ಉರಿಯುತ್ತಿರುವ ಮಣಿಪುರ | ಕುಕಿ-ಮೇಟಿ ಸಮುದಾಯಗಳ ನಡುವಿನ ಘರ್ಷಣೆಯ ಮೂಲವೇನು?

Date:

Advertisements
ಮಣಿಪುರದ ಕುಕಿ-ಮೇಟಿ ಸಮುದಾಯಗಳ ನಡುವಿನ ದಶಕಗಳ ಹಿಂದಿನ ಘರ್ಷಣೆಗೆ ಭೂಮಿ ಮತ್ತು ಅಕ್ರಮ ವಲಸೆೆಯೆ ಮೂಲ. ಬುಧವಾರದ ಬುಡಕಟ್ಟು ಏಕತಾ ಮೆರವಣಿಗೆಗೆ ಎರಡು ಸಮುದಾಯಗಳ ನಡುವಿನ ಭೂಮಿ, ಜನಸಂಖ್ಯಾಶಾಸ್ತ್ರ ಮತ್ತು ಸ್ಥಾನಮಾನವೆ ಕುದಿಯುವ ಬಿಂದುವಾಗಿತ್ತು. ಈ ವಾರ ಹಿಂಸಾತ್ಮಕ ಸ್ವರೂಪ ತಾಳಿದೆ. ಸಂಘರ್ಷದ ಪಕ್ಷಿನೋಟ ಇಲ್ಲಿದೆ...

ಮಣಿಪುರದ ಅನೇಕ ಪ್ರದೇಶಗಳು ಬುಧವಾರ ವ್ಯಾಪಕ ಹಿಂಸೆಗೆ ಸಾಕ್ಷಿಯಾಗಿವೆ. ಸಶಸ್ತ್ರ ಸಮೂಹಗಳು ಮನೆಗಳಿಗೆ ಬೆಂಕಿ ಇಟ್ಟಿವೆ. ಆದರೆ, ಈ ಎಲ್ಲಾ ಪ್ರತಿಭಟನೆಗಳು ನಿಜವಾಗಿಯೂ ಬುಡಕಟ್ಟು ಹಕ್ಕಿನ ರಕ್ಷಣೆಗಾಗಿ ಕುಕಿ- ಮೇಟಿ ಸಮುದಾಯಗಳ ನಡುವಿನ ಘರ್ಷಣೆಯೇ ಅಥವಾ ಮಣಿಪುರ ಸರ್ಕಾರ ಅರಣ್ಯ ಪ್ರದೇಶಗಳಿಂದ ಅಕ್ರಮ ವಲಸಿಗರನ್ನು ಹೊರಹಾಕಲು ಪ್ರಯತ್ನಿಸಿರುವ ಫಲವೆ?

ಮಣಿಪುರದ ಹಿಂಸೆಯಲ್ಲಿ ಮುಖ್ಯವಾಗಿ ಗೋಚರವಾಗುವುದು ಇಂಫಾಲ ಕಣಿವೆಯ ನಿವಾಸಿಗಳಾದ ಮೇಟಿ ಸಮುದಾಯ ಮತ್ತು ಗುಡ್ಡಗಾಡು ನಿವಾಸಿಗಳಾದ ಬುಡಕಟ್ಟು ಕುಕಿ ಜನಾಂಗದ ನಡುವಿನ ಘರ್ಷಣೆ. ಈ ಬಾರಿ ಪರಸ್ಪರ ಕೊಲೆ ಮಾಡಿ, ಮನೆಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾತ್ಮಕವಾಗಿ ಪ್ರತಿಭಟಿಸಲಾಗಿದೆ.

