ಬೆಂಗಳೂರು ದಕ್ಷಿಣ | ಕಾಂಗ್ರೆಸ್, ಬಿಜೆಪಿ ಸೆಣಸಾಟದಲ್ಲಿ ಜೆಡಿಎಸ್‌ ನಗಣ್ಯ

Date:

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 1996ರಿಂದ ಮೂರು ದಶಕಗಳಿಂದಲೂ ಬಿಜೆಪಿಯ ಭದ್ರಕೋಟೆ. ಎಂಟು ವಿಧಾನಸಭಾ ಕ್ಷೇತ್ರವಿರುವ ದಕ್ಷಿಣ ವ್ಯಾಪ್ತಿಯಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿ ಮಾತ್ರ ಸ್ಪರ್ಧಿ. ಜೆಡಿಎಸ್‌ ಈ ಭಾಗದಲ್ಲಿ ಗೆಲುವು ಸಾಧಿಸುವಂಥ ಸಾಮರ್ಥ್ಯ ಹೊಂದಿಲ್ಲ, ಏನಿದ್ದರೂ ಎರಡು ಅಥವಾ ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಸಬೇಕಿದೆ. ಭ್ರಷ್ಟಾಚಾರ, ಅದಕ್ಷ ಆಡಳಿತ ಹಿನ್ನೆಲೆ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಕೂಡ ಈ ಬಾರಿ ತಮ್ಮ ಮನಸ್ಸನ್ನು ಬದಲಾಯಿಸಿದರೆ ಕಾಂಗ್ರೆಸಿಗೆ ಹೆಚ್ಚು ಲಾಭವಾಗಬಹುದು. ಪ್ರಸ್ತುತ 2018ರ ಚುನಾವಣೆಯಲ್ಲಿ 5 ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಗೋವಿಂದರಾಜನಗರ: ಬಿಜೆಪಿಗೆ ಟಕ್ಕರ್ ಕೊಡಲು ಪ್ರಿಯಕೃಷ್ಣ ರೆಡಿ!

2008ಕ್ಕೂ ಮುನ್ನ ಬಿನ್ನಿಪೇಟೆ ಕ್ಷೇತ್ರವಾಗಿದ್ದ ಗೋವಿಂದರಾಜ ನಗರದಲ್ಲಿ 1978ರಲ್ಲಿ ದಲಿತ ನಾಯಕ, ಪೌರ ಕಾರ್ಮಿಕರ ಪಾಲಿನ ವಿಮೋಚಕ ಐ ಪಿ ಡಿ ಸಾಲಪ್ಪ, ಕನ್ನಡ ಚಳವಳಿಗಾರ ಜಿ ನಾರಾಯಣ ಕುಮಾರ್ 1983, 1985 ಎರಡು ಬಾರಿ ಹಾಗೂ 1989 ರಲ್ಲಿ ಮುಸ್ಲಿಂ ಅಭ್ಯರ್ಥಿ ನಜೀರ್ ಅಹ್ಮದ್ ಗೆಲುವು ಸಾಧಿಸಿದ್ದರು. 2008ರಲ್ಲಿ ಗೋವಿಂದರಾಜನಗರವಾಗಿ ಮರುಹುಟ್ಟು ಪಡೆದ ನಂತರ ಈ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಪ್ರಭಾವಿ ರಾಜಕಾರಣಿ ವಿ ಸೋಮಣ್ಣ, ಬಿನ್ನಿಪೇಟೆ, ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಜನತಾದಳ, ಕಾಂಗ್ರೆಸ್, ಬಿಜೆಪಿ, ಪಕ್ಷೇತರರಾಗಿ ಸ್ಪರ್ಧಿಸಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಈ ಬಾರಿ ಸೋಮಣ್ಣನಿಗೆ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದರಿಂದ ಪಾಲಿಕೆಯ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಸ್ಪರ್ಧಿಸುತ್ತಿದ್ದು, ಸೋಮಣ್ಣ ಮಾಡಿರುವ ಕೆಲಸಗಳ ಮಾನದಂಡವೆ ನನ್ನ ಗೆಲುವಿಗೆ ಶ್ರೀರಕ್ಷೆ ಎನ್ನುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಮಾಜಿ ಶಾಸಕ ಪ್ರಿಯಕೃಷ್ಣ ಅವರು ಕಣಕ್ಕಿಳಿದಿದ್ದಾರೆ. 2009 ಹಾಗೂ 2013ರಲ್ಲಿ ಗೆಲುವು ಕಂಡಿದ್ದರೂ ಹಾಲಿ ಶಾಸಕರು ಹೇಳುವಂತೆ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುತ್ತಿರುವ ಪ್ರಿಯಕೃಷ್ಣ, ಜನರ ಕಷ್ಟಸುಖಗಳಿಗೆ ಸ್ಪಂದಿಸುವ ತಾವು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ ಎನ್ನುತ್ತಿದ್ದಾರೆ. ಸದ್ಯ ಇವರಿಬ್ಬರ ನಡುವೆಯೇ ಹಣಹಣಿ ನಡೆಯುತ್ತಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ಮಾಜಿ ಪಾಲಿಕೆ ಸದಸ್ಯ ಆರ್‌ ಪ್ರಕಾಶ್ ಅವರಿಗೆ ತಾವು ಮಾಡಿದ್ದ ಕೆಲಸಕಾರ್ಯಗಳಿಗಿಂತ ಕುಮಾರಸ್ವಾಮಿಯವರ ಬಗ್ಗೆ ಹೆಚ್ಚು ವಿಶ್ವಾಸ. ಹೆಚ್‌ಡಿಕೆ ಹೆಸರಿನಲ್ಲಿಯೇ ಜಯಗಳಿಸುವ ತವಕದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಉತ್ತರ | ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ

