ಡೆಂಘೀ ತಡೆಯಲು ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ ಎಂದು ರಾಘವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್ ಡಿ ಉಲ್ಲಾಸ್ ಸ್ಥಳೀಯರಿಗೆ ಕರೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಡೆಂಘೀ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಡೆಂಘೀ ಜ್ವರ ಸೊಳ್ಳೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೊಳ್ಳೆಗಳು ಹೆಚ್ಚಾಗಿ ನಿಂತನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹಳ್ಳಕೊಳ್ಳಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು” ಎಂದು ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದರು.
ರಾಘವಪುರ ಗ್ರಾಮದಲ್ಲಿ ಒಪಿಡಿ ಸಂಸ್ಥೆ ಮತ್ತು ಪಂಚಾಯಿತಿ ಸಹಯೋಗದಲ್ಲಿ ಡೆಂಘೀ ಜ್ವರ ಮತ್ತು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಘವಪುರ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಪಂಚಾಯಿತಿ ನೌಕರರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳೆಲ್ಲ ಸೇರಿ ಪಟ್ಟಲದಮ್ಮ ದೇವಸ್ಥಾನ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಹಿಂಗಾರಿನಲ್ಲಿ ಕಡಲೆ, ಜೋಳ, ಗೋಧಿ, ಕುಸುಬೆ ಬಿತ್ತನೆ ಮಾಡಿ: ರೈತರಿಗೆ ಕೃಷಿ ಇಲಾಖೆ ಸಲಹೆ
ಒಡಿಪಿ ಸಂಸ್ಥೆಯ ಸಂಯೋಜಕಿ ರೂಪ ಮಾತನಾಡಿ, “ಸಾರ್ವಜನಿಕರು ಡೆಂಘೀ ಜ್ವರದ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಅರಿವಿನ ಕಾರ್ಯಕ್ರಮದಲ್ಲಿ ಸದಸ್ಯೆ ಸುಧಾರಾಣಿ, ಕಾರ್ಯದರ್ಶಿ ನಾಗೇಂದ್ರ, ಒಡಿಪಿ ಕಾರ್ಯಕರ್ತ ಮಹೇಶ್, ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು, ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.