- ವಿವೇಚನೆಯೊಂದಿಗೆ ಅರ್ಹರಿಗೆ ಮತ ಚಲಾಯಿಸಿ: ತುಷಾರ್ ಗಿರಿನಾಥ್
- ತಪ್ಪದೆ ಮತದಾನ ಮಾಡಿ, ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸಿ
ಬೆಂಗಳೂರಿನಲ್ಲಿ ಯಾವೊಬ್ಬ ಮತದಾರನೂ ಆಮೀಷಕ್ಕೆ ಒಳಗಾಗದೆ ಎಲ್ಲರೂ ತಪ್ಪದೆ ಮತ ಚಲಾಯಿಸುವಂತಾಗಬೇಕು. ಮೊದಲ ಬಾರಿ ಮತದಾನ ಮಾಡುವವರು ಒಮ್ಮೆ ಮಾತ್ರ ಮತದಾನ ಮಾಡದೆ ಎಲ್ಲ ಚುನಾವಣೆಗಳಲ್ಲೂ ತಪ್ಪದೆ ಮತ ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಅವರು, “ಕರ್ನಾಟಕ ರಾಜ್ಯದಲ್ಲಿ ಜನಪ್ರತಿನಿಧಿಗಳು ನಾಗರಿಕರಿಗೆ ಸಾಕಷ್ಟು ಹತ್ತಿರವಾಗಿರುವುದರ ಜತೆಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯ” ಎಂದು ಹೇಳಿದರು.
“18 ವರ್ಷ ತುಂಬಿದ ನಂತರ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಯಾವ ರಂಗಕ್ಕೆ ಹೋಗಬೇಕು ಎಂಬುದರ ಬಗ್ಗೆ ಸ್ವಯಂ ವಿವೇಚನೆಯಿರುತ್ತದೆ. ಅದೇ ರೀತಿ ನಿಮ್ಮ ವಿಧಾನಸಭಾ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಬರಬೇಕೆಂಬುದನ್ನೂ ಕೂಡಾ ನೀವು ವಿವೇಚನೆಯೊಂದಿಗೆ ಅರ್ಹರಿಗೆ ಮತ ಚಲಾಯಿಸಬೇಕು” ಎಂದು ತಿಳಿಸಿದರು.
ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, “ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪ್ರಜಾಪ್ರಭುತ್ವದ ಆಶಯಗಳು ಸಂಪೂರ್ಣವಾಗಬೇಕಾದರೆ ಪ್ರತಿಯೊಬ್ಬ ಮತದಾರನೂ ತಪ್ಪದೆ ಮತ ಚಲಾಯಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿ ರೋಡ್ ಶೋ ವೇಳೆ ಸಾರ್ವಜನಿಕರು ಏನು ಮಾಡಬೇಕು? ಏನು ಮಾಡಬಾರದು?
“ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ನಾವೆಲ್ಲರೂ ಹೆಚ್ಚು-ಹೆಚ್ಚು ಜಾಗೃತರಾಗಿರಬೇಕು. ಆಗ ಪ್ರಜಾಪ್ರಭುತ್ವದ ಸಂಪೂರ್ಣ ಬಲ ನಮಗೆ ಸಿಗಲಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಿ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿ” ಎಂದು ಎಲ್ಲ ವಿದ್ಯಾರ್ಥಿಗಳಲ್ಲಿ ಕೋರಿದರು.
ಈ ವೇಳೆ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಚುನಾವಣಾ ರಾಯಭಾರಿಯಾದ ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.