ವಿಜಯನಗರ: ಲೇಔಟ್‌ ಕೃಷ್ಣಪ್ಪ ಮಾತ್ರ ಇಲ್ಲಿನ ಅಧಿಪತಿ

ಗೋವಿಂದರಾಜನಗರ ಕ್ಷೇತ್ರದಂತೆಯೇ ವಿಜಯನಗರ ಕ್ಷೇತ್ರವು 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಿಂದ ಬಿನ್ನಿಪೇಟೆಯಿಂದ ಸ್ವತಂತ್ರ ಕ್ಷೇತ್ರವಾಯಿತು. ಅಂದಿನಿಂದಲೂ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸಿನ ಎಂ ಕೃಷ್ಣಪ್ಪ ಇಲ್ಲಿನ ಅಧಿಪತಿ. ಹಲವಾರು ಖಾಸಗಿ ಬಡಾವಣೆಗಳನ್ನು ನಿರ್ಮಿಸಿರುವುದರಿಂದ ಸ್ಥಳೀಯರಿಗೆ ಲೇಔಟ್‌ ಕೃಷ್ಣಪ್ಪ ಎಂದು ಪರಿಚಿತ. ಶಾಸಕರಾಗುವ ಮುನ್ನ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಕೃಷ್ಣಪ್ಪನವರನ್ನು ಸೋಲಿಸಲು ಬಿಜೆಪಿ ಕಳೆದ ಮೂರು ಚುನಾವಣೆಗಳಿಂದಲೂ ಹರಸಾಹಸ ಪಡುತ್ತಿದೆ. 2018ರಲ್ಲಿ ತೀವ್ರ ಪೈಪೋಟಿ ನೀಡಿದ್ದ ಕಮಲ ಪಕ್ಷದ ರವೀಂದ್ರ 2775 ಮತಗಳ ಅಂತರದಿಂದ ಸೋತಿದ್ದರು.

ಕಾಂಗ್ರೆಸ್‌ನಿಂದ ಕೃಷ್ಣಪ್ಪ ನಾಲ್ಕನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಆಸ್ಪತ್ರೆ, ಗ್ರಂಥಾಲಯ, ವಾಣಿಜ್ಯ ಸಂಕೀರ್ಣ, ರಂಗಮಂದಿರ ಉದ್ಯಾನಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಹಾಗೂ ಉತ್ತಮ ಕಾನೂನು ವ್ಯವಸ್ಥೆ ಕಾಪಾಡುವುದಕ್ಕೆ ಆದ್ಯತೆ ನೀಡಿರುವುದರಿಂದ ಈ ಬಾರಿಯೂ ಮತದಾರರು ನಮ್ಮನ್ನೇ ಆಯ್ಕೆ ಮಾಡುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ ಕೃಷ್ಣಪ್ಪ.

