ಚಿಕ್ಕಮಗಳೂರು ಜಿಲ್ಲೆ | ಬಿಜೆಪಿಗೆ ಮುಳುವಾಗಲಿದೆಯೇ ಬಂಡಾಯ– ಆಡಳಿತ ವಿರೋಧಿ ಅಲೆ?

Date:

ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಕಣ ಈ ಬಾರಿ ಸಾಕಷ್ಟು ಬದಲಾಗಿದೆ. ಹಲವು ಪಕ್ಷಗಳ ಪ್ರಮುಖರು ಪಕ್ಷಾಂತರ ಮಾಡಿದ್ದಾರೆ. ಕೆಲವರು ಬಂಡಾಯವೆದ್ದಿದ್ದಾರೆ. ಜೊತೆಗೆ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ ಜಿಲ್ಲೆಯ ಮೇಲೆ ಪ್ರಭಾವ ಬೀರಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಮಲೆನಾಡು ಪ್ರದೇಶ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಹೆಚ್ಚಾಗಿ ಬೆಳೆಯುತ್ತಾರೆ. ಪ್ರಸಿದ್ಧ ಮುಳ್ಳಯನ ಗಿರಿ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳೂ ಇವೆ. ಇಲ್ಲಿನ ದತ್ತಪೀಠ ವಿವಾದ ಆರಂಭವಾದಾಗಿನಿಂದ ಧರ್ಮ ರಾಜಕಾರಣ ಮತದಾರರ ಮೇಲೆ ಪರಿಣಾಮ ಬೀರಿದ್ದು, ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 2018ರ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದನ್ನು ಮಾತ್ರವೇ ಕಾಂಗ್ರೆಸ್‌ ಗೆದ್ದಿದ್ದು, ಉಳಿದ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಉಡುಪಿ- ಚಿಕ್ಕಮಗಳೂರು ಜಂಟಿ ಲೋಕಸಭಾ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಪರ ಅಲೆ ಇದೆ. 2004ರಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಸಿ ಟಿ ರವಿ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸುವ ಜೊತೆಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ರಾಜ್ಯ ರಾಜಕಾರಣದಲ್ಲಿ ಪ್ರಭಲವಾಗಿ ಬೆಳೆದಿದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಇಡೀ ಜಿಲ್ಲೆಯ ಚುನಾವಣಾ ಲೆಕ್ಕಾಚಾರ ಬದಲಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ವೈಎಸ್‌ವಿ ದತ್ತ ಮತ್ತೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಎಂ ಪಿ ಕುಮಾರಸ್ವಾಮಿ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಅಂತೆಯೇ ಮತ್ತೊಬ್ಬ ಪ್ರಮುಖ ನಾಯಕ ಬಿ ಬಿ ನಿಂಗಯ್ಯ ಕೂಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ ಮುಖಂಡ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ಕೊಟ್ಟ ವಿಡಿಯೋ ವೈರಲ್‌ ಆಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗೆ ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಈ ಬಾರಿ ಸಾಕಷ್ಟು ಬದಲಾಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ಹಗರಣಗಳಿಂದ ಬಿಜೆಪಿ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆ ಮತ್ತು ಅಭ್ಯರ್ಥಿಗಳ ಬಂಡಾಯ, ಮನಸ್ತಾಪ ಜಿಲ್ಲೆಯಲ್ಲಿ ಪ್ರಭಾವ ಬೀರಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಪರ್ಯಾಯ ನಾಯಕನಿಗೆ ಮಣೆ ಸಾಧ್ಯತೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಸಿ ಟಿ ರವಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌ ಡಿ ತಮ್ಮಯ್ಯ ಹಾಗೂ ಜೆಡಿಎಸ್‌ ಅಭ್ಯರ್ಥಿ ತಿಮ್ಮಾ ಶೆಟ್ಟಿ ಕಣದಲ್ಲಿದ್ದಾರೆ.

