ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಇನ್ಸೂರೆನ್ಸ್ ಕಂಪನಿ ರೈತ ಹೋರಾಟಕ್ಕೆ ಮಣಿದು ಮಧ್ಯಂತರ ಪರಿಹಾರ 129 ಕೋಟಿ ಹಣ ರೈತರ ಖಾತೆಗೆ ಜಮಾ ಮಾಡಿತ್ತು. ಉಳಿದ 69 ಕೋಟಿ ಬಾಕಿ ಹಣ ಕೊಡುವಲ್ಲಿ 2023-24ನೇ ಸಾಲಿನ ಬೆಳೆ ವಿಮಾ ವಿಷಯದಲ್ಲಿ ಸಾಕಷ್ಟು ತಾರತಮ್ಯ ನಡೆದಿದೆ. ಕೇಂದ್ರ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು.
ಜಿಲ್ಲೆಯಲ್ಲಿ 2 ತಿಂಗಳಿಂದ ಜಿಟಿ-ಜಿಟಿ ಸುರಿಯುತ್ತಿರುವ ಮಳೆಯಿಂದ ಬೆಳೆ ನಾಶವಾಗಿದ್ದು ಸರಕಾರ ತಕ್ಷಣ ಬೆಳೆ ಪರಿಹಾರ ಕೊಡಬೇಕು. ಹೆಸ್ಕಾಂ ಕಂಪನಿ ಒಂದು ವರ್ಷದಿಂದ ಹೊಸ ಪಂಪ್‌ಸೆಟ್‌ಗಳಿಗೆ ಅರ್ಜಿ ಪಡೆಯುವುದನ್ನು ನಿಲ್ಲಿಸಿರುವುದರಿಂದ ಬಹಳ ತೊಂದರೆಯಾಗಿದ್ದು ಅರ್ಜಿ ಪಡೆಯಬೇಕು. ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಕೆಲವು ಹಳ್ಳಿಗಳಿಗೆ ರೇಲ್ವೇ ಟ್ರ್ಯಾಕ್ ನಿರ್ಮಿಸಲು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ತುಂಗಾ ಮೇಲ್ದಂಡೆ ಕಾಲುವೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕಳೆದುಕೊಂಡಿದ್ದು ಕೆ.ಐ.ಡಿ.ಬಿ. ಬಲವಂತವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಶಾಶ್ವತ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ತುಂಗಭದ್ರ, ವರದಾ, ಕುಮದ್ವತಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಸಾವಿರಾರು ಕೋಟಿ ಹಣವೆಚ್ಚ ಮಾಡಿ ಕಾಮಗಾರಿ ಹಿಂದಿನ ಕೆಲವು ಕೆರೆಗಳಿಗೆ ನೀರು ಬೀಳದೆ ಇರುವುದು ಅಧಿಕಾರಿಗಳ ಅವೈಜ್ಞಾನಿಕ ನೀತಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಆರ್ ವಿ ಕೆಂಚಳ್ಳೆರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಹಾಲಿನ ಸಹಾಯಧನ ನೀಡಿಲ್ಲ. ಹಾಲಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಳೆದ ನಾಲ್ಕೈದು ತಿಂಗಳಿಂದ ಬರಗಾಲ ಹಾಗೂ ಅತಿವೃಷ್ಟಿಯಿಂದ ಬೆಳೆ ಬಾರದೆ ಇರುವುದರಿಂದ ಬ್ಯಾಂಕುಗಳಲ್ಲಿ ಕೃಷಿ ಸಾಲವನ್ನು ಪಡೆದಿದ್ದು ಸಕಾಲಕ್ಕೆ ಮರುಪಾವತಿ ಮಾಡಲು ಸಾದ್ಯವಾಗಿಲ್ಲ. ಕಟ್ಟುಬಾಕಿಯಾದ ರೈತರಿಗೆ ಒ.ಟಿ.ಎಸ್ ನಲ್ಲಿ ಸಾಲ ಕಟ್ಟಿಸಿಕೋಳ್ಳಬೇಕು.
ಇದನ್ನೂ ಓದಿ ಹಾವೇರಿ | ವಕ್ಫ್ ಮಸೂದೆ ಮೂಲಕ ಮುಸ್ಲಿಮರ ಆಸ್ತಿ ಕಸಿಯಲು ಬಿಜೆಪಿ ಹುನ್ನಾರ: ಅಪ್ಸರ್ ಕೊಡ್ಲಿಪೇಟೆ
ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವಿವಿಧ ತಾಲೂಕು, ಹಳ್ಳಿಗಳ ರೈತರು ಪಾಲ್ಗೊಂಡಿದ್ದರು.