- ದೇವೇಂದ್ರ ಫಡ್ನವಿಸ್ ಕಾರ್ಯಕ್ರಮಕ್ಕೆ ನುಗ್ಗಲು ಯತ್ನ, ಬಂಧನ
- ಕಪ್ಪು ಬಾವುಟ ಪ್ರದರ್ಶಿಸುವಂತೆ ಕರೆ ನೀಡಿದ್ದ ಶಿವಸೇನೆ ವಕ್ತಾರ
ರಾಜ್ಯದಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಶಿವಸೇನೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದು, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ಘಟನೆಬ ಬೆಳಗಾವಿಯಲ್ಲಿ ನಡೆದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ನಿಲುವು ತೆಗೆದುಕೊಳ್ಳಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಅಲ್ಲದೆ, ಫಡ್ನವೀಸ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಅಭಯ್ ಪಾಟೀಲ್ ಮತ್ತು ರವಿ ಪಾಟೀಲ್ ಪರ ಪ್ರಚಾರಕ್ಕಾಗಿ ಫಡ್ನವೀಸ್ ಬೆಳಗಾವಿಗೆ ಬಂದಿದ್ದರು. ಈ ವೇಳೆ, ಎಂಇಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿದ್ದಾರೆ. ಫಡ್ನವೀಸ್ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದ ಪೊಲೀಸರು, ಹಲವು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದಿಂದ ಬರುವ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಕಪ್ಪು ಬಾವುಟ ಪ್ರದರ್ಶಿಸುವಂತೆ ಶಿವಸೇನ (ಯುಬಿಟಿ) ವಕ್ತಾರ ಸಂಜಯ್ ರಾವತ್ ಎಂಇಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಐದು ಮಂದಿಯನ್ನು ಕಣಕ್ಕಿಳಿಸಿರುವ ಎಂಇಎಸ್, ಮಹಾರಾಷ್ಟ್ರದ ಪ್ರಮುಖ ರಾಜಕೀಯ ನಾಯಕರಿಗೆ ಪತ್ರ ಬರೆದು, ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿತ್ತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸರ್ವಜನರ ಶಾಂತಿಯ ತೋಟವನ್ನು ‘ಯುಪಿ’ ಮಾದರಿ ಪ್ರಯೋಗಾಲಯ ಮಾಡಲು ಹೊರಟಂತಿದೆ
ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದು, ಎಂಇಎಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿಲ್ಲ. ಎಂಇಎಸ್‌ಗೆ ಎನ್‌ಸಿಪಿ ಹಾಗೂ ಶಿವಸೇನೆ ಬೆಂಬಲ ನೀಡಿವೆ.
“ರಾಷ್ಟ್ರೀಯ ಪಕ್ಷದ ನಾಯಕನಾಗಿ ನಾನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದೇನೆ ಎಂದ ಮಾತ್ರಕ್ಕೆ ಮರಾಠಿ ಜನರ ಹೋರಾಟವನ್ನು ನಾನು ಬೆಂಬಲಿಸುವುದಿಲ್ಲ ಎಂಬ ಅರ್ಥವಲ್ಲ” ಎಂದು ಫಡ್ನವೀಸ್ ಸಮುಜಾಯಿಷಿ ನೀಡಿದ್ದಾರೆ.