“ನಾವು ಬ್ಯಾಸರಾ ಮಾಡ್ಕೊಂಡ್ರ ಹೆಣ ಸುಡುವವರು ಯಾರು? ಏನ ಆದರೂ ಕಾಯಕವೇ ಕೈಲಾಸ ಅಂತ ಹೊಂಟಿವಿ. ದಿನಾ ಐದಾರ ಹೆಣಾ ಸುಡ್ತಿವಿ ಯಾಕ್ ಬ್ಯಾಸರ ಮಾಡ್ಕೋಬೇಕು? ಎಲ್ಲಾರೂ ಒಂದಿನ ಸಾಯೋದ ಐತೆಲ್ರಿ? ನಮಗಂತೂ ಇದೆಲ್ಲ ರೂಢಿ ಆಗ್ಬಿಟ್ಟೈತೆ ನೋಡ್ರಿ” ಅಂತಾರೆ ಸ್ಮಶಾನ ಸೇವಕ ಬಬನ್ ಲಾಖೆ.
ಕಳೆದ 26 ವರ್ಷಗಳಿಂದ ಬಬನ್ ಲಾಖೆ ಎಂಬುವವರು ಈ ಸ್ಮಶಾನದಲ್ಲಿ ದುಡಿಯುತ್ತಿದ್ದಾರೆ. ನಿತ್ಯ ಮೃತ ದೇಹಗಳನ್ನು ಸುಡುವುದು ಇವರ ಕಾಯಕ. ಸರಿಸುಮಾರು ಇವರ ತಮ್ಮ 20ನೇ ವಯಸ್ಸಿನಿಂದಲೂ ಸ್ಮಶಾನ ಸೇವಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ಇವರು ಇಂದಿಗೂ ಅಂದರೆ 57ನೇ ವಯಸ್ಸಿನಲ್ಲೂ ಸ್ಮಶಾನ ಸೇವಕರಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ಬಬನ್ ಲಾಖೆ ಓದಿರುವುದು ಮೂರನೇ ತರಗತಿ. ಆದರೂ ಸಹ ತಮ್ಮ ಮೂವರೂ ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಮನೆಯಲ್ಲಿ ದುಡಿಯುವುದು ಬೇಡವೆಂದರೂ ಕಾಯಕ ಜೀವಿಯಾದ ಇವರು ಬೆಳಗಾವಿ ನಗರದ ವೈಕುಂಠ ಧಾಮ ಸ್ಮಶಾನದಲ್ಲಿ ಕಾಯಕ ಮಾಡುತ್ತಿದ್ದಾರೆ.
ಸ್ಮಶಾನ ಸೇವಕ ಬಬನ್ ಲಾಖೆ ಈ ದಿನ.ಕಾಮ್ ಜೊತೆಗೆ ಮಾತನಾಡಿ, ತಮ್ಮ ಕಾಯಕದ ಅನುಭವಗಳನ್ನು ಹಂಚಿಕೊಂಡಿದ್ದು, “ಸ್ವಚ್ಛ ಮನಸ್ಸಿದ್ದವರಿಗೆ ಸ್ಮಶಾನದಲ್ಲಿ ಕೆಲಸ ಮಾಡಿದರೂ ಯಾವುದೇ ಭಯವಿರುವುದಿಲ್ಲ. ಹಾಂಗ ನೋಡಿದ್ರಾ, ಕೆಟ್ಟ ಮನಸ್ಸಿದ್ದ ಮನುಷ್ಯರೇ ದೆವ್ವ ಇದ್ದಾಂಗ” ಎಂದರು.
ದಿನಕ್ಕೆ ಐದಾರು ಶವಗಳನ್ನು ಸುಡುವ ಕಾಯಕ ಮಾಡುವ ಇವರು, “ಸ್ಮಶಾನ ಅಂದ್ರ ಪವಿತ್ರವಾದ ಜಾಗ. ಇಲ್ಲಿ ದೇವರು ನೆಲೆಸಿರುತ್ತಾನ. ಹಿಂಗಾಗಿ ನಮಗಿಲ್ಲಿ ಯಾವುದೇ ರೀತಿ ಹೆದರಿಕೆ ಆಗಂಗಿಲ್ಲ. ನಾನು ಇಲ್ಲೇ ಕುಂತು ಊಟ ಮಾಡ್ತೀನಿ. ನಿದ್ದಿ ಬಂದ್ರ ಇಲ್ಲೇ ಮಲಗ್ತೀನಿ. ಮಂದಿಯೆಲ್ಲ ಸ್ಮಶಾನ ಅಂದ್ರ ಅಂಜಿ ದೆವ್ವ ಇರುತ್ತಾವು ಅಂತಾರ. ಆದ್ರ ಇಷ್ಟು ವರ್ಷವಾದರೂ ನನಗ ಮಾತ್ರ ಒಂದು ದೆವ್ವಾನೂ ಕಂಡಿಲ್ಲ” ಎಂದು ನಗುತ್ತಲೇ ಹೇಳಿದರು.