ಮಣಿಪುರದಲ್ಲಿ ಮೇಟಿ ಸಮುದಾಯ ಬಹುಸಂಖ್ಯಾತರು. ಕುಕಿ ಸಮುದಾಯ ರಾಜ್ಯದ ಅತಿದೊಡ್ಡ ಬುಡಕಟ್ಟು ಸಮುದಾಯ. ಈ ಎರಡು ಸಮುದಾಯಗಳ ನಡುವಿನ ಶತ್ರುತ್ವಕ್ಕೆ ದಶಕಗಳ ಇತಿಹಾಸವಿದೆ. ಬುಧವಾರದ ಹಿಂಸಾತ್ಮಕ ಘರ್ಷಣೆಯ ನಂತರ ಮಣಿಪುರ ಸರ್ಕಾರ ಮೊಬೈಲ್ ಇಂಟರ್ನೆಟ್ ಸೇವೆ ರದ್ದು ಮಾಡಿದೆ, ಪೀಡಿತ ಜಿಲ್ಲೆಗಳಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಿ ನಿಷೇಧಾಜ್ಞೆ ಹೇರಲಾಗಿದೆ.

Advertisements

ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಇಲ್ಲಿನ ಭೂಮಿ ಮತ್ತು ಜನಸಂಖ್ಯಾಶಾಸ್ತ್ರವನ್ನು ಅರಿತುಕೊಳ್ಳಬೇಕಾಗುತ್ತದೆ. ಮಣಿಪುರದಲ್ಲಿ 16 ಜಿಲ್ಲೆಗಳಿವೆ. ಮುಖ್ಯವಾಗಿ ಇಂಫಾಲ ಕಣಿವೆ ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ಇವು ಹಂಚಿ ಹೋಗಿವೆ. ಐದು ಜಿಲ್ಲೆಗಳಲ್ಲಿ ಹರಡಿರುವ ಇಂಫಾಲ ಕಣಿವೆಯಲ್ಲಿ ಬಹುಸಂಖ್ಯಾತ ಹಿಂದೂ ಮೇಟಿ ಸಮುದಾಯ ನೆಲೆಸಿದೆ. ಗುಡ್ಡಗಾಡು ಬುಡಕಟ್ಟು ಜಿಲ್ಲೆಗಳಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳು ಸೇರಿದಂತೆ 35 ಬುಡಕಟ್ಟು ಜನಾಂಗ ನೆಲೆಸಿವೆ. ಹೆಚ್ಚು ಘರ್ಷಣೆ ಕಂಡ ಚುರಚಂದಾಪುರ್ ಈ ಪ್ರದೇಶದಲ್ಲೇ ಬರುತ್ತದೆ. ಕುಕಿ ಮತ್ತು ನಾಗಾ ಸಮುದಾಯ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ. ಗುಡ್ಡಗಾಡು ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಕುಕಿ ಸಮುದಾಯ ಬಹುಸಂಖ್ಯಾತರು. ರಾಜ್ಯದ ಒಟ್ಟು ಶೇ 53ರಷ್ಟಿರುವ ಮೇಟಿ ಸಮುದಾಯ, ಮಣಿಪುರದ ಶೇ 10ರಷ್ಟು ಭೂ ಪ್ರದೇಶದಲ್ಲಿ ನೆಲೆಸಿದ್ದಾರೆ. ಕಣಿವೆಯಲ್ಲಿ ಅತಿ ಹೆಚ್ಚು ಜನವಸತಿ ಇದ್ದು, ಬುಡಕಟ್ಟು ಜನಾಂಗ ಮತ್ತು ದೇಶದ ಇತರೆಡೆಗಳಿಂದ ಹೋದ ವಲಸಿಗರೂ ಸೇರಿದ್ದಾರೆ. ಉಳಿದ ಜನರು ಗುಡ್ಡಗಾಡು ಜಿಲ್ಲೆಗಳ ಶೇ 90ರಷ್ಟು ಪ್ರದೇಶದಲ್ಲಿ ನೆಲೆಸಿದ್ದಾರೆ. ಈ ಜಿಲ್ಲೆಗಳಲ್ಲಿ ಅಭಯಾರಣ್ಯಗಳನ್ನು ಹೊಂದಿವೆ.

ಮೇಟಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ

ಮೇಟಿ ಸಮುದಾಯವನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕೆ ಬೇಡವೇ ಎಂಬುದನ್ನು ನಾಲ್ಕು ವಾರಗಳಲ್ಲಿ ನಿರ್ಧರಿಸುವಂತೆ ಏಪ್ರಿಲ್ 20ರಂದು ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಪರಿಗಣಿಸಿದ ನಂತರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಹೈಕೋರ್ಟ್ ಹೇಳಿದೆ. ಸಮೃದ್ಧ ಮೇಟಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ಸಿಕ್ಕರೆ ಗುಡ್ಡಗಾಡು ಪ್ರದೇಶದ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತದೆ ಎನ್ನುವುದು ಬುಡಕಟ್ಟು ನಾಯಕರ ಆರೋಪ.

ಆದರೆ ಮೇಟಿ ಸಮುದಾಯ ಈ ವಾದವನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ರಾಜ್ಯ ಸರ್ಕಾರ ಅಭಯಾರಣ್ಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ಕುಕಿ ಸಮುದಾಯವನ್ನು ಹೊರ ಹಾಕುವ ಕ್ರಮ ಕೈಗೊಂಡಿರುವುದು ಪ್ರತಿಭಟನೆಯ ಮೂಲ. ಇದೀಗ ಮೀಸಲಾತಿ ನಿರ್ಧಾರ ಬಂದಿರುವುದು ಪ್ರತಿಭಟನೆಗೆ ಕಾರಣ ಒದಗಿಸಿದೆ. ಆದರೆ, ಹೀಗೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಹೊರ ಹಾಕುವ ಕಠಿಣ ಕ್ರಮ ಮಣಿಪುರದಾದ್ಯಂತ ನಡೆಯುತ್ತಿದೆ, ಕೇವಲ ಕುಕಿ ಸಮುದಾಯ ನೆಲೆಸಿರುವ ಪ್ರದೇಶದಲ್ಲಿ ಮಾತ್ರವಲ್ಲ ಎಂದು ಮೇಟಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮೇಟಿ ಸಮುದಾಯಕ್ಕೆ ಪರಿಶಿಷ್ಟ ಸ್ಥಾನಮಾನ ಏಕೆ ಬೇಕು?

2012ರಿಂದ ಮಣಿಪುರದ ಪರಿಶಿಷ್ಟ ಬುಡಕಟ್ಟು ಸಮಿತಿ (ಎಸ್‌ಟಿಡಿಸಿಎಂ) ಮೇಟಿ ಸಮುದಾಯದ ಬೇಡಿಕೆಗೆ ಬೆಂಬಲಿಸಿದೆ. ಇತ್ತೀಚೆಗೆ ಮಣಿಪುರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 1949ರಲ್ಲಿ ಮಣಿಪುರ ಭಾರತ ಸರ್ಕಾರದೊಂದಿಗೆ ವಿಲೀನಗೊಳ್ಳುವ ಮೊದಲು ಮೇಟಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನವಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಮುದಾಯದ ಉಳಿವಿಗೆ, ಅವರ ಪೂರ್ವಜರ ಭೂಮಿ, ಪರಂಪರೆ, ಸಂಸ್ಕೃತಿ ಮತ್ತು ಭಾಷೆಯ ಉಳಿವಿಗೆ ಬುಡಕಟ್ಟು ಸ್ಥಾನಮಾನದ ಅಗತ್ಯವಿದೆ. ಸ್ಥಾನಮಾನವಿಲ್ಲದೆ ಸಂವಿಧಾನಾತ್ಮಕ ರಕ್ಷಣೆಯಿಲ್ಲದೆ ತಮ್ಮ ಪೂರ್ವಜರ ಭೂಮಿಯನ್ನು ಕಳೆದುಕೊಳ್ಳುತ್ತಿದೆ. 1951ರಲ್ಲಿ ಒಟ್ಟು ಜನಸಂಖ್ಯೆಯ ಶೇ 59ರಷ್ಟಿದ್ದ ಮೇಟಿ ಸಮುದಾಯ 2011ರಲ್ಲಿ ಶೇ 44ಕ್ಕೆ ಇಳಿದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಕ್ರಮ ವಲಸೆ ಮತ್ತು ಪೌರತ್ವ ನೋಂದಣಿ ಬೇಡಿಕೆ