ಬಿಜೆಪಿಯಿಂದ ಎರಡನೇ ಬಾರಿ ಸ್ಪರ್ಧಿಸಿರುವ ಪಾಲಿಕೆ ಮಾಜಿ ಸದಸ್ಯ ಎಚ್‌ ರವೀಂದ್ರ, 15 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಕುಡಿಯುವ ನೀ ರಿನ ಸಮಸ್ಯೆ ತೀವ್ರವಾಗಿದೆ, ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ, ಜನರು ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಮ್ಮನ್ನು ಆಯ್ಕೆ ಮಾಡಲಿದ್ದಾರೆ ಎನ್ನುತ್ತಿದ್ದಾರೆ.

ಜೆಡಿಎಸ್‌ ಈ ಕ್ಷೇತ್ರದಲ್ಲಿ ಕಣಕ್ಕಿಳಿಯದೆ ಆರ್‌ಪಿಐ ಅಭ್ಯರ್ಥಿಗೆ ಬೆಂಬಲ ನೀಡಿದೆ. ಇದರಿಂದ ಕಾಂಗ್ರೆಸ್‌ಗೆ ಲಾಭವಾಗುವ ನಿರೀಕ್ಷೆಯಿದೆ.

ಈ ಸುದ್ದಿ ಓದಿದ್ದೀರಾ: ಯಶವಂತಪುರ ಕ್ಷೇತ್ರ | ತೆನೆ ಪಕ್ಷದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಮಲ!

ಚಿಕ್ಕಪೇಟೆ: ಈ ಬಾರಿ ರಾಜಧಾನಿಯ ಹೃದಯದ ‘ರಾಜ’ ಯಾರು?

ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಅತ್ಯಂತ ಹೆಚ್ಚು ಜನನಿಬಿಡ ಪ್ರದೇಶ ಎಂಬ ಖ್ಯಾತಿ ಗಳಿಸಿರುವುದು ಚಿಕ್ಕಪೇಟೆ ಕ್ಷೇತ್ರ. ಇದಲ್ಲದೆ ಹಲವು ವೈವಿಧ್ಯತೆಯ ತಾಣಗಳಾದ ಸಸ್ಯಕಾಶಿ ಲಾಲ್‌ಬಾಗ್, ಎಲೆಕ್ಟ್ರಾನಿಕ್ ವಸ್ತುಗಳು ಸಿಗುವ ಎಸ್‌ ಪಿ ರಸ್ತೆ, ಕರಗಕ್ಕೆ ಪ್ರಸಿದ್ಧಿ ಪಡೆದಿರುವ ಧರ್ಮರಾಯಸ್ವಾಮಿ ದೇವಾಲಯ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಜನತಾ ಪಕ್ಷದ ಎ ಲಕ್ಷ್ಮೀಸಾಗರ್, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಜೀವರಾಜ್‌ ಆಳ್ವ ಮುಂತಾದ ನಾಯಕರು ಇಲ್ಲಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯ ಪಿ ಸಿ ಮೋಹನ್‌ ಸಂಸದರಾಗುವ ಮೊದಲು ಇಲ್ಲಿ ಎರಡು ಬಾರಿ ಶಾಸಕರಾಗಿದ್ದರು. 2013ರಲ್ಲಿ ಆಯ್ಕೆಯಾಗಿ 2018ರಲ್ಲಿ ಬಿಜೆಪಿಯ ಉದಯ್‌ ಗರುಡಾಚಾರ್‌ ಅವರಿಂದ ಪರಾಭವಗೊಂಡಿದ್ದ ಆರ್‌ ವಿ ದೇವರಾಜ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಮಲ ಪಕ್ಷ ಉದಯ್‌ ಗರುಡಾಚಾರ್‌ ಅವರಿಗೆ ಮತ್ತೆ ಮಣೆ ಹಾಕಿದೆ. ಜೆಡಿಎಸ್‌ನಿಂದ ಇಮ್ರಾನ್‌ ಪಾಶಾ ಕಣಕ್ಕಿಳಿದಿದ್ದಾರೆ. ಇದರ ಜೊತೆ ಕಾಂಗ್ರೆಸ್ ತೊರೆದು ಎಎಪಿ ಸೇರಿರುವ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಇಲ್ಲಿಂದಲೇ ಸ್ಪರ್ಧೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಉದ್ಯಮಿ ಕೆಜಿಎಫ್‌ ಬಾಬು ಕೂಡ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.

