ಹರಿಯಾಣದಲ್ಲಿ ಮೋದಿ ಕರ್ನಾಟಕದ ಜಪ ಮಾಡುತ್ತಿರುವುದೇಕೆ?

Date:

Advertisements

ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಎಲ್ಲ ಪಕ್ಷಗಳು ಚುನಾವಣೆ ಗೆಲ್ಲಲು ಭಾರೀ ಕಸರತ್ತು ನಡೆಸುತ್ತಿವೆ. ಮತದಾರರಿಗೆ ಗ್ಯಾರಂಟಿ, ಭರವಸೆಗಳನ್ನು ಘೋಷಿಸುತ್ತಿವೆ. ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ, ಇದೆಲ್ಲದರ ಜೊತೆಗೆ ಬಿಜೆಪಿ ಯಥಾಪ್ರಕಾರ ತನ್ನ ದ್ವೇಷ ಭಾಷಣವನ್ನು ಮುಂದುವರೆಸಿದೆ. ಹರಿಯಾಣ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣಕ್ಕೆ ಪ್ರಧಾನಿ ಮೋದಿ ಅವರೇ ನಾಂದಿ ಹಾಡಿದ್ದಾರೆ.

ಕೋಮು ಗಲಭೆ, ನಿರುದ್ಯೋಗ ಸಮಸ್ಯೆಯಂತಹ ಸವಾಲುಗಳಿಂದ ತತ್ತರಿಸಿರುವ ಹರಿಯಾಣ, ಬದುಕಿನ ಖಾತರಿಗಾಗಿ ರೈತರು ಬೆಳೆವ ಬೆಳೆಗಳಿಗೆ ಎಂಎಸ್‌ಪಿ ನೀಡಬೇಕೆಂದು ಒತ್ತಾಯಿಸುತ್ತಿದೆ. ಪಂಜಾಬ್-ಹರಿಯಾಣ ರೈತರ ಹೋರಾಟ ದೇಶದ ದಿಕ್ಕನ್ನೇ ಬದಲಿಸಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದೆ. 10 ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ, ಮತ್ತೆ ಅಧಿಕಾರಕ್ಕೇರಲು ಹಪಾಹಪಿಸುತ್ತಿದೆ.

ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆಗೆ ಮತದಾನ ನಡೆಯಲಿದೆ. ಈಗಾಗಲೇ ಕೆಲವು ಚುನಾವಣಾ ಸಮೀಕ್ಷೆಗಳು ಹೊರಬಂದಿವೆ. ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್‌ ಹರಿಯಾಣದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಆ ರಾಜ್ಯದ 90 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 56 ರಿಂದ 58 ಸ್ಥಾನಗಳನ್ನು ಗೆಲ್ಲಲಿದೆ. ಆಡಳಿತ ವಿರೋಧಿ ಅಲೆ, ರೈತ ಆಕ್ರೋಶ, ನಿರುದ್ಯೋಗಿ ಯುವಜನರ ಕೆಂಗಣ್ಣಿಗೆ ಸಿಲುಕಿರುವ ಬಿಜೆಪಿ, 24 ರಿಂದ 26 ಸ್ಥಾನಗಳಿಗೆ ಕುಸಿಯಲಿದೆ. ಎಎಪಿ ತನ್ನ ಖಾತೆ ತೆರೆಯಲಿದೆ. ಸ್ಥಳೀಯ ಪಕ್ಷ ಜೆಜೆಪಿ ಭಾರೀ ಹಿನ್ನಡೆ ಅನುಭವಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

