ರಾಜ್ಯದ ಶಾಲಾ ಮಕ್ಕಳಿಗೆ 2 ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು 6 ದಿನಕ್ಕೆ ವಿಸ್ತರಿಸಲಾಗಿದೆ. ಮಕ್ಕಳ ಪೌಷ್ಟಿಕಾಂಶ ವೃದ್ಧಿಗಾಗಿ ಆಹಾರದ ಜತೆಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ರಾಜ್ಯ ಸರ್ಕಾರವು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ(ಎಪಿಎಫ್)ದೊಂದಿಗೆ ಮೂರು ವರ್ಷದ ಅವಧಿಗೆ 1,591 ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಂಡಿದೆ. ಒಪ್ಪಂದದ ಅನ್ವಯ ರಾಜ್ಯದ 53,080 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 56 ಲಕ್ಷ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಆರೋಗ್ಯ ಉತ್ತಮವಾಗಿದ್ದರೆ, ಪಾಠದಲ್ಲಿ ಆಸಕ್ತಿಯು ಹೆಚ್ಚಾಗುತ್ತದೆ. ಆರೋಗ್ಯ ಚೆನ್ನಾಗಿರಲು ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ವಾರದ 6 ದಿನವು ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು / ಶೇಂಗಾ ಚಿಕ್ಕಿ ಹಾಗೂ ರಾಗಿಮಾಲ್ಟ್ ವಿತರಿಸಲಾಗುತ್ತದೆ. ರಾಜ್ಯವು ಒಳಗೊಂಡಂತೆ ದೇಶದ ಬಡ ಮಕ್ಕಳ ಶ್ರೇಯೋಭಿವೃದ್ಧಿ, ಶಿಕ್ಷಣ ಹಾಗೂ ಹಲವಾರು ಜನಪರ ಕಾರ್ಯಗಳಿಗೆ ಎಪಿಎಫ್ ಅಪಾರ ಕೊಡುಗೆ ಹಾಗೂ ಪ್ರೋತ್ಸಾಹ ನೀಡುತ್ತ ಬಂದಿದೆ. ಇದರ ಹಿಂದಿರುವ ಶಕ್ತಿ ಉದ್ಯಮಿ ಅಜೀಂ ಪ್ರೇಮ್‌ಜಿ.
ಶಾಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವುದು ಸರಕಾರದ ಜೊತೆಗೆ ಸಂಘಸಂಸ್ಥೆಗಳ ಬದ್ಧತೆಯಾಗಿದೆ ಎಂಬುದನ್ನು ಅಜೀಂ ಅವರು ಮನಗಂಡಿದ್ದಾರೆ. ಈ ಕಾರಣದಿಂದಲೇ ಕರ್ನಾಟಕ ಸರ್ಕಾರದೊಂದಿಗೆ 30 ವರ್ಷಗಳ ನಂಟನ್ನು ಹೊಂದಿದ್ದಾರೆ. ಶಾಲಾ ಮಕ್ಕಳಿಗೆ 4 ದಿನಗಳ ಮೊಟ್ಟೆ ನೀಡುವ ಮತ್ತೊಂದು ಹೊಸ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಪೌಷ್ಟಿಕತೆ ಪ್ರಮಾಣ ಉತ್ತಮಗೊಳಿಸುವ ಆಶಯ ಹೊಂದಿದ್ದಾರೆ. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಮನಗಂಡಿದ್ದಾರೆ. ಪ್ರೇಮ್‌ಜಿ ಅವರ ಸಹಕಾರದಿಂದ ರಾಜ್ಯದಲ್ಲಿ ಶೇಕಡಾ 88 ರಷ್ಟು ಮಕ್ಕಳು ಮೊಟ್ಟೆ ಪಡೆದರೆ, ಶೇಕಡಾ 8 ರಷ್ಟು ಮಕ್ಕಳು ಬಾಳೆಹಣ್ಣು ಹಾಗೂ ಉಳಿದ ಶೇಕಡಾ 4ರಷ್ಟು ಮಕ್ಕಳು ಕಡಲೆಹಿಟ್ಟಿನ ಚಕ್ಕುಲಿಯನ್ನು ಪಡೆಯಲಿದ್ದಾರೆ.