ವಾಣಿಜ್ಯ ಪ್ರದೇಶವಾದರೂ ಮೂಲಸೌಕರ್ಯ ವಿಷಯದಲ್ಲಿ ಚಿಕ್ಕಪೇಟೆ ವಂಚಿತ. ಸಮಸ್ಯೆಗಳು ತಾಂಡವವಾಡುತ್ತಿವೆ. ಹೊರರಾಜ್ಯದಿಂದ ವಲಸೆ ಬಂದಿರುವ ಬಹುಭಾಷಿಕರು ಹಾಗೂ ಮುಸ್ಲಿಂ ಸಮುದಾಯ ಇಲ್ಲಿನ ನಿರ್ಣಾಯಕರು. ಮತಗಳು ಹಂಚಿ ಹೋಗುವ ಸಾಧ್ಯತೆಯಿರುವುದರಿಂದ ಈ ಬಾರಿಯ ಗೆಲುವು ಯಾರದ್ದು ಎನ್ನುವುದು ಕುತೂಹಲ ಮೂಡಿಸಿದೆ.

ಈ ಸುದ್ದಿ ಓದಿದ್ದೀರಾ? ದಾಸರಹಳ್ಳಿ ಕ್ಷೇತ್ರ | ಜೆಡಿಎಸ್‌, ಬಿಜೆಪಿಯ ಗಟ್ಟಿನೆಲೆಯಲ್ಲಿ ಕಾಂಗ್ರೆಸಿಗೆ ಭರವಸೆ!

ಬಸವನಗುಡಿ: ಕಾಂಗ್ರೆಸ್ಸಿನಿಂದ ಭ್ರಷ್ಟಾಚಾರ ವಿರೋಧಿ ಕಾರ್ಯತಂತ್ರ!

ಪಿ ಆರ್‌ ರಾಮಯ್ಯ, ಅಮಿರ್ ರಹಮತುಲ್ಲಾ ಖಾನ್, ಟಿ ಆರ್ ಶಾಮಣ್ಣ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ನೀರಾವರಿ ತಜ್ಞ ಎಚ್‌ ಎನ್‌ ನಂಜೇಗೌಡ, ಮಾಜಿ ಮೇಯರ್ ಕೆ ಚಂದ್ರಶೇಖರ್‌ ಸೇರಿ ವಿವಿಧ ಸಮುದಾಯಗಳ ವಿವಿಧ ಕ್ಷೇತ್ರಗಳ ಸಾಧಕರನ್ನು ಗೆಲ್ಲಿಸಿದ ಕ್ಷೇತ್ರ ಬಸವನಗುಡಿ.

ಬ್ರಾಹ್ಮಣರ ಕ್ಷೇತ್ರವೆಂದು ಜನಜನಿತವಾದರೂ ವಾಸ್ತವದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ಮೂರು ಬಾರಿಯಿಂದ ಗೆಲ್ಲುತ್ತಿರುವ ಎಲ್‌ ಎ ರವಿಸುಬ್ರಹ್ಮಣ್ಯ ಅವರಿಗೆ ಈ ಬಾರಿಯೂ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಯು ಬಿ ವೆಂಕಟೇಶ್ ಹಾಗೂ ಜೆಡಿಎಸ್‌ನಿಂದ ಅರಮನೆ ಶಂಕರ್‌ ಸ್ಪರ್ಧಿಸಿದ್ದಾರೆ. ಈ ಬಾರಿ ಏನೇ ಆದರೂ ಕಮಲದ ಕೋಟೆಯನ್ನು ಕೆಡವಲೇಬೇಕೆಂದು ಎರಡೂ ಪಕ್ಷಗಳು ತಂತ್ರ ರೂಪಿಸುತ್ತಿವೆ.