ನಿತ್ಯವೂ ಹೆಣಗಳ ಸುಡುವುದು ಮತ್ತು ಮೃತ ಕುಟುಂಬಸ್ಥರ ಆಕ್ರಂದನ ಕೇಳಿ ನಾವು ಬ್ಯಾಸರಾ ಮಾಡ್ಕೊಂಡ್ರ ಹೆಣ ಸುಡುವವರು ಯಾರು? ಏನಾದರೂ ಕಾಯಕವೇ ಕೈಲಾಸ ಅಂತ ಹೊಂಟಿವಿ. ದಿನಾ ಐದಾರ ಹೆಣಾ ಸುಡ್ತಿವಿ ಯಾಕ್ ಬ್ಯಾಸರ ಮಾಡ್ಕೋಬೇಕು? ಎಲ್ಲಾರೂ ಒಂದಿನ ಸಾಯೋದ ಐತೆಲ್ರಿ? ನಮಗಂತೂ ಇದೆಲ್ಲ ರೂಢಿ ಆಗ್ಬಿಟ್ಟೈತೆ ನೋಡ್ರಿ” ಎಂದರು.
ಸ್ಮಶಾನ ಎಂದಾಕ್ಷಣ ದೆವ್ವ, ಪೀಡೆ, ಪಿಶಾಚಿಗಳು ಎಂಬ ಮೌಢ್ಯತೆಯಲ್ಲಿಯೇ ಮುಳುಗಿರುವವರು ಯಾವ ಹೆದರಿಕೆಯಿಲ್ಲದೆ ಹೆಣ ಸುಡುವ ಕಾಯಕ ಮಾಡುತ್ತಿರುವ ಬಬನ್ ಲಾಖೆ ಅವರ ಮಾತುಗಳನ್ನು ಕೇಳಿ ಬದಲಾಗಬೇಕಿದೆ. ಇಂದಿಗೂ ಬಹುತೇಕರಲ್ಲಿ ಸ್ಮಶಾನದಲ್ಲಿ ಊಟ ಮಾಡಬಾರದೆಂಬ ತಪ್ಪು ತಿಳುವಳಿಕೆಗಳು ಚಾಲ್ತಿಯಲ್ಲಿವೆ. ಆದರೆ ಇಲ್ಲಿನ ಬಾಬನ್ ಲಾಖೆ ಅವರು ಆ ಎಲ್ಲ ಮೂಢನಂಬಿಕೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ಇಂತಹ ಮೌಢ್ಯಗಳ ವಿರುದ್ಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಮಶಾನದಲ್ಲೇ ವಿವಿಧ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ ಬೆಳಗಾವಿ | ಮಾಧ್ಯಮಗಳು ಜನಪರವಾಗಿ ಇರಬೇಕು: ರಿಷಿಕೇಶ್ ದೇಸಾಯಿ
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಇಂತಹ ಅನೇಕ ಮೌಢ್ಯತೆಗಳನ್ನು ಮೆಟ್ಟಿನಿಂತು, ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತವನ್ನು ರೂಢಿಗೆ ತಂದರು. ಬಸವಣ್ಣ ಸಾರಿದ ಕಾಯಕ ಸಂದೇಶವನ್ನು ಬಬನ್ ಲಾಖೆ ಅವರಲ್ಲಿ ನಾನು ಕಂಡೆನು. ಎಲ್ಲರೂ ಹೀಗೆ ಜಾಗೃತರಾಗಿ, ಮೌಢ್ಯದಿಂದ ಹೊರಬಂದು ಸರಳ ಮತ್ತು ಭಯರಹಿತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು