ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ

Date:

Advertisements
ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಲ್ಲಿಗೆ ಕುಂಕುಮ ಬಳಿಯುತ್ತ ಕೂರುತ್ತಾರೆ. ಈ ದೇಶ 'ವಿಶ್ವಗುರು'ವಾಗುವುದರಲ್ಲಿ ಅನುಮಾನವೇ ಇಲ್ಲ!

ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಕೆ ಸುದ್ದಿ ಇಡೀ ದೇಶದ ಆಸ್ತಿಕರು-ಭಕ್ತರನ್ನು ಬೆಚ್ಚಿ ಬೀಳಿಸಿದೆ. ಕೇಂದ್ರದಲ್ಲಿ ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಸರ್ಕಾರ, ಆಂಧ್ರದಲ್ಲಿ ಅದರ ಮೈತ್ರಿ ಸರ್ಕಾರ ಆಡಳಿತದಲ್ಲಿರುವ ಸಂದರ್ಭದಲ್ಲಿಯೇ ಹಿಂದೂ ದೇವಾಲಯದಲ್ಲಿ ಈ ಅವ್ಯವಹಾರ, ಅಕ್ರಮ ಬಯಲಾಗಿದೆ.

ಕುತೂಹಲಕರ ಸಂಗತಿ ಎಂದರೆ, ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂದು ಬಹಿರಂಗಗೊಳಿಸಿದವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಅವರ ಆರೋಪವಿದ್ದದ್ದು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಮೇಲೆ. ಅದು ನೇರವಾಗಿ ಹಣಕಾಸಿನ ಅವ್ಯವಹಾರ ಕುರಿತದ್ದಾಗಿತ್ತು. ಆರೋಪ ಮಾಡುತ್ತಿರುವವರೇ ಈಗ ಮುಖ್ಯಮಂತ್ರಿಯಾಗಿರುವಾಗ, ಅವ್ಯವಹಾರ ಕುರಿತು ತನಿಖೆ ಮಾಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಾಗಿತ್ತು.

ಆದರೆ, ಆಂಧ್ರ ಸರ್ಕಾರ ಅನಗತ್ಯವಾಗಿ ಜಾತಿ, ಧರ್ಮವನ್ನು ಎಳೆದು ತಂದು ರಾಡಿ ಎಬ್ಬಿಸುತ್ತಿದೆ. ಚಿಲ್ಲರೆ ರಾಜಕಾರಣದಲ್ಲಿ ಮುಳುಗಿದೆ. ಅವರು ಪ್ರಸಾದದಲ್ಲಿ ದನದ ಕೊಬ್ಬು ಬಳಸಿ ಮುಗ್ಧ ಭಕ್ತರ ನಂಬಿಕೆಗೆ ದ್ರೋಹ ಬಗೆದರೆ; ಇವರು ಅದನ್ನು ಬಹಿರಂಗಗೊಳಿಸಿ ಭಕ್ತರ ಮನಸ್ಸನ್ನು ಘಾಸಿಗೊಳಿಸುತ್ತಿದ್ದಾರೆ. ಇಬ್ಬರೂ ಭಕ್ತರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.  

Advertisements

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡೆಯಲ್ಲಿ ಹತ್ತಾರು ಆಲೋಚನೆಗಳಿರಬಹುದು. ಆದರೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಬಡಿದಿರುವ ರೋಗವಾದರೂ ಏನು ಎನ್ನುವುದು ಸದ್ಯಕ್ಕೆ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ.

‘ವೈಯಕ್ತಿಕ ನೆಲೆಯಲ್ಲಿ ಈ ಘಟನೆ ನನ್ನನ್ನು ಘಾಸಿಗೊಳಿಸಿದೆ. ಸಂಸ್ಕೃತಿ, ನಂಬಿಕೆ ಮತ್ತು ಶ್ರದ್ಧೆಯ ಪವಿತ್ರ ಕೇಂದ್ರವಾಗಿರುವ ತಿರುಪತಿ ಬಾಲಾಜಿ ಧಾಮದ ಪ್ರಸಾದದಲ್ಲಿ ಕಲಬೆರಕೆ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಮೋಸ ಹೋದ ಭಾವನೆ ಉಂಟಾಗುತ್ತಿದೆ. ಹೀಗಾಗಿ ನಾನು ಬಾಲಾಜಿಯಲ್ಲಿ ಕ್ಷಮಿಸುವಂತೆ ಬೇಡಿಕೊಂಡು, 11 ದಿನಗಳ ಕಾಲ ಉಪವಾಸ ವ್ರತಾಚರಣೆ ಕೈಗೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ಅಷ್ಟೇ ಅಲ್ಲ, ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯುಗದ ದೇವರಾದ ಬಾಲಾಜಿಗೆ ಮಾಡಿರುವ ಘೋರ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂಬ ಫರ್ಮಾನು ಹೊರಡಿಸಿದ್ದಾರೆ. ಅಷ್ಟಕ್ಕೇ ಸುಮ್ಮನಿರದೆ, ಗುಂಟೂರು ಜಿಲ್ಲೆಯ ನಂಬೂರಿನ ದಶಾವತಾರ ದೇಗುಲದ ಮೆಟ್ಟಿಲುಗಳಿಗೆ ಹರಿಶಿನ-ಕುಂಕುಮ ಬಳಿದು ಭಕ್ತಿಯನ್ನು ಬಹಿರಂಗಗೊಳಿಸಿದ್ದಾರೆ. ಮುಂದುವರೆದು ಅಕ್ಟೋಬರ್ 1 ಅಥವಾ 2ರಂದು ತಿರುಪತಿ ತಲುಪಿ ಪ್ರಾಯಶ್ಚಿತ್ತ ವ್ರತ ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ.  