ಪ್ರಮುಖವಾಗಿ ಕಾಂಗ್ರೆಸ್‌ನ ಯು ಬಿ ವೆಂಕಟೇಶ್, ಕ್ಷೇತ್ರದಲ್ಲಿ ನಡೆದಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಬಹುಕೋ ಟಿ ಹಗರಣವನ್ನು ಪ್ರಸ್ತಾಪಿಸುತ್ತ ಪ್ರಚಾರ ನಡೆಸುತ್ತಿದ್ದಾರೆ. ಠೇವಣಿದಾರರಿಗೆ ನ್ಯಾಯ ಕೊಡಿಸುತ್ತೇನೆ. ಪ್ರಕರಣ ಸಿಬಿಐಗೆ ವಹಿಸಲು ಸಿದ್ಧವಾಗಿರುವುದಾಗಿ ಹೇಳುತ್ತ ಬಿಜೆಪಿ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿದ್ಧಾರೆ. ಬಹುಶಃ ಇದು ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಬ್ಯಾಟರಾಯನಪುರ ಕ್ಷೇತ್ರ | ಕಾಂಗ್ರೆಸ್‌ನ ಭರವಸೆ ನಾಯಕ ಕೃಷ್ಣ ಬೈರೇಗೌಡ ಗೆಲುವಿಗೆ ನೀರೆರೆದ ಬಿಜೆಪಿ ಬಂಡಾಯ

ಪದ್ಮನಾಭನಗರ: ಆರ್ ಅಶೋಕ್ ಕೋಟೆ ಈ ಬಾರಿ ಛಿದ್ರವಾಗುವುದೇ?

ಏಷ್ಯಾದ ಅತಿದೊಡ್ಡ ವಿಧಾನಸಭಾ ಕ್ಷೇತ್ರವೆನಿಸಿಕೊಂಡಿದ್ದ ಉತ್ತರಹಳ್ಳಿ ಕ್ಷೇತ್ರದ ಭಾಗವಾಗಿದ್ದ ಪದ್ಮನಾಭನಗರ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯ ನಂತರ ಹೊಸ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ದಿಗ್ಗಜ ರಾಜಕಾರಣಿಗಳಾದ ದಲಿತ ನಾಯಕ ಬಿ ಬಸವಲಿಂಗಪ್ಪ, ಎಂ ವಿ ರಾಜಶೇಖರನ್ ಉತ್ತರಹಳ್ಳಿಯ ಶಾಸಕರಾಗಿದ್ದರೆನ್ನುವುದು ಇಲ್ಲಿನ ಹಿರಿಮೆ.

ಈ ಕ್ಷೇತ್ರವನ್ನು ಹ್ಯಾಟ್ರಕ್ ಗೆಲುವಿನಿಂದ ಪ್ರತಿನಿಧಿಸುತ್ತಿರುವುದು ಬಿಜೆಪಿಯ ಪ್ರಭಾವಿ ಮುಖಂಡ, ಹಾಲಿ ಸಚಿವರಾಗಿರುವ ಆರ್‌ ಅಶೋಕ್.‌ ಕಳೆದ ಮೂರು ಬಾರಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನೀಡಿದರೂ ಮಣಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆ ಇರುವುದರಿಂದ ಬಿಜೆಪಿಯನ್ನು ಸೋಲಿಸಲೇಬೇಕೆಂದು ತೆನೆ, ಕೈ ಪಕ್ಷಗಳು ಪಣ ತೊಟ್ಟಿವೆ.

