- ‘ಮೋದಿ ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಬಳಕೆ’
- ರೋಡ್ ಶೋ ಅನುಮತಿ ರದ್ದತಿಗೆ ಕಾಂಗ್ರೆಸ್ ಆಗ್ರಹ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಮತಭೇಟೆಗೆ ಇಳಿದಿರುವ ಪ್ರಧಾನಿ ಮೋದಿ ಅವರು ಮೇ 6 ಮತ್ತು ಮೇ 7ರಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ವಾಹನ ಸವಾರರು ಮತ್ತು ಬೆಂಗಳೂರಿಗೆ ರೋಡ್ ಶೋಗೆ ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಅನುಮತಿ ನೀಡದಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಪ್ರಧಾನಿ ಮೋದಿ ಅವರು ಮಾದರಿ ನೀತಿ ಸಂಹಿತೆಯ ಉಲ್ಲಂಘಿಸಿ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾನೂನು ಘಟಕ ಆಯೋಗಕ್ಕೆ ದೂರು ನೀಡಿದ್ದು, “ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಭಾಷಣಗಳಲ್ಲಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡಿದ್ದಾರೆ” ಎಂದು ಆರೋಪಿಸಿದೆ.
“ಮೋದಿ ಕೇವಲ ಚುನಾವಣೆ ಲಾಭಕ್ಕಾಗಿ ದೇವ ದೇವತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಚಾರಕ್ಕೆ ಅವಕಾಶ ನೀಡಬಾರದು. ಜಾತಿ ಧರ್ಮದ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರಕ್ಕೆ ಅವಕಾಶ ನೀಡಬಾರದು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ | ಕಾಂಗ್ರೆಸ್, ಬಿಜೆಪಿ ಸೆಣಸಾಟದಲ್ಲಿ ಜೆಡಿಎಸ್ ನಗಣ್ಯ
ಹೈಕೋರ್ಟ್ ರಿಟ್ ಪಿಟಿಷನ್ ನಿರ್ದೇಶನದ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯ 38 ಕಿ.ಮೀ ರೋಡ್ ಶೋಗೆ ಅವಕಾಶ ನೀಡಬಾರದು. ಆದರೂ, ಮೋದಿ ಅವರಿಗೆ ನ್ಯಾಯಾಂಗದ ಆದೇಶ ಉಲ್ಲಂಘಿಸಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದೆ.
“ಮೋದಿ ರೋಡ್ ಶೋನಿಂದ ನಗರದಲ್ಲಿ ಆಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಓಡಾಟಕ್ಕೆ ಅನಾನುಕೂಲ ಆಗಲಿದೆ. ಮೋದಿ ರೋಡ್ ಶೋಗೆ ಸರ್ಕಾರಿ ಹಣ ಬಳಕೆಯಾಗುತ್ತಿದೆ” ಎಂದು ಹೇಳಿದೆ.