ಎಲ್ಲ ಮಕ್ಕಳು ಪ್ರತಿಯೊಂದು ಸೌಲಭ್ಯಗಳನ್ನು ಪಡೆದು ಸದೃಢವಾಗಬೇಕು. ಗುಣಮಟ್ಟದ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿರಬೇಕು. ಮಕ್ಕಳು ಶಾಲೆಯ ಹಂತದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಬೇಕು. ಇದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಬೇಕು. ಭಾರತೀಯರಾದ ನಾವು ಯಾವುದೇ ಜಾತಿ, ಧರ್ಮ ಭೇದಭಾವ ಮಾಡದೆ ಅಭಿವೃದ್ಧಿ ಕಡೆಗೆ ದಾಪುಗಾಲಿಡಬೇಕು. ನಾವೆಲ್ಲರೂ ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ ಮಾರ್ಗದರ್ಶನದಲ್ಲಿ ಸಮಾನತೆಯೊಂದಿಗೆ ಮುಂದುವರೆಯಬೇಕು. ಸಹೋದರತ್ವದಿಂದ ಬದುಕಬೇಕು ಎಂಬ ತತ್ವವನ್ನು ಅಜೀಂ ಪ್ರೇಮ್‌ಜಿ ಅವರು ತಮ್ಮ ವೃತ್ತಿ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ.
ಅಜೀಂ ಅವರು ತಮ್ಮ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಂಸ್ಥೆಯನ್ನು 2000ರಲ್ಲಿ ಪ್ರಾರಂಭಿಸಿದರು. ಭಾರತದಾದ್ಯಂತ ಸರ್ಕಾರಿ ಶಾಲಾ-ಕಾಲೇಜುಗಳ ಶಿಕ್ಷಣವನ್ನು ಸುಧಾರಣೆ ತರಲು ಎಪಿಎಫ್‌ಅನ್ನು ಪ್ರಾರಂಭಿಸಲಾಯಿತು. ಸರ್ಕಾರದ ನಿಕಟ ಸಹಭಾಗಿತ್ವದಲ್ಲಿ ದೇಶದಲ್ಲಿನ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಲು ಫೌಂಡೇಶನ್ ಆಶಯ ಹೊಂದಿದೆ. ಎಪಿಎಫ್ ಪ್ರತಿಷ್ಠಾನವು ಸಾರ್ವಜನಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಸಾಮರ್ಥ್ಯವನ್ನು ಸುಧಾರಿಸಲು ಕೆಲಸ ಮಾಡುವ ಜಿಲ್ಲಾ ಮಟ್ಟದ ಸಂಸ್ಥೆಗಳನ್ನು ಕೂಡ ದೇಶದಾದ್ಯಂತ ಸ್ಥಾಪಿಸಿದೆ. 2010ರಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ಸಾವಿರಾರು ಮಂದಿ ಈ ವಿವಿಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಉದ್ಯಮ ಕುಟುಂಬದ ಕುಡಿ ಅಜೀಂ
1945 ಜುಲೈ 24ರಂದು ಬಾಂಬೆಯಲ್ಲಿ ಉದ್ಯಮ ಕುಟುಂಬದಲ್ಲಿ ಜನಿಸಿದವರು ಅಜೀಂ ಪ್ರೇಮ್‌ಜಿ. ತಂದೆ ಮೊಹಮ್ಮದ್ ಹಸೀಂ ಪ್ರೇಮ್‌ಜಿ ಸ್ವತಂತ್ರ ಪೂರ್ವದಲ್ಲಿಯೇ ದೇಶದಲ್ಲೇ ದೊಡ್ಡ ಉದ್ಯಮಿಯಾಗಿ ಹೆಸರು ಮಾಡಿದ್ದರು. ಭಾರತ – ಪಾಕ್ ದೇಶ ವಿಭಜನೆಯಾದಾಗ ಪಾಕಿಸ್ತಾನದ ನಿರ್ಮಾತೃ ಮೊಹಮ್ಮದ್ ಅಲಿ ಜಿನ್ನಾ ಪಾಕ್‌ನಲ್ಲಿ ಬಂದು ನೆಲಸುವಂತೆ ಖುದ್ದು ಆಹ್ವಾನ ನೀಡಿದರೂ ಹಸೀಂ ಪ್ರೇಮ್‌ಜಿ ನಿರಾಕರಿಸಿ ತಾನು ಭಾರತದಲ್ಲೇ ಇರುವುದಾಗಿ ಹೇಳಿ ರಾಷ್ಟ್ರಪ್ರೇಮವನ್ನು ಮೆರೆದಿದ್ದರು. ವಿದೇಶದಲ್ಲಿ ವ್ಯಾಸಂಗ ಪೂರ್ಣಗೊಳಿಸುವ ಸಂದರ್ಭದಲ್ಲಿಯೇ ಹಸೀಂ ತೀರಿಕೊಂಡರು. ತಂದೆ ಸಾವನ್ನಪ್ಪಿದ ನಂತರ 21 ವಯಸ್ಸಿನಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಬಂದ ಅಜೀಂ ತಂದೆ ಸ್ಥಾಪಿಸಿದ್ದ ವಿಪ್ರೋ ಸಂಸ್ಥೆಯನ್ನು ಶ್ರಮವಹಿಸಿ ವಿಶ್ವಾದ್ಯಂತ ಮತ್ತಷ್ಟು ಅಭಿವೃದ್ಧಿಪಡಿಸಿದರು.