ದತ್ತಪೀಠ ವಿವಾದದ ನಂತರ 2004ರಿಂದ ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಐದನೇ ಬಾರಿಗೆ ಸ್ಪರ್ಧಿಸಿದ್ದಾರೆ. ಸಿ ಟಿ ರವಿ ಜೊತೆಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಎಚ್‌ ಡಿ ತಮ್ಮಯ್ಯ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಕ್ಷೇತ್ರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಲಿಂಗಾಯತ, ಕುರುಬ ಸಮುದಾಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಯಡಿಯೂರಪ್ಪ ಚುನಾವಣೆ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಲಿಂಗಾಯತ ಸಮುದಾಯ ಚಿಕ್ಕಮಗಳೂರಿನಲ್ಲಿ ತಮ್ಮದೇ ಸಮುದಾಯದ ಪರ್ಯಾಯ ನಾಯಕರನ್ನು ಹುಟ್ಟು ಹಾಕುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದ್ದು, ಆ ಕಾರಣದಿಂದಲೇ ಎಚ್‌ ಡಿ ತಮ್ಮಯ್ಯ ಪರವಾಗಿ ಲಿಂಗಾಯತರು ಇದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ಆಗಾಗ ಅಸಂವಿಧಾನಿಕ ಹೇಳಿಕೆ ನೀಡುತ್ತಿರುವುದು ಕುರುಬ ಸಮುದಾಯವನ್ನು ಕೆಣಕುವಂತೆ ಮಾಡಿದೆ. ಜತೆಗೆ ಹಿಜಾಬ್‌, ಹಲಾಲ್‌ ಕಟ್‌, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂಬ ಹೇಳಿಕೆಗಳು ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಮೂಡಿಸಿವೆ. ಇವುಗಳು ಮತಗಳಾಗಿ ಪರಿವರ್ತನೆಯಾದರೆ ಕಾಂಗ್ರೆಸ್‌ಗೆ ಅನುಕೂಲ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಈ ಬಾರಿ ನೇರಾ ಹಣಾಹಣಿ ನಡೆಯುವುದು ಸ್ಪಷ್ಟವಾಗಿದೆ. ಜೆಡಿಎಸ್‌ ಅಭ್ಯರ್ಥಿ ತಿಮ್ಮಾ ಶೆಟ್ಟಿ ಅಷ್ಟೇನು ಪೈಪೋಟಿ ನೀಡಲಾರರು ಎನ್ನಲಾಗಿದೆ.

ತ್ರಿಕೋನ ಸ್ಪರ್ಧೆಯ ನಿರೀಕ್ಷೆ

ಚಿಕ್ಕಮಗಳೂರು ಜಿಲ್ಲೆಯ ಮತ್ತೊಂದು ಪ್ರಮುಖ ಕ್ಷೇತ್ರ ಮೂಡಿಗೆರೆ. ಇದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಸಾಕಷ್ಟು ಕಾರಣಗಳಿಗೆ ರಾಜ್ಯದ ಗಮನ ಸೆಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವೆಯ ಪುತ್ರಿ ನಯನಾ ಮೋಟಮ್ಮ, ಜೆಡಿಎಸ್‌ ಅಭ್ಯರ್ಥಿಯಾಗಿ ಎಂ ಪಿ ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ದೀಪಕ್‌ ದೊಡ್ಡಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಾಡಾನೆ ಸಮಸ್ಯೆಯಿಂದಾಗಿ ಈ ಕ್ಷೇತ್ರದ ಜನ ಹೈರಾಣಾಗಿದ್ದಾರೆ. ಕಾಡಾನೆ ದಾಳಿ ನಡೆಸಿದ್ದ ವೇಳೆ ಯೋಗ ಕ್ಷೇಮ ವಿಚಾರಿಸಲು ತೆರಳಿದ್ದ ವೇಳೆ ಕ್ಷೇತ್ರದ ಜನ ಹಾಲಿ ಬಿಜೆಪಿ ಶಾಸಕರ ವಿರುದ್ಧ ತಿರುಗಿ ಬಿದ್ದಿದ್ದರು. ಅಲ್ಲದೇ ಈ ಬಾರಿ ಬಿಜೆಪಿಯಿಂದ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್‌ ನೀಡಬಾರದೆಂದು ನಾಯಕರ ಮುಂದೆ ಪ್ರಬಲ ಅಹವಾಲು ಇಟ್ಟಿದ್ದರು. ಬಳಿಕ ಸತತ ಮೂರು ಬಾರಿ ಗೆದ್ದಿದ್ದರೂ ಎಂ ಪಿ ಕುಮಾರಸ್ವಾಮಿ ಟಿಕೆಟ್‌ ನೀಡಲಿಲ್ಲ. ಬದಲಿದೆ ಹೊಸಮುಖ ದೀಪಕ್‌ ದೊಡ್ಡಯ್ಯ ಅವರಿಗೆ ಟಿಕೆಟ್‌ ನೀಡಿದ್ದು, ಗೆಲುವು ಪ್ರತಿಷ್ಠೆಯಾಗಿದೆ.

