ಭಾರತೀಯ ಕೃಷಿಕ ಸಮಾಜದ ರೈತ ಮುಖಂಡರು ಹಾಗೂ ಬೆಳಗಾವಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘಟನೆಗಳು ಬೆಳಗಾವಿ ನಗರದಲ್ಲಿರುವ ಹೂ, ಹಣ್ಣು,ಹುಣಸೆ ಹಣ್ಣು, ಬಾಳೆಹಣ್ಣು, ಮಾರಾಟ ಮಾಡುತ್ತಿರುವ ಖಾಸಗಿ ಮಾರುಕಟ್ಟೆಗಳನ್ನು ಎಪಿಎಂಸಿಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಹೂವು ಹಣ್ಣು ಮಾರಾಟ ಮಾಡುತ್ತಿದ್ದು ಎಪಿಎಂಸಿಗೆ ಸ್ಥಳಾಂತರ ಮಾಡಬೇಕು. ಖಾಸಗಿ ಮಾರುಕಟ್ಟೆಯಲ್ಲಿ ರೈತರಿಗೆ ಮೋಸ ಆಗುತ್ತಿದೆ. ದಬ್ಬಾಳಿಕೆ ಆಗುತ್ತಿದೆ. ಕಳೆದ 40 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಕೇವಲ ತರಕಾರಿ ಮಾತ್ರವಲ್ಲ, ಎಲ್ಲವನ್ನೂ ಸರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಎಪಿಎಂಸಿ ನಿರ್ವಹಣೆ ಮಾಡಲು ಸರ್ಕಾರದಿಂದ ಕೃಷಿ ಮಾರುಕಟ್ಟೆ ಇರುವಾಗ ಇದನ್ನು ಖಾಸಗೀಕರಣ ಮಾಡಬಾರದು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ತೂಕದಲ್ಲಿ ಪಾರದರ್ಶಕತೆ ಇರಬೇಕು. ಉಸ್ತುವಾರಿ ಮಾಡುವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಸಂಕೇಶ್ವರದಲ್ಲಿ ತಕ್ಷಣ ಜಿಲ್ಲಾಧಿಕಾರಿಗಳು ಆದೇಶ ಮಾಡಿದ ಹಾಗೆ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಇದೇ ರೀತಿಯ ಹೊರಡಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಸಿದಗೌಡ ಮೋದಗಿ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಶಿವಲಿಲಾ ಮಿಸಾಳೆಯವರು ಮಾತನಾಡಿ, “ರಾಜ್ಯದಲ್ಲಿ ಕೇಂದ್ರದಲ್ಲಿರುವ ಸರಕಾರಗಳಿಗೆ ಸರಕಾರಿ ಸಂಸ್ಥೆಗಳು ಏಕೆ ಬೇಡ? ಖಾಸಗೀಕರಣದಿಂದ ಜನರಿಗೆ ಮೋಸ ಮಾಡುತ್ತಿದ್ದೀರಿ. ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕೋಲಾರ | ಆತಂಕ ಸೃಷ್ಟಿಸಿದ್ದ ಸೆನ್ಸಾರ್ ಸೂಟ್‌ಕೇಸ್; ಲಘು ಸ್ಫೋಟದ ಮೂಲಕ ನಾಶ
ಬೆಳಗಾವಿ ಜಿಲ್ಲಾ ಸಗಟು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘವು ವ್ಯಾಪಾರಸ್ಥರು ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿದ್ದಾರೆ. ನಮ್ಮನ್ನು ನಂಬಿದ ಕುಟುಂಬಗಳು, ಕೂಲಿ ಕಾರ್ಮಿಕರು, ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಅನಧಿಕೃತವಾಗಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಜೀವ ಡೊಂಗರಗಾಂವಿ, ರಮೇಶ ರಾಮಗೊಂಡನ್ನವರ, ಶಂಕರ್ ಡವಳಿ, ಮಲ್ಲಿಕಾರ್ಜುನ ಡೊಗರಗಾಂವಿ, ಶೇಖರ ಅಕ್ಕನ್ನವರ ಹಾಗೂ ಸಗಟು ತರಕಾರಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