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!

ಪವನ್ ಕಲ್ಯಾಣ್ ಹೇಳಿ ಕೇಳಿ ಸಿನೆಮಾನಟ. ಚಿತ್ರಗಳ ನಟನೆಯಿಂದ ಜನಪ್ರಿಯತೆ ಗಳಿಸಿದವರು. ಆ ಜನಪ್ರಿಯತೆಯನ್ನೇ ಬಂಡವಾಳವನ್ನಾಗಿ ಬಳಸಿ ‘ಜನಸೇನಾ’ ಎಂಬ ಪಕ್ಷ ಕಟ್ಟಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಜಗನ್ ಮೋಹನ್ ರೆಡ್ಡಿಯನ್ನು ಎದುರು ಹಾಕಿಕೊಂಡು, ಅತಿರೇಕದ ಸಿನಿಮೀಯ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ಉದ್ರೇಕಿಸಿ, ಹುಚ್ಚೆಬ್ಬಿಸಿ ಮತ ಬೆಳೆ ತೆಗೆದವರು. ಗೆದ್ದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದವರು.

ಸಿನೆಮಾ ನಟರಾದ ಪವನ್ ಕಲ್ಯಾಣ್ ಹಿಂದು-ಮುಸ್ಲಿಂ-ಕ್ರೈಸ್ತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗೆಯೇ ರಾಜಕಾರಣಕ್ಕಿಳಿದು ಎಡ-ಬಲ-ನಡು ಪಂಥಗಳಲ್ಲೂ ಗುರುತಿಸಿಕೊಂಡಿದ್ದಾರೆ. ವಿವೇಕಾನಂದ, ಅಂಬೇಡ್ಕರ್, ಗಾಂಧಿವಾದಿಯಾಗಿ ವಕಾಲತ್ತು ವಹಿಸಿ ಮಾತನಾಡಿದ್ದಾರೆ. ಗೋಮಾಂಸ ತಿನ್ನುವುದು ತಪ್ಪಲ್ಲ ಎಂದು ಕೂಡ ಹೇಳಿದ್ದಾರೆ. ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡುತ್ತ, ಹಿಂದೂ ನಂಬಿಕೆಗಳನ್ನು ಗೌರವಿಸುವಂತೆ ಜನರನ್ನು ಒತ್ತಾಯಿಸುತ್ತಾರೆ. ಯೇಸು ಅಥವಾ ಇಸ್ಲಾಂ ಬಗ್ಗೆ ಏಕೆ ಅಪಹಾಸ್ಯ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ. ನಿಜಜೀವನದಲ್ಲಿ ಮೂವರನ್ನು- ನಂದಿನಿ, ರೇಣು, ಆನ- ಇಬ್ಬರು ಹಿಂದು, ಒಬ್ಬರು ಕ್ರಿಶ್ಚಿಯನ್- ಮದುವೆಯಾಗಿ, ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.

