ಬಿಜೆಪಿ ಮತ್ತು ಜೆಡಿಎಸ್ ನಾಯಕರ ಕುತಂತ್ರದಿಂದ ಸಿಎಂ ಸಿದ್ದರಾಮಯ್ಯನವರ ತೇಜೋವಧೆ ನಡೆಯುತ್ತಿದೆ. ಮುಡಾ ಪ್ರಕರಣ ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಜಿಲ್ಲಾ ಸಮಿತಿಯಿಂದ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ಬೀದರ ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಎದುರುಗಡೆ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಬಿಜೆಪಿ ಹಾಗೂ ಜೆಡಿಎಸ್‌ನ ಒಳಸಂಚನ್ನು ಖಂಡಿಸಿ ಕೆಲಕಾಲ ಪ್ರತಿಭಟಿಸಿ ಸಿಎಂ ಸಿದ್ದರಾಮಯ್ಯನವರ ಪರ ಘೋಷಣೆ ಕೂಗಿದರು.

ʼಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಪಕ್ಷಗಳ ಷಡ್ಯಂತ್ರವಾಗಿದೆ. ಇದು ಕೇವಲ ಸಿದ್ದರಾಮಯ್ಯ ಅವರಿಗೆ ಮಾಡುವ ಅವಮಾನ ಅಲ್ಲ. ಇಡೀ ರಾಜ್ಯದ ಎಲ್ಲ ಬಡವರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದವರಿಗೆ ಮಾಡುವ ಅವಮಾನ. ಈ ರಾಜ್ಯದಲ್ಲಿ ಹಿಂದುಳಿದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೆ ಹೊಟ್ಟೆ ಕೊಚ್ಚಿನಿಂದ ಇಂತಹ ಕುತಂತ್ರ ಮಾಡುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ ಸೇರಿದಂತೆ ಪ್ರಮುಖರಾದ ಧನರಾಜ ಹಂಗರಗಿ, ಅನೀಲಕುಮಾರ ಬೆಲ್ದಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ ದೊಡ್ಡಿ, ರಮೇಶ ಡಾಕುಳಗಿ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪರವೇಜ್ ಕಮಲ್, ಬೀದರ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವೆ, ಕರೀಂ ಸಾಬ್, ಎಂ.ಎ.ಸಮಿ, ಮುಹಮ್ಮದ ರಿಯಾಜ್, ರವೀಂದ್ರ, ರಾಕೇಶ, ಇರ್ಶಾದ್ ಪೈಲವಾನ್, ಅಮರ ಸಾಗರ, ನರಸಪ್ಪಾ ಯಾಕತಪೂರ, ತುಕಾರಾಮ, ಪೂಜಾ ಜಾರ್ಜ್, ಸಂಗೀತಾ ಕಾರಬರಿ, ತೆಜಮ್ಮಾ, ಲಕ್ಷ್ಮೀ ಸೇರಿದಂತೆ ಅನೇಕರಿದ್ದರು.