ದಲಿತ ಬಾಲಕಿಯರ ಅತ್ಯಾಚಾರ ಖಂಡಿಸಿ ಕಲಬುರಗಿ ಜಿಲ್ಲಾ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸೆಪ್ಟೆಂಬರ್ 30ರಂದು ಯಾದಗಿರಿ ಬಂದ್‌ಗೆ ಕರೆ ನೀಡಲಾಗಿದೆ.
ರಾಜ್ಯಾಧ್ಯಕ್ಷ ಬಿ ನರಸಪ್ಪ ದಂಡೋರರವರ ಆದೇಶದ ಮೇರೆಗೆ ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯ ಯುವಘಟಕ ರಾಜ್ಯಧ್ಯಕ್ಷ ಗುರುರಾಜ ಭಂಡಾರಿ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ದಲಿತ ಅಪ್ರಾಪ್ತೆಯರ ಮೇಲೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರ ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ಗೃಹ ಮಂತ್ರಿ, ಸಮಾಜ ಕಲ್ಯಾಣ ಮಂತ್ರಿಗಳು ಸೇರಿದಂತೆ ರಾಜ್ಯದಲ್ಲಿ ದಲಿತ ಮಂತ್ರಿಗಳು ಅಧಿಕಾರದಲ್ಲಿ ಇದ್ದರೂ ಕೂಡ ದಲಿತರಿಗೆ ರಕ್ಷಣೆಯಿಲ್ಲ. ಇದಕ್ಕೆ ಉದಾಹರಣೆಯಾಗಿ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಘಟನೆಗಳಿಗೆ ದಲಿತ ಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ತಿಳಿದರು.
“ಕಳೆದ ಇಪ್ಪತ್ತು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ, ಕೊಡೇಕಲ್ ಗ್ರಾಮದಲ್ಲಿ ಮಾದಿಗ ಸಮುದಾಯದ 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗಿ, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿ ಸುಮಾರು 20 ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ದೂರಿದರು.
“ಅತ್ಯಾಚಾರ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಹಾಗೂ ಆ ಗ್ರಾಮಗಳಲ್ಲಿ ಮಾದಿಗ ಸಮುದಾಯದ ಕುಟುಂಬಗಳನ್ನು ಬಹಿಷ್ಕಾರ ಮಾಡಿದವರನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಂಬಂದಪಟ್ಟ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಖಾಜಕೋಟನೂರ್ ಶಾಲೆಗಿಲ್ಲ ತಡೆಗೋಡೆ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ(ಎಂಆರ್‌ಪಿಎಸ್) ರಾಜ್ಯ ಯುವ ಸೇನೆ ರಾಜ್ಯಾಧ್ಯಕ್ಷ ಗುರುರಾಜ ಭಂಡಾರಿ ಹಾಗೂ ರಾಜ್ಯ ಕಾರ್ಯದರ್ಶಿ ರಾಜು ಹದನೂರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವಿರುದ್ದ ಸೆಪ್ಟೆಂಬರ್ 30ರಂದು ಯಾದಗಿರಿ ಬಂದ್‌ಗೆ ಕರೆಕೊಟ್ಟು ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರಿಂದ ಕಲಬುರಗಿ ಜಿಲ್ಲೆಯ ಮಾದಿಗ ದಂಡೋರ ಹಾಗೂ ಮಾದಿಗಪರ ಸಂಘಟನೆಗಳು ಹೋರಾಟಗಾರರು, ಬುದ್ದಿಜೀವಿಗಳು, ಯುವಕರು, ಹಿತಚಿಂತಕರು ʼಯಾದಗಿರ ಬಂದ್ ಕರೆʼ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದಶಿ ರಾಜು ಹದನೂರ, ರಾಜ್ಯ ಉಪಾಧ್ಯಕ್ಷ ಸುಂದರ ಡಿ ಸಗರ, ತಾಲೂಕ ಅಧ್ಯಕ್ಷ ಮಲ್ಲು ಕೊಡಂಬಲ್, ಜಿಲ್ಲಾ ಕಾರ್ಯದರ್ಶಿ ಶರಣಪ್ಪ ದಂಡೋತಿ, ಯುವಘಟಕ ಜಿಲ್ಲಾಧ್ಯಕ್ಷ ಸಂಜೀವ ಕೋಬಾಳಕರ, ಸಮಾಜದ ಹಿರಿಯ ಮುಖಂಡ ನಾಗೇಂದ್ರಪ್ಪ ಆರ್ ಸೇರಿದಂತೆ ಇತರರು ಇದ್ದರು.