ಬೀದರ್ ಜಿಲ್ಲೆಯ ಭಾಲ್ಕಿ ರಾಚಪ್ಪಾ ಗೌಡಗಾಂವ ಗ್ರಾಮದ ದಲಿತ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಅದೇ ಗ್ರಾಮದ ಸವರ್ಣೀಯ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ʼಸೆ.21ರಂದು ರಾಚ್ಚಪ್ಪಾ ಗೌಡಗಾಂವ ಗ್ರಾಮದ ಪರಿಶಿಷ್ಟ ಜಾತಿಯ ಬಡ ಮಹಿಳೆಯೊಬ್ಬರು ತನ್ನ ಜಮೀನಿನೊಳಗೆ ಎಮ್ಮೆ ಮೇಯಿಸಬೇಡಿ ಎಂದು ಹೇಳಿದ ಕಾರಣಕ್ಕೆ ಇಬ್ಬರು ಯುವಕರು ಮಹಿಳೆಗೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಭಾಲ್ಕಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆʼ ಎಂದರು.
ʼಮಹಿಳೆ ಮೇಲೆ ಮಾರಣಾಂತಿಕ ಹಲ್ಲೆಗೈದ ಇಬ್ಬರ ವಿರುದ್ಧ ಮೆಹಕರ್ ಪೊಲೀಸ್ ಠಾಣೆಯಲ್ಲಿ ಸೆ.23ರಂದು ಎಸ್ಸಿ-ಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳ ರಕ್ಷಿಸಲು ಪ್ರಕರಣ ಮುಚ್ಚಿ ಹಾಕಲು ಉದೇಶ ಪೂರ್ವಕವಾಗಿ ಬಂಧಿಸಲು ವಿಳಂಬ ಮಾಡುತ್ತಿದ್ದಾರೆ. ದಲಿತ ಮಹಿಳೆಯು ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಹಿಳೆಗೆ ಯಾರು ಹಲ್ಲೆ ನಡೆಸಿಲ್ಲ, ಕಾಡು ಹಂದಿ ದಾಳಿ ನಡೆಸಿದೆಯೆಂದು ಎಂದು ದಲಿತ ಸಂಘನೆಯ ಕೆಲ ಮುಂಖಡರುಗಳಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆʼ ಎಂದು ಆರೋಪಿಸಿದರು.
ʼಇತ್ತೀಚೆಗೆ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಜನರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ, ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ತಪ್ಪಿಸ್ಥ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ಉಮೇಶಕುಮಾರ್ ಸೋರಳ್ಳಿಕರ್, ರಾಜಕುಮಾರ್ ಮೂಲಭಾರತಿ, ಮಹೇಶ್ ಗೊರನಾಳಕರ್, ಚಂದ್ರಕಾಂತ ನಿರಾಟೆ, ಅಂಬರೀಶ ಕುದುರೆ, ಸಂತೋಷ್ ಎಣಕುರೆ, ರಾಜಕುಮಾರ್ ಗೂನಳ್ಳಿಕರ್, ಬಸವರಾಜ ಮಿಠಾರೆ, ಅಶೋಕ ಸೇರಿದಂತೆ ಇತರರಿದ್ದರು.