ಮೂರು ಬಾರಿ ಗೆಲುವು ಸಾಧಿಸಿರುವ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಮೂರು ಬಾರಿ ಗೆಲುವು ಸಾಧಿಸಿದ್ದ ಬಿ ಬಿ ನಿಂಗಯ್ಯ ಅವರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಧಾನಗೊಂದು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಎಂ ಪಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ಗಾಳ ಹಾಕಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಉಂಟಾಗಲಿದೆ ಎಂಬ ಲೆಕ್ಕಾಚಾರವಿದೆ.

ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲೆ | ಕಾಂಗ್ರೆಸ್‌ – ಜೆಡಿಎಸ್‌ ಪ್ರಾಬಲ್ಯದ ನಡುವೆ ಗೆಲುವಿಗಾಗಿ ಬಿಜೆಪಿ ಕಸರತ್ತು

ಅನುಕಂಪದ ಅಲೆ ನಿರೀಕ್ಷೆಯಲ್ಲಿ ವೈಎಸ್‌ವಿ

ಸಜ್ಜನ ರಾಜಕಾರಣಿ  ವೈ ಎಸ್‌ ವಿ ದತ್ತ ಕಾರಣಕ್ಕೆ ರಾಜ್ಯದ ಗಮನ ಸೆಳೆದಿರುವ ಕಡೂರು ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದೆ. ಕಡೂರು ಕ್ಷೇತ್ರದಿಂದ ಈ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ವೈ ಎಸ್‌ ವಿ ದತ್ತ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ ಎಸ್‌ ಆನಂದ್‌ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಬೆಳ್ಳಿ ಪ್ರಕಾಶ್‌ ಕಣದಲ್ಲಿದ್ದಾರೆ.

ಕಡೂರು ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ಜಾತಿಯೊಂದೇ ನಿರ್ಣಾಯಕವಲ್ಲ. ಅಂದಾಜು ಒಂದು ಸಾವಿರ ಆಸುಪಾಸಿನಲ್ಲಿ ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈಎಸ್‌ವಿ ದತ್ತ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಆದರೆ, ಕಾಂಗ್ರೆಸ್ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಮನನೊಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈ ಅವಕಾಶ ಬಳಸಿಕೊಂಡ ಜೆಡಿಎಸ್‌ ನಾಯಕರು ದತ್ತ ಅವರ ಮನವೊಲಿಸಿ ಮರಳಿ ಜೆಡಿಎಸ್‌ಗೆ ಕರೆ ತರುವಲ್ಲಿ ಯಶಸ್ವಿಯಾದರು.

ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಸೂಲು ಅನುಭವಿಸಿರುವ ವೈಎಸ್‌ವಿ ದತ್ತ ಅವರನ್ನು ಕಾಂಗ್ರೆಸ್‌ ಮೋಸ ಮಾಡಿತು ಎಂಬ ಅನುಕಂಪದ ಅಲೆ ಈ ಬಾರಿ ಕೈ ಹಿಡಿಯಲಿದೆಯೇ ಕಾದು ನೋಡಬೇಕಿದೆ. ಹಿಂದಿನ ಚುನಾವಣೆಯ ಸೋಲಿನ ಅನುಕಂಪ ಕೆ ಎಸ್ ಆನಂದ್‌ಗೆ ವರದಾನವಾಗುವ ಸಾಧ್ಯತೆಯೂ ಇದೆ. ಹೀಗಾಗಿ, ಈ ಕ್ಷೇತ್ರದಲ್ಲಿಯೂ ಈ ಬಾರಿ ತ್ರಿಕೋನ ಸ್ಪರ್ಧೆ ಸಾಧ್ಯತೆ ಇದೆ.

