ಕೆ.ಆರ್.ಪೇಟೆ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಂಕಜಾ ಪ್ರಕಾಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
23 ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬಹುಮತ ಹೊಂದಿದ್ದರೂ, ಕಾಂಗ್ರೆಸ್ ತಂತ್ರಗಾರಿಕೆಯ ಮೂಲಕ ಗೆಲುವು ಸಾಧಿಸಿತು. ಪಂಕಜಾ 14 ಮತಗಳನ್ನು ಪಡೆದು, ಜೆಡಿಎಸ್‌ನ ಗಾಯತ್ರಿ ಸುಬ್ಬಣ್ಣ ಅವರನ್ನು 8 ಮತಗಳ ಅಂತರದಿಂದ ಸೋಲಿಸಿದರು.
ಜೆಡಿಎಸ್ ಸದಸ್ಯರ ಮೂರು ಅಡ್ಡಮತ ಹಾಗೂ ಓರ್ವ ಪಕ್ಷೇತರನ ಬೆಂಬಲದೊಂದಿಗೆ, 10 ಮತಗಳಿದ್ದ ಕಾಂಗ್ರೆಸ್ 14ಕ್ಕೆ ಏರಿತು. ಜೆಡಿಎಸ್-ಬಿಜೆಪಿ ಮೈತ್ರಿ ಹೊಂದಿದ್ದ ಮತಗಳ ಸಂಖ್ಯೆಯ ಮೇಲುಗೈ ಇದ್ದರೂ, ಶಾಸಕರ ನಿರ್ಲಕ್ಷ್ಯದಿಂದ ಜೆಡಿಎಸ್-ಬಿಜೆಪಿ ನಾಯಕರಲ್ಲಿ ಬೇಸರ ಉಂಟಾಗಿದೆ. ಶಾಸಕ ಹೆಚ್.ಟಿ.ಮಂಜು ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿ ಚುನಾವಣೆಗೆ ಗೈರುಹಾಜರಾಗಿದ್ದು, ಜೆಡಿಎಸ್ ಸದಸ್ಯರನ್ನು ಕಾಂಗ್ರೆಸ್‌ನ ಬೆಂಬಲಕ್ಕೆ ಕಳಿಸಿದ್ದಾರೆ ಎಂಬ ಹೇಳಿಕೆಗಳು ಕೇಳಿ ಬಂದಿವೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಚುನಾವಣೆ ಪ್ರಕ್ರಿಯೆ ತಹಶೀಲ್ದಾರ್ ಡಾ.ಅಶೋಕ್ ನೇತೃತ್ವದಲ್ಲಿ ನಡೆಯಿತು. ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು. ಜೆಡಿಎಸ್‌ನ ಕೆಲವು ಸದಸ್ಯರು ಅಡ್ಡಮತದಾನ ಮಾಡಿದರೆ, ಇತರರು ಗೈರುಹಾಜರಾಗುವ ಮೂಲಕ ಮೈತ್ರಿಕೂಟದ ಸೋಲಿಗೆ ಕಾರಣವಾಗಿದ್ದಾರೆ.
ಪಂಕಜಾ ಪ್ರಕಾಶ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಪ್ರಕಾಶ್ ಧರ್ಮಪತ್ನಿಯಾಗಿದ್ದು, ಈ ಗೆಲುವನ್ನು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವದೊಂದಿಗೆ ಸಂಭ್ರಮಿಸಿದರು.
ಮಾಜಿ ಸಚಿವ ಡಾ.ನಾರಾಯಣಗೌಡ, ಈ ಗೆಲುವು ವಾಮ ಮಾರ್ಗದ ಮೂಲಕ ಬಂದಿದ್ದು, ಕಾಂಗ್ರೆಸ್ ಪಕ್ಷವು ತಮ್ಮ ಬಲವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಾವೇರಿ ಆರತಿ ಕೈಬಿಟ್ಟು ವಚನ ಪಸರಿಸುವಂತೆ ʼನಾವು ದ್ರಾವಿಡ ಕನ್ನಡಗರು’ ಸಂಘಟನೆ ಆಗ್ರಹ
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಾ.ಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ರಾಧಾ ಈಶ್ವರಪ್ರಸಾದ್, ಮಾಜಿ ಅಧ್ಯಕ್ಷ ಕೆ.ಬಿ.ರವಿ, ಯುವಮುಖಂಡ ಕೆ.ಬಿ.ವಿವೇಕ್
ಸೇರಿದಂತೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಜೆ.ಬೋರಲಿಂಗೇಗೌಡ ಇಡೀ ಕುಟುಂಬವೇ ಹಾಜರಿದ್ದು ಪುರಸಭೆಯ ಅಧ್ಯಕ್ಷೆ ಕೆ.ಬಿ.ಪಂಕಜಾರನ್ನು ಅಭಿನಂದಿಸಿದರು.