Advertisements

ಬಿಜೆಪಿ ಸೋಲು ಖಚಿತ ಎನ್ನುತ್ತಿರುವ ಸಮೀಕ್ಷೆಗಳಿಂದ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್, ನಾಯಕರು ಕಂಗಾಲಾಗಿದ್ದಾರೆ. ಜೊತೆಗೆ, ಕನಿಷ್ಠ 40 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ದೊರೆಯದೆ, ಹಲವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿಯೂ ಕೆಲವರು ಸ್ಪರ್ಧಿಸಿದ್ದಾರೆ. ಇದು ಬಿಜೆಪಿಗೆ ಮತ್ತಷ್ಟು ತಲೆನೋವಾಗಿದೆ. ಆದಾಗ್ಯೂ, ಹೇಗಾದರೂ ಸರಿಯೇ ಹರಿಯಾಣದಲ್ಲಿ ಮತ್ತೆ ಗೆಲ್ಲಲೇಬೇಕೆಂಬ ಹುಂಬತನಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ, ತಮ್ಮ ಬತ್ತಳಿಕೆಯಲ್ಲಿ ಸದಾ ಇದ್ದೇ ಇರುವ ಕೋಮು ದ್ವೇಷ ಪೂರಿತ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 14ರಂದು ಹರಿಯಾಣದ ಕುರುಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದ ಮೋದಿ, ಕಾಂಗ್ರೆಸ್‌ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳುಗಳೊಂದಿಗೆ ವಾಗ್ದಾಳಿ ನಡೆಸಿದ್ದರು. ಕರ್ನಾಟಕದ, ಅದರಲ್ಲೂ ನಾಗಮಂಗಲದ ವಿಚಾರದ ಬಗ್ಗೆ ಮಾತನಾಡಿದ್ದರು. ”ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣಪತಿಯನ್ನೂ ಕಂಬಿ ಹಿಂದೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಇಂದು ಗಣೇಶ ಉತ್ಸವ ಆಚರಿಸುತ್ತಿದ್ದು, ಅದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಅದು ಹಳೆಯ ಕಾಂಗ್ರೆಸ್ ಅಲ್ಲ. ಇಂದಿನ ಕಾಂಗ್ರೆಸ್ ನಗರ ನಕ್ಸಲ್‌ನ ಹೊಸ ರೂಪವಾಗಿದೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ಇನ್ನು, ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿದ್ದ ಅನುಮತಿಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ 24ರಂದು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ಈ ಬಗ್ಗೆಯೂ ಸೆಪ್ಟೆಂಬರ್ 25ರಂದು ಹರಿಯಾಣದಲ್ಲಿ ಮಾತನಾಡಿದ್ದ ಮೋದಿ, ”ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ಅಧಿಕಾರ ನಡೆಸಿದೆಯೋ ಅಲ್ಲೆಲ್ಲ ಬಹಳ ಭ್ರಷ್ಟಾಚಾರ ನಡೆದಿದೆ. ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಕಾಂಗ್ರೆಸ್. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿದೆ ನೋಡಿ. ಭೂ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆರೋಪಿಯಾಗಿದ್ದಾರೆ. ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್‌ ಅನುಮತಿ ನೀಡಿದೆ. ಅಂತಹ ಪಕ್ಷಕ್ಕೆ ಮತನೀಡುತ್ತೀರಾ” ಎಂದಿದ್ದಾರೆ.

ಹೀಗೆ, ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ಬಗ್ಗೆ ಮೋದಿ ಹರಿಯಾಣದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯಗಳ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಮತ್ತು ಗಂಭೀರ ವಿಚಾರಗಳು, ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆಯಾ ರಾಜ್ಯಗಳ ಜನರ ಜೀವ-ಜೀವನಕ್ಕೆ ಸಂಬಂಧಿತ ವಿಷಯಗಳ ಪ್ರಸ್ತಾಪವಾಗಬೇಕು. ಅವುಗಳ ಆಧಾರದ ಮೇಲೆಯೂ ಚುನಾವಣೆ ನಡೆಯಬೇಕು.

ಆದರೆ, ಮೋದಿ ಯಾಕೆ ಇತರ ರಾಜ್ಯಗಳ ವಿಚಾರಗಳನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ. ಈ ಹಿಂದೆ, 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಾಗ, ರಾಜ್ಯಕ್ಕೆ ಆಗ್ಗಾಗ್ಗೆ ಬಂದು, ಅಬ್ಬರ ಪ್ರಚಾರ ಮಾಡಿದ್ದ ಮೋದಿ, ಕರ್ನಾಟಕದಲ್ಲಿ ಕೇರಳದ ಬಗ್ಗೆ ಮಾತನಾಡಿದ್ದರು. ಕೇರಳ ಸ್ಟೋರಿ ಸಿನಿಮಾ ಇಟ್ಟುಕೊಂಡು, ಕೇರಳದಲ್ಲಿ ಹೆಣ್ಣು ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ. ಹಿಂದು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗುತ್ತಿದೆ ಎಂದಿದ್ದರು.

ಅಂತೆಯೇ, ಇತರ ರಾಜ್ಯಗಳ ಚುನಾವಣೆಯ ಸಮಯದಲ್ಲಿ ಆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು, ಇನ್ನಾವುದೋ ರಾಜ್ಯದ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಮೋದಿ ದಾಳಿ ನಡೆಸುತ್ತಲೇ ಇರುತ್ತಾರೆ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಜಮ್ಮು-ಕಾಶ್ಮೀರದಲ್ಲಿ ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳು ಒಂದಾಗುವವೇ?