ಅಸಲಿಗೆ ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುತ್ತಿರುವ ಪವನ್ ಕಲ್ಯಾಣ್ ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ‘ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದೇನೆ’ ಎಂದು ಹೇಳಿರುವ ವಿಡಿಯೊ ವೈರಲ್ ಆಗುತ್ತಿದೆ. ಇವರ ಬಣ್ಣವಿಲ್ಲದ ಬೀದಿ ನಾಟಕ ನೋಡಿ ಕುಪಿತಗೊಂಡ ನಟ ಪ್ರಕಾಶ್ ರಾಜ್, ‘ನೀವು ಡಿಸಿಎಂ ಆಗಿದ್ದೀರಿ, ನಿಮ್ಮ ಮೂಗಿನ ಕೆಳಗೇ ಇದು ನಡೆದಿದೆ. ದಯವಿಟ್ಟು ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ಅದು ಬಿಟ್ಟು ನೀವೇ ಏಕೆ ಆತಂಕಗಳನ್ನು ಸೃಷ್ಟಿಸುತ್ತಿದ್ದೀರಿ ಮತ್ತು ರಾಷ್ಟ್ರಮಟ್ಟದಲ್ಲಿ ಈ ವಿಷಯವನ್ನು ಎತ್ತುತ್ತಿದ್ದೀರಿ. ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ ಇದೆ’ ಎಂದಿರುವುದು ಸರಿಯಾಗಿಯೇ ಇದೆ.

ಪವನ್ ಕಲ್ಯಾಣ್ ಮೂಲತಃ ನಟ. ಯಾವ ವೇಷವನ್ನಾದರೂ ಹಾಕಬಲ್ಲ, ಅಭಿನಯಿಸಬಲ್ಲ, ಎಂತಹ ಸಂದರ್ಭವನ್ನಾದರೂ ನಿಭಾಯಿಸಬಲ್ಲ. ಸಿನೆಮಾದಲ್ಲಿ ಒಂದು ಸೆಟ್, ಒಂದು ಕ್ಯಾಮರಾ ಇದ್ದರೆ, ರಾಜಕಾರಣದಲ್ಲಿ ನೂರಾರು ವೇದಿಕೆಗಳು, ಸಾವಿರಾರು ಕ್ಯಾಮರಾಗಳನ್ನು ಪ್ರತಿದಿನ ಎದುರಿಸಬೇಕಾಗಿದೆ. ನೂರಾರು ವೇಷಗಳಲ್ಲಿ ವಿಕ್ಷಿಪ್ತವಾಗಿ ವರ್ತಿಸುವ ಪವನ್ ಕಲ್ಯಾಣ್, ಮೊದಲಿನಿಂದಲೂ ಮೋದಿ ಭಕ್ತ. ಮೋದಿಗೆ ಪವನ್ ಬೆಳೆದು ಆಂಧ್ರದ ಮುಖ್ಯಮಂತ್ರಿಯಾಗಬೇಕೆಂಬ ಆಸೆ. ಪವನ್‌ಗೆ ಮೋದಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿರಬೇಕೆಂಬ ಬಯಕೆ. ಆದರೆ ಚಂದ್ರಬಾಬು ನಾಯ್ಡುವಿನ ನಡೆಯೇ ಬೇರೆ. ಮೈತ್ರಿಕೂಟದ ಮೂಲಕ ನಾಯ್ಡು ಮೋದಿಯನ್ನು ನಿಯಂತ್ರಿಸಿದರೆ; ಪವನ್ ಮೂಲಕ ಮೋದಿ ನಾಯ್ಡುವನ್ನು ಕೆಳಗಿಳಿಸಲು ಹವಣಿಸುತ್ತಿದ್ದಾರೆ. ಇವರ ರಾಜಕೀಯ ಚದುರಂಗದಾಟದಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ನಾಮ ಬಿಟ್ಟು ಬೇರೇನು ಸಿಗುತ್ತಿದೆ?  

ಅತ್ತ ಕಂಗನಾ ರಣಾವತ್ ಎಂಬ ಅಪ್ರಬುದ್ಧ ನಟಿ, ಸಂಸದೆ ದೇಶದ ಅನ್ನದಾತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇತ್ತ ಪವನ್ ಎಂಬ ಅಪ್ರಬುದ್ಧ ರಾಜಕಾರಣಿ ಜನ ಕೊಟ್ಟ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕಲ್ಲಿಗೆ ಕುಂಕುಮ ಬಳಿಯುತ್ತ ಕೂರುತ್ತಾರೆ. ಒಬ್ಬರು ಬಿಜೆಪಿಯಾದರೆ, ಮತ್ತೊಬ್ಬರು ಬಿಜೆಪಿ ಬೆಂಬಲಿತರು. ಇಂತಹ ನಕಲಿಗಳನ್ನು ಆಯ್ಕೆ ಮಾಡಿಕೊಂಡಿರುವ, ಅವರಿಂದ ಆಳಿಸಿಕೊಳ್ಳುತ್ತಿರುವ ನಾವು ನಿಜಕ್ಕೂ ‘ಭಾಗ್ಯವಂತರು’. ಈ ದೇಶ ‘ವಿಶ್ವಗುರು’ವಾಗುವುದರಲ್ಲಿ ಅನುಮಾನವೇ ಇಲ್ಲ!

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X