ಮೈಸೂರು ಗ್ರಾಮಾಂತರ ಕೂರ್ಗಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಸಂಘದ ನಿರ್ದೇಶಕರೇ ಅವ್ಯವಹಾರ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗ್ರಾಮಸ್ಥರು ಕಾಡಾ ಕಚೇರಿಯ ಸಹಕಾರ ಇಲಾಖೆಗೆ ದೂರು ನೀಡಿದ್ದಾರೆ.
“ಹಾಲು ಉತ್ಪಾದಕರ ಸಂಘದಲ್ಲಿ ಕೂರ್ಗಳ್ಳಿ ಮಹದೇವ್ ಎಂಬುವರು ಹತ್ತು ವರ್ಷಗಳಿಂದ ನಿರ್ದೇಶಕರಾಗಿದ್ದು, ಹಾಲು ಉತ್ಪಾದನೆ ಮಾಡದ ತಮ್ಮದೇ ಕುಟುಂಬದ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅಧಿಕಾರದ ಹಿಡಿತ ಸಾಧಿಸುತ್ತ ಬಂದಿದ್ದಾರೆ. ಅದಲ್ಲದೆ ಹತ್ತು ವರ್ಷಗಳಿಂದ ಸಹಕಾರ ಸಂಘಕ್ಕೆ ಚುನಾವಣೆಯನ್ನೇ ನಡೆಸದಂತೆ ನೋಡಿಕೊಂಡಿದ್ದಾರೆ” ಎಂದು ಆರೋಪಿಸಲಾಗಿದೆ.
“ನಿಜವಾದ ಹಾಲು ಉತ್ಪಾದಕರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲು ಹುನ್ನಾರ ಮಾಡಿದ್ದು,
ಸುಮಾರು 180ಕ್ಕೂ ಹೆಚ್ಚು ಸದಸ್ಯರನ್ನು ಉದ್ದೇಶ ಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಳೆದ ಹತ್ತು ವರ್ಷಗಳಿಂದ ಹಾಲು ಉತ್ಪಾದಕರ ಸಂಘದಲ್ಲಿ ಅಭಿವೃದ್ಧಿಯ ಕೆಲಸಗಳಾಗಿಲ್ಲ. ರೈತರಿಗೆ ಅನ್ಯಾಯವಾಗುತ್ತಿದೆ. ವಾಮ ಮಾರ್ಗದಲ್ಲಿ ಅಧಿಕಾರದ ಹಿಡಿತ ಸಾಧಿಸಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಲೋಪ ಸರಿಪಡಿಸಿ, ಮಹದೇವ್ ವಿರುದ್ಧ ತನಿಖೆ ಆದೇಶ ಮಾಡಿದ ನಂತರವೇ ನ್ಯಾಯಸಮ್ಮತ ಚುನಾವಣೆ ನಡೆಸಬೇಕು” ಎಂದು ರವಿಕುಮಾರ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತ ಅಪ್ರಾಪ್ತೆಯರ ಅತ್ಯಾಚಾರ, ಕುಟುಂಬಗಳಿಗೆ ಬಹಿಷ್ಕಾರ; ಸವರ್ಣೀಯರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ
ಗ್ರಾಮದ ರೈತ ಮುಖಂಡ ಕೆ ಎಚ್ ರಾಜೇಂದ್ರ, ಕೃಷ್ಣ ಎಸ್, ಮಲ್ಲಿಕಾರ್ಜುನ, ಎಂ ವಾಸು, ಲಿಂಗೇಗೌಡ, ರವಿಕುಮಾರ್, ರಾಮು, ಮರಿಗೌಡ, ಲೋಕೇಶ್ ಸೇರಿದಂತೆ ಅನೇಕ ರೈತ ಮುಖಂಡರು, ಮಹಿಳೆಯರು ಇದ್ದರು.