ಹಾಗೊಂದು ವೇಳೆ, ಇತರ ರಾಜ್ಯಗಳ ವಿಷಯಗಳೂ ಚುನಾವಣೆ ಸಮಯದಲ್ಲಿ ಚರ್ಚೆಯಾಗುವುದು ಅಗತ್ಯ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ, ಕಳೆದ ಒಂದು ವರ್ಷಗಳಿಂದ ಜನಾಂಗೀಯ ಹಿಂಸಾಚಾರರಿಂದ ಬಳಲುತ್ತಿರುವ, ಸಾವಿರಾರು ಜನರು ಜೀವ-ಜೀವನ ಕಳೆದುಕೊಂಡಿರುವ, ಹೆಣ್ಣುಮಕ್ಕಳು ಅತ್ಯಾಚಾರ-ದೌರ್ಜನ್ಯಗಳಿಗೆ ಒಳಗಾಗಿರುವ ಮಣಿಪುರದ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಗಮನಾರ್ಹವಾಗಿ, ಲೋಕಸಭಾ ಚುನಾವಣೆಯ ಸಮಯದಲ್ಲೂ ಪ್ರಧಾನಿಯಾಗಿ ಮೋದಿ ಮಣಿಪುರಕ್ಕೆ ಭೇಟಿ ನೀಡಲಿಲ್ಲ.

ಅಲ್ಲದೆ, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ನ್ಯಾಯ ಎಂಬ ಅಸಂವಿಧಾನ, ಅಮಾನವೀಯ ನಡೆಯನ್ನ ಅನುಸರಿಸುತ್ತಿತ್ತು. ಆ ಕ್ರಮವನ್ನು ದೇಶದ ಇತರ ರಾಜ್ಯಗಳಲ್ಲಿಯೂ ತರಬೇಕೆಂದು ಬಿಜೆಪಿಗರು ಮಾತನಾಡುತ್ತಿದ್ದರು. ಈಗ, ನ್ಯಾಯಾಲಯದ ಅನುಮತಿ ಇಲ್ಲದೆ ಬುಲ್ಡೋಜರ್ ಕ್ರಮಗಳನ್ನು ಅನುಸರಿಸುವಂತಿಲ್ಲ ಎಂದು ಹೇಳಿದೆ. ಆದರೆ, ಈ ಬಗ್ಗೆ ಮೋದಿ ಯಾವುದೇ ಮಾತನಾಡಿಲ್ಲ.

ಬಿಜೆಪಿಯೇ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಆ ರಾಜ್ಯಗಳ ಬಗ್ಗೆ ಮೋದಿ ಯಾವುದೇ ಚುನಾವಣಾ ಭಾಷಣ ಅಥವಾ ಬೇರಾವುದೇ ಸಂದರ್ಭದಲ್ಲಿಯೂ ಮಾತನಾಡುವುದಿಲ್ಲ.

ಎಲ್ಲೋದರೂ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ, ಕಾಂಗ್ರೆಸ್‌ ಭ್ರಷ್ಟರ ಪಕ್ಷ ಎನ್ನುವ ಮೋದಿ ಅವರು, ತಮ್ಮ ಸರ್ಕಾರ ಚುನಾವಣಾ ಬಾಂಡ್ ಮೂಲಕ ನೇರವಾಗಿ ಭ್ರಷ್ಟಾಚಾರ ಮಾಡಲು ಮತ್ತು ಮಾಡುವವರಿಗೆ ಅವಕಾಶ ನೀಡಿತ್ತು. ಚುನಾವಣಾ ಬಾಂಡ್ ಅಸಂವಿಧಾನಿಕವೆಂದು ಸುಪ್ರೀಂ ಕೋರ್ಟ್‌ ಚಾಟಿ ಬೀಸಿತು. ತಮ್ಮ ಸರ್ಕಾರ ಈ ಕಾನೂನಾತ್ಮಕ ಭ್ರಷ್ಟಾಚಾರ ನಡೆಸಿದ್ದರ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಬದಲಾಗಿ, ಅವರದ್ದೇ ಸರ್ಕಾರದ ಸಚಿವರು ‘ಚುನಾವಣಾ ಬಾಂಡ್‌’ಗಳನ್ನು ಮತ್ತೆ ತರುತ್ತೇವೆಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದಲ್ಲದೆ, ದೇಶಾದ್ಯಂತ ನಾನಾ ರಾಜ್ಯಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿದ್ದ ರಾಜಕಾರಣಿಗಳನ್ನೇ ಖರೀದಿಸಿ, ಬೆದರಿಸಿ ಪಕ್ಷಕ್ಕೆ ಸೇರಿಸಿಕೊಂಡು, ಅವರಿಗೆ ಬಿಜೆಪಿ ಕ್ಲೀನ್ ಚಿಟ್‌ ಕೊಡುತ್ತಿದೆ. ಮಾತ್ರವಲ್ಲದೆ, ಅಜಿತ್ ಪವಾರ್, ಏಕನಾಥ್ ಶಿಂದೆ ಅಂತಹವರನ್ನು ಬಿಜೆಪಿಗೆ ಸೇರಿಸಿಕೊಂಡು, ಜನರಿಂದ ಆಯ್ಕೆಯಾದ ಸರ್ಕಾರವನ್ನೇ ಉರುಳಿಸಿ, ಹಿಂಬಾಗಿನಿಂದ ಅನೈತಿಕವಾಗಿ ಸರ್ಕಾರವನ್ನು ಬಿಜೆಪಿ ರಚಿಸಿದೆ. ಇದರ ಬಗ್ಗೆ ಮೋದಿ ಮಾತನಾಡುವುದಿಲ್ಲ.

ದೇಶದ ಪ್ರಮುಖ ಹುದ್ದೆಯಲ್ಲಿರುವ ಪ್ರಧಾನಿ, ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಹೆಚ್ಚಾಗಿ ಮಾತನಾಡಬೇಕು. ಹಾಗೆನೋಡಿದರೆ, 10 ವರ್ಷಗಳ ಕಾಲ ಪ್ರಧಾನಿಯಾಗಿ ಮೋದಿ ಆಡಳಿತ ನಡೆಸಿದ್ದಾರೆ. ಅವರು ತಮ್ಮ ಸಾಧನೆಗಳನ್ನು ಜನರ ಮುಂದಿಡಬೇಕು. ಆದರೆ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ತಮ್ಮ ಸಾಧನೆಗಳ ಬಗ್ಗೆ ಮಾತನಾಡಿದ್ದನ್ನು ದೇಶದ ಜನರು ಕಾಣಲೇ ಇಲ್ಲ. ಬದಲಾಗಿ, ಕಾಂಗ್ರೆಸ್‌ ವಿರುದ್ಧ ದ್ವೇಷ ಭಾಷಣ, ಮುಸ್ಲಿಮರ ವಿರುದ್ಧ ಕೋಮುವಾದಿ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಲೇ ಚುನಾವಣೆಯಲ್ಲಿ ಮುಗಿಸಿದರು.

ಈ ವರದಿ ಓದಿದ್ದೀರಾ?: ಮಹಾರಾಷ್ಟ್ರದಲ್ಲಿ ಮೋದಿ ಗಣೇಶನಿಗೆ ಗಂಟುಬಿದ್ದಿದ್ದೇಕೆ?

ಕೇಂದ್ರದಂತೆಯೇ ಹರಿಯಾಣದಲ್ಲೂ ಬಿಜೆಪಿ 10 ವರ್ಷಗಳ ಕಾಲ ಆಡಳಿತ ನಡೆಸಿದೆ. ರಾಜ್ಯಕ್ಕೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೊಟ್ಟ ಕೊಡುಗೆಗಳೇನು. ಎರಡೆರಡು ಬಾರಿ ಕೇಂದ್ರದಲ್ಲೂ, ರಾಜ್ಯದಲ್ಲೂ ಅಧಿಕಾರಕ್ಕೆ ಬರಲು ಬಿಜೆಪಿಗೆ ಮತ ಹಾಕಿದ ರಾಜ್ಯದ ಮತದಾರರಿಗಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳೇನು ಎಂಬ ಬಗ್ಗೆ ಮೋದಿಯಾಗಲೀ, ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಾಗಲೀ ಅಥವಾ ಬಿಜೆಪಿಯ ನಾಯಕರಾಗಲೀ ಮಾತನಾಡುತ್ತಿಲ್ಲ.

ಹರಿಯಾಣವು ದೇಶದಲ್ಲಿಯೇ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಅಲ್ಲಿನ ನಿರುದ್ಯೋಗ ದರ 12% ದಾಟಿದೆ. ಯುವಜನರು ಉದ್ಯೋಗ ಸಿಗದೆ ಕಂಗಾಲಾಗಿದ್ದಾರೆ. ಆ ಯುವಜನರಿಗೆ ಮುಂದಾದರೂ ತಮ್ಮ ಸರ್ಕಾರ ಯಾವ ನೆರವು ನೀಡುತ್ತದೆ ಎಂಬ ಬಗ್ಗೆಯೋ ಬಿಜೆಪಿಗರು ತಮ್ಮ ಯೋಜನೆಗಳನ್ನು ಹೇಳುತ್ತಿಲ್ಲ.

ಅವರಿಗೆ ಇರುವುದು ಒಂದೇ ಉದ್ದೇಶ, ಒಂದೇ ಗುರಿ. ಅದು, ಕಾಂಗ್ರೆಸ್‌ ವಿರುದ್ಧ ಸುಳ್ಳು-ಪೊಳ್ಳು ಆರೋಪಗಳನ್ನು ಮಾಡುವುದು, ಆ ಪಕ್ಷದ ವಿರುದ್ಧ ಜನರಲ್ಲಿ ಅಸಹನೆ ಹುಟ್ಟುಹಾಕುವುದು. ಅದರೊಂದಿಗೆ, ಕೋಮು ದ್ವೇಷದ ಮೂಲಕ ಚುನಾವಣೆ ಗೆಲ್ಲುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X