ಪ್ರಭಾವಿ ನಾಯಕರಾದ ಕಾರಣ ನಾಲ್ಕನೇ ಬಾರಿಯೂ ಟೆಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ರಘುನಾಥ್ ನಾಯ್ಡು ಸ್ಪರ್ಧಿಸಿದ್ದರೆ, ಜೆಡಿಎಸ್‌ನಿಂದ ಕಣಕ್ಕಿಳಿದಿರುವುದು ಬಂಜಾರಪಾಳ್ಯ ಮಂಜುನಾಥ್. 2008 ಹಾಗೂ 2018ರಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಇಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಕ್ಷೇತ್ರ ಅಭ್ಯರ್ಥಿ ತಾನೆಂದುಕೊಂಡು ಮತ ಹಾಕಬೇಕೆಂದು ಪ್ರಚಾರ ನಡೆಸಿದ್ದಾರೆ.

ಶುದ್ಧ ಕುಡಿಯುವ ನೀರು, ಸ್ಮಶಾನ, ಆಟದ ಮೈದಾನ ಹಾಗೂ ಶಾಲಾ ಕಾಲೇಜುಗಳು ಪದ್ಮನಾಭನಗರದಲ್ಲಿ ಅಗತ್ಯಕ್ಕೆ ಅನುಸಾರವಾಗಿಲ್ಲ. ಇವೆಲ್ಲವು ಬಿಜೆಪಿ ವಿರುದ್ಧ ಮತವಾಗಿ ಪರಿವರ್ತಿತವಾದರೆ ಅಚ್ಚರಿಯಿಲ್ಲ.

ಈ ಸುದ್ದಿ ಓದಿದ್ದೀರಾ? ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ | ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಬಲಕ್ಕೆ ಹೆಚ್ಚು ಮಣೆ

ಬಿಟಿಎಂ ಲೇಔಟ್: ಕಾಂಗ್ರೆಸಿನ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಯತ್ನ!

ಬಿಟಿಎಂ ಲೇಔಟ್ (ಭೈರಸಂದ್ರ, ತಾವರೆಕೆರೆ, ಮಡಿವಾಳ ಲೇಔಟ್) ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಕೊಂಡಿತ್ತು. ಬಳಿಕ ಕ್ಷೇತ್ರ ವಿಭಜನೆಯಾದಾಗ 2008ರಲ್ಲಿ ಜಕ್ಕಸಂದ್ರ, ಈಜಿಪುರ, ಕೋರಮಂಗಲವನ್ನು ಒಳಗೊಂಡಂತೆ ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಲಕ್ಕಸಂದ್ರ, ಸುದ್ದಗುಂಟೆಪಾಳ್ಯ ಮತ್ತು ಮಡಿವಾಳ ಪ್ರದೇಶಗಳನ್ನು ಹೊಂದಿಕೊಂಡು ಬಿಟಿಎಂ ಲೇಔಟ್ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

ಹಿಂದಿನಿಂದಲೂ ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯೇ ಆಗಿದೆ. 2008 ರಿಂದ ರಾಮಲಿಂಗಾರೆಡ್ಡಿ ಅವರು ಮೂರು ಬಾರಿ ಚುನಾಯಿತರಾಗಿದ್ದಾರೆ. ಮೊದಲ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ದೊಡ್ಡ ಅಂತರದಿಂದ ಗೆದ್ದ ರಾಮಲಿಂಗಾ ರೆಡ್ಡಿ 2008 ರಲ್ಲಿ ಮಾತ್ರ ಬಿಜೆಪಿಯೆದುರಿಗೆ ಪ್ರಯಾಸದ ಗೆಲುವು ಸಾಧಿಸಿದ್ದರು.

ಬಿಜೆಪಿ ಈ ಬಾರಿ ಶ್ರೀಧರ್‌ ರೆಡ್ಡಿ ಅವರನ್ನು ಕಣಕ್ಕಿಳಿಸಿದರೆ, ಜೆಡಿಎಸ್‌ನಿಂದ ಸ್ಥಳೀಯ ನಾಯಕ ಎಂ ವೆಂಕಟೇಶ್ ಸ್ಪರ್ಧಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಜನರ ಸಮಸ್ಯೆ ಆಲಿಸುವ, ಸಾರ್ವಜನಿಕ ಕೈಗೆ ಸಿಗುವ ನಾಯಕ ಎನ್ನವ ಭಾವನೆ ಮತದಾರರಲ್ಲಿದೆ. ಇವರು ತಮ್ಮ ಕಾರ್ಯಗಳಿಂದಲೇ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡುವ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಗೆಲ್ಲುವುದು ಬಿಜೆಪಿ ಮತ್ತು ಜೆಡಿಎಸ್‌ಗೆ ಅಷ್ಟು ಸುಲಭವಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಜಯನಗರ: ಕಾಂಗ್ರೆಸ್ – ಬಿಜೆಪಿ ತೀವ್ರ ಪೈಪೋಟಿ

ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆ ಪಿ ನಗರ, ಸಾರಕ್ಕಿ ಹಾಗೂ ಶಾಕಾಂಬರಿನಗರ ಎಂಬ 6 ಬಿಬಿಎಂಪಿ ವಾರ್ಡ್‌ಗಳನ್ನು ಒಳಗೊಂಡಿರುವ ಕ್ಷೇತ್ರವೇ ಜಯನಗರ ವಿಧಾನಸಭಾ ಕ್ಷೇತ್ರ. ಏಷ್ಯಾದ ಅತಿ ದೊಡ್ಡ ಬಡಾವಣೆಯಿರುವುದು ಇದೇ ಕ್ಷೇತ್ರದಲ್ಲಿ.

ಜಯನಗರ ಕ್ಷೇತ್ರ 1978ರಿಂದ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಮನ್ನಣೆ ನೀಡುತ್ತಾ ಬಂದಿದೆ. 1978-1989ರ ಮೊದಲ ಹತ್ತು ವರ್ಷಗಳ ಕಾಲ ಜನತಾ ಪಕ್ಷದ ವಶದಲ್ಲಿತ್ತು, ಆ ನಂತರದ 20 ವರ್ಷ, 1989-2008ರವೆಗೆ, ಕಾಂಗ್ರೆಸ್ಸಿನ ತೆಕ್ಕೆಯಲ್ಲಿತ್ತು. ಮುಂದಿನ ಹತ್ತು ವರ್ಷಗಳ ಕಾಲ 2008-2018ರ ತನಕ ಬಿಜೆಪಿ ಇಲ್ಲಿ ಮೇಲುಗೈ ಸಾಧಿಸಿತು. ಹೀಗೆ ಮೂರು ಪಕ್ಷಗಳ ಪಾರಮ್ಯದ ಒಂದು ಆವರ್ತ ಮುಗಿದು 2018ರಲ್ಲಿ ಮತ್ತೆ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.

ಕಾಂಗ್ರೆಸ್‌ನಿಂದ ಈ ಬಾರಿ ಹಾಲಿ ಶಾಸಕಿ ಸೌಮ್ಯ ರೆಡ್ಡಿ ಸ್ಪರ್ಧಿಸಿದ್ದಾರೆ. ಬಿಜೆಪಿ ಸಿ ಕೆ ರಾಮಮೂರ್ತಿ ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ಕಾಳೇಗೌಡ ಎಂಬುವವರು ಕಣಕ್ಕಿಳಿದಿದ್ದಾರೆ. ಐದು ವರ್ಷಗಳಲ್ಲಿ ತಾವು ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿಯೆ ಗೆಲುವಿನ ಶ್ರೀರಕ್ಷೆಯಾಗಲಿದೆ ಎಂದು ಸೌಮ್ಯ ರೆಡ್ಡಿ ಹೇಳಿದರೆ, ಕ್ಷೇತ್ರವು ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಚಾರ ಮಾಡುತ್ತಿದ್ದಾರೆ. ಇವರಿಬ್ಬರ ಪೈಪೋಟಿ ನಡುವೆ ಜೆಡಿಎಸ್‌ ಸ್ಪರ್ಧೆ ಅಷ್ಟು ನಿರ್ಣಾಯಕವಾಗಿಲ್ಲ.

