ದೇಶದ ಜನರು ಸಕಾರಾತ್ಮಕ ವಿಚಾರಗಳು, ಸಾಧಕರ ಸ್ಪೂರ್ತಿದಾಯಕ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಸಮಸ್ಯೆಗಳ ಬಗ್ಗೆ, ದೇಶದ ವಿವಿಧ ಭಾಗಗಳ ಜನರ ಪ್ರಯತ್ನ ಸಾಧನೆಗಳನ್ನು ಶ್ಲಾಘಿಸುವುದರೊಂದಿಗೆ ರೇಡಿಯೊ ಕಾರ್ಯಕ್ರಮವು 10 ವರ್ಷಗಳನ್ನು ಪೂರೈಸಿದೆ’ಎಂದು ಹೇಳಿದರು.
ಜನರು ಯಾವಾಗಲೂ ನಕಾರಾತ್ಮಕ ಅಥವಾ ಅತಿರಂಜಿತ ವಿಷಯಗಳಿಗೆ ಮಾತ್ರ ಕಿವಿಯಾಗುತ್ತಾರೆ ಎಂಬ ಭಾವನೆಯಿದೆ. ಆದರೆ ಮನ್ ಕಿ ಬಾತ್ ಕಾರ್ಯಕ್ರಮ ಅದನ್ನು ಸುಳ್ಳು ಮಾಡಿ ಜನರು ಸಕಾರಾತ್ಮಕ ವಿಷಯಗಳಿಗೂ ಆಸಕ್ತಿ ತೋರಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಹೇಳಿದರು.
ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರ ಕುರಿತು ಮಾತನಾಡಿದ ಅವರು, ಸುಮಾರು 300 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜನರು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡಲು ಪ್ರಾರಂಭಿಸಿದಾಗ, ಜಗತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ಸರ್ಕಾರ ಕಳೆದ 10 ವರ್ಷಗಳಲ್ಲಿ ವಿವಿಧ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರಾಚೀನ ಕಲಾಕೃತಿಗಳು ಭಾರತಕ್ಕೆ ಹಿಂತಿರುಗುವಂತೆ ಮಾಡಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ
‘ಮೇಕ್ ಇನ್ ಇಂಡಿಯಾ’ ಕೂಡ 10 ವರ್ಷಗಳನ್ನು ಪೂರೈಸುತ್ತಿದೆ. ಪ್ರತಿ ವಲಯದಲ್ಲಿ ರಫ್ತು ಹೆಚ್ಚುತ್ತಿದೆ ಮತ್ತು ವಿದೇಶಿ ನೇರಹೂಡಿಕೆ (ಎಫ್‌ಡಿಐ) ಹೆಚ್ಚಳವು ಅದರ ಯಶಸ್ಸಿಗೆ ಸಾಕ್ಷಿಯಾಗಿದೆ. ಇದು ಸ್ಥಳೀಯ ಉತ್ಪಾದಕರಿಗೆ ಸಾಕಷ್ಟು ಸಹಾಯಮಾಡಿದೆ ಎಂದರು.
ಗಾಂಧಿ ಜಯಂತಿಯಂದು ಆರಂಭಿಸಿದ್ದ ‘ಸ್ವಚ್ಛ ಭಾರತ್’ಯೋಜನೆ ಸಹ 10 ವರ್ಷ ಪೂರೈಸಿದ್ದು, ಅಭೂತ ಪೂರ್ವ ಯಶಸ್ಸು ಕಂಡಿದೆ. ಇದು ಮಹಾತ್ಮಾ ಗಾಂಧಿ ಅವರಿಗೆ ಸಲ್ಲಿಸಿದ ನಮನವಾಗಿದೆ. ಈ ಮುಂಗಾರಿನ ಋತುವಿನಲ್ಲಿ ಭಾರತದಲ್ಲಿ ಸಮೃದ್ಧ ಮಳೆಯಾಗಿದೆ ಎಂದ ಅವರು, ನೀರನ್ನು ಸಂರಕ್ಷಿಸಲು ದೇಶದ ವಿವಿಧ ಭಾಗಗಳಲ್ಲಿ ಮಾಡುತ್ತಿರುವ ಪ್ರಯತ್ನಗಳ ಪ್ರಸ್ತಾಪಿಸಿ, ಶ್ಲಾಘಿಸಿದರು. ಜತೆಗೆ ನೀರನ್ನು ಮಿತವಾಗಿ ಬಳಸಿ, ಮರುಬಳಕೆ ಮಾಡಿ ಎಂದು ಕರೆ ನೀಡಿದರು