ದಿನಸಿ, ಡಾಲ್ಡ, ತರಕಾರಿಗೆ ಸೀಮಿತಗೊಂಡಿದ್ದ ಕಂಪನಿಯನ್ನು ಐಟಿ ಕ್ಷೇತ್ರಕ್ಕೂ ವಿಸ್ತರಿಸಿದರು. ವಿಪ್ರೋ ಭಾರತ ಮಾತ್ರವಲ್ಲದೆ ವಿಶ್ವದಲ್ಲಿಯೇ ದೊಡ್ಡ ಸಂಸ್ಥೆಯಾಗಿ ಬೆಳೆಯಲು ಹಗಲಿರುಳು ಶ್ರಮಿಸಿದರು. ಸದ್ಯ ವಿಪ್ರೋದ ಕಂಪನಿಯಲ್ಲಿ 2.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮಹಿಳೆಯರಿಗೂ ಸಮಾನ ಆದ್ಯತೆ ನೀಡುವ ಕಾರಣದಿಂದ ವಿಪ್ರೋದಲ್ಲಿ ಶೇ.36ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಹ್ಯಾಕಾಶದಲ್ಲಿ ಸಿಲುಕಿರುವ ದಿಟ್ಟ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಯಾವಾಗ?
ಕೆಲಸದ ವಿಷಯದಲ್ಲಿ ಅಜೀಂ ಪ್ರೇಮ್‌ಜಿ ಹೆಚ್ಚು ಕಟ್ಟುನಿಟ್ಟು. ಕಂಪನಿಯಲ್ಲಿ ಉದ್ಯೋಗಿಗಳು ಪ್ರಿಂಟ್ ತೆಗೆದುಕೊಳ್ಳಬೇಕಿದ್ದರೆ ಒಂದು ಪುಟದ ಎರಡೂ ಬದಿ ಬಳಸಿಕೊಳ್ಳುವುದು ಕಡ್ಡಾಯ. ಸಂಸ್ಥೆಯಲ್ಲಿ ಮೀಟಿಂಗ್ ವೇಳೆ ಉದ್ಯೋಗಿಗಳು ಕಾಫಿ ಮುಗಿಸಿಲ್ಲ ಎಂಬ ಕಾರಣಕ್ಕೆ ಕಾಫಿ ಕಪ್ ಗಾತ್ರವನ್ನೇ ಕಡಿಮೆ ಮಾಡಿ ಬಿಟ್ಟಿದ್ದರು. ತನ್ನ ಕಂಪನಿಯಲ್ಲಿ ಬಳಸಲಾಗುವ ಟಾಯ್ಲೆಟ್ ಪೇಪರ್‌ನ ವೆಚ್ಚ ಕೂಡ ಅಜೀಂ ತಿಳಿದುಕೊಂಡಿದ್ದಾರೆ. ವಿಲಾಸ, ವೈಭವಕ್ಕೆ ಖರ್ಚು ಮಾಡುವುದರಲ್ಲಿ ಇವರು ಜಿಪುಣರಾದರೂ ಅದೇ ದುಡ್ಡನ್ನು ಸೇವೆಗೆ ಬಳಸುತ್ತಿದ್ದಾರೆ. 2013ರಲ್ಲಿ, ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕುವ ಮೂಲಕ ತಮ್ಮ ಸಂಪತ್ತಿನ ಅರ್ಧದಷ್ಟು ಭಾಗವನ್ನು ದಾನ ಮಾಡಲು ನಿರ್ಧರಿಸಿದರು. ಅಜೀಂ ಭಾರತದಲ್ಲಿ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿದ ಎಪಿಎಫ್‌ಗೆ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆ ನೀಡಿ ತಮ್ಮ ಸೇವಾ ಅಭಿಯಾನವನ್ನು ಪ್ರಾರಂಭಿಸಿದರು.
2019ರಲ್ಲಿ ಅವರು ದಾನದಲ್ಲಿ ದೊಡ್ಡ ಮೊತ್ತವನ್ನು ನೀಡಿದ ನಂತರ ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಇಳಿದಿದ್ದರು. ಆದರೆ ದಾನ, ಕೊಡುಗೆಯ ಶ್ರೀಮಂತಿಕೆಯಲ್ಲಿ ಭಾರತದಲ್ಲೇ ಅತಿ ಶ್ರೇಷ್ಠರ ಪಟ್ಟಿಯಲ್ಲಿ ಪ್ರೇಮ್ ಬಿ ಅಗ್ರಗಣ್ಯರಾಗಿದ್ದಾರೆ. 2011ರಲ್ಲಿ ಭಾರತ ಸರ್ಕಾರ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಕೋವಿಡ್ ಸಮಯದಲ್ಲೂ ಇವರು ಅತಿ ಪ್ರಚಲಿತದಲ್ಲಿದ್ದರು. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಪ್ರೇಮ್ ಜಿ ಅವರ ವಿಪ್ರೋ ದೇಶದಲ್ಲಿ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು 1,125 ಕೋಟಿ ರೂ. ದೇಣಿಗೆ ನೀಡಿತ್ತು.
2020 ಮತ್ತು 2021 ರಲ್ಲಿ, ಅಜೀಂ, ಹುರುನ್ ಇಂಡಿಯಾ ಉದಾರ ದಾನಿಗಳ ಪಟ್ಟಿಯಲ್ಲಿ ಅತ್ಯಂತ ಉದಾರ ಭಾರತೀಯರಾಗಿ ಹೊರಹೊಮ್ಮಿದರು. ಉದಾರ ದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. 2022ರಲ್ಲಿ ಮತ್ತು 2023ರಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬ್ರೂಮ್ ಬಾಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿರುವ ಅಜೀಂ ಪ್ರೇಮ್‌ಜಿ ಅವರ ಆಸ್ತಿ ಮೌಲ್ಯ ಕಳೆದ ಮೇ ತಿಂಗಳಲ್ಲಿ ವರದಿಯಾದಂತೆ 1,99,997 ಕೋಟಿ ರೂಪಾಯಿ ಇದೆ. ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಇವರು ಶ್ರೀಮಂತನಾಗಿರುವುದು ತನಗೆ ರೋಮಾಂಚನ ತಂದಿಲ್ಲ. ಸೇವೆಯಿಂದ ತೃಪ್ತಿ ತಂದಿದೆ ಎಂದು ತಿಳಿಸಿದ್ದರು.
ವಿಪ್ರೋ ಐಟಿ ಸಂಸ್ಥೆಯ ಸಂಸ್ಥಾಪಕರಾದ 79 ವರ್ಷದ ಅಜೀಂ ಪ್ರೇಮ್‌ಜಿ ಸಾವಿರಾರು ಕೋಟಿ ಒಡೆಯರಾದರೂ ಪ್ರತಿ ವರ್ಷವೂ ಎಪಿಎಫ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಮ್ಮ ಅರ್ಧ ಸಂಪತ್ತನ್ನು ದಾನ ನೀಡಿದ್ದಾರೆ. ವಿಶ್ವದ ಎಲ್ಲ ಶತ ಕೋಟ್ಯಾಧೀಶರು ತಮ್ಮ ಸಾರ್ವಜನಿಕ ಸೇವೆಗಳಿಗಿಂದ ಉದ್ಯಮಗಳಿಂದ ಹೆಚ್ಚು ಗುರುತಿಸಿಕೊಂಡಿದ್ದಾರೆ. ತಮ್ಮ ಉದ್ಯಮಕ್ಕೆ ಸಹಕಾರಿಯಾಗಲೆಂದೊ ಇಲ್ಲವೇ ತೆರಿಗೆ ಉಳಿಸಲೆಂದೊ ಇಂತಿಷ್ಟು ಹಣವನ್ನು ಸಿಎಸ್‌ಆರ್ ನಿಧಿಗೆ ಮೀಸಲಿಡುತ್ತಾರೆ. ಅದನ್ನೇ ದೊಡ್ಡದಾಗಿ ಮಾಧ್ಯಮಗಳಲ್ಲಿ ಬಿಂಬಿಸಿಕೊಂಡು ದೊಡ್ಡದಾಗಿ ಪ್ರಚಾರ ಪಡೆಯುತ್ತಾರೆ. ಸೇವೆಗಿಂತ ಲಾಭಕ್ಕೆ ಹೆಚ್ಚು ಆದ್ಯತೆ ನೀಡುವ ಬಂಡವಾಳಶಾಹಿ ಉದ್ಯಮಿಗಳಲ್ಲಿ ಅಜೀಂ ಪ್ರೇಮ್‌ಜಿ ನಿಜಕ್ಕೂ ಆದರ್ಶವಾಗಿ ನಿಲ್ಲುತ್ತಾರೆ.