ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ಖ್ಯಾತನಾಮ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ 22ನೇ ದಿನವೂ ಮುಂದುವರಿದಿದೆ.
ಈ ನಡುವೆ, ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಆಗ್ರಹಿಸಿ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಕುಸ್ತಿಪಟುಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನು ಒಳಗೊಂಡ ಪೀಠ ʻ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಭದ್ರತೆ ಒದಗಿಸಬೇಕು ಎಂದು ನಿಮ್ಮ ಅರ್ಜಿಯಲ್ಲಿದೆ. ಈ ಎರಡೂ ಬೇಡಿಕೆಗಳ ಕುರಿತಾಗಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ನಿಮ್ಮ ಯಾವುದೇ ಮನವಿಯಿದ್ದರೂ ಹೈಕೋರ್ಟ್ ಅಥವಾ ವ್ಯಾಪ್ತಿಪ್ರದೇಶದ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಬಹುದುʼ ಎಂದು ಹೇಳಿದ ನ್ಯಾಯಪೀಠ ಸದ್ಯಕ್ಕೆ ವಿಚಾರಣಾ ಪ್ರಕ್ರಿಯೆಯನ್ನು ಕೊನೆಗೊಳಿಸುವುದಾಗಿ ತಿಳಿಸಿತು.
ಪ್ರತಿಭಟನಾ ನಿರತ ಕುಸ್ತಿಪಟುಗಳು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಬುಧವಾರ ತಡರಾತ್ರಿ ಸಂಘರ್ಷ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಜಂತರ್ ಮಂತರ್ ಸುತ್ತ ಬಿಗಿ ಭದ್ರತೆ ಆಯೋಜಿಸಲಾಗಿದೆ. ಕುಸ್ತಿಪಟುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಏಪ್ರಿಲ್ 13 ರಿಂದ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿದ್ದಾರೆ.