತ್ತು. 1980ರ ದಶಕದಲ್ಲಿ, ತಮಿಳು ಬಂಡುಕೋರರು ಹೊರಹೊಮ್ಮಿದಾಗ, ಅದು ತಮಿಳು ಸಮಸ್ಯೆಯನ್ನು ವರ್ಗ ಹೋರಾಟದ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ನೋಡುವುದರ ಜೊತೆಗೆ ಯಾವುದೇ ರೀತಿಯ ಪ್ರತ್ಯೇಕತಾವಾದವನ್ನು ವಿರೋಧಿಸುವ ಏಕೀಕೃತ ರಾಜ್ಯಕ್ಕಾಗಿಯೂ ಪ್ರತಿಪಾದಿಸಿತ್ತು. ಜೆವಿಪಿಯು ತಮಿಳು ದಂಗೆಯ ವಿರುದ್ಧ ದೃಢವಾದ ರಾಷ್ಟ್ರೀಯತಾವಾದಿ ನಿಲುವನ್ನು ಅಳವಡಿಸಿಕೊಂಡಿತು, ಸ್ವತಂತ್ರ ತಮಿಳು ಈಳಮ್ಗಾಗಿನ LTTEಯ ಬೇಡಿಕೆಗಳನ್ನು ಬಲವಾಗಿ ವಿರೋಧಿಸಿತು. ಹಾಗಾಗಿ ಪಕ್ಷವು ಎಲ್‌ಟಿಟಿಇಯನ್ನು ಕೇವಲ ಜನಾಂಗೀಯ ಪ್ರತ್ಯೇಕತಾವಾದಿ ಗುಂಪು ಎಂದು ಪರಿಗಣಿಸದೆ ದೇಶವನ್ನು ಛಿದ್ರಗೊಳಿಸುವ ಶಕ್ತಿಯಾಗಿ ನೋಡಲಾರಂಭಿಸಿತು. ಹೀಗಾಗಿಯೇ ಜೆವಿಪಿಯು 1987ರಲ್ಲಿ ಇಂಡೋ-ಶ್ರೀಲಂಕಾ ಶಾಂತಿ ಒಪ್ಪಂದವನ್ನು ವಿರೋಧಿಸಿತು, ಆದರೆ ತಮಿಳು-ಬಹುಸಂಖ್ಯಾತ ಪ್ರದೇಶಗಳಿಗೆ ಸೀಮಿತ ಸ್ವಾಯತ್ತತೆಯನ್ನು ನೀಡಲು ಪ್ರಯತ್ನಿಸಿತು. ಆದರೆ ಜೆವಿಪಿಯು ಶ್ರೀಲಂಕಾದಲ್ಲಿ ಭಾರತೀಯ ವ್ಯವಹಾರಗಳು ಮತ್ತು ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡ ಅವಧಿಯಲ್ಲಿ ಎಲ್‌ಟಿಟಿಇ ವಿರುದ್ಧದ ಯುದ್ಧವನ್ನು ಜೆವಿಪಿಯು ಬೆಂಬಲಿಸಿತು ಮತ್ತು ಮಿಲಿಟರಿ ಸೋಲನ್ನು ಶ್ರೀಲಂಕಾದ ಪ್ರಾದೇಶಿಕ ಸಮಗ್ರತೆಯ ಮರುಸ್ಥಾಪನೆ ಎಂದೇ ಪರಿಗಣಿಸಿತು.
ಅನುರಾ ಹೇಗೆ ‘ಮಾರ್ಕ್ಸ್‌ವಾದಿ’?
2022ರಲ್ಲಿ ಗೋಟಬ್ಯ ರಾಜಪಕ್ಸೆ ಅವರನ್ನು ಅಧಿಕಾರದಿಂದ ಹೊರಹಾಕಿದ ಬೃಹತ್ ಜನರ ದಂಗೆಯ ಹಿಂದೆ ಅನುರಾ ಅವರೇ ಪ್ರಮುಖ, ಅದೃಶ್ಯ ಪಾತ್ರವನ್ನು ವಹಿಸಿದ್ದರು. ಆ ಸಮಯದಲ್ಲಿ “ಪ್ರಾಯೋಗಿಕ ಮಾರ್ಕ್ಸ್‌ವಾದಿ” ಎಂದೇ ಅವರ ಜೊತೆಗಿದ್ದವರು ಹೇಳಿದ್ದಾರೆ.
ಇತಿಹಾಸಕಾರರ ಪ್ರಕಾರ, ಸ್ಥಾಪಿತ ರಾಜಕೀಯ ಪಕ್ಷಗಳ ವಿಫಲ ನೀತಿಗಳಿಂದಾಗಿ ಜೆವಿಪಿಯು ಪ್ರವರ್ಧಮಾನಕ್ಕೆ ಏರಿದೆ ಎನ್ನುತ್ತಾರೆ. “ಅನುರಾ ಅವರು ದೃಢವಾಗಿ ಮಾರ್ಕ್ಸ್‌ವಾದಿಯಾಗಿ ಉಳಿದಿದ್ದಾರೆಯೇ ಎಂಬುದನ್ನು ಇನ್ನು ನೋಡಬೇಕಾಗಿದೆ. ಐತಿಹಾಸಿಕವಾಗಿ, JVP ಒಂದು ಎಡಪಂಥೀಯ ಸಂಘಟನೆಯಾಗಿದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಅನುರ ಅವರ ರಾಜಕೀಯ ನಿಲುವುಗಳು ಮತ್ತು ಭಾಷಣಗಳು ಕೇಂದ್ರದ ಕಡೆಗೆ ಬದಲಾವಣೆಯನ್ನು ಸೂಚಿಸುತ್ತಿವೆ. ಆದರೆ ಅವರ ನೀತಿಗಳ ಮೂಲಕ ಅವರು ಎಷ್ಟು ‘ಮಾರ್ಕ್ಸ್‌ವಾದಿ’ ಎಂಬುದನ್ನು ಸಮಯವೇ ಹೇಳಬೇಕಾಗಿದೆ”ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.