ಕಳೆದ ಮಾರ್ಚ್‌ನಲ್ಲಿ ಮಣಿಪುರದ ಸಂಘಟನೆಗಳು ನವದೆಹಲಿಯ ಜಂತರ್‌ ಮಂತರ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ 1951 ಮೂಲ ವರ್ಷವಾಗಿರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಜನಸಂಖ್ಯಾ ಪ್ರಗತಿ ಶೇ 17.64 ಇರುವಾಗ ಮಣಿಪುರದಲ್ಲಿ ಜನಸಂಖ್ಯಾ ಪ್ರಗತಿ ಶೇ. 24.5ರಷ್ಟಿದೆ. ಹೀಗೆ ಅಸಹಜವಾಗಿ ಜನಸಂಖ್ಯೆ ಗುಡ್ಡಗಾಡು ಪ್ರದೇಶಗಳ ಗ್ರಾಮಗಳಲ್ಲೇ ಬೆಳೆಯುತ್ತಿದೆ. ಇದಕ್ಕೇ ಪೌರತ್ವ ನೋಂದಣಿಗೆ ಮೇಟಿ ಸಮುದಾಯ ಒತ್ತಾಯಿಸಿದೆ. ಇಂತಹ ಪ್ರಗತಿ ಸಹಜ ಹುಟ್ಟಿನಿಂದ ಸಾಧ್ಯವಿಲ್ಲ, ನೆರೆಹೊರೆಯ ದೇಶಗಳಿಂದ ವಲಸಿಗರು ಬಂದು ನೆಲೆಸುತ್ತಿದ್ದಾರೆ. 1970ರಿಂದಲೇ ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರು ಮಣಿಪುರದಲ್ಲಿ ಜಮಾಯಿಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ- ಸಾಂಸ್ಕೃತಿಕ ಅನನ್ಯತೆ ಕಾಪಾಡಲು ಪೌರತ್ವ ನೋಂದಣಿಯನ್ನು ಮಣಿಪುರದ ಹಿತಾಸಕ್ತಿಯನ್ನು ಪರಿಗಣಿಸಿ ನಡೆಸಲಾಗುತ್ತಿದೆ ಎಂದು ಅಖಿಲ ಮೇಟಿ ಆಯೋಗ ಹೇಳಿದೆ.

ಕುಕಿ ಸಮುದಾಯ ಮ್ಯಾನ್ಮಾರ್ ಗಡಿಯುದ್ದಕ್ಕೂ ವಲಸೆ ಹೋಗುತ್ತಾ ಮಣಿಪುರದ ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಮಣಿಪುರ ಸರ್ಕಾರ ಅವರನ್ನು ಹೊರಗೆಸೆಯುತ್ತಿದೆ. ಮಣಿಪುರದ ಎಲ್ಲಾ ಪ್ರದೇಶಗಳಲ್ಲೂ ಮೇಟಿ, ಮುಸ್ಲಿಮರನ್ನೂ ಅಕ್ರಮ ವಸತಿಗಳಿಂದ ಹೊರದಬ್ಬಲಾಗಿದೆ. ಆದರೆ ಕುಕಿ ಸಮುದಾಯ ಮಾತ್ರ ಪ್ರತಿಭಟಿಸುತ್ತಿದೆ ಎಂದು ಆಯೋಗ ಹೇಳಿದೆ.

ಆದರೆ ಕುಕಿ ಪ್ರಕಾರ, ಅಕ್ರಮ ವಲಸೆ ಎನ್ನುವುದು ಸಣ್ಣ ನೆಪವಷ್ಟೇ. ಅಕ್ರಮ ವಸತಿ ಎಂದು ಹೊರದಬ್ಬುವುದು ಮತ್ತು ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿರುವುದು ಕುಕಿ ಸಮುದಾಯವನ್ನು ತಮ್ಮ ಭೂಮಿಯಿಂದ ಹೊರಗಟ್ಟುವ ಪಿತೂರಿ. “ಅಕ್ರಮ ವಲಸೆ ಎನ್ನುವುದು ಕಪೋಲ ಕಲ್ಪಿತ ಕತೆ. ನಮ್ಮಲ್ಲಿ ಪೌರತ್ವ ಸಾಬೀತುಪಡಿಸಲು ಅಗತ್ಯ ದಾಖಲೆಗಳಿವೆ. ಮೇಟಿಗಳ ಜೊತೆಗೆ ನಾವು ಶಾಂತಿಯುತವಾಗಿ ನೆಲೆಸಿದ್ದೇವೆ. ಮೇಟಿ ಸಮುದಾಯ ನಮ್ಮ ಭೂಮಿ ಕಸಿಯಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಎನ್ ಬೀರೇನ್ ಸಿಂಗ್ 2017ರಲ್ಲಿ ಅಧಿಕಾರ ಸ್ವೀಕರಿಸಿದಂದಿನಿಂದ ಸಮಸ್ಯೆ ಸೃಷ್ಟಿಯಾಗಿದೆ” ಎಂದು ಅಖಿಲ ಮಣಿಪುರ ಬುಡಕಟ್ಟು ಸಂಘಟನೆ ಹೇಳಿದೆ.

ಕುಕಿ ಜಿಲ್ಲೆಗಳಲ್ಲಿ ಸಮೃದ್ಧ ಪೆಟ್ರೋಲಿಯಂ ಮತ್ತು ಇತರ ಖನಿಜಗಳ ನಿಕ್ಷೇಪಗಳಿರುವುದು ಭೌಗೋಳಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ. ಮೇಟಿ ಸಮುದಾಯದ ನೇತೃತ್ವದಲ್ಲಿರುವ ರಾಜ್ಯ ಸರ್ಕಾರ ಇದೇ ಕಾರಣದಿಂದ ಭೂ ಕಬಳಿಕೆಗೆ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಈ ಸುದ್ದಿ ಓದಿದ್ದೀರಾ?: ಮಣಿಪುರ ಹಿಂಸಾಚಾರ | ಪರಿಸ್ಥಿತಿ ನಿಯಂತ್ರಣ; ರೈಲುಗಳ ಸಂಚಾರ ಸ್ಥಗಿತ

ಹಿಂಸಾತ್ಮಕ ಪ್ರತಿಭಟನೆಗೆ ಕಾರಣ

ಮೇಟಿ ಮತ್ತು ಕುಕಿ ಸಮುದಾಯದ ನಡುವೆ ದಶಕಗಳಿಂದ ಅಹಿತಕರ ಸಂಬಂಧವಿದೆ. ಭೂಮಿ ಮತ್ತು ಅಕ್ರಮ ವಲಸೆ ಈ ಸಮುದಾಯಗಳ ನಡುವಿನ ಘರ್ಷಣೆಯ ಮೂಲ. ಎರಡು ಸಮುದಾಯಗಳ ನಡುವಿನ ಭೂಮಿ, ಜನಸಂಖ್ಯಾಶಾಸ್ತ್ರ ಮತ್ತು ಬುಡಕಟ್ಟು ಸ್ಥಾನಮಾನ ಮೊದಲಾದ ವಿಚಾರಗಳ ಘರ್ಷಣೆಯ ಕುದಿಯುವ ಬಿಂದುವಾಗಿತ್ತು ಬುಧವಾರದ ಬುಡಕಟ್ಟು ಏಕತಾ ಮೆರವಣಿಗೆ.

ಮೇಟಿ ಸಮುದಾಯ ಮತ್ತು ಕುಕಿ ಸಮುದಾಯದವರನ್ನು ಪ್ರತ್ಯೇಕವಾಗಿ ಕೇಳಿದರೆ, ಯಾರು ಮೊದಲು ದಾಳಿ ನಡೆಸಿರುವುದು ಮತ್ತು ಯಾರು ಸಂತ್ರಸ್ತರು ಎನ್ನುವ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಏಕತಾ ಮೆರವಣಿಗೆ ಮುಗಿದಿತ್ತು. ಮೇಟಿ ಸಮುದಾಯದ ಮಂದಿ ಬಂದೂಕು ಹಿಡಿದು ಕುಕಿ ಗ್ರಾಮಗಳಿಗೆ ನುಗ್ಗಿ ಮನೆಗಳಿಗೆ ಕೊಳ್ಳಿ ಇಟ್ಟರು ಎಂದು ಬುಡಕಟ್ಟು ಸಂಘಟನೆ ಸದಸ್ಯರು ಹೇಳುತ್ತಾರೆ.

ಆರಂಭದಲ್ಲಿ ಕಾಂಗ್ವಿ ಗ್ರಾಂದಲ್ಲಿ ಘರ್ಷಣೆಯಾದಾಗ ಪೊಲೀಸರು ಮತ್ತು ಕಮಾಂಡೋಗಳು ಸುಮ್ಮನಿದ್ದು ತಮಾಷೆ ನೋಡಿದ್ದರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಂತರ ನೆರೆ ಗ್ರಾಮಗಳು ಮತ್ತು ಪಟ್ಟಣಗಳ ಕುಕಿ ಸಮುದಾಯ ಜೊತೆಗೂಡಿ ಬಂದಾಗ ದಾಳಿಕೋರರು ಓಡಿಹೋಗಿದ್ದರು ಎಂದು ಸಂಘಟನೆ ಹೇಳಿದೆ. ನಂತರ ಮತ್ತೆ ರಾತ್ರಿ ಬಂದ ದಾಳಿಕೋರರು ಮನೆಗಳಿಗೆ ಬೆಂಕಿ ಇಟ್ಟಿದ್ದರು.

ಆದರೆ ಮೇಟಿ ಸಮುದಾಯದ ಪ್ರಕಾರ, ಅಂತಹ ದಾಳಿ ಬೇಕೆಂದರೆ ಬುಡಕಟ್ಟು ಗ್ರಾಮಕ್ಕೆ ಹೋಗುವ ಅಗತ್ಯವಿರಲಿಲ್ಲ, ಕಣಿವೆಯಲ್ಲಿರುವ ಕುಕಿಗಳ ಮೇಲೆ ಆಕ್ರಮಣ ಮಾಡಬಹುದಾಗಿತ್ತು. ನಾಗಾ ಪ್ರಭಾವಿ ಪ್ರದೇಶಗಳಲ್ಲಿ ಮೆರವಣಿಗೆ ಶಾಂತಿಯುತವಾಗಿತ್ತು. ಕುಕಿ ಬಹುಸಂಖ್ಯಾತರಿದ್ದ ಪ್ರದೇಶದಲ್ಲಿ ಹಿಂಸಾತ್ಮಕವಾಗಿತ್ತು. ಅವರು ಸಂಜೆ ಮೇಟಿ ಗ್ರಾಮಗಳಿಗೆ ಹೋಗಿ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಕೆಲವು ಗ್ರಾಮಗಳಿಂದ ಓಡಿ ಬಂದಿರುವ ಮೇಟಿ ಸಮುದಾಯದವರು ಮರಳಿ ಹೋಗಿಲ್ಲ ಎಂದು ಮೇಟಿ ಆಯೋಗ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X