ಬೊಮ್ಮನಹಳ್ಳಿ: ಬಿಜೆಪಿ ಕೋಟೆ ಕೆಡವಲು ಕಾಂಗ್ರೆಸ್ ಯತ್ನ

ಉತ್ತರಹಳ್ಳಿ ಹಾಗೂ ಆನೇಕಲ್‌ ಕ್ಷೇತ್ರಗಳ ಕೆಲ ಪ್ರದೇಶಗಳನ್ನು ಒಳಗೊಂಡಂತೆ ರಚನೆಯಾದ ವಿಧಾನಸಭಾ ಕ್ಷೇತ್ರವಿದು. 2008ಕ್ಕೂ ಮೊದಲು ಅತಿದೊಡ್ಡ ವಿಧಾನಸಭಾ ಕ್ಷೇತ್ರವೆಂದು ಹೆಸರು ಪಡೆದುಕೊಂಡಿದ್ದ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ನಂತರದಲ್ಲಿ ಐದು ವಿಧಾನಸಭಾ ಕ್ಷೇತ್ರಗಳಾಗಿ ಹೋಳಾದಾಗ ಅದರಲ್ಲಿ ಹುಟ್ಟಿದ ಒಂದು ಕ್ಷೇತ್ರ ಬೊಮ್ಮನಹಳ್ಳಿ. ಕ್ಷೇತ್ರ ವಿಸ್ತರಣೆ ಕಾರಣದಿಂದ ಪಕ್ಕದ ಆನೇಕಲ್‌ ವಿಧಾನಸಭಾ ಕ್ಷೇತ್ರದ ಕೆಲ ಭಾಗಗಳನ್ನು ಇಲ್ಲಿಗೆ ವಿಲೀನ ಮಾಡಿ ಸ್ವತಂತ್ರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಸೃಷ್ಟಿಸಲಾಯಿತು. 

ಬೇಗೂರು ಜಿಲ್ಲಾ ಪಂಚಾಯಿತಿ ಹಾಗೂ ಬೊಮ್ಮನಹಳ್ಳಿ ನಗರಸಭೆ ಸದಸ್ಯ ಸ್ಥಾನದಿಂದ ರಾಜಕೀಯದ ಪಟ್ಟುಗಳನ್ನು ಕರಗತ ಮಾಡಿಕೊಂಡು ಅಲ್ಲಿಂದ ನೇರವಾಗಿ ವಿಧಾನಸೌಧ ಪ್ರವೇಶ ಮಾಡಿದವರು ಬಿಜೆಪಿಯ ಸತೀಶ್‌ ರೆಡ್ಡಿ. 2008ರಿಂದಲೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಸತೀಶ್ ರೆಡ್ಡಿ ‘ಹ್ಯಾಟ್ರಿಕ್‌ʼ ಗೆಲುವು ಪಡೆದಿದ್ದಾರೆ.

ಕಾಂಗ್ರೆಸ್‌ನಿಂದ ರಿಯಲ್‌ ಎಸ್ಟೇಟ್ ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಅವರಿಗೆ ಟಿಕೆಟ್ ನೀಡಿದ್ದು, ಕ್ಷೇತ್ರದ ಮೂಲಸೌಕರ್ಯದ ಬಗ್ಗೆ ಬೊಟ್ಟು ಮಾಡುತ್ತ, ಈ ಬಾರಿ ಸತೀಶ್ ರೆಡ್ಡಿಯವರನ್ನು ಸೋಲಿಸಲೇಬೇಕೆಂದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ನಾರಾಯಣ ರಾಜು ಸ್ಪರ್ಧಿಸಿದ್ದು, ತಕ್ಕಮಟ್ಟಿಗೆ ಕ್ಷೇತ್ರದ ಗಮನ ಸೆಳೆಯುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಚುನಾವಣಾ ಸೆಣಸಾಟ ಏನಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತ್ರವಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ದಾವಣಗೆರೆ | ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ದೂರು ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು...

ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

'ಬಿ ಎ ಮೊಯ್ದೀನ್ ಅಪ್ಪಟ ಜಾತ್ಯತೀತ ಮೌಲ್ಯಗಳುಳ್ಳ ಆದರ್ಶ ವ್ಯಕ್ತಿತ್ವ ಹೊಂದಿದ್ದರು' 'ಸಂವಿಧಾನದ...