ಇದನ್ನೂ ಓದಿ ದಿಸ್ಸನಾಯಕೆ | ಶ್ರೀಲಂಕಾದ ರಾಷ್ಟ್ರಾಧ್ಯಕ್ಷನಾದ ಕಚೇರಿ ಸಹಾಯಕನ ಮಗ; ತಮಿಳರ ದ್ವೇಷ ಕೊನೆಗೊಳ್ಳುವುದೆ?
ಈಗ ಅನುರಾ ನೇತೃತ್ವದ ಜೆವಿಪಿಯು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದೆ. ಹಾಗಾಗಿಯೇ ಅದು ತನ್ನ ಬಂಡವಾಳಶಾಹಿ ವಿರೋಧಿ ನಿಲುವನ್ನ ಸಡಿಲಗೊಳಿಸಿದೆ. ಇದರಿಂದ ತನ್ನ ಸಾಮ್ರಾಜ್ಯಶಾಹಿ ವಿರೋಧಿ ವಾಕ್ಚಾತುರ್ಯವನ್ನು ಉಳಿಸಿಕೊಂಡು ಹೆಚ್ಚು ಕೇಂದ್ರೀಕೃತ ವಿಧಾನವನ್ನು ಅಳವಡಿಸಿಕೊಳ್ಳಲು ಹೊರಟಿದೆ. ನಾಯಕರಾಗಿ, ಅನುರಾ ಅವರು ವರ್ಗ ಹೋರಾಟದಂತಹ ಸಾಂಪ್ರದಾಯಿಕ ಮಾರ್ಕ್ಸ್‌ವಾದಿ ಆದರ್ಶಗಳ ಜೊತೆಗೆ ಭ್ರಷ್ಟಾಚಾರ-ವಿರೋಧಿ, ಆಡಳಿತ ಸುಧಾರಣೆ ಮತ್ತು ರಾಷ್ಟ್ರೀಯತೆಯ ಮೇಲೆ ಹೆಚ್ಚು ಕೇಂದ್ರೀಕರಿಸಿಕೊಂಡಿದೆ.
ಆದರೆ, ಅನೂರ ಅವರ ಗೆಲುವು ಸಾಧ್ಯವಾಗಿದ್ದು ಅವರನ್ನ ಪಕ್ಷ, ಮಣ್ಣಿನ ಮಗ ಎಂದು ಬಿಂಬಿಸಿದಕ್ಕಾಗಿ ಆಗಿದೆ ಎನ್ನುತ್ತಾರೆ. ಅಲ್ಲಿ ನಡೆದ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನುರಾ ಅವರ ಮತಗಳು ಶ್ರೀಲಂಕಾವನ್ನು ಏಳು ದಶಕಗಳಿಂದ ಆಳಿದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ವಿರುದ್ಧದ ಪ್ರತಿಭಟನೆಯನ್ನು ಪ್ರತಿನಿಧಿಸುತ್ತವೆ ಎಂದೇ ಗೊತ್ತಾಗುತ್ತದೆ. ಇದು ವ್ಯಾಪಕವಾದ ಸಾರ್ವಜನಿಕ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ”.
ಹೀಗೆ 2009 ರಿಂದ 2024ರವರೆಗೆ, ಸ್ಥಾಪಿತ ರಾಜಕೀಯ ಪಕ್ಷಗಳ ವಿಫಲ ನೀತಿಗಳಿಂದಾಗಿ ಜೆವಿಪಿ ಪ್ರವರ್ಧಮಾನಕ್ಕೆ ಏರಿದೆ ಮತ್ತು ಅಲ್ಲಿನ ಯುನೈಟೆಡ್ ನ್ಯಾಶನಲ್ ಪಾರ್ಟಿ (UNP) ಯೊಳಗಿನ ವಿಭಜನೆಯಿಂದಾಗಿಯು ಜೆವಿಪಿಯ ಗೆಲುವು ಸುಗಮವಾಗಿದೆ. ಯಾಕಂದ್ರೆ ಅಲ್ಲಿ ಒಮ್ಮೆ ಒಂದೇ ರಾಜಕೀಯ ಬಣದ ಭಾಗವಾಗಿದ್ದ ರಾನಿಲ್ ವಿಕ್ರಮಸಿಂಘೆ ಮತ್ತು ಸಜಿತ್ ಪ್ರೇಮದಾಸ ಚುನಾವಣೆಯಲ್ಲಿ ಪರಸ್ಪರರ ವಿರುದ್ಧವಾಗಿ ಸ್ಪರ್ಧಿಸಿದ್ದರು. ಈ ಒಡಕು ಇಲ್ಲದಿರುತ್ತಿದ್ದರೆ ಇಲ್ಲಿ ಅನೂರರ ಗೆಲುವು ಸಾಧ್ಯವೇ ಇರಲಿಲ್ಲ,” ಎಂಬುದೇ ರಾಜಕೀಯ ತಜ್ಞರ ಅಭಿಪ್ರಾಯ.