ಕಾಂಗ್ರೆಸ್‌- ಬಿಜೆಪಿ ನಡುವೆ ನೇರ ಸ್ಪರ್ಧೆ

ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕೇವಲ ಎರಡು ಬಾರಿ ಮಾತ್ರ. ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹಣಾಹಣಿ ನಡೆದಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಿ ಎಸ್‌ ಸುರೇಶ್, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿ ಎಚ್‌ ಶ್ರೀನಿವಾಸ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಚ್‌ ಎಂ ಗೋಪಿಕೃಷ್ಣ ಕಣದಲ್ಲಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ. 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತಗಳನ್ನು ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಜಿ ಎಚ್‌ ಶ್ರೀನಿವಾಸ್‌ ಈಗ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯ ಹಾಲಿ ಶಾಸಕ ಡಿ ಎಸ್‌ ಸುರೇಶ್‌ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೋಪಿಕೃಷ್ಣ, ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಹೆಚ್ಚಿದೆ.

ರಾಜೇಗೌಡ- ಜೀವರಾಜ್‌ ಮಧ್ಯೆ ವೈಯಕ್ತಿಕ ಪೈಪೋಟಿ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿರುವ ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕ್ಷೇತ್ರ ಶೃಂಗೇರಿ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಶಾಸಕ ಟಿ ಡಿ ರಾಜೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಡಿ ಎನ್‌ ಜೀವರಾಜ್‌, ಜೆಡಿಎಸ್‌ ಅಭ್ಯರ್ಥಿಯಾಗಿ ಸುಧಾಕರ್‌ ಶೆಟ್ಟಿ ಚುನಾವಣಾ ಕಣದಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ ಎನ್‌ ಜೀವರಾಜ್‌ ಈ ಕ್ಷೇತ್ರದಲ್ಲಿ ಹಿಂದೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ಸೋತಿದ್ದ, ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದಿದ್ದ ಶಾಸಕ ಟಿ ಡಿ ರಾಜೇಗೌಡ, ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೊಸ ಮುಖ ಸುಧಾಕರ್‌ ಶೆಟ್ಟಿ ಜೆಡಿಎಸ್  ಸ್ಪರ್ಧಾಳು. 2018ರಲ್ಲಿ ಟಿ ಡಿ ರಾಜೇಗೌಡ ಮತ್ತು ಡಿ ಎನ್‌ ಜೀವರಾಜ್‌ ನಡುವೆ ಕೊನೆ ಹಂತದವರೆಗೂ ಬಿಗಿ ಪೈಪೋಟಿ ನಡೆಯಿತು ಕೇವಲ 1,989 ಮತಗಳ ಅಂತರದಿಂದ ರಾಜೇಗೌಡ ಗೆಲುವು ಸಾಧಿಸಿದ್ದರು.

ಶೃಂಗೇರಿ ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ನ ಸುಧಾಕರ್‌ ಶೆಟ್ಟಿ ಬಿಜೆಪಿ ಮತಗಳ ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದರಿಂದ ಕಾಂಗ್ರೆಸ್‌ ಅಭ್ಯರ್ಥಿ ರಾಜೇಗೌಡರಿಗೆ ಅನುಕೂಲ ಆಗಬಹುದು. ಈ ಕ್ಷೇತ್ರದಲ್ಲಿ ಪಕ್ಷ ಹೊರತಾಗಿ ಟಿ ಡಿ ರಾಜೇಗೌಡರ ಮತ್ತು ಡಿ ಎನ್ ಜೀವರಾಜ್‌ ಮಧ್ಯೆ ವೈಯಕ್ತಿಕ ಪೈಪೋಟಿ ಇರಲಿದ್ದು, ಈ ಇಬ್ಬರ ನಡುಯೇ ನೇರ ಹಣಾಹಣಿ ಸಾಧ್ಯತೆ ಇದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ,...

ಬೀದರ್‌ | ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ...

ವಿಜಯಪುರ | ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆ ಅವ್ಯವಸ್ಥೆ ಸರಿಪಡಿಸುವಂತೆ ಡಿಎಸ್‌ಎಸ್‌ ಮನವಿ 

ವಿಜಯಪುರ ಜಿಲ್ಲೆಯ ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ...