ಪುರಸಭೆ ಅಧಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದ ಮೇಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಐವರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಗುಂಡ್ಲುಪೇಟೆ ಪುರಸಭೆ ಅಧಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಿಂದ ಗೆದ್ದು ಪುರಸಭೆ ಸದಸ್ಯರಾದ ಕಿರಣ್, ಹೀನಾ ಕೌಶರ್, ರಮೇಶ್, ವೀಣಾ ಮಂಜುನಾಥ್, ರಾಣಿ ಲಕ್ಷ್ಮೀದೇವಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರಾದ ಪಿ ಗಿರೀಶ್ ಹಾಗೂ ಕುಮಾರ್ ಎಸ್ ಪುರಸಭೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೋಟೊಸ್ ನೀಡಲಾಗಿದೆ.
ಗುಂಡ್ಲುಪೇಟೆ ಪುರಸಭೆಗೆ ಸೆಪ್ಟೆಂಬರ್ 4ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಪಕ್ಷದ ಸಚೇತಕಾದೇಶ(ವಿಪ್) ಉಲ್ಲಂಘಿಸಿ, ಪಕ್ಷದ ವಿರುದ್ದವಾಗಿ ನಡೆದುಕೊಂಡಿರುವುದು ಕಂಡುಬಂದಿದೆ. ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ
(ಪಕ್ಷಾಂತರ ನಿಷೇಧ) ಅಧಿನಿಯಮ 1987ರ 3(1)(ಬಿ) ಅನ್ವಯ ದೂರುದಾರರರು ಪುರಸಭೆ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಿದ್ದಾರೆ.
“ಸದರಿ ತೀರ್ಮಾನಕ್ಕಾಗಿ ಪ್ರಸ್ತುತ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗೆ ಉತ್ತರಿಸದಿದ್ದರೆ ಅನರ್ಹ ಭೀತಿ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಲಾಗಿದೆ.
“ಪುರಸಭೆ ಉಪಾಧ್ಯಕ್ಷೆ ಸೇರಿದಂತೆ ಐವರಿಗೆ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ ವಾರದೊಳಗೆ ಲಿಖಿತವಾಗಿ ಸಮಜಾಯಿಷಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಮಜಾಯಿಷಿ ಇಲ್ಲವೆಂದು ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟು, ಡೆಂಘೀ ತಡೆಗಟ್ಟಿ: ಗ್ರಾ ಪಂ ಅಧ್ಯಕ್ಷ ಅರ್ ಡಿ ಉಲ್ಲಾಸ್
ಬಿಜೆಪಿ ಸದಸ್ಯ ಪಿ ಗಿರೀಶ್ ಈ ದಿನ.ಕಾಮ್ ಜೊತೆ ಮಾತನಾಡಿ, “ಮಾರಾಟವಾದ ಪುರಸಭೆ ಸದಸ್ಯರ ವಿರುದ್ದ ಅನರ್ಹ ತೂಗುಗತ್ತಿ ನೇತಾಡುತ್ತಿದೆ. ಜಿಲ್ಲಾಧಿಕಾರಿಗಳ ಮೇಲೆ ನಮಗೆ ಅಪಾರ ಗೌರವ ವಿಶ್ವಾಸವಿದೆ. ಪಕ್ಷಾಂತರ ಮಾಡಿ, ಪಕ್ಷ ವಿರೋಧಿ ಚಟುವಿಟಿಕೆ ಮಾಡಿದವರಿಗೆ ನೋಟಿಸ್ ನೀಡಿದ್ದಾರೆ. ಮುಂದೆ ಅವರನ್ನು ಅನರ್ಹಗೊಳಿಸುವ ನಂಬಿಕೆ ಇದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಈ ವಿಚಾರವಾಗಿ 30 ದಿನದಲ್ಲಿ ಅನರ್ಹವಾಗದಿದ್ದರೆ ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಿದ್ದೇವೆ” ಎಂದರು.